​​​​​​​​

ಮಡಿವಾಳ ಕೆರೆ ಜೈವಿಕ ವೈವಿಧ್ಯ ಉದ್ಯಾನ

ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮದ ಮಾನ್ಯ ಮಂತ್ರಿಗಳೊಂದಿಗೆ ನಡೆದ ಚರ್ಚೆಯಲ್ಲಿ, ಕಜ್ಞಾಆದ ಅಧ್ಯಕ್ಷರು ದೆಹಲಿಯ ಯಮುನಾ ಜೀವವೈವಿಧ್ಯ ಉದ್ಯಾನದ ಕುರಿತು ತಿಳಿಸಿದರು. ಮಾನ್ಯ ಸಚಿವರು ಬೆಂಗಳೂರು ನಗರದಲ್ಲಿ  ಅಂತಹ ಉದ್ಯಾನವನ್ನು ರಚಿಸುವ ಅಗತ್ಯವನ್ನು ಭಾವಿಸಿದರು. ಮಾನ್ಯ ಮಂತ್ರಿಗಳ ಆಣತಿಯ ಮೇರೆಗೆ, ಕಜ್ಞಾಆದ ಅಧ್ಯಕ್ಷರು ಪ್ರೊ. ಸಿ. ಆರ್. ಬಾಬು, ಎಮೆರಿಟಸ್ ಪ್ರೊಫೆಸರ್, ಸ್ಕೂಲ್ ಆಫ್ ಎನ್ವಿರಾನ್ಮೆಂಟಲ್ ಸ್ಟಡೀಸ್, ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಆಫ್ ಡಿಗ್ರಡೆಡ್ ಇಕೋಸಿಸ್ಟಮ್ಸ್, ದೆಹಲಿ ವಿಶ್ವವಿದ್ಯಾಲಯ, ಇವರಿಗೆ ಯಮುನಾ ಜೀವವೈವಿಧ್ಯ ಉದ್ಯಾನ ಅಭಿವೃದ್ಧಿಗೆ ಮುಂದಾಳತ್ವ ವಹಿಸಿದ ಹಿನ್ನಲೆಯಲ್ಲಿ, ಬೆಂಗಳೂರಿನಲ್ಲಿ ಇಂತಹ  ಜೀವವೈವಿಧ್ಯ ಉದ್ಯಾನವನ್ನು ಸ್ಥಾಪಿಸುವ ಸಲುವಾಗಿ ಕರಡು ಪರಿಕಲ್ಪನೆಯನ್ನು ಕಳುಹಿಸಲು ವಿನಂತಿ ಮಾಡಿದರು. ಪ್ರೊ. ಸಿ. ಆರ್. ಬಾಬು ಅವರು ಕಳುಹಿಸಿದ ಪರಿಕಲ್ಪನೆಯು, ಸೆಪ್ಟೆಂಬರ್ 22, 2014 ರಂದು ನಡೆದ 2ನೇ ಕಜ್ಞಾಆದ  ಸಭೆಯಲ್ಲಿ ಚರ್ಚಿಸಿ ಅಂಗೀಕಾರಗೊಂಡಿತು. ಮುಂದಿನ ಪ್ರಗತಿಗಾಗಿ ವಿವರವಾದ ಯೋಜನೆಯ ಪ್ರಸ್ತಾವನೆನ್ನು ಕೋರಲಾಯಿತು. ಮಾನ್ಯ ಮಂತ್ರಿಗಳು ನವೆಂಬರ್ 29, 2014 ರಂದು ಪುನರ್ಪರಿಶೀಲನಾ ಸಭೆಯನ್ನು ನಡೆಸಿದರು ಮತ್ತು ಯೋಜನೆಗೆ ಅನುಮೋದನೆ ನೀಡಿದರು. ಪ್ರೊ. ಬಾಬು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ವಿವರವಾದ ಯೋಜನಾ ವರದಿಯನ್ನು ಪಡೆದುಕೊಳ್ಳಲು ಕಜ್ಞಾಆಕ್ಕೆ ಮನವಿ ಮಾಡಿದರು. ಸಮಗ್ರ ಯೋಜನೆಯ ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ ಕಜ್ಞಾಆವು, ಮಡಿವಾಳ  ಕೆರೆಯಲ್ಲಿ  ಜೀವವೈವಿಧ್ಯ ಉದ್ಯಾನವನ್ನು ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿತು. 

ಈ ಜೀವವೈವಿಧ್ಯ ಉದ್ಯಾನವು, ಆ ವಲಯದ ಸ್ಥಳೀಯ ಪ್ರಾಣಿ ಮತ್ತು ಸಸ್ಯಗಳನ್ನು ಪೋಷಿಸುವುದರೊಂದಿಗೆ, ಸ್ವರಕ್ಷಿತ ಪರಿಸರ ವ್ಯವಸ್ಥೆಯನ್ನು ಪುರ್ನನಿರ್ಮಾಣ ಮಾಡುತ್ತದೆ. ಈ ಜೀವವೈವಿಧ್ಯ ಉದ್ಯಾನವು ತೇವಭೂಮಿ,  ಹುಲ್ಲುಗಾವಲು, ಚದುರಿದ ಮರಗಳು, ನಡೆಯುವ ಮಾರ್ಗ, ಬಿದಿರು ಪೊದೆಗಳ ಆಶ್ರಯ ಪಟ್ಟಿ, ಸ್ಥಳೀಯ ಹಣ್ಣಿನ ಪೊದೆಸಸ್ಯಗಳು, ಜವುಗು ಜಾತಿ ಸಸ್ಯಗಳು, ಜಲವಾಸಿ ಸಮುದಾಯ, ಮೀನುಗಾರಿಕೆ ವಲಯ, ಗಿಡಮೂಲಿಕೆ ಮತ್ತು  ಸುವಾಸಿತ ತೋಟ, ಮತ್ತು ಪ್ರಕೃತಿ ವ್ಯಾಖ್ಯಾನ ಕೇಂದ್ರಗಳನ್ನೊಳಗೊಂಡಿರುತ್ತದೆ. ಜೀವವೈವಿಧ್ಯ ಉದ್ಯಾನವು ಸ್ಥಳೀಯ ಹವಾಮಾನವನ್ನು ಸಂರಕ್ಷಿಸುತ್ತದೆ ಹಾಗೂ CO2 ಮತ್ತು ನಗರ ಮಾಲಿನ್ಯಕಾರಕಗಳು ಕ್ಷೀಣಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಮತ್ತು ಹವಾಮಾನ ಬದಲಾವಣೆಯ ರೂಪಾಂತರವಾಗಿ ಕಾರ್ಯನಿರ್ವಹಿಸುತ್ತದೆ. ಮಡಿವಾಳ ಕೆರೆಯನ್ನು ಪೂರ್ಣ ಪ್ರಮಾಣದ ಜೀವವೈವಿಧ್ಯ ಉದ್ಯಾನವಾಗಿ ಅಭಿವೃದ್ಧಿಪಡಿಸಲು 5 ವರ್ಷಗಳ ಸಮಯ ನಿಗದಿಪಡಿಸಲಾಯಿತು. 

ಮುಂದಿನ ಕ್ರಮಗಳು
  • ​​ಕಜ್ಞಾಆವು  ಮಡಿವಾಳ ಕೆರೆ ಜೈವಿಕ ವೈವಿಧ್ಯ ಉದ್ಯಾನ ಸ್ಥಾಪನೆಗೆ, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮದ ಮಾನ್ಯ  ಮಂತ್ರಿಗಳಾದ ಆರ್.ವಿ. ದೇಶಪಾಂಡೆ ಅವರಿಗೆ ಮಾರ್ಚ್ ೨, ೨೦೧೫ ರಂದು ಯೋಜನಾ​ ವರದಿ​ಯನ್ನು ಔಪಚಾರಿಕವಾಗಿ ಸಲ್ಲಿಸಲಾಯಿತು.    
  • ಕರ್ನಾಟಕ ಸರ್ಕಾರವು ಕಜ್ಞಾಆದ ಶಿಫಾರಸ್ಸನ್ನು ಸ್ವೀಕರಿಸಿ, 2015-2016 ರ ರಾಜ್ಯ ಆಯವ್ಯಯದಲ್ಲಿ ಅದರ ಅನುಷ್ಠಾನವನ್ನು ಪ್ರಕಟಿಸಿದೆ.
ಬಜೆಟ್ ಹಂಚಿಕೆ

ಗೌರವಾನ್ವಿತ ಮುಖ್ಯಮಂತ್ರಿಗಳು  ಮಡಿವಾಳ ಕೆರೆ ಜೈವಿಕ ವೈವಿಧ್ಯ ಉದ್ಯಾನ ಸ್ಥಾಪನೆಗೆ ಹಣಕಾಸು ವರ್ಷ 2015-2016 ರಲ್ಲಿ ನಿಧಿಯನ್ನು ಹಂಚಿಕೆ ಮಾಡಿದ್ದಾರೆ.