ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿಯಲ್ಲಿ ಖಾದಿ ಆಯೋಗವು ರಾಜ್ಯ ಖಾದಿ ಮಂಡಳಿ ಮುಖಾಂತರ ಒಟಿಎಸ್ ಯೋಜನೆ ಮಾರ್ಗಸೂಚಿ

  • GOK
    • vanijyasachivalaya
      • ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿಯಲ್ಲಿ ಖಾದಿ ಆಯೋಗವು ರಾಜ್ಯ ಖಾದಿ ಮಂಡಳಿ ಮುಖಾಂತರ ಒಟಿಎಸ್ ಯೋಜನೆ ಮಾರ್ಗಸೂಚಿ
Last modified at 24/04/2016 10:58 by Vanijyasachivalaya

​​​

​​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿಯಲ್ಲಿ ಖಾದಿ ಆಯೋಗವು ರಾಜ್ಯ ಖಾದಿ ಮಂಡಳಿ ಮುಖಾಂತರ ವಿತರಿಸಿರುವ ಸಾಲಕ್ಕೆ ಏಕಗಂಟು ತೀರುವಳಿ (ಓ.ಟಿ.ಎಸ್.) ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.

ಓದಲಾಗಿದೆ: 

1. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರ ಪತ್ರ ಸಂಖ್ಯೆ ಖಾಮಂ/ಕೇದಶಾ/ಸಿಬಿಸಿ 
        ಸಾಲ ಮನ್ನ/2014-15 ದಿನಾಂಕ 27.09.2014 ಮತ್ತು 14.05.2014.
2. ಸರ್ಕಾರದ ಆದೇಶ ಸಂಖ್ಯೆ ಸಿಐ 18 ಎಸ್.ಎಲ್.ವಿ. 2014 (ಪಿ1) ದಿ: 09.07.2014.

ಪ್ರಸ್ತಾವನೆ:

ಮೇಲೆ ಕ್ರಮಾಂಕ (1) ರಲ್ಲಿ ಓದಲಾದ ಪತ್ರದಲ್ಲಿಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯವರು ಸಮೂಹ ಬ್ಯಾಂಕ್ ಸಾಲ ಯೋಜನೆಯಡಿಯಲ್ಲಿ (ಸಿಬಿಸಿ) ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಮುಂಬೈ ಇವರಿಂದ 1995-96ರಿಂದ 1999-2000ರ ಅವಧಿಯಲ್ಲಿ ರೂ. 88.39 ಕೋಟಿ ಸಾಲವನ್ನು ಹಾಗೂ ರೂ. 30.00 ಕೋಟಿ ಅಂಚು ಹಣವನ್ನು ಪಡೆದು 2457 ಫಲಾನುಭವಿಗಳಿಗೆ ವಿವಿಧ ಖಾದಿ ಗ್ರಾಮೋದ್ಯೋಗ ಉದ್ದಿಮೆಗಳ ಸ್ಥಾಪನೆಗೆ ಮಂಜೂರು ಮಾಡಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 465 ಘಟಕಗಳು ಸಂಪೂರ್ಣ ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಿರುತ್ತವೆ.  ಬಾಕಿ 1992 ಖಾದಿ ಗ್ರಾಮೋದ್ಯೋಗ ಘಟಕಗಳು ರೋಗಗ್ರಸ್ಥವಾಗಿರುವುದರಿಂದ ಹಾಗೂ ಅವುಗಳನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲವಾಗಿರುವುದರಿಂದ, ಈ ಯೋಜನೆಯಡಿ ದಿ. 31.03.2014ರ ಅಂತ್ಯಕ್ಕೆ ರೂ. 59.48 ಕೋಟಿ ಸಾಲ ಹಾಗೂ ಬಡ್ಡಿ ರೂ. 123.76 ಕೋಟಿ ಅಂದರೆ ಒಟ್ಟು ರೂ. 183.24 ಕೋಟಿ ಮೊತ್ತವು ಬಾಕಿ ಬರಬೇಕಾಗಿರುತ್ತವೆ.  ಇದನ್ನು ವಸೂಲಾತಿ ಮಾಡಲು ಕಷ್ಟಕರವಾಗಿರುತ್ತದೆಂದು ತಿಳಿಸಿ ಪಿಬಿಎಸ್ ಯೋಜನೆಗೆ 2014-15ನೇ ಸಾಲಿನ ಆಯವ್ಯಯದಲ್ಲಿ ಬಡ್ಡಿ ಮನ್ನಾ ಘೋಷಣೆಯಾದಂತೆ ಸಿಬಿಸಿ ಯೋಜನೆಗೂ ಸಹ ಏಕಗಂಟು ತೀರುವಳಿ [One time settlement (OTS)] ಯೋಜನೆಯನ್ನು ಜಾರಿಗೆ ತರಲು ಸರ್ಕಾರವನ್ನು ಕೋರಿರುತ್ತಾರೆ.

