Textile Policy GO ವಾಕೈ 44 ಜಕೈಯೋ 2012 31_10_2013

Last modified at 21/04/2016 08:22 by Vanijyasachivalaya

​​​​

​​

​​ಕರ್ನಾಟಕ ಸರ್ಕಾರದ ನಡೆವಳಿಗಳು


​​​ವಿಷಯ: ನೂತನ ಜವಳಿ ನೀತಿ 2013-18

​​​ಓದಲಾಗಿದೆ: ಸರ್ಕಾರದ ಆದೇಶ ಸಂಖ್ಯೆ ವಾಕೈ 47 ಜಕೈಯೋ 2008 ದಿನಾಂಕ 01-10-2008


ಪ್ರಸ್ತಾವನೆ : 


1. ಮೇಲೆ ಓದಲಾದ ಸರ್ಕಾರಿ ಆದೇಶ ದಿನಾಂಕ 01-10-2008ರಲ್ಲಿ, ರಾಜ್ಯದಲ್ಲಿ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ “ಸುವರ್ಣ ವಸ್ತ್ರನೀತಿ 2008-13” ಎಂಬ ಹೆಸರಿನಲ್ಲಿ ರಾಜ್ಯ ಜವಳಿ ನೀತಿಯನ್ನು ಜಾರಿಗೆ ತರಲಾಗಿತ್ತು.  ಈ ನೀತಿಯ ಅನುಷ್ಠಾನಕ್ಕಾಗಿ 5 ವರ್ಷಗಳ ಅವಧಿಗೆ ರೂ. 500 ಕೋಟಿಗಳ ಆಯವ್ಯಯ ಹಂಚಿಕೆಯನ್ನು ಘೋಷಿಸಲಾಗಿತ್ತು.  ನೀತಿಯ ಅವಧಿಯಲ್ಲಿ ರೂ. 10,000 ಕೋಟಿ ಬಂಡವಾಳ ಹೂಡಿಕೆಯ ಆಕರ್ಷಣೆಯ ಮೂಲಕ 5 ಲಕ್ಷ ಜನರಿಗೆ ಉದ್ಯೋಗ ಅವಕಾಶ ಸೃಷ್ಠಿಸುವ ಗುರಿಯನ್ನು ಹೊಂದಲಾಗಿತ್ತು.

2. ನೀತಿಯ ಅವಧಿಯಲ್ಲಿ ರೂ. 5280 ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯವಾಗಿದ್ದು, ಹೂಡಿಕೆಯಾಗಿರುವ ಬಂಡವಾಳದಿಂದ ಸುಮಾರು 2,60,000 ನೇರ ಹಾಗೂ ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಠಿಯಾಗಿರುತ್ತವೆ.

3. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಕೈಗೊಂಡಿರುವ ಪೂರಕ ಕ್ರಮಗಳಿಂದಾಗಿ ರಾಜ್ಯದಲ್ಲಿ ಜವಳಿ ಮೌಲ್ಯ ಸರಣಿಯ ಎಲ್ಲಾ ಚಟುವಟಿಕೆಗಳಲ್ಲಿ ಹಾಗೂ ಇಂಟಿಗ್ರೇಟೆಡ್ ಘಟಕಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯವಾಗಿದೆ.  ಈ ಹಿನ್ನೆಲೆಯಲ್ಲಿ ನೀತಿಯನ್ನು ಮುಂದಿನ 5 ವರ್ಷಗಳ ಅವಧಿಗೆ ಮುಂದುವರೆಸಿ, ಇನ್ನೂ ಹೆಚ್ಚಿನ ಬಂಡವಾಳ ಆಕರ್ಷಣೆ ಮೂಲಕ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಪ್ರಸ್ತಾಪಿಸಲಾಗಿದೆ.

