​ಭೂ ಮಂ​ಜೂರಾತಿ​​


ಭೂ ಮಂಜೂರಾತಿ ಮತ್ತು ಸಂಬಂಧಿಸಿದ ವಿಷಯಗಳು
: ಖಾಸಗಿ ಸಂಘ ಸಂಸ್ಥೆಗಳಿಗೆ ಅಥವಾ ವೈಯಕ್ತಿಕ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನುಗಳ ಮಂಜೂರಾತಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರನ್ವಯ ಮಾಡಲಾಗುತ್ತಿದೆ. ವಿವಿಧ ಕಾರಣಗಳಿಂದ ಈ ನಿಯಮಾವಳಿಯಲ್ಲಿ ನೂನ್ಯತೆಗಳಿರುವುದು ಕಂಡು ಬಂದಿದೆ. ಸದರಿ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ.
ಅನಧಿಕೃತ ಸಾಗುವಳಿಯಲ್ಲಿನ ಜಮೀನುಗಳ ಸಕ್ರಮೀಕರಣ
   ಜನಸಂಖ್ಯೆ ಒತ್ತಡದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಜಮೀನುಗಳನ್ನು ಹಲವಾರು ಜನರು ಒತ್ತುವರಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿಂದೆ ಎರಡು ಸಲ ಸರ್ಕಾರವು ಇಂತಹ ಒತ್ತುವರಿಗಳನ್ನು ಸಕ್ರಮೀಕರಣಗೊಳಿಸಿದೆ ಮತ್ತು ಈ ಉದ್ದೇಶಕ್ಕಾಗಿ ಮೂರನೆ ಸಲ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ನ್ನು 1991 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಅನ್ವಯ ಭೂರಹಿತರು, ಸಣ್ಣ ಅಥವಾ ಬಡ ರೈತರಿಗೆ ಪ್ರಸ್ತುತ ಹಿಡುವಳಿ ಜಮೀನನ್ನು ಒಳಗೊಂಡಂತೆ ಗರಿಷ್ಟ 5.00 ಎಕರೆ ಜಮೀನನ್ನು ಸಕ್ರಮೀಕರಣಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94(ಎ) ರ ತಿದ್ದುಪಡಿಯನ್ವಯ ಅನುಕೂಲ ಮಾಡಿಕೊಡಲಾಗಿದೆ.
ಕಲಂ 94(ಎ) ಅಡಿ ಸಕ್ರಮೀಕರಣ ಕೋರಿ ನಮೂನೆ 50 ರಲ್ಲಿ ಅರ್ಜಿಯನ್ನು ಸ್ವೀಕೆರಿಸಲು ನಿಗಧಿಪಡಿಸಿದ ಕೊನೆಯ ದಿ:19.09.1991. ಈ ದಿನಾಂಕದವರೆಗೆ 10.90 ಲಕ್ಷ ಅರ್ಜಿಗಳು, 26.03 ಲಕ್ಷ ಎಕರೆ ವಿಸ್ತೀರ್ಣಕ್ಕೆ ಸ್ವೀಕೃತವಾಗಿರುತ್ತದೆ. ದಿ:31.12.2009 ರ ಅಂತ್ಯದವರೆಗೆ ವಿಲೆ ಪಡಿಸಲಾದ ಅರ್ಜಿಗಳ ವಿವರ ಈ ಕೆಳಕಂಡಂತಿರುತ್ತದೆ.

ಕ್ರಮ ಸಂಖ್ಯೆವಿವರಗಳುಪ್ರಕರಣಗಳ ಸಂಖ್ಯೆ (ಲಕ್ಷದಲ್ಲಿ)ವಿಸ್ತೀರ್ಣ ಎಕರೆ (ಲಕ್ಷದಲ್ಲಿ)
1ಸ್ವೀಕೃತವಾದ ಅರ್ಜಿಗಳ ಸಂ​ಖ್ಯೆ10.9026.03
2ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ10.6424.71
3ಬಾಕಿಯಿರುವ ಅರ್ಜಿಗಳು0.261.32
4ಸಕ್ರಮಗೊಳಿಸಿರುವುದು3.696.34
5ತಿರಸ್ಕರಿಸಿರುವುದು6.9518.37