2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಣೆಯಾದಂತೆ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿಬಿಎಸ್) ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂಲಕ ವಿತರಿಸಲಾದ ಸಾಲಕ್ಕೆ ಏಕಗಂಟು ತೀರುವಳಿ ಯೋಜನೆಯನ್ನು ಮೇಲೆ ಕ್ರಮಾಂಕ (2) ರಲ್ಲಿ ಓದಲಾದ ಸರ್ಕಾರದ ಆದೇಶದಡಿಯಲ್ಲಿ ಜಾರಿಗೊಳಿಸಲಾಗಿದ್ದು ಈ ಯೋಜನೆಗಾಗಿ 2014-15ನೇ ಸಾಲಿನ ಆಯವ್ಯಯದಲ್ಲಿ ರೂ. 26.15 ಕೋಟಿಗಳನ್ನು ಮೀಸಲಿಡಲಾಗಿದೆ.  ಆದರೆ, ಈ ಯೋಜನೆಯಡಿ ಸಾಲ ಪಡೆದ ಎಲ್ಲಾ ಫಲಾನುಭವಿಗಳು ಏಕಗಂಟು ತೀರುವಳಿ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ, ಈ ಯೋಜನೆಗಾಗಿ ಮೀಸಲಿಟ್ಟ ರೂ. 26.15 ಯೋಜನೆಗಳ ಪೈಕಿ ರೂ. 10.00 ಕೋಟಿಗಳನ್ನು ಕಡಿತಗೊಳಿಸಿ ಈ ಮೊತ್ತವನ್ನು ಸಿಬಿಸಿ ಯೋಜನೆಯಡಿ ವಿತರಿಸಿದ ಸಾಲಕ್ಕೆ ಜಾರಿಗೊಳಿಸಲಾದ ಏಕಗಂಟು ತೀರುವಳಿ ಯೋಜನೆಗೆ ಬಳಕೆ ಮಾಡಿಕೊಂಡು ನಂತರ ಮುಂದಿನ ಎರಡು ಸಾಲುಗಳಲ್ಲಿ ಈ ಬಡ್ಡಿ ಮೊತ್ತವನ್ನು ಮನ್ನಾ ಮಾಡಲು ಆಯವ್ಯಯದಲ್ಲಿ ಅವಕಾಶ ಮಾಡಿಕೊಳ್ಳಲು ಉದ್ದೇಶಿಸಿ ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ (Consortium Bank Credit Funding) (CBC) ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ವಿತರಿಸಲಾದ ಸಾಲಕ್ಕೆ ಏಕಗಂಟು ತೀರುವಳಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ.  ಅದರಂತೆ, ಈ ಮುಂದಿನಂತೆ ಆದೇಶಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ: ಸಿಐ 20 ಎಸ್.ಎಲ್.ವಿ. 2014, ಬೆಂಗಳೂರು ದಿನಾಂಕ 18.11.2014


ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಖಾದಿ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ (Consortium Bank Credit Funding (CBC) ವಿತರಿಸಲಾದ ಸಾಲವನ್ನು ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕ ಗಂಟು ತೀರುವಳಿ ಯೋಜನೆ (One Time Settlement) (OBS) ಯನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಈ ಕೆಳಕಂಡ ಷರತ್ತುಗಳಿಗೊಳಪಡಿಸಿ ಜಾರಿಗೆ ತರಲಾಗಿದೆ.

1. ಯೋಜನಾಧಾರಿತ ಧನಸಹಾಯ (PBS) ಯೋಜನೆಯಡಿ ಸಾಲ, ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದಕ್ಕೆ ಏಕಗಂಟು ತೀರುವಳಿ (One Time Settlement) (OTS) ಯೋಜನೆಗೆ ಈ ಸಾಲಿನಲ್ಲಿ ಮೀಸಲಿರಿಸಿರುವ ರೂ. 26.15 ಕೋಟಿಗಳಲ್ಲಿ ರೂ. 10.00 ಕೋಟಿಗಳನ್ನು ಕಡಿತಗೊಳಿಸಿ, ಸದರಿ ರೂ. 10.00 ಕೋಟಿ ಹಣವನ್ನು ಸಮೂಹ ಬ್ಯಾಂಕ ಸಾಲ ಯೋಜನೆಯಡಿ (CBC) ವಿತರಿಸಿದ ಸಾಲಕ್ಕೆ ಏಕಗಂಟು ತೀರುವಳಿ ಯೋಜನೆಯನ್ನು ಜಾರಿಗೊಳಿಸಲು ಬಳಸತಕ್ಕದ್ದು.  ಸಮೂಹ ಬ್ಯಾಂಕ ಸಾಲ ಯೋಜನೆಯಡಿ (CBC) ಅಡಿ ಬಾಕಿ ಉಳಿಯುವ ಬಡ್ಡಿ ಹಣವನ್ನು ಮನ್ನಾ ಮಾಡಲು ಮುಂದಿನ 2 ವರ್ಷಗಳ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿ ಈ ಯೋಜನೆಯನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

