ವಾಕೈ 37 ಜಕೈಯೋ 2009 ಬೆಂಗಳೂರು ದಿನಾಂಕ 02.01.2010 2009_10ನೇ ಸಾಲಿನ ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಮಾರ್ಗಸೂಚಿ ಹೊರಡಿಸುವ ಕುರಿತು

  • GOK
    • vanijyasachivalaya
      • ವಾಕೈ 37 ಜಕೈಯೋ 2009 ಬೆಂಗಳೂರು ದಿನಾಂಕ 02.01.2010 2009_10ನೇ ಸಾಲಿನ ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಮಾರ್ಗಸೂಚಿ ಹೊರಡಿಸುವ ಕುರಿತು
Last modified at 23/04/2016 22:20 by Vanijyasachivalaya

​​​​

​​

​​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: 2009-10ನೇ ಸಾಲಿನ ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಮಾರ್ಗಸೂಚಿ ಹೊರಡಿಸುವ ಕುರಿತು.

ಓದಲಾಗಿದೆ:

1. 2009-10ನೇ ಸಾಲಿನ ಆಯವ್ಯಯ
2. ಸರ್ಕಾರಿ ಆದೇಶ ಸಂಖ್ಯೆ: ವಾಕೈ 37 ಜಕೈಯೋ 2009, ದಿನಾಂಕ: 28.10.2009

ಪ್ರಸ್ತಾವನೆ:

      2009-10ನೇ ಸಾಲಿನ ಆಯವ್ಯಯದಲ್ಲಿ ಬಡ ನೇಕಾರರಿಗೆ ತಮ್ಮ ವೃತ್ತಿಯನ್ನು ಸೂಕ್ತ ಪರಿಸರದಲ್ಲಿ ನಿರ್ವಹಿಸಲು ಅನುಕೂಲವಾಗುವಂತೆ 5,000 ಮಗ್ಗದ ಕೋಣೆಯುಳ್ಳ ಮನೆಗಳನ್ನು ತಲಾ ರೂ.60000/-ಗಳ  ವೆಚ್ಚದಲ್ಲಿ ನಿರ್ಮಿಸಲು ರೂ.30.00 ಕೋಟಿಗಳ  ಅನುದಾನವನ್ನು ನೀಡಲು ಘೋಷಿಸಲಾಗಿದೆ.

       ಸದರಿ ಘೋಷಣೆಯನ್ವಯ ನೇಕಾರರಿಗೆ ವಸತಿ ಕಾರ್ಯಾಗಾರ ಯೋಜನೆಯಡಿ ಅನುಷ್ಠಾನಗೊಳಿಸಲು ಮೇಲೆ ಓದಲಾದ (2) ರ ಸರ್ಕಾರಿ ಆದೇಶದಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ, ಈ ಸಂಬಂಧ ಫಲಾನುಭವಿಗಳು ಹೊಂದಿರಬೇಕಾದ ಅರ್ಹತೆ, ಆಯ್ಕೆ, ಪ್ರಸ್ತಾವನೆಯನ್ನು ಸಿದ್ದಪಡಿಸುವುದು, ಮಂಜೂರಾತಿ, ಅನುಷ್ಠಾನ ಮತ್ತು ಮಾನಿಟರಿಂಗ್ ಮುಂತಾದ ಅಂಶಗಳನ್ನೊಳಗೊಂಡ ಕಾರ್ಯವಿಧಾನಗಳ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದೆಂದು ತಿಳಿಸಲಾಗಿದೆ.  ಅದರಂತೆ, ಈ ಕೆಳಕಂಡ ಆದೇಶ.

​​ಸರ್ಕಾರಿ ಆದೇಶ ಸಂಖ್ಯೆ: ವಾಕೈ 37 ಜಕೈಯೋ 2009, ಬೆಂಗಳೂರು ದಿನಾಂಕ: 02.01.2010.


     ಕೈಮಗ್ಗ ಮತ್ತು ಜವಳಿ ಇಲಾಖೆ, 2009-10ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದು, ನೇಕಾರರಿಗೆ ವಸತಿ ಕಾರ್ಯಾಗಾರ ಯೋಜನೆಯಡಿ ಅನುಷ್ಟಾನಗೊಳಿಸುವ ಸಂಬಂಧ ಇರಬೇಕಾದಂತಹ ಅರ್ಹತೆಗಳು, ಆಯ್ಕೆ, ಪ್ರಸ್ತಾವನೆಯನ್ನು ಸಿದ್ಧಪಡಿಸುವುದು, ಮಂಜೂರಾತಿ, ಅನುಷ್ಠಾನ ಮತ್ತು ಮಾನಿಟರಿಂಗ್ ಮುಂತಾದ ಅಂಶಗಳನ್ನೊಳಗೊಂಡ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಯನ್ನು ಇದರೊಂದಿಗೆ ಲಗತ್ತಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ಟಿ.ಆರ್.ಅನಂತರಾಮು)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​​​​​​​​​​​​​​​​​​​

