ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

cmk2
GOK > HFWSecretariat > Kannada > ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಗಳು
Last modified at 02/02/2019 11:22 by System Account

​​​

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕನ್ನಡ ಭಾಷಾ ಅನುಷ್ಠಾನದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು 1994ರಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಎರಡು ಸದನಗಳ ಒಪ್ಪಿಗೆ ಪಡೆದು ಕಾಯ್ದೆಯನ್ನು ರೂಪಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಹುಮುಖ್ಯವಾದ ಉದ್ದೇಶವೆಂದರೆ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದು.

ಕನ್ನಡಿಗರಿಗೆ ಉದ್ಯೋಗ ನೀಡುವ ಹಿನ್ನೆಲೆಯಲ್ಲಿ ಡಾ: ಸರೋಜಿನಿ ಮಹಿಷಿ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

ಈ ಉದ್ದೇಶಗಳನ್ನು ಈಡೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿದೆ.  ರಾಜ್ಯ ಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ವಿಭಾಗ ಮಟ್ಟದಲ್ಲಿ ವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗ ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರನ್ನು ಜವಾಬ್ದಾರರನ್ನಾಗಿಸಿದೆ.

ಆಡಳಿತದಲ್ಲಿ ಕನ್ನಡ ಅನುಷ್ಟಾನ

 • ಆಡಳಿತದಲ್ಲಿ ಪರಿಣಾಮಕಾರಿ ಕನ್ನಡ ಅನುಷ್ಠಾನ ಮಾಡುವ ಸಂಬಂಧ ಹಲವಾರು ಆದೇಶ, ಸುತ್ತೋಲೆಗಳನ್ನು ಹೊರಡಿಸಲಾಗಿದೆ.  ಆ ಸುತ್ತೋಲೆಗಳ ಪ್ರತಿಯನ್ನು ನಿಮ್ಮೆಲ್ಲರಿಗೂ ತಲುಪಿಸಿದೆ.  ಸರ್ಕಾರದ ಆದೇಶ / ಸುತ್ತೋಲೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ತಮ್ಮದಾಗಿರುತ್ತದೆ.  ಇದನ್ನು ಉಲ್ಲಂಘಿಸಿದವರಿಗೆ (ಅಧಿಕಾರಿ/ನೌಕರರಿಗೆ) ಈ ಕೆಳಕಂಡ ಶಿಸ್ತುಕ್ರಮಗಳನ್ನು ನೇಮಕಾತಿ ಪ್ರಾಧಿಕಾರ ಕೈಗೊಳ್ಳುವ ಅಧಿಕಾರ ನೀಡಿದೆ:
 • ವಾಗ್ದಂಡನೆ
 • ವಾರ್ಷಿಕ ವೇತನ, ಬಡ್ತಿಯನ್ನು ತಡೆಹಿಡಿಯುವುದು
 • ಪದೋನ್ನತಿಯನ್ನು ತಡೆಹಿಡಿಯುವುದು
 • ಕಾಲವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವುದು.

ಕನ್ನಡ ಅನುಷ್ಠಾನ ಮಾಡದವರ ವಿರುದ್ಧ ಇನ್ನು ಮುಂದೆ ಶಿಸ್ತು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.  ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಕೂಡ ಎಲ್ಲಾ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡುವುದು ಅತ್ಯಗತ್ಯವಾಗಿದೆ.  