2. ಈ ಯೋಜನೆಯು ಖಾದಿ ಮಂಡಳಿಯಿಂದ ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ (Consortium Bank Credit Funding) [CBC] ಪಡೆದಿರುವ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ.

3. ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಖಾದಿ ಮಂಡಳಿಯಿಂದ ಪಡೆದಿರುವ ಸಮೂಹ ಬ್ಯಾಂಕ ಸಾಲದ ಅಸಲನ್ನು ದಿನಾಂಕ 31.03.2017ರೊಳಗೆ ಒಂದೇ ಬಾರಿ ಅಥವಾ ಕಂತುಗಳಲ್ಲಿ ಪೂರ್ಣವಾಗಿ ಅಸಲನ್ನು ಮರುಪಾವತಿ ಮಾಡಿದರೆ ಮಾತ್ರ ಬಡ್ಡಿಯನ್ನು ಮನ್ನಾ ಮಾಡಲಾಗುವುದು.

4. ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಮಂಡಳಿಯಿಂದ ಪಡೆದಿರುವ ಸಾಲದ ಬಾಬ್ತಿನ ಮೇಲೆ ಯಾವುದೇ ವ್ಯಾಜ್ಯ ಪ್ರಕರಣಗಳು ಇಲ್ಲದಿರುವ ಪ್ರಕರಣಗಳಿಗೆ ಮಾತ್ರ ಓಟಿಎಸ್ ಯೋಜನೆ ಅನ್ವಯಿಸುತ್ತದೆ.

5. ಸದರಿ ಏಕಗಂಟು ತೀರುವಳಿ ಯೋಜನೆಯ ನಿಗಧಿತ ಅವಧಿಯ ನಂತರವೂ ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಸಾಲವನ್ನು ಕಟ್ಟದೆ ಬಾಕಿ ಉಳಿಸಿಕೊಂಡಲ್ಲಿ ಅಂತಹ ಪ್ರಕರಣಗಳಲ್ಲಿ ಭೂ ಕಂದಾಯ ಕಾಯಿದೆ ಅನುಸರಿಸಿ ಬಾಕಿ ಇರುವ ಸಾಲವನ್ನು ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

6. ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ (Consortium Bank Credit Funding) (CBC) ವಿತರಿಸಲಾದ ಸಾಲವನ್ನು ಪಡೆದ ಘಟಕಗಳಿಗೆ ಜಾರಿಗೊಳಿಸಲಾದ ಏಕ ಗಂಟು ತೀರುವಳಿ ಯೋಜನೆಯ [One Time Settlement] ಮಾರ್ಗಸೂಚಿಗಳನ್ನು ಈ ಆದೇಶದ ಅನುಬಂಧದಲ್ಲಿರುವಂತೆ ಜಾರಿಗೊಳಿಸಲಾಗಿದೆ.  ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಯೋಜನೆಯನ್ನು ಅನುಷ್ಠಾನಗೊಳಿಸತಕ್ಕದ್ದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂ. FD 34 FRO 2014 ದಿನಾಂಕ 30.07.2014 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ FD 949 Exp-1 2014 ದಿನಾಂಕ 20.09.2014ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಎಲ್.ಎಸ್. ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​ಸರ್ಕಾರಿ ಆದೇಶ ಸಂಖ್ಯೆ ಸಿಐ 20 ಎಸ್.ಎಲ್.ವಿ. 2014, ಬೆಂಗಳೂರು, ದಿನಾಂಕ 18.11.2014ರ ಅನುಬಂಧ


ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿಯಲ್ಲಿ ಖಾದಿ ಆಯೋಗವು ರಾಜ್ಯ ಖಾದಿ ಮಂಡಳಿ ಮುಖಾಂತರ ವಿವರಿಸಿರುವ ಸಾಲಕ್ಕೆ ಜಾರಿಗೊಳಿಸಲಾಗಿರುವ ಓ.ಟಿ.ಎಸ್. ಯೋಜನೆಯ ಮಾರ್ಗಸೂಚಿಗಳು

ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳನ್ನು ಸ್ಥಾಪಿಸಲು, ಸಂಘ-ಸಂಸ್ಥೆ/ವೈಯಕ್ತಿಕ ಉದ್ದಿಮೆದಾರರಿಗೆ ಸದರಿಯವರು ಸಲ್ಲಿಸಿರುವ ಯೋಜನಾ ವರದಿಯನ್ನು ಆಧರಿಸಿ ಸಾಲ ಹಾಗೂ ಅಂಚುಹಣ ನೀಡುವ ಯೋಜನೆಯೇ ಸಮೂಹ ಬ್ಯಾಂಕ್ ಸಾಲಯೋಜನೆ ಆಗಿರುತ್ತದೆ.  ಈ ಯೋಜನೆಯಡಿ ಗರಿಷ್ಟ ರೂ. 25 ಲಕ್ಷದವರೆಗಿನ ಯೋಜನೆಗೆ ವೈಯಕ್ತಿಕ ಫಲಾನುಭವಿಗಳಿಗೆ/ಸಂಘಸಂಸ್ಥೆಗಳಿಗೆ ಖಾದಿ ಮತ್ತು ಗ್ರಾಮೋದ್ಯೋಗಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿ ಉದ್ಯೋಗಾವಕಾಶ ಒದಗಿಸಲು ಸಾಲ/ಅಂಚುಹಣ ನೀಡಲಾಗುತ್ತದೆ.  ಸದರಿ ಸಂಘ ಸಂಸ್ಥೆ/ವೈಯಕ್ತಿಕ ಉದ್ದಿಮೆದಾರರು 5% ಅಥವಾ 10% ರಷ್ಟು ಸ್ವಂತ ಮೂಲಗಳಿಂದ ಹೂಡಬೇಕಾಗುತ್ತಿದೆ ಹಾಗೂ ಶೇ 95% ಅಥವಾ 90% ಸಾಲ/ಅಂಚುಹಣ ನೀಡಲಾಗುತ್ತದೆ.  ಈ ಯೋಜನೆಗೆ ಬೇಕಾದ ಮೊತ್ತವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಕೇಂದ್ರ ಸರ್ಕಾರದ ಖಾತ್ರಿ ಮೇಲೆ ಭಾರತೀಯ ಸ್ಟೇಟ್ ಬ್ಯಾಂಕ್ ನಾಯಕತ್ವದಲ್ಲಿ ಸಮೂಹ ಬ್ಯಾಂಕ್ ಗಳಿಂದ ಪಡೆದಿರುತ್ತದೆ.  ಸದರಿ ಮೊತ್ತದಲ್ಲಿ ರಾಜ್ಯ ಸರ್ಕಾರದ ಖಾತ್ರಿ ಮೇಲೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಈ ಮಂಡಳಿಯು ಪಡೆದು ಸಂಘ-ಸಂಸ್ಥೆಗಳಿಗೆ/ವೈಯಕ್ತಿಕ ಉದ್ದಿಮೆದಾರರಿಗೆ ಮರು ಸಾಲ ಮಂಜೂರು ಮಾಡಿ ಬಿಡುಗಡೆ ಮಾಡಲಾಗಿರುತ್ತದೆ.

ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಮುಂಬೈ (ಭಾರತ ಸರ್ಕಾರ) ಇವರಿಂದ ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ 1995-96ರಿಂದ 1999-2000 ರವರೆಗಿನ ಅವಧಿಯಲ್ಲಿ ರೂ. 88.59 ಕೋಟಿಯನ್ನು ಕರ್ನಾಟಕ ಸರ್ಕಾರದ ಖಾತ್ರಿಯ ಮೇಲೆ ಸಾಲವಾಗಿ ಪಡೆದು 2457 ಫಲಾನುಭವಿಗಳಿಗೆ ವಿವಿಧ ಉದ್ದಿಮೆಗಳ ಸ್ಥಾಪನೆಗಾಗಿ ಮರು ಸಾಲವನ್ನು ಮಂಜೂರು ಮಾಡಿ ಬಿಡುಗಡೆ ಮಾಡಲಾಗಿತ್ತು.  ಈ ಫಲಾನುಭವಿಗಳ ಪೈಕಿ 465 ಫಲಾನುಭವಿಗಳು ಸಂಪೂರ್ಣ ಸಾಲ ಹಾಗೂ ಬಡ್ಡಿಯನ್ನು ಮರುಪಾವತಿಸಿದ್ದು, ಅವರಿಗೆ ಈಗಾಗಲೇ ಬೇಬಾಕಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.  ಉಳಿದಂತೆ 1992 ಫಲಾನುಭವಿಗಳಿಂದ ಈ ಯೋಜನೆಯಡಿ ದಿನಾಂಕ 31-03-2014ರ ಅಂತ್ಯಕ್ಕೆ ಸಾಲ ರೂ. 59.48 ಕೋಟಿ ಹಾಗೂ ಬಡ್ಡಿ ರೂ. 123.76 ಕೋಟಿ ಹೀಗೆ ಒಟ್ಟು ರೂ. 183.24 ಕೋಟಿ ಬಾಕಿ ಬರಬೇಕಾಗಿರುತ್ತದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಈ ಸಾಲವನ್ನು ಮಂಡಳಿಗೆ ರಾಜ್ಯ ಸರ್ಕಾರದ ಖಾತ್ರಿ ಮೇಲೆ ನೀಡಿರುವುದರಿಂದ ಈ ಸಾಲ ವಸೂಲಾತಿ ಮಾಡುವುದು ಅಗತ್ಯವಾಗಿರುತ್ತದೆ.  ಇಲ್ಲವಾದಲ್ಲಿ ರಾಜ್ಯ ಸರ್ಕಾರವು ಸಾಲ ಮತ್ತು ಬಡ್ಡಿ ಎಲ್ಲವನ್ನು ಸಹ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ ಪಾವತಿ ಮಾಡುವ ಸಂದರ್ಭ ಉಂಟಾಗುತ್ತದೆ.
ಆದರೂ ಸಹ, ಈ ಯೋಜನೆಯಡಿ ಸಾಲ ರೂ. 28.91 ಕೋಟಿ ಹಾಗೂ ಬಡ್ಡಿ ರೂ.42.10 ಕೋಟಿ ಮಂಡಳಿಯು ವಸೂಲಿ ಮಾಡಿದೆ.  ಸಾಲದ ವಸೂಲಾತಿಯ ಅವಧಿಯು ಮುಗಿದಿದ್ದು, ಎಲ್ಲಾ ಸಾಲವು ಅವಧಿ ಮೀರಿದ ಸಾಲವಾಗಿದ್ದು, ಯಾವುದೇ ವೈಯಕ್ತಿಕ ಫಲಾನುಭವಿ/ಸಂಘ-ಸಂಸ್ಥೆಯು ಆರ್ಥಿಕವಾಗಿ ಬಲಹೀನವಾಗಿದ್ದರಿಂದ ಹಣವನ್ನು ಮರುಪಾವತಿಸಲು ಆಸಕ್ತಿ ತೋರುತ್ತಿಲ್ಲ.

ಮೇಲ್ಕಂಡ ಸಾಲವನ್ನು 1995-96ರಿಂದ 1990-2000 ವರೆಗೆ ಬಿಡುಗಡೆ ಮಾಡಿದ್ದು, ಸಾಲ ವಸೂಲಾತಿ ಮಾಡಲು ಈ ಕೆಳಗಿನ ಕಾರಣಗಳಿಂದ ಕಷ್ಟಕರವಾಗುತ್ತಿದೆ.

1. ಈ ಗ್ರಾಮಗಳ ಕೈಗಾರಿಕೆಗಳ ಘಟಕಗಳು ಮೂಲತ: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಸಾಮಾಜಿಕ ಕಳಕಳಿಯುಳ್ಳ ಘಟಕಗಳು ಆಗಿದ್ದು, ಅವುಗಳ ಅಸ್ತಿತ್ವದ ಅವಧಿಯು ಕನಿಷ್ಟ 5 ವರ್ಷದಿಂದ 8 ವರ್ಷದವರೆಗೆ ಮಾತ್ರ ಇರುತ್ತದೆ.

2. ಈ ಘಟಕಗಳು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದ್ದರಿಂದ ಸಕಾಲದಲ್ಲಿ ಅವುಗಳಿಗೆ ಬೇಕಾಗುವ ವಿದ್ಯುತ್ ಸೌಕರ್ಯ, ಕಚ್ಚಾ ಮಾಲು, ಇತರೆ ಮೂಲಭೂತ ಸೌಕರ್ಯ ಕೊರತೆ ಇತ್ಯಾದಿಗಳು ಹಾಗೂ ಪೈಪೋಟಿಯಾಗದಲ್ಲಿ ಮಾರುಕಟ್ಟೆ ದೊರಕದೆ ಇರುವುದರಿಂದ ಸ್ಥಗಿತವಾಗಿರುತ್ತವೆ.  ಕೆಲವು ಘಟಕಗಳು ಸದರಿಯವರಿಗೆ ಘಟಕ ಸ್ಥಾಪನೆಗೆ ಅವಶ್ಯವಿರುವ ಯಂತ್ರೋಪಕರಣ ಇತ್ಯಾದಿಗಳು ಸಕಾಲದಲ್ಲಿ ಸರಬರಾಜು ಆಗದೇ ಇರುವುದರಿಂದ ಯಂತ್ರೋಪಕರಣ ಇತ್ಯಾದಿಗಳು ಸಕಾಲದಲ್ಲಿ ಸರಬರಾಜು ಆಗದೇ ಇರುವುದರಿಂದ ಕೆಲಸಗಳು ಪ್ರಾರಂಭವಾಗದೆ ಇರುತ್ತವೆ/ಸ್ದಗಿತಗೊಂಡಿರುತ್ತವೆ.  ನಿಗಧಿತ ಆರ್ಥಿಕ ಪ್ರಗತಿ ಸಾಧನೆ ಮಾಡದೇ ಸ್ಥಗಿತಗೊಂಡಿವೆ.