​ನೇಕಾರರ ವಸತಿ ಕಾರ್ಯಾಗಾರ ಯೋಜನೆಯ – ಮಾರ್ಗಸೂಚಿಗಳು


ಪೀಠಿಕೆ:

      2009-10ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರವು, ನೇಕಾರರು ಸಂಕಷ್ಟದಲ್ಲಿದ್ದು, ಅವರಿಗೆ ಸಾಮಾಜಿಕ ಬದುಕನ್ನು ರೂಪಿಸಿ ಆರ್ಥಿಕವಾಗಿ ಸದ್ರುಡಗೊಳಿಸಲು ಸರ್ಕಾರವು ವಸತಿ ಕಾರ್ಯಾಗಾರ ಯೋಜನೆಯನ್ನು ಘೋಷಿಸಿರುತ್ತದೆ.  ನೇಕಾರಿಕೆ ವೃತ್ತಿಯು ಮೂಲತ: ಗುಡಿ ಕೈಗಾರಿಕೆಯಾಗಿದ್ದು, ನೇಕಾರರು ಅವರು ವಾಸಿಸುವ ಸ್ಥಳದಲ್ಲಿಯೇ ನೇಯ್ಗೆ ಚಟುವಟಿಕೆಗಳನ್ನು ಮಾಡಲು ಬಯಸುತ್ತಾರೆ.  ಆದ್ದರಿಂದ ಉತ್ತಮ ಕಾರ್ಯಸ್ಥಳ, ಪರಿಸರ, ಉತ್ತಮವಾದ ಬೆಳಕಿನ ವಾತಾವರಣ ಹಾಗೂ ಕೆಲಸದ ಅವಧಿಯಲ್ಲಿ ಹೆಚ್ಚಳ ಹೊಂದಲು ಮೂಲಭೂತ ಸೌಕರ್ಯಗಳೊಂದಿಗೆ ನೇಕಾರರ ತಲೆ ಮೇಲೆ ಒಂದು ಸೂರನ್ನು ನೀಡುವುದು ಇದರ ಉದ್ದೇಶವಾಗಿರುತ್ತದೆ.  ಕೈಮಗ್ಗ ನೇಕಾರರಿಗೆ ಚಾಲ್ತಿಯಲ್ಲಿದ್ದ ಕೇಂದ್ರ ಪುರಸ್ಕೃತ ವಸತಿ ಕಾರ್ಯಾಗಾರ ಯೋಜನೆ ಅನುಷ್ಟಾನದ ಫಲಶೃತಿಗಳ ಮೌಲ್ಯಮಾಪನದಿಂದ ವ್ಯಕ್ತಗೊಂಡ ಅಂಶದ ಮೇರೆಗೆ ಪ್ರತಿ ಘಟಕದ ವೆಚ್ಚವನ್ನು ರೂ.60.000/-ಗಳಿಗೆ ನಿಗದಿಪಡಿಸಿ ಜಾರಿಗೊಳಿಸಲು ಸರ್ಕಾರವು ತೀರ್ಮಾನಿಸಿದೆ.

ಕೇಂದ್ರ ಪುರಸ್ಕೃತ ವಸತಿ ಕಾರ್ಯಾಗಾರ ಯೋಜನೆಯು 10ನೇ ಪಂಚವಾರ್ಷಿಕ ಯೋಜನೆಯ ಅವಧಿಗೆ ಮುಕ್ತಾಯವಾಗಿರುತ್ತದೆ.  ಈ ಯೋಜನೆಯ ಅನುಷ್ಟಾನದಲ್ಲಿ ಆಗಿರುವ ಸುಧಾರಣೆ, ಪರಿಣಾಮ ಮತ್ತು ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಕುರಿತು 2004-05ನೇ ಸಾಲಿನಲ್ಲಿ ಯೋಜನೆಯ ಸಮಗ್ರ ಮೌಲ್ಯಮಾಪನವನ್ನು ನಡೆಸಲಾಗಿರುತ್ತದೆ. ಈ ಮೌಲ್ಯಮಾಪನದ ವರದಿಯಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ (RGRHC) ತಾಲ್ಲೂಕು ಪಂಚಾಯಿತಿ ಮುಖಾಂತರ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ಸಾಕಷ್ಟು ವಿಳಂಭವಾಗುತ್ತಿರುವುದನ್ನು ಗುರುತಿಸಲಾಗಿದೆ.  ಆದ್ದರಿಂದ ನಿಗಧಿತ ಅವಧಿಯಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯ  ಜಿಲ್ಲಾ ಮಟ್ಟದ ಅಧಿಕಾರಿಗಳಿಂದಲೇ ನೇರವಾಗಿ ಹಣ ಬಿಡುಗಡೆ ಮಾಡಿ ಅನುಷ್ಟಾನದ ಕೆಲಸವನ್ನು ನಿರ್ವಹಿಸಲು ಅಭಿಪ್ರಾಯ ನೀಡಲಾಗಿರುತ್ತದೆ. 