ಮುಂದುವರೆದು, ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 94(ಎ) ಗೆ ತಿದ್ದುಪಡಿ ತಂದುಹೊಸ ಕಲಂ 94(ಬಿ) ಎಂದು ಸೇರಿಸಿ ಅದರಂತೆ ಈ ಹಿಂದೆ ದಿ: 19.09.1991 ರ ಮುಂಚಿತವಾಗಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸದೇ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 79(2) ರಲ್ಲಿ ವಿಶೇಷ ಹಕ್ಕುಗಳಿಗೆ ಒಳಪಡುವ ಜಮೀನುಗಳನ್ನು ಈ ಕಲಂನ ಮೂಲಕ ಸಕ್ತಮೀಕರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ತಿದ್ದುಪಡಿ ಮಾಡಿದ ಕಲಂ 94(ಬಿ) ಅಡಿ ನಮೂನೆ 53ರಲ್ಲಿ ಅನಧಿಕೃತ ಸಾಗುವಳಿಯಲ್ಲಿನ ಜಮೀನುಗಳನ್ನು ಸಕ್ರಮೀಕರಣಗೊಳಿಸಲು, ಅರ್ಜಿಗಳನ್ನು ಸ್ವೀಕರಿಸಿಲು ಕೊನೆಯ ದಿನಾಂಕವನ್ನು 30.04.1999 ರವರೆಗೆ ವಿಸ್ತರಿಸಲಾಯಿತು. ಅಲ್ಲಿಯವರೆಗೆ 14.94 ಲಕ್ಷ ಅರ್ಜಿಗಳೂ, 26.06 ಲಕ್ಷ ಎಕರೆ ವಿಸ್ತೀರ್ಣ ಒಳಗೊಂಡಂತೆ ಸಕ್ರಮೀಕರಣಗೊಳಿಸಲು ಸ್ವೀಕೃತವಾಗಿವೆ. ದಿ: 31.12.2009 ರವರೆಗೆ ಈ ಅರ್ಜಿಗಳ ವಿಲೇವಾರಿ ವಿವರ ಈ ಕೆಳಕಂಡಂತಿದೆ.

ಕ್ರಮ ಸಂಖ್ಯೆವಿವರಗಳುಪ್ರಕರಣಗಳ ಸಂಖ್ಯೆ (ಲಕ್ಷದಲ್ಲಿ)ವಿಸ್ತೀರ್ಣ ಎಕರೆ (ಲಕ್ಷದಲ್ಲಿ)
1ಸ್ವೀಕೃತವಾದ ಅರ್ಜಿಗಳ ಸಂಖ್ಯೆ10.9426.06
2ವಿಲೇವಾರಿಯಾ​​ದ ಪ್ರಕರಣಗಳ ಸಂಖ್ಯೆ6.9215.64
3ಬಾಕಿಯಿರುವ ಅರ್ಜಿಗಳು4.0210.42
4ಸಕ್ರಮಗೊಳಿಸಿರುವುದು1.522.52
5ತಿರಸ್ಕರಿಸಿರುವುದು5.4013.12
 
