ಕಾರ್ಮಿಕರ ರಾಜ್ಯ ವಿಮಾ ಯೋಜನೆ
ವೈದ್ಯಕೀಯ ಸೇವೆ
ಕಾರ್ಮಿಕರ ರಾಜ್ಯ ವಿಮಾ ಯೋಜನೆಯು ವೈವಿಧ್ಯಮಯವಾದ ಸಾಮಾಜಿಕ ಭದ್ರತೆಯ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯನ್ನು ಪ್ರಥಮವಾಗಿ ದಿನಾಂಕ: 24.02.1952 ರಂದು ಕೈಗಾರಿಕಾ ನಗರವಾದ ದೆಹಲಿ ಹಾಗೂ ಕಾನ್ಪುರದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಎರಡು ಪ್ರಕಾರದ ಸೇವೆಯನ್ನು ವಿಸ್ತರಿಸಲಾಗುತ್ತಿದೆ. ಅದರಲ್ಲಿ
(1) ವೈದ್ಯಕೀಯ ಸೇವೆಗಳು ಹಾಗೂ
(2) ವೈದ್ಯಕೀಯೇತರ ಸೇವೆಗಳು.
ಕಾರಾವಿ ಯೋಜನೆ 1948ನೇ ಕಾಯ್ದೆಯನ್ವಯ ವಿಮಾದಾರರಿಗೆ ಹಾಗೂ ಅವರ ಕುಟುಂಬದವರಿಗೆ ಈ ಕೆಳಕಂಡ 07 ಪ್ರಮುಖ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.
1. ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯ.
2. ಖಾಯಿಲೆಯಿಂದ ಉಂಟಾಗುವ ಸಂಬಳ ಕಡಿತದ ವಿರುದ್ಧ್ದ ಭದ್ರತೆ.
3. ಪ್ರಸವ ಸೌಲಭ್ಯ.
4. ಅಂಗವಿಕಲರಿಗೆ ಪರಿಹಾರ.
5. ಅವಲಂಬಿತರಿಗೆ ಪರಿಹಾರ.
6. ಶವಸಂಸ್ಕಾರ ವೆಚ್ಚ.
7. ನಿರುದ್ಯೋಗಿ ಭತ್ಯೆ / ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ ಯೋಜನೆ
ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯವನ್ನು ಈ ಇಲಾಖೆಯ ಮುಖಾಂತರ ವಿಸ್ತರಿಸಲಾಗುತ್ತಿದ್ದು, ಇದು ರಾಜ್ಯ ಸರ್ಕಾರದ ಕಾರ್ಮಿಕ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಉಳಿದ ನಗದು ಸೌಲಭ್ಯಗಳನ್ನು ಕಾ.ರಾ.ವಿ. ನಿಗಮದ ಮುಖಾಂತರ ವಿಸ್ತರಿಸಲಾಗುತ್ತಿದ್ದು ಇದು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಯೋಜನೆಯ ಕಾರ್ಯವ್ಯಾಪ್ತಿ:
ಕಾರಾವಿ ಯೋಜನೆಯ ವ್ಯಾಪ್ತಿಯನ್ನು ದಿನಾಂಕ: 01-01-2017 ರಿಂದ ಜಾರಿಗೆ ಬರುವಂತೆ ರೂ. 21000/- ಗರಿಷ್ಠ ವೇತನ ಪಡೆಯುತ್ತಿರುವ ಕಾರ್ಮಿಕರಿಗೆ ವಿಸ್ತರಿಸಲಾಗಿರುತ್ತದೆ. ಹಾಗೂ ಈ ಯೋಜನೆಯ ವ್ಯಾಪ್ತಿಗೆ ಇತರೆ ಸಂಸ್ಥೆಗಳನ್ನು ಸಹ ತರಲಾಗಿದೆ. ಪ್ರಸ್ತುತ 10 ರಿಂದ ಮೇಲ್ಪಟ್ಟು ಕಾರ್ಮಿಕರನ್ನು ಹೊಂದಿರುವ ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇತರೇ ಸಂಸ್ಥೆಗಳಾದ ಹೋಟೆಲ್, ಸಿನಿಮಾ ಮಂದಿರ, ದಿನಪತ್ರಿಕೆ ಸಂಸ್ಥೆ, ರಸ್ತೆ ಸಾರಿಗೆ ಸಂಸ್ಥೆ, ವಾಣಿಜ್ಯ ಸಂಸ್ಥೆಗಳನ್ನು ಸಹ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ದಿನಾಂಕ 16.03.2011 ರಿಂದ ಜಾರಿಗೆ ಬರುವಂತೆ ವಿದ್ಯಾ ಸಂಸ್ಥೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ಸಹ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ರಾಜ್ಯ ಸರ್ಕಾರವು ಕಾರಾವಿ. ನಿಗಮದೊಂದಿಗೆ ಮಾಡಿಕೊಂಡ ಒಪ್ಪಂದದ ಅನುಸಾರ ವಿಮಾದಾರರಿಗೆ ಹಾಗೂ ಅವರ ಕುಟುಂಬದವರಿಗೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ್ದಾಗಿರುತ್ತದೆ. ಇದಕ್ಕಾಗಿ ಕಾರಾವಿ. ನಿಗಮವು ಈ ಇಲಾಖೆಯು ಮಾಡುವ ಒಟ್ಟು ವೆಚ್ಚದಲ್ಲಿ ಶೇಕಡಾ 87.50 ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪುನರ್ ಭರಣ ಮಾಡುತ್ತಿದ್ದು, ರಾಜ್ಯ ಸರ್ಕಾರದ ಪಾಲು ಶೇಕಡಾ 12.50 ರಷ್ಟು ಮಾತ್ರವಾಗಿರುತ್ತದೆ. ಪ್ರಸ್ತುತ ಇಲಾಖೆಯು 30.73 ಲಕ್ಷ ವಿಮಾದಾರರಿಗೆ ಹಾಗೂ ಅಂದಾಜು 150 ಲಕ್ಷ ಅವರ ಕುಟುಂಬದವರಿಗೆ 10 ಕಾರಾವಿ. ಆಸ್ಪತ್ರೆ (ಕಾರಾವಿ. ನಿಗಮದ ಆಸ್ಪತ್ರೆ, ರಾಜಾಜಿನಗರ ಹಾಗೂ ಕಾರಾವಿ. ಆಸ್ಪತ್ರೆ ಪೀಣ್ಯ ಹಾಗೂ ಕಾರಾವಿ ಆಸ್ಪತ್ರೆ ಗುಲಬರ್ಗಾ ಒಳಗೊಂಡಿರುತ್ತದೆ) ಹಾಗೂ 112 ಕಾರಾವಿ. ಚಿಕಿತ್ಸಾಲಯ, 01 ರೋಗ ಪತ್ತೆ ಹಚ್ಚುವ ಕೇಂದ್ರ ಹಾಗೂ 06 ಐ.ಎಂ.ಪಿ. ಪದ್ಧತಿಯ ಚಿಕಿತ್ಸಾಲಯದ ಮುಖಾಂತರ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ. ಇಲಾಖೆಯ ಒಟ್ಟು ವೆಚ್ಚದಲ್ಲಿ ಶೇಕಡಾ 87.50 ರಷ್ಟು ಮೊತ್ತವನ್ನು ಕಾರಾವಿ. ನಿಗಮವು ರಾಜ್ಯ ಸರ್ಕಾರಕ್ಕೆ ಪುನರ್ ಭರಣ ಮಾಡುತ್ತಿದೆ.