     ಆದುದರಿಂದ ರಾಜ್ಯದ ನೇಕಾರರಿಗೆ ಸಾಮಾಜಿಕ ಭದ್ರತೆಯ ನೆಲೆಗಟ್ಟಿನಲ್ಲಿ ನೆಮ್ಮದಿ ಜೀವನವನ್ನು ಸಾಗಿಸಲು ಅವಕಾಶ ಕಲ್ಪಿಸಿಕೊಡಲು ಮತ್ತು ಈ ಯೋಜನೆಯ ಅನುಷ್ಟಾನಲದಲ್ಲಿ ಅನುಸರಿಸಬೇಕಾದ ವಿವಿಧ ಕಾರ್ಯವಿಧಾನಗಳ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

1) ಫಲಾನುಭವಿಗಳು:

ಕರ್ನಾಟಕ ರಾಜ್ಯದ ನಿವಾಸಿಗಳಾಗಿದ್ದು, ಕೈಮಗ್ಗ, ವಿದ್ಯುತ್ ಚಾಲಿತ ಮಗ್ಗ, ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೇಕಾರರಿಗೆ ಮಾತ್ರ ಅನ್ವಯಿಸುತ್ತದೆ. 

2) ಹಣಕಾಸಿನ ನೆರವು:

ಅ) ಒಟ್ಟು ಘಟಕ ವೆಚ್ಚ ಮೊತ್ತ             ರೂ.65,000/-
ಆ) ಸರ್ಕಾರದ ಗರಿಷ್ಟ ಸಹಾಯಧನ       ರೂ.40,000/-
ಇ) ಸರ್ಕಾರದಿಂದ ಸಾಲ                   ರೂ.20,000/-
ಈ) ನೇಕಾರರ/ಫಲಾನುಭವಿಯ ವಂತಿಕೆ ರೂ.  5,000/-
ಉ) ಸಾಲದ ಪಾಲು ಮೊದಲನೆ ಕಂತು ಬಿಡುಗಡೆಯಾದ ನಂತರ 6 ತಿಂಗಳು ಮಾರಿಟೋರಿಯಂ ಅವಧಿ ಹೊರತುಪಡಿಸಿ ಶೇ.9 ರ ಬಡ್ಡಿ ಸಹಿತ ವಸೂಲು ಮಾಡಿ ಸರ್ಕಾರಕ್ಕೆ ಮರುಪಾವತಿಸಲು ಅನುಷ್ಠಾನಾಧಿಕಾರಿಯು ಕ್ರಮವಹಿಸುವುದು.

3) ನಿವೇಶನ/ಜಾಗದ ಲಭ್ಯತೆ

ವಸತಿ ಕಾರ್ಯಾಗಾರವನ್ನು ನಿರ್ಮಿಸಿಕೊಳ್ಳವಲ್ಲಿ ಫಲಾನುಭವಿಯು ಪುರುಷರಾದರೆ ಜಂಟಿ ಖಾತೆ, ಮಹಿಳೆಯಾದಲ್ಲಿ ತನ್ನ ಸ್ವಂತ ಹೆಸರಿನಲ್ಲಿ ಕಡ್ಡಾಯವಾಗಿ ಖಾಲಿ ನಿವೇಶನವನ್ನು ಹೊಂದಿರತಕ್ಕದ್ದು.  ಇದರ ಕನಿಷ್ಠ ಅಳತೆಯು 20” X 30” ಅಡಿ ವಿಸ್ತೀರ್ಣವುಳ್ಳದ್ದಾಗಿರಬೇಕು.  ಘಟಕ ವೆಚ್ಚದಲ್ಲಿ ನಿವೇಶನದ ಮೌಲ್ಯವು ಒಳಗೊಂಡಿರುವುದಿಲ್ಲ ಫಲಾನುಭವಿಯು ಹೊಂದಿರುವ ನಿವೇಶನದ/ಜಾಗದ ಮೇಲೆ ಯಾವುದೇ ತರಹದ ತಕರಾರು/ವ್ಯಾಜ್ಯ/ಮೊಕದ್ದಮೆಗಳಿಂದ ಹೊರತಾಗಿರಬೇಕು.

4) ಫಲಾನುಭವಿಗಳ ಮೂಲ

 ರಾಜ್ಯದಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳನ್ವಯ ನೊಂದಾಯಿಸಲ್ಪಟ್ಟಿರುವ, ಕೈಮಗ್ಗ ನೇಕಾರರ ಸಹಕಾರ ಸಂಘ, ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘಗಳಲ್ಲಿ ನೊಂದಾಯಿತ ಸದಸ್ಯರು, ಜವಳಿ ಚಟುವಟಿಕೆಗಳ ವಿವಿದೋದ್ದೇಶಗಳ ಸಹಕಾರ ಸಂಘಗಳ್ಲ್ಲಿ ನೊಂದಾಯಿತ ಸದಸ್ಯರು, ಜಿಲ್ಲಾ ಮಟ್ಟದ/ರಾಜ್ಯ ಮಟ್ಟದ ನೇಕಾರರ ಮಹಾ ಮಂಡಳಿಗಳು, ಕರ್ನಾಟಕ ಕೈಮಗ್ಗ ಅಭಿವ್ರುದ್ಧಿ ನಿಗಮದಲ್ಲಿ ಕಾರ್ಯನಿರತರಾಗಿರುವ ನೊಂದಾಯಿತ ಸದಸ್ಯರು, ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ NGO/ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿನ ಸದಸ್ಯರು ಮತ್ತು ಕಾರ್ಯನಿರತರಾಗಿರುವ ಸಂಘಟಿತ ವಲಯದ ನೇಕಾರರು ಅರ್ಹರಾಗಿರುತ್ತಾರೆ.