ನಮೂನೆ 50 ಹಾಗೂ 53 ರಲ್ಲಿ ಸ್ವೀಕೃತವಾದ ಅರ್ಜಿಗಳನ್ನು ವಿಲೇಗೊಳಿಸಲು ಸರ್ಕಾರವು ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಸಮಿತಿಯನ್ನು ಪ್ರತಿಯೊಂದು ತಾಲ್ಲೂಕಿಗೆ ರಚಿಸಬೇಕಾಗಿದೆ. ನಮೂನೆ 50 ಮತ್ತು 53 ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇ ಪಡಿಸಲು ಭೂ ಕಂದಾಯ ಕಾಯ್ದೆ ಕಲಂ 94 ಬಿ ರಲ್ಲಿ ಕಲ್ಪಿಸಲಾಗಿದ್ದ ಅವಧಿಯು ದಿ: 26.04.2008ಕ್ಕೆ ಮುಕ್ತಾಯಗೊಂಡಿರುವುದರಿಂದ ಈ ಅವಧಿಯನ್ನು ವಿಸ್ತರಿಸಲು ಕಲಂ 94 ಬಿ ಗೆ ದಿ: 15.09.2009 ರಂದು ತಿದ್ದುಪಡಿ ತರಲಾಗಿರುತ್ತದೆ. ಅದರಂತೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಲಾಗುತ್ತಿದೆ. ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಸ್ಥಾಪನೆ ಬಗ್ಗೆ.
   ಬೆಂಗಳೂರು ನಗರ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ಜಮೀನುಗಳನ್ನು ಸಂರಕ್ಷಿಸಲು, ಅವಶ್ಯವಿದ್ದಲ್ಲಿ ಅಭಿವೃದ್ಧಿ ಪಡಿಸಲು ಮತ್ತು ಅವುಗಳನ್ನು ಸ್ಪರ್ಧಾತ್ಮಕವಾಗಿ ವಿಲೇ ಮಾಡಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಹಾಗೂ ಹಂಚಿಕೆ ಮಾಡಲು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವನ್ನು ಸರ್ಕಾರದ ಆದೇಶ ಸಂಖ್ಯೆ: ಆರ್ ಡಿ 388 ಎಲ್ ಜಿ ಬಿ 2008, ದಿ: 29.08.2008 ರಲ್ಲಿ ರಚಿಸಲಾಗಿದೆ. ಅಲ್ಲದೇ ಸರ್ಕಾರದ ಅಧಿಸೂಚನೆ ದಿ:08.09.2008 ರಲ್ಲಿ ಈ ನಿಗಮಕ್ಕೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಮತ್ತು ಕಂಪನೀಸ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾಗಿದೆ.
ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ರಚನೆ ಬಗ್ಗೆ.
ಬೆಂಗಳೂರು ನಗರ ಜಿಲ್ಲೆ ಮತ್ತು ಭವಿಷ್ಯದಲ್ಲಿ ರಾಜ್ಯಾದ್ಯಂತ ಇರುವ ಸರ್ಕಾರಿ ಜಮೀನುಗಳ ಸಮೀಕ್ಷೆ, ಒತ್ತುವರಿ ತೆರವುಗೊಳಿಸುವಿಕೆ ಮತ್ತು ಸಂರಕ್ಷಿಸುವುದು ಇತ್ಯಾದಿ ಕಾರ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ನಿರ್ದೇಶನಗಳನ್ನು ನೀಡಲು ಮತ್ತು ಸರ್ಕಾರಿ ಜಮೀನಿನ ಸಂರಕ್ಷಣೆಯ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಶ್ರೀ ವಿ. ಬಾಲಸುಬ್ರಮಣಿಯನ್, ಭಾ.ಆ.ಸೇ. (ನಿವೃತ್ತ) ಇವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯ ಪಡೆಯನ್ನು ಸರ್ಕಾರದ ಆದೇಶ ಸಂಖ್ಯೆ: ಆರ್ ಡಿ 556 ಎಲ್ ಜಿ ಬಿ 2009, ದಿ: 19.09.2009 ರಲ್ಲಿ ರಚಿಸಲಾಗಿರುತ್ತದೆ
ಕೃಷಿ ಜಮೀನನ್ನು ವಾಸದ ಉದ್ದೇಶಕ್ಕಾಗಿ ಅನಧಿಕೃತವಾಗಿ ಉಪಯೋಗಿಸಿಕೊಂಡಿದ್ದಲ್ಲಿ ಸಕ್ರಮಗೊಳಿಸುವ ಬಗ್ಗೆ.
   ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 95(2)ರ ಅಡಿ ಕೃಷಿ ಜಮೀನನ್ನು ವಾಸದ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ದಿ: 31.012.2008 ಕ್ಕೆ ಮುಂಚೆ ಉಪಯೋಗಿಸಿಕೊಂಡಿದ್ದಲ್ಲಿ ಸಕ್ರಮಗೊಳಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 95 ಕ್ಕೆ ತಿದ್ದುಪಡಿ ತಂದು ಕಲಂ 2ಎ, 2ಎಎ, 2ಎಎಎ ನ್ನು ಸೇರ್ಪಡೆ ಮಾಡಲಾಗಿದೆ.
 
ಭೂ ಮಂಜೂರಾತಿ
ಶ್ರೀ ರವೀಂದ್ರನಾಥ್  
ಅಪರ ಕಾರ್ಯದರ್ಶಿ
ಕಂದಾಯ ಇಲಾಖೆ, 
3ನೇ ಗೇಟ್, 5ನೇ ಮಹಡಿ,
ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು-560001.

ದೂರವಾಣಿ ಸಂಖ್ಯೆ: 080 22032343