ಕಲೆ ಮತ್ತು ಸಂಸ್ಕೃತಿ

ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿ

ಕರ್ನಾಟಕ ಬಹು ವೈವಿಧ್ಯಮಯ ವಾಸ್ತುಶಿಲ್ಪ, ಕಲೆಗಳು ಮತ್ತು ಸಂಸ್ಕೃತಿಗೆ ಪ್ರಖ್ಯಾತಿಯನ್ನು ಪಡೆದುಕೊಂಡ  ರಾಜ್ಯ. ಕ್ರಿ. ಪೂ. ಕಾಲದಿಂದ ಆಧುನಿಕ ಕರ್ನಾಟಕದವರೆಗೂ ಅನೇಕ ನಾಗರೀಕಥೆಗಳು, ರಾಜ ಮನೆತನಗಳ ಆಡಳಿತ, ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಪ್ರತಿಯೊಂದು ಆಡಳಿತದಲ್ಲೂ ಹೊಸದೊಂದು ಬಗೆಯ ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಕಲೆ ಮತ್ತು ಸಂಸ್ಕೃತಿ ಉಗಮವಾಯಿತು. ಕರ್ನಾಟಕವು ಈಗ ಕವಿವಾಣಿಯಂತೆ “ರಸಿಕರ ಕಂಗಳ ಸೆಳೆಯುವ ನೋಟ”ವನ್ನೂ ಎಲ್ಲೆಲ್ಲೂ ಸಿಂಗರಿಸಿಕೊಂಡಿದೆ. ಬಂಗಾರದ ಬಯಲು ಸೀಮೆ, ನಿತ್ಯ ಹರಿದ್ವರ್ಣ ಪಶ್ಚಿಮಘಟ್ಟಗಳ ಮಲೆನಾಡು, ಮಹಾಸಾಗರಕ್ಕೆ ಹೆಬ್ಬಾಗಿಲಂತಿರುವ ಕರಾವಳಿ, ಇವುಗಳು ನಾಡಿಗೆ ಅವುಗಳದ್ದೆ ವಿಶೇಷ ಕಾಣಿಕೆಯನ್ನು ನೀಡಿವೆ.

ಕ್ರಿ.ಪೂ. ಆರಂಭದಲ್ಲಿ ಮೊಹೆಂಜೊ-ದಾರೊ ಮತ್ತು ಹರಪ್ಪ ನಗರಗಳಲ್ಲಿ ವಾಸ್ತುಶಿಲ್ಪವು ಶೀಘ್ರವಾದ ಬೆಳವಣಿಗೆ ಹೊಂದಿತು, ಆದರೆ ದಕ್ಷಿಣದಲ್ಲಿ ಹಳ್ಳಿಗಳ ನಗರೀಕರಣ ಇನ್ನೂ ನಡೆಯದಿದ್ದರೂ ಕಲೆ, ವಿಶೇಷವಾಗಿ ಚಿತ್ರಕಲೆ, ಗಣನೀಯ ಪ್ರಗತಿಯನ್ನು ಸಾಧಿಸಿತ್ತು. ರಾಯಚೂರು ಜಿಲ್ಲೆಯ ಹಿರೆಬೆನಕಲ್‌ನಲ್ಲಿರುವ ಪುರಾತನ ಶಿಲಾ-ವರ್ಣಚಿತ್ರಗಳನ್ನು ನವಶಿಲಾಯುಗದ ಉದಾಹರಣೆಯೆಂದೇ ಉಲ್ಲೇಖಿಸಬಹುದು.

ಡಾ. ಎಸ್. ಆರ್. ರಾವ್‌ ಅವರು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್‌ನ ಉತ್ಖನನದ ಸಮಯದಲ್ಲಿ ಕಂಬದ ಸಭಾಂಗಣ ಮತ್ತು ಗರ್ಭಗೃಹವನ್ನು ಹೊಂದಿರುವ ಆಯತಾಕಾರದ ಇಟ್ಟಿಗೆ ದೇವಾಲಯದ ಅವಶೇಷಗಳನ್ನು ಪತ್ತೆ ಮಾಡಿದ್ದರು.  ಇದು ಬಾದಾಮಿಯ ಚಾಲುಕ್ಯರ ಶೈಲಿಯ ಕಲ್ಲಿನ ದೇವಾಲಯಗಳ ನಿರ್ಮಾಣದ ಆರಂಭಿಕ ಪ್ರಯೋಗಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆಂದು ತೋರುತ್ತದೆ.

 

ಆರಂಭಿಕ ಚಾಲುಕ್ಯರ ಶೈಲಿ

ಭಾರತದ ಎರಡು ಪ್ರಮುಖ ದೇವಾಲಯ ನಿರ್ಮಾನ ಶೈಲಿಗಳಿಗೆ ಕರ್ನಾಟಕವನ್ನು ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಅವುಗಳೆಂದರೆ, ದಕ್ಷಿಣದ ವಿಮಾನ ಶೈಲಿ, ಚದರ ಅಂತಸ್ತಿನ ಮೇಲ್ಕಟ್ಟಡಗಳು, ಮತ್ತೊಂದು ಉತ್ತರದ ರೇಖಾಪ್ರಸಾದ ಅಥವಾ ರೇಖಾನಗರ ಎಂದೂ ಕರೆಯಲ್ಪಡುವ ಕಟ್ಟಡ ಶೈಲಿ ಅವುಗಳು ತಿರುವು ಗೋಪುರಗಳಿಗೆ ಹೆಸರುವಾಸಿಯಾಗಿವೆ. ಮಲಪ್ರಭಾ ಕಣಿವೆಯಲ್ಲಿ ನಡೆಸಿದ ಪ್ರಯೋಗಗಳ ಪರಿಣಾಮವಾಗಿ ಏಕಕಾಲದಲ್ಲಿ ಈ ಎರಡು ಶೈಲಿಗಳು ವಿಕಸನಗೊಂಡವು. ಕದಂಬನಗರ ಶೈಲಿಯೆಂದೇ ಕೆಲವರಿಂದ ಕರೆಯಲ್ಪಡುವ ಶಂಕುವಿನಾಕಾರದ ಬಹು-ಶ್ರೇಣಿಯ ಮೇಲ್ಛಾವಣಿ ಹೊಂದಿರುವ ಮೂರನೇ ಶೈಲಿಯೂ ಸಹ ಕರ್ನಾಟಕದಲ್ಲಿ ಕಾಣಿಸಿಕೊಂಡಿತು ಮತ್ತು ಪಶ್ಚಿಮ ಕರಾವಳಿಯಲ್ಲಿ ಸ್ವಲ್ಪ ಸಮಯದವರೆಗೆ ಜನಪ್ರಿಯವಾಗಿತ್ತು. ಎರಡು ವರೆ (ಕ್ರಿ.ಶ. 500 ರಿಂದ 750)ಶತಮಾನಗಳ ಪ್ರಾರಂಭಿಕ ಅವಧಿಯಲ್ಲಿ 100ಕ್ಕೂ ಹೆಚ್ಚು ದೇವಾಲಯಗಳನ್ನು ಆರಂಭಿಕ ಚಾಲುಕ್ಯ ದೊರೆಗಳು ಐಹೊಳೆ, ಮಹಾಕೂಟ, ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ  ನಿರ್ಮಿಸಿದರು. ಸಭಾಭವನ ಹೋಲುವ ಸರಳ ಚಾವಣಿ ಮಂಟಪ-ಮಾದರಿಯ ರಚನೆಗಳಿಂದ ಅತ್ಯಾಧುನಿಕ ಮಾದರಿಗಳನ್ನು ನಿರ್ಮಿಸಿದರು. ಅವರು ಬಳಸಿದ ಮರಳು ಕಲ್ಲು ಮೃದುವಾಗಿಲ್ಲದಿದ್ದರೂ, ಅದರಲ್ಲೇ ಹೆಚ್ಚಿನ ಕಲಾತ್ಮಕ ಮೌಲ್ಯದ ಶಿಲ್ಪಗಳನ್ನು ಅರಳಿಸಿದ್ದಾರೆ.  

ಕವಿ ರವಿಕೀರ್ತಿಯ ಶಾಸನದಿಂದ ತಿಳಿಯುವುದೆನೆಂದರೆ, ಕ್ರಿ.ಶ 634ರ ಕಾಲಕ್ಕೆ ಸೇರಿದ್ದ ಮೇಗುತಿ ದೇವಾಲಯವು ವಾಸ್ತುಶಿಲ್ಪದ ಮೊದಲ ಹಂತದ ಅಂತ್ಯವನ್ನು ಸೂಚಿಸುತ್ತದೆ. ಆ ಸಮಯದಲ್ಲಿ ದೇವಾಲಯದ ಮುಖ್ಯ ಅಂಶಗಳಾದ ಗರ್ಭಗೃಹ, ಪ್ರದಕ್ಷಿಣ ಪಥ, ಸಭಾಮಂಟಪ ಮತ್ತು ಮುಖಮಂಟಪ ವಿಕಾಸಗೊಂಡವು ಅದಾಗ್ಯೂ ಗೋಪುರಗಳನ್ನು ಉಳಿಸಿಕೊಳ್ಳಲಾಯಿತು.  ಅಲಂಕಾರಕ್ಕೆ ಸಂಬಂಧಿಸಿದಂತೆ, ಪ್ರಾಣಿಗಳು, ವ್ಯಕ್ತಿಗಳು, ಹೂವಿನ ಮತ್ತು ಜ್ಯಾಮಿತೀಯ ವಿನ್ಯಾಸಗಳ ಮಾಳಿಗೆ, ಬಾಗಿಲು, ಸ್ತಂಭಗಳಲ್ಲಿ ಮಾತ್ರ ಕೆತ್ತಲಾಯಿತು.  ಮುಂದಿನ ಹಂತದ ಪ್ರಯೋಗವೆಂಬಂತೆ, ಕ್ರಿ.ಪೂ. 634ರ ಸುಮಾರಿಗೆ ದೇವಾಲಯಗಳ ಗೋಪುರವನ್ನು ವಿಕಸನಗೊಳಿಸುವ ಮೊದಲ ಪ್ರಯತ್ನವು ಒಟ್ಟಾರೆ ರಚನೆಯ ಅವಿಭಾಜ್ಯ ಅಂಗವಾಗಿತ್ತು.

ಮೇಲೆ ತಿಳಿಸಲಾದ ಮೂರು ಪ್ರಮುಖ ಪ್ರಕಾರಗಳ ಜೊತೆಗೆ, ಐಹೊಳೆಯ ದುರ್ಗಾ ದೇವಸ್ಥಾನ ಮತ್ತು ಪಟ್ಟದಕಲ್ಲಿನ ಸಂಕೀರ್ಣದ ದೇವಾಲಯಗಳಲ್ಲಿ ಕಂಡುಬರುವಂತೆ ಕಮಾನು ಗೂಡು ಅಥವಾ ಚಪ್ಪಟೆ ರೂಪದ ವಿಧಾನವು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಸಂಗಮೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ವಿಮಾನ ಪ್ರಕಾರಕ್ಕೆ ಉತ್ತಮ ಉದಾಹರಣೆಗಳಾದರೂ, ವಿರೂಪಾಕ್ಷ ದೇವಾಲಯವು ಅತ್ಯಂತ ಅತ್ಯಾಧುನಿಕ ನಿರ್ಮಾಣವಾಗಿದೆ.

ಗಂಗರು ಮತ್ತು ಚೋಳರ ಶೈಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದಲ್ಲಿರುವ ಭೋಗನಂದೀಶ್ವರ ದೇವಸ್ಥಾನ (9 ನೇ ಶತಮಾನ) ಗಂಗಾ-ಬಾಣ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ, ಈ ಆವರಣವು ಎರಡು ದೇವಾಲಯಗಳನ್ನು ಒಳಗೊಂಡಿದೆ. ಇವುಗಳು ದಕ್ಷಿಣದ ವಿಮಾನ ಶೈಲಿಗೆ ಅತ್ಯುತ್ತಮ ಉದಾಹರಣೆಯಾಗಿವೆ. ಇದರಲ್ಲಿ ಮಹಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು ಇವುಗಳ ಕುಂಬಿಗೋಡೆಯನ್ನು ಆಕೃತಿ-ಶಿಲ್ಪಗಳಿಂದ ಅಲಂಕರಿಸಲಾಗಿದೆ. ನವರಂಗದಲ್ಲಿರುವ ಕಂಬಗಳಲ್ಲಿ ಸೊಗಸಾಗಿ ಕೆತ್ತಿದ ಕೆಲವು ದೇವತೆಗಳನ್ನು ಮತ್ತು ದೇಮಿ-ದೇವರುಗಳನ್ನು ಹೊಂದಿದೆ. ಇದರ ಹಬ್ಬದ ಸಭಾಭವನವು ಕಪ್ಪು ಪೆಡಸುಗಲ್ಲಿನಿಂದ ನಿರ್ಮಿಸಲಾಗಿದ್ದು ಸೊಗಸಾದ ಉಬ್ಬು ತಗ್ಗುಗಳ ಕೆತ್ತನೆಗಳ ವಿವರಣೆಗೆ ಪ್ರಸಿದ್ಧವಾಗಿದೆ.

 

ಚಾಲುಕ್ಯರ ನಂತರದ ಶೈಲಿ

ನಂತರದ ಚಾಲುಕ್ಯರ ದೇವಾಲಯಗಳು ವಿಮಾನ ಮುಂಭಾಗದಲ್ಲಿ ಜೋಡನೆಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ತೋರಿಸುತ್ತವೆ. ಹೀಗಾಗಿ ವಾಸ್ತುಶಿಲ್ಪದ ಅಲಂಕಾರ ಮತ್ತು ಆಕೃತಿ ಶಿಲ್ಪಗಳ ಸಮೃದ್ಧಿಗೆ ಹೆಚ್ಚಳಕ್ಕೆ ಅವಕಾಶವನ್ನು ಆರಂಭಿಕ ಚಾಲುಕ್ಯರ ಶೈಲಿಯಿಂದ ಸಾಧ್ಯವಾಯಿತು.

ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಪಾಪನಾಥ ದೇವಾಲಯಗಳಲ್ಲಿ ಗಮನಾರ್ಹವಾದ ಗೋಡೆಯ ಮೇಲ್ಮೈಯನ್ನು ನಂತರದ ಆರಂಭಿಕ ಚಾಲುಕ್ಯರ ವೈಶಿಷ್ಟ್ಯವನ್ನು ಮತ್ತಷ್ಟು ಕಲೆಗೆ ಪ್ರಯೋಗಿಸಲಾಯಿತು ಮತ್ತು ವಾಸ್ತುಶಿಲ್ಪದ ಮಹತ್ವದ ಕ್ರಿಯಾತ್ಮಕ ಚೌಕಟ್ಟನ್ನು ಇಡೀ ಕಟ್ಟಡಕ್ಕೆ ನೀಡಲಾಯಿತು.

ಗೋಡೆಯೊಂದಿಗೆ ಹೊಂದಿಸಿರುವ ಚೌಕ ಸ್ಥಂಭದ ಕಲಾಕೃತಿಗಳು ಅತ್ಯಂತ ಕೌಶಲ್ಯದಿಂದ ನಿರ್ಮಿಸಿಲ್ಪಟ್ಟಿವೆ. ತಿರುವು ಕಲಾಕೃತಿಯ ಜೊತೆಗೆ ಎಲೆಗಳ ಚಿತ್ರಗಳನ್ನು ಕೆತ್ತಲಾಗಿದೆ. ಕಲಾಕೃತಿಗಳ ದಕ್ಷಿಣ ಶೈಲಿಯನ್ನು ಉಳಿಸಿಕೊಳ್ಳಲು ಗೋಪುರಗಳಿಗೆ ಸಮತಲವಾಗಿ ಒತ್ತು ನೀಡುವ ರೇಖಾ ವೈಶಿಷ್ಟ್ಯಗಳನ್ನು ಬಳಸಲಾಗಿದೆ.

ಹೆಚ್ಚು ಅಲಂಕೃತವಾಗಿ ನಿರ್ಮಿಸಿರುವ ಬಾಗಿಲ ಚೌಕಟ್ಟುಗಳು, ಲಂಭವಾದ ಶಿಖಗಳನ್ನು ಹೊಂದಿದ್ದು ಚಿಕಣಿ(ಸಣ್ಣಸಣ್ಣಚಿತ್ರ)ಗಳ ಕಲಾಕೃತಿಗಳನ್ನು ಕೆತ್ತಲಾಗಿದೆ. ಇದರ ವಿಮಾನ ಮತ್ತು ಸಭಾಂಗಣ ಎರಡೂ ಯೋಜನೆಯಲ್ಲಿ ನಕ್ಷತ್ರಪುಂಜದ ಆಕೃತಿಯನ್ನು ಹೊಂದಿವೆ. ಈ ಕಟ್ಟಡಗಳನ್ನು ಚಾಲುಕ್ಯರ ಮತ್ತು ಹೊಯ್ಸಳರ ದೇವಾಲಯಗಳಿಂದ ಪ್ರತ್ಯೇಕಿಸಲು ಕಾರಣವಾಗುವ ಅಂಶಗಳೆಂದರೆ, ತಳದ ಪ್ರಕ್ಷೇಪಣವನ್ನು ಗೋಪುರದ 'ಕುತ್ತಿಗೆ' (ಗ್ರಿವಾ) ವರೆಗೆ ಪಕ್ಕೆಲುಬಿನ ರೂಪದಲ್ಲಿ ಕೊಂಡೊಯ್ಯುವುದು, ಹೀಗೆ ಮೆಟ್ಟಿಲುಗಳ ಪಿರಮಿಡ್‌ ಅನ್ನು ಬದಲಾಯಿಸುತ್ತ ಏರುತ್ತಿರುವ ಗೋಪುರದಿಂದ ರೂಪುಗೊಳ್ಳುತ್ತದೆ.  ಹೀಗೆ ನಿರ್ಮಾಣವಾಗುತ್ತಾ ಹೋಗುವ ಪಿರಾಮಿಡ್‌ ಆಕೃತಿಯು ಗೋಪುರದ ರಚನೆಗೆ ಕಾರಣವಾಗುತ್ತದೆ.

ಹೊಯ್ಸಳ ಶೈಲಿ

ಹೊಯ್ಸಳರ ಕಾಲದ ಕಟ್ಟಡಗಳಲ್ಲಿ ಬಳಸುವ ಶಿಲಾವಸ್ತು ನೀಲಿ ಅಥವಾ ಬೂದು ಕ್ಲೋರೈಟ್ ಸ್ಕಿಸ್ಟ್ ಎಂಬ ವಿಶೇಷ ಶಿಲೆಯಾಗಿದೆ. ಇದು ಸೂಕ್ಷ್ಮ ಕೆತ್ತನೆಗೆ ಬಹು ಉಪಯುಕ್ತವಾಗಿದೆ ಮತ್ತು ಹೆಚ್ಚಿನ ಹೊಳಪು ನೀಡುತ್ತದೆ. ಹೊಯ್ಸಳರ ಆಳ್ವಿಕೆಯಲ್ಲಿ ನೂರಾರು ದೇವಾಲಯಗಳನ್ನು ಹೀಗೆ ನಿರ್ಮಿಸಲಾಗಿದೆ. ಅವುಗಳಲ್ಲಿ 84 ಕಟ್ಟಡಗಳು ಅಖಂಡಗಳಾಗಿವೆ. ಅವುಗಳಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿರುವ ಕಟ್ಟಡಗಳು ಬೇಲೂರು, ಹಳೇಬಿಡು, ದೊಡ್ಡಗದ್ದವಳ್ಳಿ, ಅರಸಿಕೆರೆ, ಹೊಸಹೊಳಲು, ಕೋರಮಂಗಲ, ಅರಕೆರೆ, ಹಾರನಹಳ್ಳಿ, ನುಗ್ಗೆಹಳ್ಳಿ, ಮೊಸಳೆ ಮತ್ತು ಹಾಸನ ಜಿಲ್ಲೆಯ ಅರಲಗುಪ್ಪೆ, ಮೈಸೂರು ಜಿಲ್ಲೆಯ ಸೋಮನಾಥಪುರ ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿವೆ. ವಾಸ್ತುಶಿಲ್ಪದ ಮೇಲೆ ಶಿಲ್ಪಕಲೆಯ ಪ್ರಾಬಲ್ಯ ಹೊಂದಿರುವುದು ಹೊಯ್ಸಳ ದೇವಾಲಯಗಳ ಮಹೋನ್ನತ ಲಕ್ಷಣವಾಗಿದೆ.

 

ವಿಜಯನಗರ ವಾಸ್ತುಶಿಲ್ಪ

ವಿಜಯನಗರ ಆಡಳಿತದಲ್ಲಿ ಹೊಸದೊಂದು ವಾಸ್ತುಶಿಲ್ಪ ಶೈಲಿ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಬಹುದು. ಇದು ಮಹಾದ್ವಾರಗಳ ಮೇಲೆ ಅಲಂಕೃತ ಮತ್ತು ಬೃಹತ್ ಗೋಪುರಗಳಿಗೆ (ಗೋಪುರಗಳು) ಹೆಸರುವಾಸಿಯಾಗಿತ್ತು.  ಮತ್ತು ಕಲ್ಪನಾತೀತವಾಗಿ ಕೆತ್ತಿದ ಕಂಬಗಳು ಮತ್ತು ಆವರಣಗಳೊಂದಿಗೆ ವಿಧ್ಯುಕ್ತ ಸಭಾಂಗಣ ಮಾದರಿಗೂ ಅವರ ವಾಸ್ತುಶಿಲ್ಪ ಹೆಸರಾಗಿತ್ತು.

ಪೌರಾಣಿಕ ಪ್ರಾಣಿಗಳು ಮತ್ತು ಸವಾರರನ್ನು ಸೂಚಿಸುವ ಚಿತ್ರಗಳನ್ನು ಕೆತ್ತಲ್ಪಟ್ಟ ಸ್ತಂಭಗಳು ವಿಜಯನಗರ ಆಡಳಿತಗಾರರ ವಿಶಿಷ್ಟ ಕೊಡುಗೆಯಾಗಿವೆ. ಅವರ  ಮುಖ್ಯ  ಆರಾಧ್ಯ ದೇವಗಳ ಪತ್ನಿಯರಿಗಾಗಿಯೇ ಪ್ರತ್ಯೇಕ ದೇವಾಲಯಗಳನ್ನು  ನಿರ್ಮಿಸಿದರು ಮತ್ತು ಎತ್ತರದ ಗೋಡೆಯ ಆವರಣವನ್ನು ಹೊಂದಿರುವ ಹಲವಾರು ಅಂಗಸಂಸ್ಥೆ ದೇವಾಲಯಗಳನ್ನು ನಿರ್ಮಿಸಿ ಜಾನಪದ ನೃತ್ಯ, ರಾಜರ ಬೇಟೆ, ವಿಜಯ ಮೆರವಣಿಗೆಗಳಂಥ ದೃಶ್ಯ ಚಿತ್ರಗಳಿಂದ ಅಲಂಕರಿಸಿದ್ದರು.

ವಿಜಯನಗರ ಆಡಳಿತಗಾರರ ಭೂಗತ ಮತ್ತು ಮೇಲ್ಕಾಲುವೆಗಳ ನಿರ್ಮಾಣ ಪರಿಕಲ್ಪನೆ ಮತ್ತು ವಿನ್ಯಾಸ ವಿಶಿಷ್ಟವಾಗಿದೆ. ವಿರೂಪಾಕ್ಷ ದೇವಸ್ಥಾನ, ವಿಜಯವಿಠ್ಠಲ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಕೃಷ್ಣ ಮತ್ತು ಪಟ್ಟಾಭಿರಾಮ ದೇವಾಲಯಗಳು ಧಾರ್ಮಿಕ ವಾಸ್ತುಶಿಲ್ಪದಲ್ಲಿ ಅವರ ಸಾಧನೆಗೆ ನಿರರ್ಗಳವಾಗಿದ್ದು ಜಾತ್ಯತೀತ ವಾಸ್ತುಶಿಲ್ಪದಲ್ಲಿ ಅವರ ವಾಸ್ತುಶಿಲ್ಪ ಸಾಧನೆಗೆ ಸಾಕ್ಷಿಯಾಗಿವೆ. ಕೋಟೆಯೊಳಗೆ ವಿಶಾಲವಾದ ಅರಮನೆ ಮತ್ತು ಸೈನಿಕರ ವಿವಿಧ ಚಟುವಟಿಕೆಗಳ ನಿರ್ವಹಣೆಗೆ ಅನುಕೂಲವಾಗವಷ್ಟು ವಿಶಾಲ ಮೈದಾನವೂ ಇರುತ್ತಿತ್ತು.

ಇಸ್ಲಾಮಿಕ್‌ ವಾಸ್ತುಶಿಲ್ಪ

ಕರ್ನಾಟಕ ಅಥವಾ ಅದರ ಬಹು ಭಾಗವನ್ನು ಮಧ್ಯಕಾಲೀನ ಅವಧಿಯಲ್ಲಿ ಮುಸ್ಲಿಂ ರಾಜವಂಶಗಳು ಆಳಿದವು. ಬಹಮನಿಗಳು, ಬೀದರ್‌ ಸುಲ್ತಾನರು ಮತ್ತು ವಿಜಯಪುರದ ಆದಿಲ್ ಶಾಹಿಗಳು ಪ್ರಮುಖರಾದವರು. ಇವರ ಆಡಳಿತದ ಪರಿಣಾಮವಾಗಿ, ರಾಜಧಾನಿ ಮತ್ತು ಅಡಳಿತಕ್ಕೆ ಒಳಪಟ್ಟಿದ್ದ ಇತರ ಪ್ರಮುಖ ಸ್ಥಳಗಳಲ್ಲಿ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯಲ್ಲಿ ಹಲವಾರು ಆಕರ್ಷಕ ಸ್ಮಾರಕಗಳು ನಿರ್ಮಾಣಗೊಂಡವು.

ಸ್ವತಂತ್ರ ಬಹಮನಿ ಆಡಳಿತದ ಸ್ಥಾಪನೆಯೊಂದಿಗೆ ಮತ್ತೊಂದು ಬಗೆಯ ವಿಶಿಷ್ಟ ವಾಸ್ತುಶಿಲ್ಪಶೈಲಿಯು ಅಸ್ತಿತ್ವಕ್ಕೆ ಬಂದಿತು. ಇದು ಈಗಾಗಲೇ ಅಸ್ತಿತ್ವದಲ್ಲಿದ್ದ ದೆಹಲಿಯ ತುಘಲಕ್ ಶೈಲಿಯಿಂದ ಮತ್ತು ನಂತರ ಪರ್ಷಿಯಾದ ಕಟ್ಟಡ ಕಲೆ ಮತ್ತು ಅದರ ನೈಸರ್ಗಿಕ ಸ್ವರೂಪದಿಂದ ಆರಂಭಗೊಂಡಿತು. ಒಂದು ನಿರ್ದಿಷ್ಟ ಪ್ರಾದೇಶಿಕ ನೋಟವನ್ನೂ ಪಡೆದುಕೊಂಡಿತು. ಭವ್ಯವಾದ ಮತ್ತು ಬೃಹತ್ ರೂಪಗಳು, ಧ್ವನಿ ರಚನಾತ್ಮಕ ವಿಧಾನಗಳು ಮತ್ತು ಕಲ್ಲಿನಲ್ಲಿ ಮೂಡಿದ ಶ್ರೀಮಂತ ಶೃಂಗಾರ ಮತ್ತು ಗಾರೆ ಈ ಶೈಲಿಯ ವಿಶೇಷ ಲಕ್ಷಣಗಳು.

ವಿಜಯಪುರದ ಆದಿಲ್ ಶಾಹಿಗಳ ಆಡಳಿತದಲ್ಲಿ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿ ಅಭಿವೃದ್ಧಿಪಡೆದುಕೊಂಡಿತು. ಈ ಶೈಲಿಯ ಅತ್ಯಂತ ಗಮನಾರ್ಹ ಲಕ್ಷಣಗಳೆಂದರೆ, ಪರಿಕಲ್ಪನೆಯಲ್ಲಿ ಬೃಹತ್‌ ಮತ್ತು ಭವ್ಯತೆ, ಮೂರು ಕಮಾನುಗಳ ಮುಂಭಾಗ (ಕೇಂದ್ರವು ವಿಶಾಲವಾಗಿರುತ್ತದೆ.), ಗುಮ್ಮಟವು ಬಹುತೇಕ ಗೋಳಾಕಾರದಲ್ಲಿರುತ್ತವೆ ಹಾಗೂ ಅರಳಿದ ಎಲೆಗಳ ವಿನ್ಯಾಸದ ಮಾದರಿಯಲ್ಲಿ ಅದನ್ನು ಕೇಂದ್ರಿಕರಿಸಲಾಗಿರುತ್ತದೆ. ಆಕರ್ಷಕ ಎತ್ತರದ ಮತ್ತು ತೆಳ್ಳಗಿನ ಮಿನಾರ್‌ಗಳ ತುದಿಯಲ್ಲಿ ಕುಂಬಿಯನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಮೊನಚಾದ ಕಮಾನುಗಳನ್ನು ಹೊಂದಿರುತ್ತವೆ.

ವಿವಿಧ ಇಸ್ಲಾಮಿಕ್ ಆಡಳಿತಗಾರರ ಅಡಿಯಲ್ಲಿ ವಾಸ್ತುಶಿಲ್ಪವು ಪ್ರವರ್ಧಮಾನಕ್ಕೆ ಬಂದಿತು. ಇಬ್ರಾಹಿಂ ರೋಜಾ ಮತ್ತು ಅದರ ಮಸೀದಿ ಬಿಜಾಪುರ ಸ್ಮಾರಕಗಳಲ್ಲಿ ಅತ್ಯಂತ ಅಲಂಕೃತ ಮತ್ತು ಅತ್ಯಂತ ಪರಿಪೂರ್ಣವಾಗಿದ್ದು ವಾಸ್ತುಶಿಲ್ಪದ ಶೈಲಿಯ ಉತ್ತುಂಗವನ್ನು ಸೂಚಿಸುತ್ತದೆ.

ಮುಹಮ್ಮದ್ ಷಾ (1656ರಲ್ಲಿ) ನಿರ್ಮಿಸಿದ ಅತ್ಯುತ್ತಮ ಸ್ಮಾರಕ ಗೋಲ್ ಗುಂಬಜ್ ವಿಶ್ವವಿಖ್ಯಾತವಾಗಿದೆ. ಇದೆ ಪ್ರಕಾರದ ಇಂಡೋ-ಇಸ್ಲಾಮಿಕ್‌ ಶೈಲಿಯ ಕೆಲವು ಕಟ್ಟಡಗಳು  ಸರಳವಾದ ಘನ ಸಭಾಂಗಣ ವಾಸ್ತುಶಿಲ್ಪದೊಂದಿಗೆ ನಿರ್ಮಾಣಗೊಂಡಿವೆ. ವಿಶಾಲ ಕೋನಗಳು, ಅಗಾಧವಾದ ಗುಮ್ಮಟದಿಂದ ಆವೃತವಾಗಿವೆ, ಪ್ರತಿ ಕೋನದಲ್ಲಿ ಬಹುಮಹಡಿ ಅಷ್ಟಭುಜಾಕೃತಿಯ ಗುಮ್ಮಟ ಗೋಪುರಕ್ಕೆ ಬಾಹ್ಯ ಸಂಪರ್ಕ, ಪಾಗಾರಗಳಿಗೆ ಕುಂಬಿಗಳಿಂದ ಅಲಂಕಾರ, ಗೋಡೆಗಳನ್ನು ಬೃಹತ್ ಮತ್ತು ಆಳವಾಗಿ ಘೋಚರಿಸುವ ಛಾವಣಿ ಮತ್ತ ಗೋಡೆಯ ಮೂಲೆಯನ್ನು ಕಾರ್ನಿಸ್‌ನಿಂದ ಅಲಂಕರಿಸಲಾಗಿರುತ್ತದೆ.

ಬೃಹತ್‌ ಗುಮ್ಮಟ ಹೊಂದಿರುವ ದೊಡ್ಡ ಆಯಾಮದ ಒಂದೇ ಕಮಾನು ಸಭಾಂಗಣದ ನಿರ್ಮಾಣವು ಅಂದಿನ ಅಭಿಯಂತರರ ಕೌಶಲ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಅಲ್ಲದೆ, 3.3 ಮೀಟರ್ ಅಗಲದ ಓವರ್‌ಹ್ಯಾಂಗಿಂಗ್ ವಿಸ್ಪರಿಂಗ್ ಗ್ಯಾಲರಿಯು ಗುಮ್ಮಟದ ಪ್ರಾರಂಭದ ಸ್ಥಳದಿಂದ ಮತ್ತು ಸುತ್ತಲೂ ಹರಡಿರುವುದರಿಂದ ಸ್ವತಃ ರಚನಾತ್ಮಕ ಕಲೆ ಮತ್ತು ಪ್ರತಿಧ್ವನಿ ವ್ಯವಸ್ಥೆ ಅದ್ಭುತವಾಗಿದೆ.

 

ಆಧುನಿಕ ವಾಸ್ತುಶಿಲ್ಪ

ಯುರೋಪಿಯನ್ನರ ಆಗಮನದೊಂದಿಗೆ ದೇಶದ ವಾಸ್ತುಶಿಲ್ಪದಲ್ಲಿ ಬದಲಾವಣೆ ಕಂಡುಬಂದಿತು. ವಿಶೇಷವಾಗಿ ಚರ್ಚುಗಳು ಮತ್ತು ಸಾರ್ವಜನಿಕ ಕಟ್ಟಡಗಳ ನಿರ್ಮಾಣದಲ್ಲಿ ಈ ಬದಲಾವಣೆಯನ್ನು ಕಾಣಬಹುದಾಗಿದೆ. ಪಶ್ಚಿಮ ಕರಾವಳಿಗೆ ಆಗಮಿಸಿದ್ದ ಪೋರ್ಚುಗೀಸರು ತಮ್ಮ ಕಾರ್ಖಾನೆಗಳನ್ನು ಮಂಗಳೂರು ಮತ್ತು ಹೊನ್ನಾವರ ಮುಂತಾದ ಸ್ಥಳಗಳಲ್ಲಿ ಹೊಂದಿದ್ದರು. ಈ ಸ್ಥಳಗಳಲ್ಲಿ ಅವರು ಗ್ರೀಕೋ-ರೋಮನ್ ಮಾದರಿಗಳನ್ನು ಅನುಸರಿಸಿ ಯುರೋಪಿಯನ್ ನವೋದಯ ಶೈಲಿಯಲ್ಲಿ ಚರ್ಚುಗಳನ್ನು ನಿರ್ಮಿಸಿದರು.

ನಂತರ, ಬಾಸೆಲ್ ಮಿಷನ್‌ನ ಆಗಮನವಾಯಿತು. ಇವರು ಕೆಂಪು ಹೆಂಚುಗಳನ್ನು ಪರಿಚಯಿಸಿದ್ದರಿಂದ ಪಶ್ಚಿಮ ಕರಾವಳಿಯಲ್ಲಿರುವ ಕಲ್ಲಿನ ಕಟ್ಟಡಗಳನ್ನು ಹೋಲುವ ಎತ್ತರದ ಗೇಬಲ್ದ್‌ ಛಾವಣಿಗಳು ಸಾಮಾನ್ಯವಾದವು. ಈ ಸಂದರ್ಭದಲ್ಲಿ ಕೆಲವು ಮಾತ್ರ ಸಾರ್ವಜನಿಕ ಕಟ್ಟಡಗಳು ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿದ್ದವು, ಆದರೆ ಬಹುತೇಕ ಕಟ್ಟಡಗಳು ಯುರೋಪಿಯನ್ ನವೋದಯ ದಿನಗಳ ಕಾಲದಲ್ಲಿನ ಗ್ರೀಕೋ-ರೋಮನ್ ಕಟ್ಟಡಗಳ ಶೈಲಿಯನ್ನು ಹೊಂದಿದ್ದವು.

ಸಿಮೆಂಟ್ ಬಳಕೆ ಮತ್ತು ಆರ್‌ಸಿಸಿಯ ಪರಿಚಯವು 20ನೇ ಶತಮಾನದಲ್ಲಿ ವಾಸ್ತುಶಿಲ್ಪ ತಂತ್ರಗಳಲ್ಲಿ ಅಪಾರ ಬದಲಾವಣೆಗೆ ಕಾರಣವಾಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಟ್ಟಡ, ಬೆಂಗಳೂರಿನ ವಿಧಾನ ಸೌಧದಂತಹ ಅನೇಕ ಆಧುನಿಕ ಕಟ್ಟಡಗಳಲ್ಲಿ ಆರ್‌.ಸಿ.ಸಿ. ಕಾಂಕ್ರೀಟ್‌ ಬಳಕೆಮಾಡಲಾಗಿರುವುದನ್ನು ಇಲ್ಲಿ ಗಮನಿಸಬಹುದು.

ಕರ್ನಾಟಕದ ಸ್ಮರಣೀಯ ಆಧುನಿಕ ಕಟ್ಟಡಗಳಲ್ಲಿ, ವಿಧಾನ ಸೌಧವು ನಮ್ಮ ಕಾಲದ ಗಮನಾರ್ಹ ನಿರ್ಮಾಣವಾಗಿದೆ. ಇದು ಭಾರತೀಯ ಸಾಂಪ್ರದಾಯಿಕ ವೈಶಿಷ್ಟ್ಯಗಳನ್ನು ಹೊಂದಿರುವ ಕಟ್ಟಡವಾಗಿದೆ. ಇದು ವಿಶಾಲವಾದ ಮೆಟ್ಟಿಲುಗಳೊಂದಿಗೆ ಭವ್ಯವಾದ ಪ್ರವೇಶ ಮುಖಮಂಟಪವನ್ನು ಹೊಂದಿದೆ. ಇದರ ಬೃಹತ್ ಗುಮ್ಮಟ, ಎತ್ತರದ ಸಿಲಿಂಡರಾಕಾರದ ಕಂಬಗಳು ಮತ್ತು ಗೋಡೆಗಳನ್ನು ಸಿಮೆಂಟ್‌ನಲ್ಲಿ ಸಿಂಗರಿಸಲಾಗಿದ್ದು, ಶೀಲೆಯಲ್ಲಿ ಮೂಡಿದ ಮಹಾಕಾವ್ಯದಂತಿದೆ. ಇದರ ಒಳಾಂಗಣದಲ್ಲೂ ಉತ್ತಮ ಮರಗೆಲಸವನ್ನು ಮಾಡಲಾಗಿದೆ.

 

 

ಕರ್ನಾಟದಲ್ಲಿ ಪ್ರದರ್ಶನ ಕಲೆಗಳು

ಕರ್ನಾಟಕದಲ್ಲಿ ಸಂಗೀತ

ಭಾರತೀಯ ಶಾಸ್ತ್ರೀಯ ಸಂಗೀತವು, ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ ಎಂಬ ಎರಡು ಪ್ರಕಾರಗಳನ್ನು ಹೊಂದಿದೆ. ಕುತೂಹಲಕಾರಿ ಅಂಶವೆಂದರೆ ಇವೆರಡೂ ಪ್ರಕಾರಗಳು ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವುದು. ತುಂಗಭದ್ರಾ ನದಿಯು ರಾಜ್ಯದಲ್ಲಿ ಹೆಚ್ಚು ಕಡಿಮೆ ಇವೆರಡು (ಪ್ರಕಾರಗಳ) ಗಡಿಯನ್ನು ವಿಭಜಿಸುತ್ತದೆ. ‘ಕರ್ನಾಟಕ ಎಂಬ ಪದ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಪ್ರಚಲಿತವಿರುವ ಸಂಗೀತ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಸಂಗೀತ ವಿಕಾಸವಾಗುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ.

ಸಂಗೀತವು, ಸಾಹಿತ್ಯ ಹಾಗೂ ಇತರೆ ಸೃಜನಶೀಲ ಕಲೆಗಳಂತೆ ಕರ್ನಾಟಕದಲ್ಲಿ ಪ್ರಾಚೀನಕಾಲದಿಂದಲೂ ಕೃಷಿಗೊಳ್ಳುತ್ತ ಬಂದಿದೆ. ಅದು ಇಲ್ಲಿನ ಜನರ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಅವಿಭಾಜ್ಯ ಭಾಗವಾಗಿ ಬಂದಿದೆ. ಸಂಗೀತ ಪಠ್ಯಗಳು ಸಾಮಾನ್ಯವಾಗಿ ಪ್ರಾಚೀನ ಸಂಗೀತ ಸಿದ್ಧಾಂತಕಾರರನ್ನು ಹೆಸರಿಸುತ್ತವೆಯೇ ವಿನಃ ಸಂಗೀತದ ಪರಿಕಲ್ಪನೆಗೆ ಒಂದು ಸುಸ್ವರೂಪ ಕೊಟ್ಟ ಹಾಡುಗಾರರ ಹೆಸರನ್ನು ಹೇಳುವುದಿಲ್ಲ. ಭರತನ ನಾಟ್ಯ ಶಾಸ್ತ್ರವು ಬಹುಶಃ ಸಂಗೀತ ಶಾಸ್ತ್ರ ಕುರಿತ ಅತ್ಯಂತ ಪ್ರಾಚೀನ ಗ್ರಂಥವೆನ್ನಬಹುದಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಅದು ಜನಬಳಕೆಯಲ್ಲಿದ್ದಂತೆ ತೋರುತ್ತದೆ. ಈ ಪೈಕಿ ಮತಂಗನ ‘ಬೃಹದ್ದೇಶಿ ಗ್ರಂಥವು ಬಹಳ ಗಮನಾರ್ಹ ಕೃತಿಯಾಗಿ ಕಾಣಬರುತ್ತದೆ. ಈ ಗ್ರಂಥದಲ್ಲಿ ಸಂಗೀತ ಶಾಸ್ತ್ರದ ವಿಶಾಲ ವೈಜ್ಞಾನಿಕ ವಿವರಣೆ ಇದೆ. ಆ ಕಾಲದ ಪ್ರಚಲಿತ ಸ್ವರವಿನ್ಯಾಸಗಳಿಗೆ ಮೊಟ್ಟ ಮೊದಲಿಗೆ ‘ರಾಗ ಎಂಬ ಶಬ್ದವನ್ನು ಬಳಸಿದ್ದಾನೆ. ಬಹುಶಃ ಇಂದಿನ ಸಂಗೀತದ ರಾಗ ಪದ್ಧತಿಗೆ ಇದು ಆಧಾರವಾಗಿರುವಂತಿದೆ. ದೇವಗಿರಿಯ ಯಾದವ (ಸೇವುಣ) ದೊರೆಗಳ ಆಶ್ರಿತನಾಗಿದ್ದ ಶಾಙ್ಗದೇವನು ತನ್ನ ಕೃತಿ ಸಂಗೀತರತ್ನಾಕರದಲ್ಲಿ ೨೬ ರಾಗಗಳ ಕುರಿತು ಹೇಳಿದ್ದಾನೆ. ಸುಮಾರು ೧೧ ಮತ್ತು ೧೭ ನೆಯ ಶತಮಾನಗಳಲ್ಲಿ ೩೨ ರಾಗಗಳು ಮಾತ್ರ ಚಾಲ್ತಿಯಲ್ಲಿದ್ದುವು ಎಂಬ ಅಂಶ ಬಸವಣ್ಣನ ವಚನದಿಂದ ವಿದಿತವಾಗುತ್ತದೆ. ಕ್ರಿ.ಶ. ೧೬೬೦ರ ವೆಂಕಟಮುಖಿಯು ೭೨ ಮೇಳ ಕರ್ತ ರಾಗಗಳನ್ನು ಸೂತ್ರೀಕರಿಸಿ ಸ್ವರ ವಿನ್ಯಾಸಗೊಳಿಸಿ ರಾಗಗಳ ವರ್ಗೀಕರಣ  ಕಾರ್ಯವನ್ನು ಪೂರ್ಣಗೊಳಿಸಿದ್ದು ಕಂಡುಬರುತ್ತದೆ.

ಕರ್ನಾಟಕದ ಗ್ರಂಥಕರ್ತರಿಂದ ಬಹುಸಂಖ್ಯೆಯಲ್ಲಿ ಸಂಗೀತ ಮತ್ತು ನೃತ್ಯಗಳ ಬಗ್ಗೆ ಮೀಮಾಂಸೆ ಗ್ರಂಥಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ‘ರಾಜಮಾನಸೋಲ್ಲಾಸ ಎಂದು  ಕರೆಯಲ್ಪಡುವ ‘ಅಭಿಲಾಷಿತಾರ್ಥ ಚಿಂತಾಮಣಿ, ಹರಿಪಾಲನ ಭಾರತಭಾಷ್ಯ, ಸಂಗೀತ ಸುಧಾಕರ, ಸಂಗೀತ ಚೂಡಾಮಣಿ, ವಿದ್ಯಾರಣ್ಯರ ‘ಸಂಗೀತಸಾರ, ‘ಭಾರತಸಾರ ಸಂಗ್ರಹ, ನಿಜಗುಣ ಶಿವಯೋಗಿಗಳ ವಿವೇಕಚಿಂತಾಮಣಿ, ಭಂಡಾರು ಲಕ್ಷ್ಮೀನಾರಾಯಣನ ಸಂಗೀತ ಸೂರ್ಯೋದಯ, ಗೋಪತಿಪ್ಪನ ತಾಳದೀಪಿಕಾ, ರಾಮಾಮಾತ್ಯನ ಸ್ವರಮೇಳ ಕಳಾನಿಧಿ, ಗೋವಿಂದ ದೀಕ್ಷಿತನ ಸಂಗೀತ ಸುಧಾ, ವೆಂಕಟಮುಖಿಯ ಚತುರ್ದಂಡಿ ಪ್ರಕಾಶಿಕೆ, ಪುಂಡರೀಕ ವಿಠಲ ವಿರಚಿತ ಷಡ್ರಾಗ ಚಂದ್ರೋದಯ,  ರಾಗ ಮಂಜರಿ, ರಾಗ ಮಾಲ ಮತ್ತು ನರ್ತನ ನಿರ್ಣಯ, ಇಮ್ಮಡಿ ಬಸವಪ್ಪ ನಾಯಕನ ಶಿವತತ್ವ ರತ್ನಾಕರ, ೨೦ನೇ ಶತಮಾನದ  ದಿ. ಹುಲಗೂರು ಕೃಷ್ಣಚಾರ್ಯರ ಶ್ರುತಿ ಸಿದ್ಧಾಂತ ಹಾಗೂ ಮೈಸೂರಿನ ಡಾ. ರಾ. ಸತ್ಯನಾರಾಯಣರ ನಿಶ್ಯಂಕ ಹೃದಯ ಮುಂತಾದವು ಮುಖ್ಯ ಕೃತಿಗಳಾಗಿವೆ. ಕರ್ನಾಟಕದಲ್ಲಿ ವೈವಿಧ್ಯಮಯ ವಾದ್ಯಗಳು ಬಳಕೆಯಲ್ಲಿದ್ದವು. ಕನ್ನಡ ಕವಿಗಳಿಗೆ ತಂತಿವಾದ್ಯ, ಗಾಳಿವಾದ್ಯ ತಾಳವಾದ್ಯ (ತಾಡನ) ಮತ್ತು ಘನವಾದ್ಯಗಳೆಂಬ ನಾಲ್ಕು ಬಗೆಯ ಶಾಸ್ತ್ರೀಯ ವಾದ್ಯ ಪ್ರಕಾರಗಳ ಸಂಪೂರ್ಣ ತಿಳಿವಳಿಕೆ ಇತ್ತು. ಇಂದು ರೂಢಿಯಲ್ಲಿಲ್ಲದ ಅನೇಕ ವಾದ್ಯೋಪಕರಣಗಳ ಪರಿಚಯವೂ ಅವರಿಗಿದ್ದುದು ಆಶ್ಚರ್ಯಕರ.

ತಂತಿವಾದ್ಯಗಳ ಪೈಕಿ ಕಿನ್ನರಿ, ವೆಲ್ಲಕಿ, ವಿಪಂಚಿ, ರಾವಣಹಸ್ತ, ದಂಡಿಕ, ತ್ರಿಸರಿ, ಜಂತ್ರ, ಸ್ವರಮಂಡಲ, ಮತ್ತು ಪರಿವಾದಿನಿ ಮುಂತಾದವು ಗಮನಾರ್ಹ. ಶಂಖ, ಶೃಂಗ, ತಿತ್ತಿರ, ಕಹಳೆ, ವಂಶ, ಬೊಂಬುಳಿ ಇತ್ಯಾದಿಗಳು ಗಾಳಿವಾದ್ಯಗಳಾಗಿವೆ. ಅಧಿಕ ಸಂಖ್ಯೆಯಲ್ಲಿರುವ ತಾಳ (ತಾಡನ) ವಾದ್ಯಗಳ ಪೈಕಿ, ಮುಖ್ಯವಾದ ತಾಳ (ತಾಡ) ಕರಡಿ, ಮೃದಂಗ, ತಬಲ, ತಮಟೆ, ಢಕ್ಕೆ, ಪಟಹ, ದುಂದುಭಿ, ಪಣವ, ಭೇರಿ, ಡಿಂಡಿಮ, ತ್ರಿವಳಿ, ನಿಸ್ಸಳ, ಢಮರು, ಚಂಬಕ, ದಂಡೆ, ಡೊಳ್ಳು, ಡೋಲು ಮತ್ತು ರುಂಜಗಳನ್ನು ಮುಖ್ಯವಾಗಿ ಹೆಸರಿಸಲಾಗುತ್ತದೆ. ಘನವಾದ್ಯಗಳಾದ ಘಂಟೆ, ಜಯಗಂಟೆ ಕಿಂಕಿಣಿ, ಝಲ್ಲರಿ, ತಾಳ ಮತ್ತು ಕಂಸಾಳೆ ಮುಂತಾದವು ಕಂಡುಬರುತ್ತವೆ. ಪಾಲ್ಕುರಿಕೆ ಸೋಮನಾಥನು ೩೨ ಬಗೆಯ ವೀಣೆ ಮತ್ತು ೧೮ ಬಗೆಯ ಕೊಳಲುಗಳನ್ನು ಹೆಸರಿಸಿದ್ದಾನೆ.

ಖಂಡ, ಶುಕಸಾರಿಕ, ತ್ರಿಪದಿ, ಚತುಷ್ಪದಿ, ಷಟ್ಪದಿ, ಧವಳ, ಸುಳಾದಿ, ಪದ, ವಚನ, ಕೀರ್ತನ, ತತ್ವ, ಉಗಾಭೋಗಗಳು ಪದ್ಯ ರಚನೆಯ ವಿಧಗಳಾಗಿವೆ. ಕರ್ನಾಟಕದಲ್ಲಿ ಹಿಂದಿನಿಂದಲೂ ಜನಪ್ರಿಯವಾಗಿದ್ದು ಇಂದಿಗೂ ಪ್ರಸ್ತುತವೆನಿಸಿರುವ ರಚನೆಗಳನ್ನು ಹಲವಾರು ಸಂಗೀತ ರಚನಕಾರರು ರಚಿಸಿದ್ದಾರೆ. ಅಂತಹವರಲ್ಲಿ, ಸಕಲೇಶ ಮಾದರಸ, ಬಸವಣ್ಣ, ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಬಾಲಲೀಲಾ ಮಹಂತ ಶಿವಯೋಗಿ, ನಾಗಭೂಷಣ, ಘನಮತಾಚಾರ್ಯ, ಮಡಿವಾಳಪ್ಪ ಕಡಕೊಳ, ನಂಜುಂಡ ಶಿವಯೋಗಿ, ಕರಿಬಸವಸ್ವಾಮಿ ಹಾಗೂ ಸರ್ಪಭೂಷಣ ಶಿವಯೋಗಿ ಮುಂತಾದವರು ಪ್ರಮುಖರು. ಮಧ್ವಾಚಾರ್ಯರ ಶಿಷ್ಯರಾದ ನರಹರಿ ತೀರ್ಥರು ಹರಿದಾಸ ಕೂಟವನ್ನು ಸ್ಥಾಪಿಸಿದರೆನ್ನಲಾಗಿದೆ. ಶ್ರೀಪಾದರಾಯರನ್ನು ಹರಿದಾಸ ಪಿತಾಮಹರೆನ್ನುತ್ತಾರೆ. ಹರಿದಾಸರು ಭಗವಾನ್ ವಿ?ವನ್ನು ಸ್ತುತಿಸುವ ಗೀತೆಗಳನ್ನು ಕನ್ನಡದಲ್ಲಿ ರಚಿಸಿರುವರು. ವ್ಯಾಸರಾಯ, ವಾದಿರಾಜ, ಪುರಂದರದಾಸ, ಕನಕದಾಸ, ಮೊದಲಾದವರು ಕೀರ್ತನೆಗಳನ್ನು ರಚಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಕೂಡ ಸಮರ್ಥ ಗೀತ ರಚನಕಾರರಾಗಿದ್ದರು. ಜಯಚಾಮರಾಜ ಒಡೆಯರ್ ಅವರು ಕರ್ನಾಟಕ ಸಂಗೀತ ಪದ್ದತಿಯಲ್ಲಿ ವಿವಿಧ ಭಾಷೆಗಳಲ್ಲಿ ೯೪ ಕೃತಿಗಳನ್ನು ರಚಿಸಿದ್ದಾರೆ.

ಕರ್ನಾಟಕದ ಸಂಗೀತಶಾಸ್ತ್ರದ ಚರಿತ್ರೆಯಲ್ಲಿ ಪುರಂದರದಾಸರು ತ್ರಿವಿಕ್ರಮನಂತೆ ಬೆಳೆದವರು. ಅವರು ರಚಿಸಿದ ‘ಪಿಳ್ಳಾರಿಗೀತೆಗಳು ಕರ್ನಾಟಕ ಸಂಗೀತವನ್ನು ಕಲಿಯುವವರಿಗೆ ಇಂದಿಗೂ ಆಧಾರಸ್ತಂಭದಂತಿವೆ. ಪುರಂದರದಾಸರನ್ನು ಕರ್ನಾಟಕ ಸಂಗೀತ ಪಿತಾಮಹರೆಂದು ಗೌರವಿಸಲಾಗಿದೆ. ಅವರು ಕರ್ನಾಟಕ ಸಂಗೀತ ಪ್ರವಾಹಕ್ಕೆ ಹೊಸ ತಿರುವು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಜನಪ್ರಿಯ ಹಾಗೂ ಶಾಸ್ತ್ರೀಯ ಸಂಗೀತ ರಚನೆಯಲ್ಲಿ ಸ್ಪರ್ಷವಾದ ಭಿನ್ನತೆ ಕಂಡು ಬಂದಿತು. ಮೈಸೂರು ಆಸ್ಥಾನ ವಿದ್ವಾಂಸರಾದ ಮೈಸೂರು ಸದಾಶಿವರಾಯರು, ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ, ಮುಂತಾದ ಪ್ರಖ್ಯಾತರಿಗೆ ಗುರುವಾಗಿದ್ದರು. ಮೈಸೂರು ಸದಾಶಿವರಾವ್ ಸುಬ್ಬಣ್ಣ, ಶೇಷಣ್ಣ, ಸಾಂಬಯ್ಯ, ಮುತ್ತಯ್ಯ ಭಾಗವತರ್, ಮೈಸೂರು ಕೆ.ವಾಸುದೇವಾಚಾರ್ಯ (ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ವಾಗ್ಗೇಯಕಾರರು), ದೇವೋತ್ತಮ ಜೋಯಿಸ್, ಕರಿಗಿರಿರಾವ್, ಬಿಡಾರಂ ಕೃಷ್ಣಪ್ಪ, ಮೈಸೂರು ಟಿ.ಚೌಡಯ್ಯ ಜಯಚಾಮರಾಜ ಒಡೆಯರ್, ಅಳಿಯ ಲಿಂಗರಾಜು, ವೀಣೆ ಕೃಷ್ಣಚಾರ್ಯ ರುದ್ರಪಟ್ಟಣಂ ವೆಂಕಟರಮಣಯ್ಯ, ತಿರುಪ್ಪಾಂಡಾಳ್ ಪಟ್ಟಾಭಿರಾಮಯ್ಯ, ಕೋಲಾರ ಚಂದ್ರಶೇಖರ ಶಾಸ್ತ್ರಿ, ಬಳ್ಳಾರಿ ರಾಜಾರಾವ್ ಮತ್ತಿತರರು ತಮ್ಮ ವಾಗ್ಗೇಯ ಕೃತಿಗಳ ಶ್ರೀಮಂತ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಸಂಗೀತ ವಿದೂಷಿಯರ ಪೈಕಿ, ಬೆಂಗಳೂರು ನಾಗರತ್ನಮ್ಮನವರು ಶ್ರೀ ತ್ಯಾಗರಾಜರ ಸಮಾಧಿಯನ್ನು ತಿರುವೈಯಾರಿನಲ್ಲಿ ಜೀರ್ಣೋದ್ಧಾರ ಮಾಡಿದರು.

ಮೈಸೂರು ಒಡೆಯರ ಆಳ್ವಿಕೆಯ ಕಾಲವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಹೇಳಬಹುದು. ಮೈಸೂರು  ಅರಸರು ಸ್ಥಳೀಯ ಸಂಗೀತಗಾರರಿಗಲ್ಲದೇ ಇತರೆ ಪ್ರದೇಶದ ಸಂಗೀತಗಾರರಿಗೂ ಆಶ್ರಯದಾತರಾಗಿದ್ದರು. ವೀಣೆ ಭಕ್ಷಿ ವೆಂಕಟಸುಬ್ಬಯ್ಯ, ಶಿವರಾಮಯ್ಯ, ಪಲ್ಲವಿ ರಾಮಲಿಂಗಯ್ಯ ಮತ್ತು ಲಕ್ಷ್ಮೀನಾರಾಯಣ ಅವರುಗಳು ರಾಜ್ಯದ ಪ್ರಮುಖ ಸಂಗೀತಗಾರರೆನಿಸಿದ್ದು ರಾಜಾಶ್ರಯವನ್ನು ಪಡೆದವರಾಗಿದ್ದರು. ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದು ಅಥವಾ ಬೇರೆಡೆ ವಾಸವಿದ್ದವರೂ ಸೇರಿದಂತೆ ಉಳಿದ ಪ್ರಸಿದ್ಧ ಸಂಗೀತಗಾರರೆಂದರೆ, ಸದಾಶಿವರಾಯರು, ಲಾಲ್ಗುಡಿ ರಾಮಯ್ಯರ್, ಮೂಗೂರು ಸುಬ್ಬಣ್ಣ, ಕೃಷ್ಣಯ್ಯ, ಕರಿಗಿರಿರಾಯರು, ಭೈರವಿ ಕೆಂಪೇಗೌಡ, ರುದ್ರಪ್ಪ, ಜಂಝ ಮಾರುತಮ್ ಸುಬ್ಬಯ್ಯ, ಲಾಲ್ಗುಡಿ ಗುರುಸ್ವಾಮಿ ಐಯ್ಯರ್, ಬಿಡಾರಂ ಕೃಷ್ಣಪ್ಪ, ಕೆ.ವಾಸುದೇವಚಾರ್ಯ, ತಿರುವೈಯ್ಯಾರು ಸುಬ್ರಮಣ್ಯ ಅಯ್ಯರ್, ಕೋಲಾರ ನಾಗರತ್ನಮ್ಮ, ಷಟ್ಕಾಲ ನರಸಯ್ಯ, ಚಿಕ್ಕರಾಮರಾವ್, ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್, ಚಿಂತಲಪಲ್ಲಿ ವೆಂಕಟರಾವ್, ಬಿ.ದೇವೇಂದ್ರಪ್ಪ, ಟಿ.ಚೌಡಯ್ಯ ಮುಂತಾದವರು.

ಹಿಂದೂಸ್ಥಾನಿ ಸಂಗೀತ: ಮಾಗಡಿ ಬಳಿಯ ಸಾತನೂರಿನ ಪುಂಡರೀಕ ವಿಠಲನು (ಕ್ರಿ.ಶ.೧೫೬೨-೧೫೯೯) ಕರ್ನಾಟಕ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತಗಳೆರಡರಲ್ಲೂ ಪ್ರವೀಣನಾಗಿದ್ದನು. ಮೈಸೂರು ಅರಸರು ಪ್ರಮುಖವಾಗಿ  ಕರ್ನಾಟಕ ಸಂಗೀತಕ್ಕೆ ಆಶ್ರಯದಾತರಾಗಿದ್ದರೂ, ಹಿಂದೂಸ್ಥಾನಿ ಸಂಗೀತಕ್ಕೂ ಉತ್ತೇಜನ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ರಾಮದುರ್ಗ ಮತ್ತು ಜಮಖಂಡಿಯಂಥ ಸಣ್ಣ ಸಂಸ್ಥಾನಿಕರು ಹಿಂದೂಸ್ಥಾನಿ ಸಂಗೀತಕ್ಕೆ ಆಶ್ರಯದಾತರಾಗಿದ್ದರು. ಅವರ ದರ್ಬಾರಿನಲ್ಲಿ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರಿದ್ದರು. ಬಾಲಕೃಷ್ಣ ರಾಸ್ತೆ, ಗಣಪತ್‌ರಾವ್ ರಾಸ್ತೆ, ನಂದೋಪಂತ್ ಜೋಗಳೇಕರ್, ಬಲವಂತರಾವ್ ವೈದ್ಯ, ದಾದಾಖಾರೆ, ಅಂತುಬುವಾ ಆಪ್ಟೆ, ಬಲವಂತರಾವ್ ಕಾಟ್ಕರ್, ಅಲ್ಲಾದಿಯಾ ಖಾನ್, ಅಬ್ದುಲ್ ಕರೀಮ್ ಖಾನ್, ರಹಮತ್ ಖಾನ್, ರಾಮಕೃಷಷ್ಣ ಬುವಾ ವಜೆ, ಶಿವರಾಂ ಬುವಾ, ಮುಂಜೀಖಾನ್, ವಿಷ್ಣುಪಂತ್ ಛತ್ರೆ, ನೀಲಕಂಠ ಬುವಾ, ಶಂಕರ ದೀಕ್ಷಿತ್ ಜಂತಲಿ, ಸಿದ್ಧರಾಮ ಜಂಬಲದಿನ್ನಿ, ದತ್ತೋಪಂತ್ ಪಾಠಕ್, ಪಂಚಾಕ್ಷರಿ ಗವಾಯಿ, ಹನುಮಂತರಾವ್ ವಾಲ್ವೇಕರ್, ವಿಠಲರಾವ್ ಕೋರೆಗಾಂವ್ಕರ್ ಮತ್ತು ರಾಮಬಾಹು ಕುಂದಗೋಳ್ಕರ್ (ಸವಾಯಿ ಗಂಧರ್ವ) ಮುಂತಾದ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಗಾರರು ಉತ್ತರ ಕರ್ನಾಟಕದಲ್ಲಿದ್ದು ತಮ್ಮ ಅಸಾಮಾನ್ಯ ಸಂಗೀತ ಪ್ರಭೆಯಿಂದ ತಾವಿದ್ದ ಪ್ರದೇಶಕ್ಕೆ ಶೋಭೆಯನ್ನು ಹಾಗೂ ಧನ್ಯತೆಯನ್ನು ತಂದುಕೊಟ್ಟರು.

ಕರ್ನಾಟಕದಿಂದ ಹಿಂದೂಸ್ಥಾನಿ ಸಂಗೀತದ ದಿಗ್ಗಜರೆನಿಸಿದ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ, ದೇವೇಂದ್ರ ಮುರಡೇಶ್ವರ್, ವಿಷ್ಣುದಾಸ್ ಶಿರಾಲಿ, ಪುಟ್ಟರಾಜ ಗವಾಯಿ, ಬಸವರಾಜ ಮನ್ಸೂರ್, ಕೃಷ್ಣಬಾಯಿ ರಾಮದುರ್ಗ, ಫಕೀರಪ್ಪ ಗವಾಯಿ, ಪಂ. ಶೇಷಾದ್ರಿಗವಾಯಿ, ಗುರುