​ಜಿಲ್ಲಾಡ​​ಳಿತ‌


ರಾಷ್ಟ್ರದಲ್ಲಿ ಭಾಷಾವಾರು ಆಧಾರದ ಮೇಲೆ 1956ರ ರಾಜ್ಯಗಳ ಪುನರ್ ವಿಂಗಡಣೆ ಮಾಡಿದಾಗ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಇದು ಹಿಂದಿನ ಐದು ಪ್ರಾಂತಗಳನ್ನೊಳಗೊಂಡ ಇಂದಿನ ಕರ್ನಾಟಕ ರಾಜ್ಯದಲ್ಲಿ ವಿವಿಧ ರೀತಿಯ ಕಂದಾಯ ಆಡಳಿತ, ಕಂದಾಯ ನಿಯಮಗಳು ಮತ್ತು ಕಾರ್ಯವಿಧಾನಗಳಿದ್ದವು. ವಿವಿಧ ಪ್ರಾಂತ್ಯದ ಘಟಕಗಳಲ್ಲಿ ಕಂದಾಯ ಅಧಿಕಾರಿಗಳ ಪದನಾಮ, ನಾಮಕರಣ ವ್ಯವಸ್ಥೆಗಳಲ್ಲಿ ಆಗಲೂ ಸಹ ವೈವಿಧ್ಯತೆ ಇತ್ತು. ರಾಜ್ಯಗಳ ಸಂಯೋಜನೆಯ ಸಮಯದಲ್ಲಿ ಕರ್ನಾಟಕದಲ್ಲಿ 19 ಜಿಲ್ಲೆಗಳಿದ್ದವು. 1988 ರಲ್ಲಿ ಸಂಕೀರ್ಣವಾದ ಬೆಂಗಳೂರು ಜಿಲ್ಲೆಯನ್ನು 4 ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು (ನಗರ) ಹಾಗೂ 8 ತಾಲ್ಲೂಕುಗಳನ್ನೊಂಡ ಬೆಂಗಳೂರು (ಗ್ರಾಮಾಂತರ) ಜಿಲ್ಲೆಗಳೆಂದು ವಿಭಜಿಸಲಾಯಿತು. 1997ರಲ್ಲಿ ದೊಡ್ಡ ಜಿಲ್ಲೆಗಳ ಗಾತ್ರವನ್ನು ಕಡಿಮೆ ಮಾಡಿ 7 ಹೊಸ ಜಿಲ್ಲೆಗಳನ್ನು ಸೇರಿಸಲಾಯಿತು. 2007ರಲ್ಲಿ 2ಹೊಸ ಜಿಲ್ಲೆಗಳನ್ನು ಸೇರಿಸಲಾಯಿತು. 2010ರಲ್ಲಿ 1 ಜಿಲ್ಲೆಯನ್ನು ಸೇರಿಸಲಾಯಿತು. ಪ್ರಸ್ತುತ ರಾಜ್ಯದಲ್ಲಿ 30 ಜಿಲ್ಲೆಗಳಿವೆ. ಪುನರ್ ವಿಂಗಡಣೆ ಸಮಯದಲ್ಲಿದ್ದ ತಾಲ್ಲೂಕುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲವು ತಾಲ್ಲೂಕುಗಳ ಬಹುಚಿಕ್ಕದ್ದಾಗಿದ್ದು, (ಯಳಂದೂರು, ಗುಡಿಬಂಡೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ನವಲಗುಂದ ಮತ್ತು ನರಗುಂದ) ಕೆಲವು ತಾಲ್ಲೂಕು ತುಂಬಾ ದೊಡ್ಡದಾಗಿದೆ (ಕಡೂರು, ಕೊಳ್ಳೇಗಾಲ ಮುಂತಾದವು). ಈ ಹಿಂದೆ 3 ವಿವಿಧ ಸಮಿತಿಗಳು 25 ರಿಂದ 57 ಹೊಸ ತಾಲ್ಲೂಕುಗಳ ರಚನೆ ಬಗ್ಗೆ ಶಿಫಾರಸ್ಸು ಮಾಡಿವೆ. ಲೋಕಸಭಾ ಕ್ಷೇತ್ರಗಳ ಪರಿಮಿತಿ ಅಂತಿಮವಾಗಿ ನಿಗದಿಪಡಿಸದೇ ಇರುವುದರಿಂದ ಹೊಸ ತಾಲ್ಲೂಕುಗಳ ರಚನೆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿರುವುದಿಲ್ಲ.​

Karnataka Map