Last modified at 28/08/2018 12:51 by kbbuser

​​​​

​ಪರಿಚಯ​

ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಪ್ರಧಾನ ಕಛೇರಿಯು ವನವಿಕಾಸ, ಕೆಳಮಹಡಿ, 18ನೇ ಅಡ್ಡರಸ್ತೆ, ಬೆಂಗಳೂರು ಇಲ್ಲಿ ಇರುತ್ತದೆ.
       ಕರ್ನಾಟಕ ರಾಜ್ಯ ಸರ್ಕಾರವು ಜೈವಿಕವೈವಿಧ್ಯ ಅಧಿನಿಯಮ, 2002ರ ಪ್ರಕಾರ ಸ. ಆ. ಸಂ. ಅಪಜೀ 125 ಇಎನ್ವಿ 2003 ದಿನಾಂಕ 19ನೇ ಜೂನ್ 2003ರನ್ವಯ ಮಂಡಳಿಯನ್ನು ಸ್ಥಾಪಿಸಿರುತ್ತದೆ. ಮಂಡಳಿಯ ಪ್ರಮುಖ ಉದ್ದೇಶಗಳೆಂದರೆ ಜೀವವೈವಿಧ್ಯ ದಾಖಲೆಯ ಸಾಂಸ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವುದು, ರಾಜ್ಯದ ಸಮೃದ್ಧ ಜೀವವೈವಿಧ್ಯತೆಯ ಸಮರ್ಥನೀಯ ಬಳಕೆ ಮತ್ತು ಅಭಿವೃದ್ಧಿ. 
      ಪರಿಸರವು ಮಾನವನ ಉಳಿವು ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ, ಜೀವವಿರುವ ಎಲ್ಲಾ ಪ್ರಬೇಧಗಳು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಪರಸ್ಪರ ವಿನಿಮಯವನ್ನು ಒಳಗೊಳ್ಳುತ್ತದೆ. ಆದ್ದರಿಂದ, ಇಂದಿನ ಪೀಳಿಗೆಯ ದುರಾಸೆಯಿಂದಾಗಿ ಮುಂದಿನ ಪೀಳಿಗೆಗಳ ಅಗತ್ಯಗಳನ್ನು ರಾಜಿ ಮಾಡಿಕೊಳ್ಳದಿರುವಂತಹ ಬೆಳವಣಿಗೆಯಾಗಿರುವ ಸುಸ್ಥಿರ ಅಭಿವೃದ್ಧಿಯ ಮೂಲಕ ನಮ್ಮ ಪರಿಸರವನ್ನು ಸುರಕ್ಷಿತವಾಗಿಡುವುದು ಅತ್ಯಗತ್ಯವಾಗಿದೆ. ಸುಸ್ಥಿರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿ, ಸಾಂಸ್ಥಿಕ ಚೌಕಟ್ಟಿನ ಮೂಲಕ ಪರಿಸರ ಸಂರಕ್ಷಣೆಯ ತುರ್ತು ಸಮಸ್ಯೆಗಳನ್ನು ಪರಿಹರಿಸಲು ಬ್ರೆಜಿಲ್ನ ರಿಯೋ-ಡಿ-ಜನೈರೋದಲ್ಲಿ ಸಾಮಾನ್ಯವಾಗಿ ರಿಯೋ ಸಮ್ಮೇಳನ ಅಥವಾ ಭೂ ಶೃಂಗಸಭೆ ಎಂದು ಉಲ್ಲೇಖಿಸಲಾಗುವ, ಪರಿಸರ ಮತ್ತು ಅಭಿವೃದ್ಧಿಯ ಕುರಿತಾದ ವಿಶ್ವಸಂಸ್ಥೆ ಸಮ್ಮೇಳನವು (ಯುಎನ್ಸಿಇಡಿ) ಮೊಟ್ಟಮೊದಲಿಗೆ 1992ರಲ್ಲಿ ನಡೆಯಿತು. ಇದು ಜೈವಿಕ ವೈವಿಧ್ಯದ ಕುರಿತ ಒಡಂಬಡಿಕೆಯ ಉದಯಕ್ಕೆ ನಾಂದಿಯಾಯಿತು. 