 • ಸಚಿವಾಲಯದ ಮಟ್ಟದಲ್ಲಿ ಕನ್ನಡ ಅನುಷ್ಠಾನ ಸಮಿತಿ / ವಿಭಾಗವನ್ನು ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಲು ಆದೇಶವನ್ನು ಹೊರಡಿಸಿದೆ.  ಈ ಸಮಿತಿಯ ಹೊಣೆಗಾರಿಕೆಯು ಕೆಳಕಂಡಂತಿರುತ್ತದೆ:
 • ಕನ್ನಡ ಅನುಷ್ಠಾನ ವಿಭಾಗವು ಮೂರು ತಿಂಗಳಿಗೊಮ್ಮೆ ಸಚಿವಾಲಯದಲ್ಲಿ ಕನ್ನಡ ಅನುಷ್ಠಾನದ ಕೆಲಸಗಳನ್ನು ಪರಿಶೀಲಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು.
 • ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಲಕಾಲಕ್ಕೆ ಶಿಫಾರಸ್ಸು ಮಾಡುವ ಶಿಸ್ತು ಕ್ರಮದ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಲು ನೆರವಾಗುವುದು.
 • ಕೇಂದ್ರ ಸರ್ಕಾರ ಹಾಗೂ ಅನ್ಯ ರಾಜ್ಯಗಳ ಜೊತೆ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳುವುದು.
 • ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು (ಸದಸ್ಯ ಕಾರ್ಯದರ್ಶಿ) ಈ ಸಮಿತಿಯ ಸಭೆಗಳನ್ನು ಏರ್ಪಡಿಸುವುದಲ್ಲದೆ, ಸಭೆಯ ನಡವಳಿಗಳನ್ನು ಹೊರಡಿಸತಕ್ಕದ್ದು.
 • ಸಚಿವಾಲಯ ಹಂತದಲ್ಲಿ ಹೊರಡಿಸುವ ಎಲ್ಲಾ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳ ಪ್ರತಿಯನ್ನು ಹಾಗೂ ಎಲ್ಲಾ ಇಲಾಖೆಯ ಸ್ವೀಕೃತಿ ಮತ್ತು ರವಾನೆ ಶಾಖೆಗಳ ಜಾಹಿರ್ನಾಮೆ, ಪರಿಪತ್ರ, ನಡವಳಿಗಳ ಒಂದೊಂದು ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸುವುದು.
 • ಸುತ್ತೋಲೆಗಳು / ಆದೇಶಗಳು / ನೋಟೀಸುಗಳು / ಅಧಿಕೃತ ಜ್ಞಾಪನ / ಅಧಿಸೂಚನೆಗಳು ಕಡ್ಡಾಯವಾಗಿ ಕನ್ನಡದಲ್ಲಿರತಕ್ಕದ್ದು.
 • ಸಿಬ್ಬಂದಿ ಹಾಜರಾತಿ ವಹಿ / ಸ್ವೀಕೃತಿ ವಹಿ / ರವಾನೆ ವಹಿ / ಕಚೇರಿ ಒಳಗಿನ ಮತ್ತು ಹೊರಗಿನ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು.
 • ಎಲ್ಲಾ ಕಾಗದದ ತಲೆಬರಹಗಳೂ (ಲೆಟರ್ ಹೆಡ್ಸ್) / ವಿಸಿಟಿಂಗ್ ಕಾರ್ಡುಗಳು / ಮೊಹರುಗಳು ಕನ್ನಡದಲ್ಲಿರತಕ್ಕದ್ದು ಮತ್ತು ಭಾಷಣಗಳು (ಅವಶ್ಯಕತೆಯಿದ್ದಲ್ಲಿ ಆಂಗ್ಲದಲ್ಲಿ) ಲೆಕ್ಕಪತ್ರಗಳು, ಇತರೆ ವಹಿಗಳು, ರಿಜಿಸ್ಟರ್ ಗಳು, ಕನ್ನಡದಲ್ಲಿಯೇ ಇರಬೇಕು.
 • ಅರ್ಜಿ ನಮೂನೆಗಳು / ಪ್ರಕಟಣೆಗಳು / ದೈನಂದಿನ ಜಾಹಿರಾತುಗಳು / ಲೈಸೆನ್ಸ್ ಗಳು/ಟೆಂಡರ್ ಗಳು ಕನ್ನಡದಲ್ಲಿ ಇರಬೇಕು.

  ಅ. ಕಡತಗಳಲ್ಲಿ ಬರೆಯುವ ಟಿಪ್ಪಣಿಗಳು, ಸಭೆಯ ನಡವಳುಗಳು, ಪ್ರಕಟಣೆಗಳು, ನೋಟೀಸುಗಳು, ಫಾರಂಗಳು, ಸರ್ಟಿಫಿಕೇಟುಗಳು ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿರುವುದು ಹಾಗೂ ಕನ್ನಡದಲ್ಲಿರದಿದ್ದರೆ ಸಂಬಂಧಪಟ್ಟವರಿಗೆ ಹಿಂದಿರುಗಿಸುವಂತೆ ನಿರ್ದೇಶನ ನೀಡುವುದು.