ಮೇಲ್ಕಂಡ ಹಿನ್ನೆಲೆಯಲ್ಲಿ ದಿನಾಂಕ 31.03.2014ರವರೆಗೆ ಫಲಾನುಭವಿಗಳು ಪಾವತಿಸಬೇಕಾದ ಬಡ್ಡಿ ಹಣ ರೂ. 123.76 ಕೋಟಿಗಳನ್ನು ಫಲಾನುಭವಿಗಳು ಮರು ಪಾವತಿಸಲು ಮುಂದಾಗಬಹುದೆಂದು ಅಪೇಕ್ಷಿಸಲಾಗಿರುತ್ತದೆ.  ಇದರಿಂದ ಸಾಲ ಬಾಕಿ ಹೊಂದಿರುವ ಒಟ್ಟು 1992 ಫಲಾನುಭವಿ/ಸಂಘ ಸಂಸ್ಥೆಗಳಿಗೆ ಈ ಸೌಲಭ್ಯವು ದೊರಕುತ್ತದೆ.

ಸಮೂಹ ಬ್ಯಾಂಕ್ ಸಾಲ ಯೋಜನೆಯಡಿ ಅಸಲು ಪಾವತಿ ಮಾಡುವ ಫಲಾನುಭವಿಗಳಿಗೆ ಬಡ್ಡಿ ಮನ್ನಾವನ್ನು ಏಕ ಗಂಟು ತೀರುವಳಿ ಯೋಜನೆ ಜಾರಿ ಮಾಡಿ, ಅಸಲು ಪಾವತಿಯನ್ನು ದಿನಾಂಕ 31.03.2017 ರವರೆಗೆ ಮರು ಪಾವತಿ ಮಾಡುವ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯವನ್ನು ಅನ್ವಯಿಸುವಂತೆ ಅನುಮೋದಿಸಬಹುದಾಗಿದೆ.

ಈ ಯೋಜನೆಯ ಕುರಿತು ರಾಜ್ಯದಾದ್ಯಂತ ಇರುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯಪಡಿಸಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ, ಕರಪತ್ರಗಳನ್ನು ಹಂಚುವುದರ ಮೂಲಕ ಹಾಗೂ ನೇರವಾಗಿ ಫಲಾನುಭವಿಗಳಿಗೆ ಪತ್ರ ಬರೆಯುವುದರ ಮೂಲಕ ಓ.ಟಿ.ಎಸ್. ಕುರಿತು ತಿಳಿಯಪಡಿಸಲಾಗುವುದು.

ಆಯಾ ಜಿಲ್ಲೆಯ ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ/ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಂಘ-ಸಂಸ್ಥೆಗಳಿಗೆ/ವೈಯಕ್ತಿಕ ಫಲಾನುಭವಿಗಳಿಗೆ ಪತ್ರ ಬರೆದು ತಿಳಿಸುವುದು ಹಾಗೂ ಕರಪತ್ರಗಳನ್ನು ಗ್ರಾಮ ಪಂಚಾಯತಿ / ಜಿಲ್ಲಾ ಪಂಚಾಯತಿ ಕಛೇರಿಗಳಲ್ಲಿಯ ನೋಟೀಸ್ ಬೋರ್ಡ್ ನಲ್ಲಿ ಅಳವಡಿಸುವುದರ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದು.
ಮಂಡಳಿಯಿಂದ ಧನಸಹಾಯ ಪಡೆದ ಸಂಘ-ಸಂಸ್ಥೆಗಳಿಗೆ/ವೈಯಕ್ತಿಕ ಫಲಾನುಭವಿಗಳಿಗೆ ಮಂಡಳಿಯಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಆಯಾ ಜಿಲ್ಲೆಯ ಜಿಲ್ಲಾ ಕಛೇರಿಗಳಿಗೆ ತೆರಳಿ ಖಾದಿ ಮಂಡಳಿಯ ಹೆಸರಿಗೆ ಪಡೆದ ಸಾಲದ ಅಸಲಿನ ಡಿಡಿ ಯನ್ನು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಗೆ ಸಲ್ಲಿಸುವುದು.  ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಫಲಾನುಭವಿಗಳು ನೀಡಿದ ಡಿ.ಡಿ.ಯನ್ನು ಫಲಾನುಭವಿಗಳ/ಸಂಘ ಸಂಸ್ಥೆಗಳ ಪೂರ್ಣ ವಿವರಗಳೊಂದಿಗೆ ಬಡ್ಡಿ ಮನ್ನಾ ಮಾಡಲು ಕೇಂದ್ರ ಕಛೇರಿಗೆ ಶಿಫಾರಸ್ಸು ಮಾಡುವುದು.