       ಜೈವಿಕ ವೈವಿಧ್ಯದ ಕುರಿತ ಒಡಂಬಡಿಕೆಯು (ಸಿಬಿಡಿ) ಸುಸ್ಥಿರ ಅಭಿವೃದ್ಧಿಯತ್ತ ವಿಶ್ವ ಸಮುದಾಯದ ಬದ್ಧತೆ ಹೆಚ್ಚಾಗಲು ಸ್ಫೂರ್ತಿ ನೀಡಿತು. ಇದು ಸಾಮಾನ್ಯ ಜೀವವೈವಿಧ್ಯತೆ ಮತ್ತು ವಿಶೇಷವಾಗಿ ವಂಶವಾಹಿ ಸಂಪನ್ಮೂಲಗಳ ಜೈವಿಕ ವೈವಿಧ್ಯತೆಯ ಸಂರಕ್ಷಣೆಯ ಗಮನಾರ್ಹ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ಒಡಂಬಡಿಕೆಯು ಕಾನೂನುಬದ್ಧವಾಗಿರುವ  ಬಹುಪಕ್ಷೀಯ ಪರಿಸರ ಸಂರಕ್ಷಣೆಯ ಒಪ್ಪಂದವಾಗಿದ್ದು 196 ಸದಸ್ಯ ರಾಷ್ಟ್ರಗಳ ಒಪ್ಪಂದವು 29ನೇ ಡಿಸೆಂಬರ್ 1993ರಲ್ಲಿ ಜಾರಿಗೆ ಬಂದಿದೆ.
       ಈ ಒಡಂಬಡಿಕೆಯು, ಸದಸ್ಯ ರಾಷ್ಟ್ರಗಳು ತಮ್ಮ ಜೈವಿಕ ಸಂಪನ್ಮೂಲಗಳ ಮೇಲೆ ಸಾರ್ವಭೌಮ ಹಕ್ಕನ್ನು ಹೊಂದಿರುತ್ತವೆ ಎಂದು ಪುನರ್ ದೃಢೀಕರಿಸುತ್ತದೆ. ಹಾಗೂ ರಾಷ್ಟ್ರೀಯ ಶಾಸನ ಮತ್ತು ಪರಸ್ಪರ ಒಪ್ಪಂದದ ನಿಯಮಗಳಿಗೆ (ಎಮ್ಎಟಿ) ಒಳಪಟ್ಟು ಸದಸ್ಯ ರಾಷ್ಟ್ರಗಳು ಬೇರೆ ರಾಷ್ಟ್ರಗಳಿಗೆ ವಂಶವಾಹಿ ಸಂಪನ್ಮೂಲಗಳ ಲಭ್ಯತೆಯನ್ನು ಒದಗಿಸಬಹುದು ಎಂದು ಕೋರುತ್ತದೆ. ಜೈವಿಕ ಸಂಪನ್ಮೂಲಗಳ ಜ್ಞಾನವನ್ನು ಹೊಂದಿರುವವರಿಂದ ದೊರೆಯುವ ಪಾರಂಪರಿಕ ಜ್ಞಾನ ಮತ್ತು ಆಚರಣೆಗಳ ಉಪಯೋಗದಿಂದ ಉಂಟಾಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಕೂಡಾ ಈ ಒಡಂಬಡಿಕೆಯು ಒದಗಿಸುತ್ತದೆ. ಇದರಿಂದಾಗಿ, ಲಾಭಗಳ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಹಂಚಿಕೆಯನ್ನು ಖಚಿತಗೊಳಿಸುವ ನಿಯಮಗಳಿಗಾಗಿ, ಚೌಕಟ್ಟನ್ನು ಹಾಕುವಂಥ ಸೂಕ್ತ ರಾಷ್ಟ್ರೀಯ ಶಾಸನವನ್ನು ತರುವುದು ಅನಿವಾರ್ಯವಾಯಿತು. ಭಾರತವು ಈ ಒಡಂಬಡಿಕೆಯ ಒಂದು ಪಕ್ಷವಾಗಿದ್ದು ಒಡಂಬಡಿಕೆಯ ಅನುಸರಣೆಗಾಗಿ ಮೂರು ಕಾನೂನು ಚೌಕಟ್ಟುಗಳನ್ನು ಹಾಕಿಕೊಂಡಿದೆ. ಅವುಗಳೆಂದರೆ, 1. ಜೈವಿಕವೈವಿಧ್ಯ ಅಧಿನಿಯಮ, 2002, 2. ಸಸ್ಯ ಪ್ರಭೇದಗಳ ಮತ್ತು ರೈತರ ಹಕ್ಕುಗಳ (ಪಿಪಿವಿಎಫ್ಆರ್) ರಕ್ಷಣೆ ಅಧಿನಿಯಮ, 2001 ಮತ್ತು 3. ಬೌದ್ಧಿಕ ಆಸ್ತಿ ಹಕ್ಕು  (ತಿದ್ದುಪಡಿ) ಅಧಿನಿಯಮ, 2002.