5) ಅರ್ಹಫಲಾನುಭವಿಗಳ ಆಯ್ಕೆ:
 
ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕವಾಗಿ ವ್ಯಾಪಕ ಪ್ರಚಾರದ ಮೂಲಕ ಅರ್ಜಿಗಳನ್ನು ಆಹ್ವಾನಿಸುವುದು.  ಜಿಲ್ಲಾ ಕಛೇರಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಮಾಹಿತಿಯ ಆಧಾರದ ಮೇಲೆ ಪ್ರತಿ ಫಲಾನುಭವಿಯ ವಾಸ ಸ್ಥಳ, ಕಾರ್ಯಚಟುವಟಿಕೆ ಮತ್ತು ಅರ್ಹತೆಯ ವಿವರಗಳನ್ನು ಕೂಲಂಕುಷವಾಗಿ ಸ್ಥಳ ಪರಿಶೀಲನೆ ನಡೆಸತಕ್ಕದ್ದು, ಕ್ರೋಢೀಕೃತ ಅರ್ಜಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಬೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯತಕ್ಕದ್ದು.  ಈ ಸಮಿತಿಯಲ್ಲಿ ನಿಯಮಾನುಸಾರ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಕ್ರೋಢೀಕ್ರತ ವಿವರಗಳೊಂದಿಗೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ಇವರಿಗೆ ಶಿಫಾರಸ್ಸು ಮಾಡುವುದು.

6.0 ಫಲಾನುಭವಿಗಳು ಹೊಂದಿರಬೇಕಾದ ಕನಿಷ್ಟ ಅರ್ಹತೆಗಳು:

6.1. ಫಲಾನುಭವಿಯು ವ್ರತ್ತಿ ನಿರತ/ನೇಯ್ಗೆ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರಬೇಕು.
6.2. ನೇಯ್ಗೆ ಚಟುವಟಿಕೆಗಳಿಂದ ಕನಿಷ್ಟ ಶೇ.50 ವಾರ್ಶಿಕ ಆದಾಯ ಹೊಂದಿರಬೇಕು.
6.3. ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದ ಮತ್ತು ಜಿಲ್ಲಾ ವಲಯ ಯೋಜನೆಗಳಡಿ   ಯಾವುದೇ ಇಲಾಖೆ ಅಥವಾ ಕಾರ್ಯಕ್ರಮಗಳಲ್ಲಿ ವಸತಿ ಸೌಲಭ್ಯವನ್ನು ಈ ಹಿಂದೆ ಪಡೆದಿರಬಾರದು.
6.4. ವಸತಿ ರಹಿತ ನೇಕಾರರಾಗಿರಬೇಕು.
6.5. ಸರ್ಕಾರದ ಯಾವುದೇ ಯೋಜನೆಗಳಡಿ, ಪತಿ ಅಥವಾ ಪತ್ನಿಯ ಹೆಸರಿನಲ್ಲಿ ಇಂತಹ ಸೌಲಭ್ಯ ಪಡೆದಿರಬಾರದು.
6.6. ಒಂದೇ ಕುಟುಂಬದಲ್ಲಿ ವಾಸವಾಗಿರುವ ಸದಸ್ಯರಿಗೆ ಗಂಡ ಅಥವಾ ಹೆಂಡತಿ ಹೆಸರಿನಲ್ಲಿ ಒಂದು ಮನೆಗೆ ಮಾತ್ರ ಈ ಸೌಲಭ್ಯ ಅನ್ವಯಿಸತಕ್ಕದ್ದು.
6.7. ನೇಕಾರಿಕೆ ವ್ರತ್ತಿ ಅವಲಂಬಿಸಿರುವ ಫಲಾನುಭವಿಯು ಕನಿಷ್ಟ 18 ವರ್ಷ ವಯೋಮಿತಿ ಹೊಂದಿರತಕ್ಕದ್ದು.