  ಆ. ರಾಜ್ಯದ ಒಳಗಡೆ ನಡೆಸುವ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ನಿರ್ದೇಶನ ನೀಡುವುದು.
 • ಕರ್ನಾಟಕ ರಾಜ್ಯ ಶಾಸನ ಸಭೆಗಳಿಗೆ ಒದಗಿಸುವ / ಮಂಡಿಸುವ ಎಲ್ಲಾ ಬಿಲ್ಲುಗಳು, ಮಸೂದೆಗಳು, ಇಲಾಖಾ ವಾರ್ಷಿಕ ಆಡಳಿತ ವರದಿಗಳು, ಇಲಾಖಾ ವಾರ್ಷಿಕ ವರದಿಗಳು, ಆಯವ್ಯಯ ದಾಖಲೆಗಳು ಇತ್ಯಾದಿಗಳನ್ನು ಕನ್ನಡದಲ್ಲಿಯೇ ನೀಡುವುದು.
 • ಸಭೆಯ ಸೂಚನೆ, ಸಭೆಯ ಕಾರ್ಯಸೂಚಿ ಮತ್ತು ಸಭೆಯ ಸಂಕ್ಷಿಪ್ತ ಟಿಪ್ಪಣಿ / ನಡವಳಿಗಳನ್ನು ಕನ್ನಡದಲ್ಲಿ ತಯಾರಿಸಬೇಕು ಮತ್ತು ಇಲಾಖಾ ತನಿಖಾ ವರದಿಯಲ್ಲಿ ಕನ್ನಡವನ್ನು ಬಳಸಬೇಕು.
 • ತಮ್ಮ ಇಲಾಖೆಯ ವತಿಯಿಂದ ನಡೆಸುವ ಸಮಾರಂಭಗಳ ಬ್ಯಾನರ್ ಗಳಲ್ಲಿ (ನಾಮಪಟ್ಟಿಗಳಲ್ಲಿ) ಕನ್ನಡವನ್ನು ಬಳಸಲಾಗುತ್ತಿರುವ ವಿವರ.
 • ಡಾ: ಸರೋಜಿನಿ ಮಹಿಷಿ ವರದಿ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸಮೀಕ್ಷಾ ವರದಿಯನ್ನು ಪ್ರಾಧಿಕಾರಕ್ಕೆ ಕಳುಹಿಸಿದ ವಿವರಗಳು.
 • ಕನ್ನಡ ಅಭಿವೃದ್ಧಿಯ ಉದ್ದೇಶಗಳನ್ನು ನೆರವೇರಿಸಲು ಜವಾಬ್ದಾರರನ್ನಾಗಿ ಮಾಡಿರುವ ಅಧಿಕಾರಿಗಳ ತನಿಖಾ ತಂಡವನ್ನು ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಗಳಲ್ಲಿ ರಚನೆ ಮಾಡುವುದು.
 • ಇಲಾಖೆಯ ಎಲ್ಲಾ ಸಭೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಗತಿಯನ್ನು ಒಂದು ಅಂಶವಾಗಿ ತೆಗೆದುಕೊಂಡು ಪರಿಶೀಲನೆ ನಡೆಸುವುದು ಕಡ್ಡಾಯ.  ಈ ಬಗ್ಗೆ ಮತ್ತೊಮ್ಮೆ ಸೂಚನೆ ನೀಡುವುದು.
 • ನೌಕರರಿಗೆ ನೀಡುವ ನೋಟೀಸುಗಳು, ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಆದೇಶಗಳು ಕಡ್ಡಾಯವಾಗಿ ಕನ್ನಡದಲ್ಲಿ ಹೊರಡಿಸುವುದ.
 • ಎಲ್ಲಾ ಇಲಾಖೆಗಳ ಜಾಲತಾಣ (ವೆಬ್ ಸೈಟ್ )ಗಳಲ್ಲಿ ಕನ್ನಡವು ಪ್ರಧಾನ ಭಾಷೆಯಾಗಬೇಕು.  ಇತರ ಭಾಷೆಗಳು ಆಯ್ಕೆ ಭಾಷೆಯಾಗಿರಬೇಕು.  ಆದರೆ, ಹಲವಾರು ಇಲಾಖೆಗಳಲ್ಲಿ ಕನ್ನಡ ಭಾಷೆಯನ್ನೇ ಬಳಸಿಲ್ಲ.  ಇದು ಇಲಾಖಾ ಮುಖ್ಯಸ್ಥರ ಕನ್ನಡ ವಿರೋಧಿತನವನ್ನು ತೋರಿಸುತ್ತದೆ.


  ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುತ್ತಿರುವ ಇಲಾಖೆಗಳ ಸಂಖ್ಯೆ: 17, ಕನ್ನಡವನ್ನು ಆಯ್ಕೆ ಭಾಷೆಯಾಗಿ ಬಳಸುತ್ತಿರುವ ಇಲಾಖೆಗಳ ಸಂಖ್ಯೆ 27, ಕನ್ನಡವನ್ನು ಬಳಸದಿರುವ ಇಲಾಖೆಗಳ ಸಂಖ್ಯೆ: 104.  ಸರ್ಕಾರಿ ಅಂತರ್ಜಾಲ ತಾಣದಲ್ಲಿ ಒಟ್ಟು 2152 ಪುಟಗಳು ಇದ್ದು, ಇದರಲ್ಲಿ ಸುಮಾರು 200 ಮಾತ್ರ ಕನ್ನಡದಲ್ಲಿವೆ ಉಳಿದ ಎಲ್ಲಾ ಮಾಹಿತಿಯು ಆಂಗ್ಲಭಾಷೆಯಲ್ಲಿದೆ.


  ರಾಜ್ಯ ಸರ್ಕಾರದ ಫೇಸ್ ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು.  ರಾಜ್ಯ ಸರ್ಕಾರಿ ಸಂಸ್ಥೆಗಳಿಂದ  ಹೊರತರಲಾಗುವ ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ಕನ್ನಡದ ಆಯ್ಕೆ ಕಡ್ಡಾಯವಾಗಿ ಇರಬೇಕು.  ರಾಜ್ಯ ಸರ್ಕಾರಿ ಸಂಸ್ಥೆಗಳಿಂದ ಮೊಬೈಲ್ ಮೂಲಕ ಕೊಡಲಾಗುವ ಮಾಹಿತಿಯನ್ನು ಕನ್ನಡದಲ್ಲಿ ನೀಡಬೇಕು.

   
 • ಮಾಹಿತಿ ಹಕ್ಕು ಅಧಿನಿಯಮದಡಿ ಬರುವಂತಹ ಪ್ರಶ್ನೆಗಳಿಗೆ ಕನ್ನಡದಲ್ಲಿ ಮಾಹಿತಿಯನ್ನು ನೀಡುವ ಸಂಬಂಧ ಮಾಹಿತಿ ಆಯೋಗಕ್ಕೆ ಹಾಗೂ ಮಾಹಿತಿ ಹಕ್ಕು ಅಧಿಕಾರಿಗಳಿಗೆ ನಿರ್ದೇಶನ ನೀಡುವುದು.
 • ಎಲ್ಲಾ ಇಲಾಖೆಯ ಸರ್ಕಾರಿ ವಾಹನಗಳ ಮೇಲೆ ಕನ್ನಡ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಲು ನಿರ್ದೇಶನ ನೀಡುವುದು.
 • ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ಮಾಹಿತಿ ಕೈಪಿಡಿಗಳನ್ನು ಹೊರತರಬೇಕು ಮತ್ತು ಇಲಾಖೆಗಳಿಗೆ ಸಂಬಂಧಪಟ್ಟಂತೆ ಪದವಿವರಣ ಕೋಶವನ್ನು ಮುದ್ರಿಸಿ, ಹೊರತರುವುದು.


  ಕನ್ನಡ ಅನುಷ್ಠಾನದ ಬಗ್ಗೆ ವಿವಿಧ ಇಲಾಖೆಗಳಲ್ಲಿರುವ ಲೋಪದೋಷಗಳು :