       ಜೈವಿಕವೈವಿಧ್ಯ ಅಧಿನಿಯಮ, 2002ನ್ನು, 2002ರಲ್ಲಿ ಭಾರತ ಸಂಸತ್ತಿನಿಂದ ಜಾರಿಗೊಳಿಸಲಾಯಿತು ಹಾಗೂ ಇದು 5ನೇ ಫೆಬ್ರವರಿ 2003ರಿಂದ ದೇಶಾದ್ಯಂತ ಕಾರ್ಯಗತಗೊಳ್ಳುತ್ತಿದೆ. ಜೈವಿಕ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಜೈವಿಕ ಸಂಪನ್ಮೂಲಗಳು ಮತ್ತು ಸಂಬಂಧಿತ ಜ್ಞಾನದ ವಾಣಿಜ್ಯ ಬಳಕೆಯಿಂದ ಉಂಟಾಗುವ ಪ್ರಯೋಜನಗಳ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಹಂಚಿಕೆಗೆ ಅವಕಾಶವನ್ನು ಕಲ್ಪಿಸುವುದು ಈ ಕಾಯ್ದೆಯ ಉದ್ದೇಶಗಳಾಗಿವೆ. ಈ ಅಧಿನಿಯಮದ ಅನುಷ್ಠಾನಕ್ಕಾಗಿ ಅಳವಡಿಸಿಕೊಳ್ಳಬೇಕಾಗಿರುವ ಕಾರ್ಯವಿಧಾನವನ್ನು ನಿರ್ಧರಿಸಲು 2004ರಲ್ಲಿ ಕೇಂದ್ರ ಸರ್ಕಾರದ ಜೈವಿಕ ವೈವಿಧ್ಯ ನಿಯಮಗಳನ್ನು ಅಧಿಸೂಚಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಜೈವಿಕ ವೈವಿಧ್ಯ ಅಧಿನಿಯಮ 2002ರ ಅನುಷ್ಠಾನದ ಆದೇಶದೊಂದಿಗೆ 2003ರಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಸ್ಥಾಪನೆಯಾಯಿತು. ಕರ್ನಾಟಕ ಸರ್ಕಾರವು ಕಾಯ್ದೆಯ ಪ್ರಕರಣ 63ರಡಿಯಲ್ಲಿ ಪ್ರದತ್ತವಾದ ಅಧಿಕಾರಗಳ ಪ್ರಕಾರ ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು, 2005ನ್ನು 29ನೇ ಜೂನ್, 2006ರಿಂದ ಜಾರಿಗೆ ಬರುವಂತೆ ರೂಪಿಸಿರುತ್ತದೆ.
      ಸಂಶೋಧನೆ ಅಥವಾ ವಾಣಿಜ್ಯ ಬಳಕೆಗಾಗಿ ಜೈವಿಕ ಸಂಪನ್ಮೂಲಗಳನ್ನು ಭಾರತೀಯರಲ್ಲದ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದಿಂದ ಮತ್ತು ಭಾರತೀಯ ಬಳಕೆದಾರರು ರಾಜ್ಯ ಜೀವವೈವಿಧ್ಯ ಮಂಡಳಿಯಿಂದ ಪೂರ್ವಾನುಮೋದನೆ ಪಡೆಯುವುದನ್ನು ಜೈವಿಕ ವೈವಿಧ್ಯ ಅಧಿನಿಯಮ, 2002ರ ಪ್ರಕರಣ 3 ಮತ್ತು 7ರಂತೆ ಕಡ್ಡಾಯವಾಗಿರುತ್ತದೆ. ​​
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top