7.0 ಫಲಾನುಭವಿಗಳಿಂದ ಪಡೆಯಬೇಕಾದ ದಾಖಲಾತಿಗಳು:

7.1.   ಸಾಮಾನ್ಯ ಅರ್ಜಿ ನಮೂನೆಯಲ್ಲಿ ಫಲಾನುಭವಿಯು ಮಾಹಿತಿಗಳು.
7.2.  ಇತ್ತೀಚಿನ ಫೋಟೋ/ಭಾವಚಿತ್ರ.
7.3. ನಿವೇಶನದ ದಾಖಲಾತಿಗಳು: ಖಾತೆ ಪ್ರತಿ/ಹಕ್ಕು ಪತ್ರ/ಮಂಜೂರಾತಿ ಪತ್ರ. 
       ನೋಂದಾವಣೆ ಪ್ರತಿ.
7.4. ಸ್ಥಳೀಯ ಪ್ರಾಧಿಕಾರದಿಂದ ಪಡೆದ ಕಟ್ಟಡದ ಲೈಸೆನ್ಸ್/ಪರವಾನಗಿ.
7.5. ಕಟ್ಟಡದ ಅನುಮೋದಿತ ನೀಲಿ ನಕ್ಷೆ ಪ್ರತಿ.
7.6. ಕಟ್ಟಡದ ವಿವರವಾದ ಅಂದಾಜು ವೆಚ್ಚದ ಪಟ್ಟಿ.
7.7. ಸಾಲ ಮಂಜೂರಾತಿ ಪತ್ರದ ಪ್ರತಿ(ಸಾಲ ಪಡೆದಿದ್ದಲ್ಲಿ ಮಾತ್ರ).
7.8. ಸ್ಥಳೀಯ ಪ್ರಾಧಿಕಾರ/ಗ್ರಾಮ ಪಂಚಾಯಿತಿಯಿಂದ ನೀಡಿದ ನಿರಾಕ್ಷೇಪಣಾ ಪತ್ರ.
7.9. ಪ್ರಾಥಮಿಕ ನೇಕಾರರ ಸಹಕಾರ ಸಂಘದ ಸದಸ್ಯರಾಗಿದ್ದಲ್ಲಿ ಸಂಘದ 
       ದೃಢೀಕರಣ/ಠರಾವು ಪತ್ರ.
7.10. ಫಲಾನುಭವಿಯಿಂದ ಕರಾರು/ಒಪ್ಪಿಗೆ ದ್ರುಢೀಕರಣ ಪತ್ರ (ರೂ.15/- ಛಾಪಾ 
       ಕಾಗದದಲ್ಲಿ).

8) ಪ್ರಸ್ತಾವನೆಯನ್ನು ಸಿದ್ದಪಡಿಸುವುದು.

ಯೋಜನೆಯಡಿ ಸೌಲಭ್ಯ ಬಯಸುವ ಅರ್ಹ ಫಲಾನುಭವಿಗಳಿಂದ ಅಥವಾ ಸಂಘ/ಸಂಸ್ಥೆಗಳ ಮೂಲಕ ಚೆಕಲಿಸ್ಟ್ನಲ್ಲಿ ನಿರ್ಧಿಷ್ಟ ಪಡಿಸಿರುವ ದಾಖಲಾತಿಗಳನ್ನು ಪ್ರತಿ ವೈಯಕ್ತಿಕ ಪ್ರಸ್ತಾವನೆಯನ್ನು ಪರಿಶೀಲಿಸಿ, ದಾಖಲಾತಿಗಳ ಪ್ರತಿಯನ್ನು ದೃಢೀಕರಿಸಿ, ಘಟಕ ವೆಚ್ಚ, ಸಹಾಯಧನ, ಸಾಲ ಸೌಲಭ್ಯ, ವಂತಿಕೆಯ ಮೊತ್ತ, ಕಾರ್ಯಚಟುವಟಿಕೆ ಮತ್ತು ಸ್ಥಳ ಪರಿಶೀಲನಾ ವರದಿ ಮುಂತಾದ ವಿವರಗಳನ್ನೊಳಗೊಂಡ ವಿವರಗಳನ್ನು ಪ್ರಸ್ತಾವನೆಯಲ್ಲಿ ದಾಖಲಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಷ್ಟ ಅಭಿಪ್ರಾಯದೊಂದಿಗೆ ಕೇಂದ್ರ ಕಛೇರಿಗೆ ಶಿಫಾರಸ್ಸು ಮಾಡುವುದು.

9) ಅನುಷ್ಟಾನದ ಏಜೆನ್ಸಿ:

ಉಪನಿರ್ದೇಶಕರು ಅಥವಾ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ನೇಕಾರರ ಸಹಕಾರ ಸಂಘಗಳು,               ಎನ್ ಜಿಒ/ಸ್ವಯಂ ಸೇವಾ ಸಂಘ ಸಂಸ್ಥೆಗಳು, ನಿಗಮ/ಮಂಡಳಿಗಳ ಮೂಲಕ ಹಾಗೂ ಅಸಂಘಟಿತ ವಲಯದ ನೇಕಾರರು/ಫಲಾನುಭವಿಗಳಿಗೆ ನೇರವಾಗಿ ನಿಯಮಗಳನುಸಾರ ಅನುಷ್ಟಾನಗೊಳಿಸುವುದು.

10) ಪ್ರಸ್ತಾವನೆ ಮಂಜೂರಾತಿ:

ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸ್ವೀಕರಿಸಲಾದ ಪ್ರಸ್ತಾವನೆಗಳನ್ನು ಕೇಂದ್ರ ಕಛೇರಿಯಲ್ಲಿ ಪರಿಶೀಲಿಸಿ ಅನುದಾನದ ಲಭ್ಯತಾನುಸಾರ ಮಂಜೂರಾತಿಗೆ ಪರಿಗಣಿಸುವುದು.