4. ಮುಂಬರುವ ಜವಳಿ ನೀತಿಯಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಜವಳಿ ವಲಯದ ವಿವಿಧ ಕೈಗಾರಿಕೋದ್ಯಮಿಗಳಿಂದ ಮನವಿಗಳು ಬಂದಿರುತ್ತವೆ.  ಕೈಗಾರಿಕೋದ್ಯಮಿಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿ, ವ್ಯಕ್ತವಾದ ಅಭಿಪ್ರಾಯ, ಸಲಹೆಗಳನ್ನು ಪರಿಶೀಲಿಸೆ ಪರಿಗಣಿಸಲಾಗಿದೆ.

5. ಎಂ.ಎಸ್.ಎಂ.ಇ. ಅಸಂಘಟಿತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ವಲಯಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀತಿಯಲ್ಲಿ ಒದಗಿಸಬೇಕೆಂದು ಬೇಡಿಕೆಗಳು ಬಂದಿರುತ್ತವೆ.  ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ವಾರ್ಷಿಕ ಸುಮಾರು ರೂ. 200 ಕೋಟಿಯಷ್ಟು ಅನುದಾನವನ್ನು ಅಸಂಘಟಿತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ವಲಯದ ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗುತ್ತಿದೆ.  ಪ್ರಸ್ತುತ ನೀತಿಯು ಅಸಂಘಟಿತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ವಲಯಗಳಿಗೂ ತನ್ನ ಬೆಂಬಲವನ್ನು ಮುಂದುವರೆಸುವುದು.

6. ಜವಳಿ ಮೌಲ್ಯ ಸರಣಿಯಲ್ಲಿ ಸ್ಪಿನ್ನಿಂಗ್ ಚಟುವಟಿಕೆಯು ಪ್ರಮುಖವಾದುದು.  ಕರ್ನಾಟಕವು ಪ್ರತಿ ವರ್ಷ ಸುಮಾರು 12 ಲಕ್ಷ ಬೇಲ್ ಗಳಷ್ಟು ಹತ್ತಿಯನ್ನು ಉತ್ಪಾದಿಸುತ್ತಿದೆ.  ರಾಜ್ಯದಲ್ಲಿ ಬೆಳೆಯುವ ಬಹುತೇಕ ಹತ್ತಿಯ ನೂಲಿನ ಪರಿವರ್ತನೆಗಾಗಿ ಹೊರ ರಾಜ್ಯಗಳಿಗೆ ಹೋಗುತ್ತಿದೆ.  ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸ್ಪಿನಿಂಗ್ ವಲಯವನ್ನು ಸಹ ಸಶಕ್ತಗೊಳಿಸುವುದು ಅವಶ್ಯವಿದೆ.

7. ಕರ್ನಾಟಕ ರಾಜ್ಯದ ಸ್ಪಿನಿಂಗ್ ವಲಯವು 10 ಸಹಕಾರಿ ನೂಲಿನ ಗಿರಣಿಗಳು ಹಾಗೂ 25 ಖಾಸಗಿ ಜವಳಿ ಗಿರಣಿಗಳನ್ನು ಹೊಂದಿದೆ.  ಸಹಕಾರಿ ವಲಯದ ನೂಲಿನ ಗಿರಣಿಗಳನ್ನು ಬಲಪಡಿಸಲು ಅವುಗಳ ಆಧುನೀಕರಣ ಮತ್ತು ವಿಸ್ತರಣೆಗೆ ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ಇರುತ್ತದೆ.

8. ನೂಲಿನ ಗಿರಣಿಗಳು, ಆಧುನೀಕರಣ/ವಿಸ್ತರಣೆಯನ್ನು ಕೈಗೊಳ್ಳಲು ಬಂಡವಾಳ ಹೂಡಿಕೆ, ಸಹಾಯಧನ, ಪ್ರವೇಶ ತೆರಿಗೆ ಸಹಾಯಧನ, ಮುದ್ರಾಂಕ ಶುಲ್ಕ ಸಹಾಯಧನ, ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

9. ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 05-10-2013ರಂದು ಸಭೆ ಕರೆಯಲಾಗಿತ್ತು.  ಸದರಿ ಸಭೆಯಲ್ಲಿ ನೂತನ ಜವಳಿ ನೀತಿ 2013-18ರ ಕುರಿತು ಸುಧೀರ್ಘವಾಗಿ ಚರ್ಚಿಸಿ ಕರಡನ್ನು ಸಿದ್ದಪಡಿಸಲಾಗಿರುತ್ತದೆ.

10. ಸರ್ಕಾರವು ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೂತನ ಜವಳಿ ನೀತಿ 2013-18ನ್ನು ಜಾರಿಗೆ ತರಲು ತೀರ್ಮಾನಿಸಿ ಈ ಕೆಳಕಂಡ ಆದೇಶ ಹೊರಡಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ ವಾಕೈ 44 ಜಕೈಯೋ 2012, ಬೆಂಗಳೂರು ದಿನಾಂಕ 31-10-2013


ಪ್ರಸ್ತಾವನೆಯಲ್ಲಿ ವಿವರಿಸಲಾದ ಸಂದರ್ಭಗಳ ಬೆಳಕಿನಲ್ಲಿ ನೂತನ ಜವಳಿ ನೀತಿ 2013-18ನ್ನು ಘೋಷಿಸಲು ಸರ್ಕಾರವು ಹರ್ಷಿಸುತ್ತದೆ.  ಇದು ಇನ್ನಿತರೆ ಅಂಶಗಳೊಂದಿಗೆ ಜವಳಿ ಮತ್ತು ಉಡುಪುಗಳ ಉದ್ಯಮಕ್ಕೆ ಗ್ರೇಡೆಡ್ ಸ್ಕೇಲ್ ಪ್ರೋತ್ಸಾಹಗಳನ್ನು ನೀಡುವ ಸಲುವಾಗಿ ಕರ್ನಾಟಕದ ಜಿಲ್ಲೆಗಳನ್ನು ವಲಯಗಳನ್ನು ವಿಂಗಡಿಸಿರುವ ಒಳಗೊಂಡಿರುತ್ತದೆ.

ನೂತನ ಜವಳಿ ನೀತಿ 2013-18ರ ವೈಶಿಷ್ಟ್ಯಗಳು ಈ ಕೆಳಕಂಡಂತಿರುತ್ತವೆ:

1. ಉದ್ದೇಶ:

ಅ) ಸಮಗ್ರ ಜವಳಿ ಮೌಲ್ಯ ಸರಣಿಯ ಎಲ್ಲಾ ಚಟುವಟಿಕೆಗಳ ಅಬಿವೃದ್ಧಿಯನ್ನು ಸಾಧಿಸುವುದು ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡುವುದು.
ಆ) ತಾಂತ್ರಿಕ ಜವಳಿ ವಲಯವೂ ಸೇರಿದಂತೆ ಜವಳಿ ಮೌಲ್ಯ ಸರಣಿಯ ಎಲ್ಲಾ ಚಟುವಟಿಕೆಗಳ ಹಾಗೂ ಸಿದ್ದ ಉಡುಪು ವಲಯದಲ್ಲಿನ ಸಣ್ಣ ಮತ್ತು ಮಧ್ಯಮ ಉದ್ದೆಮೆಗಳ ಮೇಲೆ ಅವಲಂಭಿತವಾಗಿರುವ ಜನರ ಆದಾಯ ಹೆಚ್ಚಿಸಿ ತನ್ಮೂಲಕ ಅವರ ಜೀವನ ಮಟ್ಟ ಹೆಚ್ಚಿಸುವುದು.
ಇ) ಉತ್ಪಾದನಾ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ದೇಶೀಯ ಮತ್ತು ಜಾಗತಿಕ ಮಟ್ಟದ ವಾಣಿಜ್ಯ ಅವಕಾಶಗಳ ಸುಪಯೋಗ ಹಾಗೂ ಜವಳಿ ಮೌಲ್ಯ ಸರಣಿಯ ಚಟುವಟಿಕೆಗಳಲ್ಲಿ ಕೌಶಲ್ಯ ಅಭಿವೃದ್ಧಿಯ ಮೂಲಕ ಜವಳಿ ವಲಯಕ್ಕೆ ನೆರವಾಗುವುದು.

2. ನಿಗಧಿತ ಗುರಿಗಳು:

ಅ) ಈ ನೀತಿಯು 2013ರಿಂದ 2018ರವರೆಗೆ 5 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.
ಆ) ನೀತಿಯ ಅವಧಿಯಲ್ಲಿ 5 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿರುತ್ತದೆ.
ಇ) ನೀತಿಯ ಅವಧಿಯಲ್ಲಿ ರೂ. 10,000 ಕೋಟಿವರೆಗಿನ ಬಂಡವಾಳ ಹೂಡಿಕೆಯನ್ನು ಜವಳಿ ವಲಯದಲ್ಲಿ ಆಕರ್ಷಿಸುವ ಗುರಿ ಹೊಂದಿರುತ್ತದೆ.
ಈ) ರಾಜ್ಯ ಸರ್ಕಾರವು ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರೂ. 1,000 ಕೋಟಿ ವರೆಗಿನ ಹಣಕಾಸಿನ ನೆರವನ್ನು ಒದಗಿಸುವ ಪ್ರಸ್ತಾಪ ಹೊಂದಿದೆ.

3. ನೀತಿಯು ಒಳಗೊಂಡಿರುವ ವಲಯಗಳು:

ಜಿನ್ನಿಂಗ್ & ಪ್ರೆಸಿಂಗ್, ಸ್ಪಿನ್ನಿಂಗ್, ಮಗ್ಗಪೂರ್ವ ಚಟುವಟಿಕೆಗಳು, ನೇಯ್ಗೆ (ಕೈಮಗ್ಗ & ವಿದ್ಯುತ್ ಮಗ್ಗ), ಹೆಣಿಗೆ (ನಿಟ್ಟಿಂಗ್) ಸಂಸ್ಕರಣೆ (ಪ್ರೊಸೆಸಿಂಗ್), ತಾಂತ್ರಿಕ ಜವಳಿ, ಸಿದ್ದ ಉಡುಪು (ಗಾರ್ಮೆಂಟಿಂಗ್), ಎಂಬ್ರಾಯಡರಿ, ಲೆದರ್ ಗಾರ್ಮೆಂಟ್ಸ್, ಜವಳಿ ಯಂತ್ರೋಪಕರಣ ತಯಾರಿಕೆ ಹಾಗೂ ಜವಳಿ ಉತ್ಪಾದನೆಗೆ ಸಂಬಂಧಿಸಿದ ಇನ್ನಿತರ ಪೂರಕ ಚಟುವಟಿಕೆಗಳು.

4. ಜವಳಿ ಘಟಕಗಳಿಗೆ ನೀಡಲಾಗುವ ಪ್ರೋತ್ಸಾಹಗಳು:

ಅ) ರಾಜ್ಯದಲ್ಲಿ ಜವಳಿ ಉದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಬಂಡವಾಳ ಆಕರ್ಷಣೆಯ ಸಲುವಾಗಿ ಹಾಗೂ ರಾಜ್ಯದ ಒಟ್ಟಾರೆ ಸಾಮರ್ಥ್ಯ ಬಲವರ್ಧನೆಗೆ ಪ್ರೋತ್ಸಾಹಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಆ) ಪ್ರಸ್ತಾವಿತ ಪ್ರೋತ್ಸಾಹನಗಳು ಜವಳಿ ವಲಯದ ಬಂಡವಾಳ ಹೂಡಿಕೆಗೆ ನೆರವಾಗಲಿದ್ದು, ಜಾಗತಿಕ ಸ್ಪರ್ಧೆಗಳನ್ನೆದುರಿಸಲು ಜವಳಿ ಘಟಕಗಳಿಗೆ ನೆರವಾಗಲಿದೆ.  ಈ ಪ್ರೋತ್ಸಾಹನಗಳು ನೀತಿಯ ಅವಧಿಗೆ ಅಂದರೆ 2013-18ಕ್ಕೆ ಸೀಮಿತವಾಗಿರುತ್ತದೆ.
ಇ) ಪ್ರಸ್ತಾವಿತ ಪ್ರೋತ್ಸಾಹನಗಳ ಯೋಜನೆ, ಉದ್ದೇಶ, ಅರ್ಹತೆ ಮತ್ತು ನಿಧೀಕರಣಗದ ವಿನ್ಯಾಸಗಳು (Funding Pattern) ಅನುಬಂಧದಲ್ಲಿರುವ ಜವಳಿ ನೀತಿಯಂತೆ ಇರುತ್ತದೆ.

5. ಉತ್ಕೃಷ್ಟತಾ ಕೇಂದ್ರ (Centre of Excellence) ಸ್ಥಾಪನೆ

ಜವಳಿ ಮೌಲ್ಯಸರಣಿಯ ಚಟುವಟಿಕೆಗಳ ಬಲವರ್ಧನೆಗಾಗಿ ಹಾಗೂ ತಂತ್ರಿಕ ಬೆಂಬಲ ಒದಗಿಸುವ ಸಲುವಾಗಿ ರಾಜ್ಯದ್ಲಲಿ ಜವಳಿ ಉತ್ಕೃಷ್ಟತಾ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು.  ಈ ಉದ್ದೇಶಕ್ಕಾಗಿ ರೂ. 10.00 ಕೋಟಿಗಳ ಅನುದಾನ ಮೀಸಲಿರಸಲಾಗುವುದು.

6. ಅಸ್ತಿತ್ವದಲ್ಲಿರುವ ಘಟಕಗಳಿಗೆ ಬೆಂಬಲ:

ಜವಳಿ ಮತ್ತು ಉಡುಪು ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಘಟಕಗಳಿಗೆ ವಿಸ್ತರಣೆ / ವೈವಿಧ್ಯೀಕರಣ / ಆಧುನೀಕರಣ / ಉನ್ನತೀಕರಣಕ್ಕೆ ನೀತಿಯು ಬೆಂಬಲಿಸುತ್ತದೆ.

7. ಸ್ಪಿನ್ನಿಂಗ್ ಮಿಲ್ ಪ್ಯಾಕೇಜ್:

ಆಧುನೀಕರಣ/ವಿಸ್ತರಣೆ/ತಾಂತ್ರಿಕತೆ ಉನ್ನತೀಕರಣ ಮತ್ತು ವೈವಿದ್ಧೀಕರಣ ಕೈಗೊಳ್ಳುವ ರೋಗಗ್ರಸ್ಥ ಸಹಕಾರಿ ನೂಲಿನ ಗಿರಣಿಗಳಿಗೆ ನಿರ್ದಿಷ್ಟ ಪುನ:ಶ್ಚೇತನ ಪ್ಯಾಕೇಜ್ ಒದಗಿಸಲಾಗಿದೆ.

8. ನೂತನ ಜವಳಿ ನೀತಿ 2013-18ರ ಮೇರೆಗೆ ನೀಡಲಾಗುವ ಪ್ರೋತ್ಸಾಹನಗಳ ಪ್ಯಾಕೇಜ್ ಗಳು ದಿನಾಂಕ 31.10.2013ರಿಂದ ಜಾರಿಗೊಂಡು 5 ವರ್ಷಗಳ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಎಫ್ ಡಿ 1248 ವೆಚ್ಚ 1 2013 ದಿನಾಂಕ 10.10.2013ರ ಪ್ರಕಾರ ನೀಡಿರುವ ಸಹಮತಿ ಮೇರಿಗೆ ಹೊರಡಿಸಲಾಗಿದೆ.

ನೂತನ ಜವಳಿ ನೀತಿ 2013-18ರ ವಿಸ್ತೃತ ಪ್ರತಿಯನ್ನು ಈ ಆದೇಶಕ್ಕೆ ಅನುಬಂಧಿಸಲಾಗಿದೆ.

                                                                            (ತುಷಾರ್ ಗಿರಿನಾಥ್)
                                                                             ಸರ್ಕಾರದ ಕಾರ್ಯದರ್ಶಿ
                                                                          (ಗಣಿ, ಸಪ್ರಕೈ ಮತ್ತು ಜವಳಿ)

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.