 1. ನಾಮಫಲಕಗಳಲ್ಲಿ ಕನ್ನಡ : ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ದೃಷ್ಟಿಯಿಂದ ಸರ್ಕಾರವು ಪ್ರಾಧಿಕಾರದ ಮನವಿಯನ್ನು ಮನ್ನಿಸಿ, "26 ಎ ಉಲ್ಲಂಘನೆಗಾಗಿ ದಂಡ" ಎಂಬ ನಿಯಮಗಳ ಅಡಿಯಲ್ಲಿ ಸರ್ಕಾರದ ನಿಯಮವನ್ನು ಉಲ್ಲಂಘಿಸುವವರಿಗೆ ರೂ.10,000/-ಗಳ ದಂಡವನ್ನು ವಿಧಿಸುವ ಹಾಗೆ ಪರಿಷ್ಕೃತ ಆದೇಶವು ಹೊರಬಂದಿತು.   ಈ ವಿಚಾರವಾಗಿ ಇಡಿ ರಾಜ್ಯದಲ್ಲಿ ಹೊಸ ಜಾಗೃತಿ ಮೂಡಿ ಬಹಳಷ್ಟು ಜನ ನಾಮಫಲಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡತೊಡಗಿದರು.  ಆದರೆ, ಈ ನಡುವೆ ವೋಡಾಫೋನ್ ಸಂಸ್ಥೆಯು ಸರ್ಕಾರದ ಕಾರ್ಮಿಕ ಇಲಾಖೆಯ ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಸದರಿ  ಆದೇಶವು ಅಸಿಂಧು ಎಂದು ತೀರ್ಪು ನೀಡಿದೆ.  ಈ ಹಿನ್ನೆಲೆಯಲ್ಲಿ ಹೊಸ ಕಾನೂನನ್ನು ರೂಪಿಸುವ ಅಗತ್ಯತೆ ತುರ್ತಾಗಿ ಆಗಬೇಕಾಗಿದೆ.

 ನಾಮಫಲಕಗಳ ಆದೇಶವನ್ನು ಅನುಷ್ಠಾನಗೊಳಿಸುವ ಉಸ್ತುವಾರಿ ಹೊತ್ತಿರುವ ಕಾರ್ಮಿಕ ಇಲಾಖೆಯು ಈ ಆಜ್ಞೆಯ ಅನುಷ್ಠಾನಕ್ಕೆ ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ವಲಯ ಅಧಿಕಾರಿಗಳಿಗೆ ಕಟ್ಟು ನಿಟ್ಟಾದ ಸೂಚನೆ ನೀಡುವಂತೆ ಕಾರ್ಮಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಬೇಕು.  ಈ ಬಗ್ಗೆ ಸರ್ಕಾರಕ್ಕೂ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೂ ತ್ರೈಮಾಸಿಕ ವರದಿ ಒಪ್ಪಿಸುವಂತೆ ಸೂಚಿಸಬೇಕು.

ಅಂಗಡಿ ಮುಂಗಟ್ಟುಗಳಿಗೆ ಪರವಾನಗಿ ನೀಡುವಾಗಲೇ ಮಹಾನಗರ ಪಾಲಿಕೆ, ನಗರ ಪಾಲಿಕೆ, ನಗರ ಸಭೆ ಮತ್ತು ಪುರಸಭೆಗಳು, ನಾಮಫಲಕದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಧಾನ್ಯತೆ ನೀಡುವಂತೆ ಷರತ್ತನ್ನು ವಿಧಿಸಲು ಸರ್ಕಾರವು ಸಂಬಂಧಪಟ್ಟ ಇಲಾಖೆಗೆ ಸ್ಪಷ್ಟ ಸೂಚನೆ ನೀಡಬೇಕು.  ಅಗತ್ಯ ಬಿದ್ದರೆ ಈಗಿರುವ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು.  ಜಾಹಿರಾತು ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಮತ್ತು ಸರ್ಕಾರದ ನಿಯಮ ಪಾಲಿಸದ ಜಾಹಿರಾತುಗಳನ್ನು ತಕ್ಷಣ ತೆರವುಗೊಳಿಸುವ / ದಂಡವಿಧಿಸುವ ಷರತ್ತು ವಿಧಿಸಿ ಅನುಮತಿ ನೀಡಬೇಕು.  ಕೇಂದ್ರ ಸರ್ಕಾರದ ಎಲ್ಲಾ ಜನೋಪಯೋಗಿ ಜಾಹೀರಾತುಗಳು ಕನ್ನಡದಲ್ಲಿಯೇ ಇರಬೇಕು.

ಗಡಿನಾಡ ಕನ್ನಡಿಗರಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಒದಗಿಸಿರುವುದನ್ನು ಉದ್ಯೋಗಕ್ಕೂ ವಿಸ್ತರಿಸಬೇಕು (ಕನ್ನಡ ಮಾಧ್ಯಮದವರಿಗೆ ಇರುವ 5% ರಡಿಯಲ್ಲಿ) ಗಡಿಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸಲು ಸಾಧ್ಯವಾಗುವಂತೆ ಹೊಸ ಆದೇಶವೊಂದನ್ನು ಹೊರಡಿಸಬೇಕು.