11) ಹಣ ಬಿಡುಗಡೆ:

(ಅ) ಸರ್ಕಾರದಿಂದ ನಿಗದಿಯಾಗಿರುವ ಅನುದಾನದ ಮಿತಿಯಲ್ಲಿ ಮಂಜೂರಾತಿ ಪಡೆದ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರದ ಸಹಾಯಧನವಾಗಿ ಪ್ರತಿ ಘಟಕಕ್ಕೆ ಗರಿಷ್ಠ ಮಿತಿ ರೂ.40,000/-ದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಬಿಡುಗಡೆ ಮಾಡುವುದು.
(ಆ) ಜಿಲ್ಲಾ ಮಟ್ಟದ ಅಧಿಕಾರಿಗಳು, ಕಟ್ಟಡ ಕಾಮಗಾರಿ ಪ್ರಾರಂಭಿಸುವ ಮುನ್ನ ಫಲಾನುಭವಿಗಳು ಭರಿಸುವ ವಂತಿಕೆ ಹಾಗೂ ಸಹಾಯಧನ ಹಣವನ್ನು ಜಂಟಿ ಖಾತೆಯಲ್ಲಿಡುವುದು ಅಥವಾ ವಂತಿಕೆಯ ಮೊತ್ತದಲ್ಲಿ ಫಲಾನುಭವಿಯು ಕಾಮಗಾರಿಗೆ ತಗಲುವ ವೆಚ್ಚವಾಗಿ ಮುಂಗಡ ಭರಿಸುವುದು.
(ಇ) ಘಟಕ ವೆಚ್ಚದಲ್ಲಿನ ಮೊತ್ತಕ್ಕಿಂತ ಹೆಚ್ಚುವರಿ ಆಗಬಹುದಾದ ಹಣವನ್ನು ಫಲಾನುಭವಿಯು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಅಥವಾ ಸ್ವಂತ ಭರಿಸುವುದು.
(ಈ) ಫಲಾನುಭವಿಯ ವಂತಿಕೆಯ ಮೊತ್ತದಲ್ಲಿ ಪ್ರಾಥಮಿಕ ಕೆಲಸ / ತಳಪಾಯ ಕಾಮಗಾರಿಗಾಗಿ ಭರಿಸುವುದು.
(ಉ) ವಸತಿ  ಕಾರ್ಯಾಗಾರಕ್ಕಾಗಿ ಮಂಜೂರಾದ ಸಾಲ ಹಾಗೂ ಸರ್ಕಾರದ ಸಹಾಯಧವನ್ನು ಪ್ರಗತಿಯನ್ನಾಧರಿಸಿ 3 ಹಂತಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಣ ಬಿಡುಗಡೆ ಮಾಡುವುದು.

1. ಮೊದಲನೆ ಕಂತು ಸಾಲ     --       ರೂ.20,000/-
2. ಎರಡನೇ ಕಂಡು ಸಾಲ      --       ರೂ.20,000/-
3. ಮೂರನೇ ಕಂತು(ಸಹಾಯಧನ) --  ರೂ.20,000/-

(ಊ) ಅಂತಿಮ ಕಂತು ಸಹಾಯಧನ ಬಿಡುಗಡೆಗೆ ಮೊದಲು ಪೋಟೋ ದಾಖಲೀಕರಣ ಮತ್ತು ಕಾಮಗರಿ ಬಿಲ್ಲಿನ ವಿವರಗಳನ್ನು ಪಡೆದು ಮಾತ್ರ ಬಿಡುಗಡೆ ಮಾಡತಕ್ಕದ್ದು.


12. ಕಟ್ಟಡ ರಚನೆಯ ವಿವರಣೆ:

i. ಫಲಾನುಭವಿಯು ನಿರ್ಮಿಸಲ್ಪಡುವ ವಸತಿ ಕಾರ್ಯಾಗಾರದ ಕನಿಷ್ಟ ವಿಸ್ತೀರ್ಣ 400 ಚ.ಅ. ಇರತಕ್ಕದ್ದು.

ii. ವಾಸಿಸಲು ಕನಿಷ್ಟ ಸ್ಥಳ ಅಡುಗೆ ಕೋಣೆ, ಶೌಚಾಲಯ, ಸ್ನಾನ ಕೋಣೆಗಳನ್ನು ಹೊಂದಿರತಕ್ಕದ್ದು.  ಕನಿಷ್ಟ ಉತ್ತಮ ಬೆಳಕಿನ ವ್ಯವಸ್ಥೆ ಹೊಂದಿರಬೇಕು.