ಮಂಡಳಿಯ ಕೇಂದ್ರ ಕಛೇರಿಯಲ್ಲಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಂದ ಬಂದ ಬಡ್ಡಿ ಮನ್ನಾ ಪ್ರಸ್ತಾವನೆಯನ್ನು ಪರಿಶೀಲಿಸಿ ಜಿಲ್ಲಾ ಕಛೇರಿಗಳಿಂದ ಬರುವ ಡಿ.ಡಿ.ಯನ್ನು ಫಲಾನುಭವಿಯ ಖಾತೆಗೆ ಪಡೆದು ಅದಕ್ಕೆ ಸಂಬಂಧಪಟ್ಟಂತೆ ಆಕಾರಣೆಯಾಗಿರುವ ಬಡ್ಡಿಯನ್ನು ಲೆಕ್ಕ ಹಾಕಿ ಅಸಲು ಮತ್ತು ಬಡ್ಡಿಯನ್ನು ಮುಂಬೈ ಖಾದಿ ಆಯೋಗಕ್ಕೆ ಮರುಪಾವತಿ ಮಾಡುವುದು.

ಫಲಾನುಭವಿಗಳಿಗೆ ಎನ್.ಡಿ.ಸಿ. ಯನ್ನು ನೀಡುವುದು.  ಎನ್.ಡಿ.ಸಿ. ಕೇಂದ್ರ ಕಛೇರಿಯಿಂದ ಹೊರಡಿಸಿದ ನಂತರ ಕೇಂದ್ರ ಕಛೇರಿಯ ಅಭಿವೃದ್ಧಿ, ವಿಭಾಗವು ಫಲಾನುಭವಿಯು ಸಾಲದ ಭದ್ರತೆಗಾಗಿ ನೀಡಿದ್ದ ದಾಖಲೆಗಳನ್ನು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಗೆ ವಾಪಸ್ಸು ಕಳುಹಿಸುವುದು.  ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಕೇಂದ್ರ ಕಛೇರಿ ಹೊರಡಿಸಿರುವ ಎನ್.ಡಿ.ಸಿ. ಹಾಗೂ ಕೇಂದ್ರ ಕಛೇರಿಯಿಂದ ಬಂದಿರುವ ಫಲಾನುಭವಿಯು ಸಲ್ಲಿಸಿದ ದಾಖಲಾತಿಗಳನ್ನು ಫಲಾನುಭವಿಗೆ ವಾಪಸ್ಸು ನೀಡಿ ಆತನನ್ನು ಋಣ ಮುಕ್ತನನ್ನಾಗಿ ಮಾಡುವುದು.

CBC-OTS ಯೋಜನೆಯ ಸೌಲಭ್ಯವು ಕೆಳಕಂಡ ಷರತ್ತುಗಳಿಗೊಳಪಟ್ಟು ದೊರೆಯುತ್ತದೆ.