ವಾರ್ಷಿಕ ನೇಮಕಾತಿಗಳ ವರದಿಯನ್ನು ತರಿಸಿಕೊಳ್ಳುವ ಬಗ್ಗೆ : ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೀತಿಯ ಉದ್ಯಮಗಳಲ್ಲಿ ಕಾಲ ಕಾಲಕ್ಕೆ ಹೊಸ ನೇಮಕಾತಿಗಳು ಆಗುತ್ತಲೇ ಇರುತ್ತದೆ.  ಇಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರಕುತ್ತಿವೆಯೇ?  ಎಂಬ ಪರಿಶೀಲನೆಯಾಗಬೇಕಾದುದು ಅಗತ್ಯವಾಗಿದೆ.  ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಅದಾಗಲೇ ಆದೇಶವೊಂದನ್ನು ಜಾರಿ ಮಾಡಿ ಪ್ರತೀ ವರ್ಷ ಎಲ್ಲಾ ಉದ್ದಿಮೆ ಹಾಗೂ ಸಂಸ್ಥೆಗಳಲ್ಲಿ ಮರಾಠಿ ಭಾಷಿಕರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ವರದಿಯನ್ನು ತರಿಸಿಕೊಳ್ಳುತ್ತಿದೆ.  ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಸಹ ರಾಜ್ಯದಲ್ಲಿನ ಎಲ್ಲಾ ಉದ್ದಿಮೆ ಹಾಗೂ ಸಂಸ್ಥೆಗಳಲ್ಲಿ ಆದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗಗಳು ಸಿಕ್ಕಿವೆ ಎಂಬುದರ ಪರಿಶೀಲನೆಗಾಗಿ ಆದೇಶವೊಂದನ್ನು ಹೊರಡಿಸಿ, ನಿಯಮಿತವಾಗಿ ವರದಿಗಳನ್ನು ಪಡೆದು ಸ್ಥಳೀಯ ಭಾಷಿಕರ ಹಿತಕಾಯಬೇಕು.  ಈ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗಳೇ ಕಾರ್ಯಗತಗೊಳಿಸಬೇಕು ಹಾಗೂ ಈ ಮಾಹಿತಿಯನ್ನು ಪ್ರಾಧಿಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಬೇಕು.

ಕೇಂದ್ರದ ಹಾಗೂ ರಾಜ್ಯದಲ್ಲಿನ ಎಲ್ಲಾ ಉದ್ಯೋಗ ಮಾಹಿತಿಯು ರಾಜ್ಯ ಸರ್ಕಾರದ ಅಂತರ್ ಜಾಲದಲ್ಲಿ :

ಇದಕ್ಕಾಗಿ ರಾಜ್ಯ ಸರ್ಕಾರದ  ಭಾಷಾಂತರ ಇಲಾಖೆ ಮತ್ತು ಇ-ಆಡಳಿತ ವಿಭಾಗಗಳಿಗೆ ಸರ್ಕಾರವು ವಿಶೇಷ ಸೂಚನೆಯನ್ನು ನೀಡಬೇಕು.  ಕೇಂದ್ರ ಸರ್ಕಾರವು ಪ್ರಕಟಿಸುವ ಸೆಂಟ್ರಲ್ ಎಂಪ್ಲಾಯ್ ಮೆಂಟ್ ನ್ಯೂಸ್ ಪತ್ರಿಕೆಯು ಸ್ಥಳೀಯ ಭಾಷೆಯಲ್ಲಿ ಸಿಗಬೇಕು ಮತ್ತು ಎಲ್ಲಾ ರೀತಿಯ (ಖಾಸಗಿ/ಕೇಂದ್ರ/ರಾಜ್ಯ ಸರ್ಕಾರದ) ಉದ್ಯೋಗ ಮಾಹಿತಿಯು ಸ್ಥಳೀಯರಿಗೆ ಸ್ಥಳೀಯ ಭಾಷೆಯಲ್ಲಿಯೇ ದೊರಕುವಂತಾಗಲೂ ರಾಜ್ಯ ಸರ್ಕಾರವು ಆದೇಶ ಹೊರಡಿಸಬೇಕು.

 ​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top