iii. ಕಟ್ಟಡ ಕಾಮಗಾರಿಗೆ ಬೇಕಾದ ಕಟ್ಟಡ ಸಾಮಗ್ರಿಗಳನ್ನು ಒದಗಿಸಿ, ತನ್ನ ಶ್ರಮದಿಂದ ಲಿಂಟಲ್ ಹಂತದವರೆಗೆ ತಗಲುವ ವೆಚ್ಚವನ್ನು ಫಲಾನುಭವಿಯು ಘಟಕ ವೆಚ್ಚದಲ್ಲಿನ ಹೆಚ್ಚುವರಿ ಮೊತ್ತವನ್ನಾಗಿ ಭರಿಸುವುದು.

iv. ನಿರ್ಮಿತ ಕಟ್ಟಡಕ್ಕೆ ನಕಾಶೆಯಂತೆ ನೈರ್ಮಲ್ಯ, ಕೊಳಚೆ ನೀರು/ತ್ಯಾಜ್ಯ ವಸ್ತುಗಳ ವಿಸರ್ಜನೆಗೆ ಅನುಕೂಲ ವಾತಾವರಣ ಇರತಕ್ಕದ್ದು.

v. ಕಟ್ಟಡದ ಗುಣಮಟ್ಟವನ್ನು ಉತ್ತಮವಾಗಿರುವಂತೆ ಕಾಯ್ದುಕೊಳ್ಳುವುದು.


13. ಮಾನಿಟರಿಂಗ್:

    ಯೋಜನೆಯ ಸಮರ್ಪಕ ಅನುಷ್ಟಾನದ ಉಸ್ತುವಾರಿ, ಮೇಲ್ವಿಚಾರಣೆ ಕ್ಷೇತ್ರ ಮಟ್ಟದ ಭೌತಿಕ ಪ್ರಗತಿ ಮತ್ತು ಕಾಮಗಾರಿಗಳನ್ನು ಜಂಟಿ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ) ರವರ ಅಧ್ಯಕ್ಷತೆಯ ಸಮಿತಿಯು ನಿರ್ವಹಿಸುವುದು.

14.ನಿಬಂಧನೆಗಳು:

i. ಸರ್ಕಾರದಿಂದ ಪಡೆದ ಆರ್ಥಿಕ ಸೌಲಭ್ಯದಿಂದ ನಿರ್ಮಿಸಿದ ಕಟ್ಟಡದಲ್ಲಿ ನಿರಂತರವಾಗಿ ನೇಯ್ಗೆ ವೃತ್ತಿಯನ್ನು ಮುಂದುವರಿಸುವುದು ಹಾಗೂ ಇದರಿಂದ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅವಕಾಶ ಹೊಂದುವುದು.

ii. ಬಿಡುಗಡೆ ಮಾಡಿದ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡಗುಡೆಗೊಳಿಸಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ವಿನಿಯೋಗಿಸಿಕೊಳ್ಳತಕ್ಕದ್ದು.

iii. ಅನುದಾನದಿಂದ ನಿರ್ಮಿಸಿದ ಕಟ್ಟಡವನ್ನು ಇತರೆ ಯಾವುದೇ ವ್ಯಕ್ತಿಗೆ ಉಪ ಬಾಡಿಗೆ/ಲೀಸ್ ಗೆ ನೀಡಬಾರದು ಅಥವಾ ಮುಂದಿನ 10 ವರ್ಷಗಳ ಅವಧಿಗೆ ಇಲಾಖೆಯ ಪೂರ್ವಾನುಮತಿ ಇಲ್ಲದೆ ಪರಬಾರೆ ಮಾಡಬಾರದು.

iv. ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ/ನಿಯಮಗಳಿಗೆ ಬದ್ಧವಾಗಿರಬೇಕು.

v. ಕಟ್ಟಡದ ಗೋಡೆಯ ಮುಂದಿನ ಭಾಗದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಆರ್ಥಿಕ ನೆರವಿನಿಂದ ನಿರ್ಮಿಸಲಾದ ಕಟ್ಟಡವೆಂದು ನಾಮಫಲಕವನ್ನು ಕಡ್ಡಾಯವಾಗಿ ಬರೆಸತಕ್ಕದ್ದು.

vi. ಕಟ್ಟಡ ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ಅಧಿಕೃತ ಇಂಜಿನಿಯರ್ ರವರಿಂದ ಕಂಪ್ಲೀಷನ್ ಸರ್ಟಿಫಿಕೇಟ್ ಹಾಗೂ ಪೋಟೋ ದಾಖಲೀಕರಣವನ್ನು ಇಲಾಖೆಗೆ ನೀಡತಕ್ಕದ್ದು.

vii. ಫಲಾನುಭವಿಗೆ ವಸತಿ ಕಾರ್ಯಾಗಾರವನ್ನು ಅಧಿಕೃತವಾಗಿ ಹಂಚಿಕೆ ಮಾಡಿ, ಉತ್ತಮ ವಾತಾವರಣದಲ್ಲಿ ನೇಯ್ಗೆ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸುವುದು.

viii. ಹಣ ಬಳಕೆ ಪ್ರಮಾಣ ಪತ್ರವನ್ನು ಪ್ರತಿ ಬಿಡುಗಡೆಯಾದ ವೆಚ್ಚಕ್ಕೆ ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸಬೇಕು.
ix. ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಉತ್ತೇಜನ/ ಪ್ರೋತ್ಸಾಹಿಸುವುದು.