1. ಏಕ ಗಂಟು ತೀರುವಳಿ (One Time Settlement) ಯೋಜನೆಯು ಈ ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ
        ದಿನಾಂಕ 31.03.2017ರ ವರೆಗೆ ಜಾರಿಯಲ್ಲಿ ಇರುತ್ತದೆ.
2. ಈ ಯೋಜನೆಯು ಖಾದಿ ಮಂಡಳಿಯಿಂದ ಸಮೂಹ ಬ್ಯಾಂಕ್ ಸಾಲ ಯೋಜನೆಯಡಿಯಲ್ಲಿ (ಸಿ.ಬಿ.ಸಿ.) ಯೋಜನೆಯಡಿ
        ಪಡೆದಿರುವ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ.
3. ಖಾದಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಖಾದಿ ಮಂಡಳಿಯಿಂದ ಪಡೆದಿರುವ ಸಾಲದ ಅಸಲನ್ನು ದಿನಾಂಕ
        31-03-2017ರೊಳಗೆ ಒಂದೇ ಬಾರಿ ಅಥವಾ ಕಂತುಗಳಲ್ಲಿ ಪೂರ್ಣವಾಗಿ ಅಸಲನ್ನು ಯಾರು ಮೊದಲು ಪಾವತಿಸುತ್ತಾರೋ ಅವರಿಗೆ
​        ಜ್ಯೇಷ್ಠತೆ ಆಧಾರದ ಮೇಲೆ 2014-15ನೇ ಸಾಲಿನಲ್ಲಿ ಒದಗಿಸಿರುವ ರೂ. 10.00 ಕೋಟಿ ಅನುದಾನದ ಮೊತ್ತವನ್ನು ಈ ಯೋಜನೆಯ
        ಬಡ್ಡಿ ಮನ್ನಾಕ್ಕೆ ಉಪಯೋಗಿಸಲಾಗುವುದು.
4. ಉಳಿದ ಖಾದಿ ಸಂಘ-ಸಂಸ್ಥೆ/ವೈಯಕ್ತಿಕ ಉದ್ದಿಮೆದಾರರು ಪಡೆದಿರುವ ಸಾಲದ ಅಸಲನ್ನು ಯಾರು ಮೊದಲು ಪಾವತಿಸಿ ಪ್ರಸ್ತಾವನೆಯನ್ನು
        ಸಲ್ಲಿಸುತ್ತಾರೋ, ಅವರುಗಳಿಗೆ ಅನುದಾನದ ಲಭ್ಯತೆಯನ್ನು ಆಧರಿಸಿ ಜ್ಯೇಷ್ಠತೆ ಮೇಲೆ ಬಡ್ಡಿ ಮನ್ನಾ ಮಾಡಲಾಗುವುದು; ಒಂದು ವೇಳೆ ಆ
        ಸಾಲಿನಲ್ಲಿ ಅನುದಾನ ಲಭ್ಯವಿಲ್ಲದ ಪಕ್ಷದಲ್ಲಿ ಮುಂದಿನ ಸಾಲಿನಲ್ಲಿ ಜ್ಯೇಷ್ಠತೆ ಆಧಾರದ ಮೆಲೆ ಓ.ಟಿ.ಎಸ್. ಪ್ರಸ್ತಾವನೆಯನ್ನು ಪರಿಗಣಿಸಲಾಗುವುದು.
5. ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಮಂಡಳಿಯಿಂದ ಈ ಯೋಜನೆ ಅಡಿ ಪಡೆದಿರುವ ಸಾಲದ ಬಾಬ್ತಿನ ಉಪಯುಕ್ತ/
        ಅನುಪಯುಕ್ತ/ಪ್ರಾರಂಭವಾಗದೆ ಇರುವ ಆರ್.ಆರ್.ಸಿ. ಆಗಿರುವ/ಸ್ಥಗಿತಗೊಂಡ ಕೆಲಸ ಮಾಡುತ್ತಿರುವ ಎಲ್ಲಾ ಘಟಕಗಳಿಗೆ ಈ ಓಟಿಎಸ್ 
        (OTS)  ಅನ್ವಯವಾಗುತ್ತದೆ ಹಾಗೂ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇರುವ ಪ್ರಕರಣಗಳಿಗೆ ಈ ಓಟಿಎಸ್ (OTS) ಅನ್ವಯಿಸುವುದಿಲ್ಲ.
6. ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಸಿ.ಬಿ.ಸಿ. ಯೋಜನೆಯಡಿ ನಿಗಧಿತ ಅವಧಿ ನಂತರವೂ ಸಾಲವನ್ನು ಕಟ್ಟದೆ 
        ಬಾಕಿ ಉಳಿಸಿಕೊಂಡಲ್ಲಿ ಅಂತಹ ಪ್ರಕರಣಗಳ ಬಗ್ಗೆ ಭೂ ಕಂದಾಯ ಕಾಯಿದೆ ಅನುಸರಿಸಿ ಬಾಕಿಯಿರುವ ಸಾಲವನ್ನು ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
7. ಈ ಮಾರ್ಗಸೂಚಿಗಳಿಗೆ ಏನಾದರೂ ಬದಲಾವಣೆ ಅವಶ್ಯಕತೆ ಇದ್ದಲ್ಲಿ, ಸರ್ಕಾರದ ಕಾರ್ಯದರ್ಶಿಯವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
        ಇವರ ಅನುಮೋದನೆಯೊಂದಿಗೆ ಬದಲಾಯಿಸುವುದು.

(ಎಲ್.ಎಸ್. ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​​
Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.