ಕರ್ನಾಟಕ ಸರ್ಕಾರದ ನಡೆವಳಿಗಳು

ವಿಷಯ: ರಾಜ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ಆಯುಷ್ ವಿಭಾಗಗಳಿಗೆ ಅವಶ್ಯವಾದ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ.

ಓದಲಾಗಿದೆ:

  1. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ: ಆಯುಷ್/60/ಬಿಯುಡಿ(2)/2006-07, ದಿನಾಂಕ 30.3.2007
  2. ದಿನಾಂಕ 16-04-2007ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯ ನಡೆವಳಿಗಳು.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ನಿರ್ದೇಶಕರ ಪತ್ರದಲ್ಲಿ ಭಾರತ ಸರ್ಕಾರವು ರಾಜ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗಗಳನ್ನು ತೆರೆಯಲು ಅನುದಾನ ಬಿಡುಗಡೆ ಮಾಡಿದ್ದು, ಅದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಹೊಂದಾಣಿಕೆಯಾಗಿದೆ.  ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಅನುದಾನವನ್ನು ವೇತನೇತರ ವೆಚ್ಚಗಳಿಗೆ ಮಾತ್ರ ಭಾರತ ಸರ್ಕಾರವು ಬಿಡುಗಡೆ ಮಾಡುತ್ತದೆ.  ಉಳಿದಂತೆ ಈ ಟಕಗಳನ್ನು ಪ್ರಾರಂಭಮಾಡಲು ಅವಶ್ಯ ಹುದ್ದೆಗಳನ್ನು ಸೃಜಿಸಲು ಹಾಗೂ ಅದರ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗಿದ್ದು, ಇದೊಂದು ವಿಶೇಷ ಯೋಜನೆಯಾಗಿದ್ದು, ಔಷಧ ವೆಚ್ಚವನ್ನು ಭಾರತ ಸರ್ಕಾರವೇ ಮುಂದಿನ 5 ವರ್ಷದವರೆಗೆ ಭರಿಸುತ್ತದೆ.  ಕೇಂದ್ರ ಪುರಸ್ಕೃತ ಯೋಜನೆಯ ಸಂಪೂರ್ಣ ಸದುಪಯೋಗವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲವಾಗಲು 200708ರ ಆಯವ್ಯಯದ ಮೊದಲನೇ ಕಂತಿನ ಮೂಲಕ ಅನುದಾನದಲ್ಲಿ ಲೆಕ್ಕ ಶೀರ್ಷಿಕೆ 2210-05-200-0-011 ಯೋಜನೆ ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಭಾರತೀಯ ವೈದ್ಯ ಪದ್ದತಿಯ ಟಕಗಳನ್ನು ತೆರೆಯುವುದು ಅಡಿಯಲ್ಲಿ ವೇತನಗಳಿಗೆ ರೂ. 215.00 ಲಕ್ಷಗಳನ್ನು ಒದಗಿಸುವಂತೆ ಹಾಗೂ ಒಟ್ಟು 315 ಹುದ್ದೆಗಳನ್ನು ಸಂಬಂಧಿಸಿದ ವೇತನ ಶ್ರೇಣಿಗಳಲ್ಲಿ ಸೃಜಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವಿಭಾಗಗಳನ್ನು ತೆರೆಯಲು ಮಂಜೂರು ಮಾಡಿರುವ ಟಕಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿಯನ್ನು ಕೋರಿದ್ದಾರೆ.  ಹಾಗೂ ಪ್ರಸ್ತುತ ಈ ಹುದ್ದೆಗಳನ್ನು ಸಾಧ್ಯವಾದಷ್ಟು ಗುತ್ತಿಗೆ ಆಧಾರದ ಮೇಲೆ ಅಥವಾ ರಿ-ಡಿಪ್ಲಾಯ್ಮೆಂಟ್ ಮೂಲಕ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ.

ಸರ್ಕಾರವು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದೆ.  ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 72 ಪಿಐಎಂ 2007

ಬೆಂಗಳೂರು, ದಿನಾಂಕ 19-07-2007

 

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಪ್ರಥಮ ಹಂತವಾಗಿ ರಾಜ್ಯ ಯೋಜನೆಯ ಅಡಿಯ ರೂ. 350.00 ಲಕ್ಷಗಳ (ಮೂರು ನೂರ ಐವತ್ತು ಲಕ್ಷ ರೂಪಾಯಿಗಳು ಮಾತ್ರ) ಆಯವ್ಯಯದಲ್ಲಿ ಕನಿಷ್ಟ ರೂ. 60.00 ಲಕ್ಷಗಳನ್ನು (ಅರವತ್ತು ಲಕ್ಷಗಳು ಮಾತ್ರ) ಇಲಾಖೆಯ ಬೇರೆ ಶೀರ್ಷಿಕೆಗಳಿಂದ ಒದಗಿಸುವ ನಿಬಂಧನೆಗೆ ಒಳಪಟ್ಟು, ಭಾರತ ಸರ್ಕಾರವು ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವಿಭಾಗಗಳನ್ನು ತೆರೆಯಲು ಮಂಜೂರು ಮಾಡಿರುವ ಕೇಂದ್ರಗಳಿಗೆ ವೈದ್ಯರ ಹಾಗೂ ಇತರೆ ಅವಶ್ಯ ಸಿಬ್ಬಂದಿ ಒಟ್ಟು 142 ಹುದ್ದೆಗಳನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧ-1 ಮತ್ತು ಅನುಬಂಧ-11 ರಲ್ಲಿರುವಂತೆ ಸೃಜಿಸಲು ಸರ್ಕಾರದ ಮಂಜೂರಾತಿ ನೀಡಿದೆ.

 

ಸದರಿ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2210-05-200-0-11 ಯೋಜನೆಯಡಿ ಭರಿಸತಕ್ಕದ್ದು.

 

ಈ ಆದೇಶವನ್ನು ದಿನಾಂಕ 16-04-2007ರಂದು ಸರ್ಕರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಯುಕ್ತ ಸಮಿತಿ ಸಭೆಯ ನಡೆವಳಿಯನ್ವಯ ಹೊರಡಿಸಿದೆ.

 

 

(ಎನ್. ಮಹಾಲಕ್ಷ್ಮಮ್ಮ)

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.​