x. ನಿರ್ಮಾಣ ಹಂತದಲ್ಲಿ ಫಲಾನಭವಿ ಆಕಸ್ವಿಕವಾಗಿ /ಸ್ವಾಭಾವಿಕವಾಗಿ ಮರಣ ಹೊಂದಿದಲ್ಲಿ ಈ ಸೌಲಭ್ಯವನ್ನು ಕಾನೂನು ರೀತ್ಯ ಹಕ್ಕುಳ್ಳ ಫಲಾನುಭವಿಯ ವಾರಸುದಾರರಿಗೆ ವರ್ಗಾಯಿಸಲು ಅವಕಾಶ ಕಲ್ಪಿಸುವುದು.

xi. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನಿಯಮಾನುಸಾರ ಒಟ್ಟಾರೆ ಭೌತಿಕ ಗುರಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಕನಿಷ್ಟ ಶೇ.16.20 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.6.55 ರಷ್ಟು ಮೆನಗಳನ್ನು ಮೀಸಲಿರಿಸತಕ್ಕದ್ದು ಲಹಾಗೂ ಅದರನ್ವಯ ಆಯ್ಕೆ ಮಾಡತಕ್ಕದ್ದು.

xii. ವಸತಿ ಕಾರ್ಯಾಗಾರ ಯೋಜನೆಯಡಿ ಕೇಂದ್ರ ವಲಯ, ರಾಜ್ಯ ವಲಯ ಅಥವಾ ಜಿಲ್ಲಾವಲಯ ಯೋಜನೆಯಡಿ ವಸತಿ ಸೌಲಭ್ಯ ಪಡೆಯುವ ಪ್ರತಿ ಫಲಾನುಭವಿಯು ತನ್ನ ಮೆನಯಲ್ಲಿ ಕನಿಷ್ಟ ಒಂದು ಕೈಮಗ್ಗ ವನ್ನು ಎರಡು ವಿದ್ಯುತ್ ಮಗ್ಗಗಳನ್ನು ಅಳವಡಿಸಿಕೊಂಡು ವೃತ್ತಿಯನ್ನು ಮುಂದುವರಿಸುವುದು.

xiii. ಸರ್ಕಾರದ ವಿವಿಧ ಯೋಜನೆಗಳಡಿ ತರಬೇತಿ ಹೊಂದಿ ಸುಧಾರಿತ ಮಗ್ಗ ಮತ್ತು ಸಲಕರಣೆಗಳನ್ನು ಪಡೆದ ಫಲಾನುಭವಿಗಳಿಗೆ ಆದ್ಯತೆ ನೀಡುವುದು.

xiv. ಇತರೆ ಫಲಾನುಭವಿಗಳಿಗೆ ಸರ್ಕಾರದ ಶೇ.3 ರ ಬಡ್ಡಿ ದರದ ಯೋಜನೆಯಡಿಯಲ್ಲಿ ತನ್ನ ಕಸುಬನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ ಸುಧಾರಿತ ಮಗ್ಗಗಳನ್ನು ಯೋಜನೆಯ ಒಂದು ಅಂಗವಾಗಿ ಸಾಲ ಮಂಜೂರಾತಿ ಪಡೆಯುವುದು.

15. ಮೌಲ್ಯ ಮಾಪನ:

i. ವಸತಿ ಕಾರ್ಯಾಗಾರ ಸೌಲಭ್ಯ ಪಡೆದ ಪ್ರತಿ ಫಲಾನುಭವಿಯ ಪೂರ್ಣ ವಿವರಗಳನ್ನು ಜಿಲ್ಲಾ ಮಟ್ಟದ ಕಛೇರಿಯಲ್ಲಿ ದಾಖಲಾತಿಯಾಗಿ ನಿರ್ವಹಿಸುವುದು.

ii. ಕಟ್ಟಡ ಕಾಮಗಾರಿಯ ಬಳಕೆ ಹಾಗೂ ಅದರಿಂದ ಆಗಿರುವ ಪರಿಣಾಮಗಳ ಬದಲಾವಣೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ಮಾಡುವುದು

iii. ಕಾಮಗಾರಿ ಪೂರ್ಣಗೊಳ್ಳುವವರೆಗೆ ಕ್ಷೇತ್ರ ಮಟ್ಟದಲ್ಲಿ ಕಾಲಕಾಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನಾ ಪ್ರಗತಿಯ ಹಂತ ಹಣ ಉಪಯುಕ್ತತೆ ಬಗ್ಗೆ ಪರಿಶೀಲನೆ ನಡೆಸುವುದು.

iv. ಪ್ರತಿ ತ್ರೈಮಾಸಿಕ ಅವಧಿಗೆ ಪ್ರಗತಿ ವರದಿಯನ್ನು ಸಲ್ಲಿಸುವುದು.
​​
ಸಹಿ/-
(ಟಿ.ಆರ್.ಅನಂತರಾಮು)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆContent Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.