ಆಯೋಗದ ಬಗ್ಗೆ ಸಂಕ್ಷಿಪ್ತ ಮಾಹಿತಿ :
ಮಾನ್ಯ ಸರ್ವೋಚ್ಛ ನ್ಯಾಯಾಲಯದ W.P.(C) ಸಂಖ್ಯೆ 930/1990 ಇಂದ್ರ ಸಹಾನಿ ಮತ್ತು ಇತರರು v/s ಭಾರತ ಒಕ್ಕೂಟ ಪ್ರಕರಣದ ತೀರ್ಪಿನ ಪೂರ್ವದಲ್ಲಿಯೇ ಕರ್ನಾಟಕ ಸರ್ಕಾರವು, ವಿಚಾರಣಾ ಆಯೋಗ ಅಧಿನಿಯಮದಂತೆ 1972, 1983 ಮತ್ತು 1988ರಲ್ಲಿ ಕ್ರಮವಾಗಿ ಶ್ರೀ ಎಲ್.ಜಿ.ಹಾವನೂರು, ಶ್ರೀ ವೆಂಕಟಸ್ವಾಮಿ ಮತ್ತು ಜಸ್ಟೀಸ್ ಓ.ಚಿನ್ನಪ್ಪರೆಡ್ಡಿ ರವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇಂದ್ರ ಸಹಾನಿ ಮತ್ತು ಇತರರು v/s ಭಾರತ ಒಕ್ಕೂಟ ಪ್ರಕರಣದ ದಿನಾಂಕ 16.11.1992ರ ತೀರ್ಪಿನಲ್ಲಿ ಕೇಂದ್ರ ಸ ರ್ಕಾರಕ್ಕೆ ಕೆಲವು ಮಾರ್ಗದರ್ಶನಗಳನ್ನು ನೀಡಿರುತ್ತದೆ. ಅದರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದುಳಿದ ಜನಾಂಗದವರ ಸ್ಥಿತಿಗತಿಗಳ ಬಗ್ಗೆ ಪರೀಕ್ಷಿಸುವ, ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಬರುವ ಮನವಿಗಳನ್ನು ಮತ್ತು ಪಟ್ಟಿಯಿಂದ ತೆಗೆದು ಹಾಕುವಂತೆ ಬರುವ ದೂರುಗಳ ಬಗ್ಗೆ ವಿಚಾರಣೆ ನೆಡಸಿ, ಸರ್ಕಾರಕ್ಕೆ ಸೂಕ್ತ ಸಲಹೆ/ಶಿಫಾರಸ್ಸು ಮಾಡಲು ಒಂದು ಶಾಶ್ವತ ಸಂಸ್ಥೆಯನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿರುತ್ತದೆ
ಕರ್ನಾಟಕ ಸರ್ಕಾರವು, ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇಂದ್ರ ಸಹಾನಿ ಮತ್ತು ಇತರರು v/s ಭಾರತ ಒಕ್ಕೂಟ ಪ್ರಕರಣದಲ್ಲಿ ನೀಡಿದ ನಿರ್ದೇಶನದನ್ವಯ, ಸರ್ಕಾರಿ ಆದೇಶ ಸಂಖ್ಯೆ : ಎಸ್.ಡಬ್ಲೂ.ಎಲ್ 80 ಬಿಸಿಎ 92 ದಿನಾಂಕ : 22.02.1993 ರಲ್ಲಿ ಒಂದು ಶಾಶ್ವತ "ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ" ವನ್ನು ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಿರುತ್ತದೆ. ತದನಂತರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ, 1995 ನ್ನು ಶಾಸನಬದ್ಧಗೊಳಿಸಿರುತ್ತದೆ
ಆಯೋಗವು, ಅಧಿನಿಯಮ ಸೆಕ್ಷನ್ 11(1) ರಂತೆ ಪ್ರತಿ ಹತ್ತು ವರ್ಷಗಳ ಅವಧಿ ಮುಕ್ತಾಯವಾಗುವಾಗ ಹಿಂದುಳಿದ ವರ್ಗಗಳಾಗಿ ಉಳಿಯದೇ ಹೋಗಿರುವ ವರ್ಗಗಳನ್ನು ತೆಗೆದುಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಅಂಥ ಪಟ್ಟಿಯಲ್ಲಿ ಸೇರಿಸುವುದನ್ನು ಮಾಡಬೇಕಾಗಿರುತ್ತದೆ.
ಆಯೋಗದ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ (ತಿದ್ದುಪಡಿ) ನಿಯಮ 2010, ಸೆಕ್ಷನ್ 3(1)ರ ಉಪ ನಿಯಮ (1) ರೀತ್ಯಾ ರಾಜ್ಯ ಸಚಿವರ ಸ್ಥಾನಮಾನವನ್ನು ಹೊಂದಿರುತ್ತಾರೆ.
ಆಯೋಗದ ಸದಸ್ಯರುಗಳನ್ನು ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುತ್ತದೆ. ಇವರಿಗೆ ತಿದ್ದುಪಡಿ ನಿಯಮ 2010 ಸೆಕ್ಷನ್ 3ರ ಉಪ ನಿಯಮ (2) ರಂತೆ ಮಾಸಿಕ ಭತ್ಯೆ ಮತ್ತು ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.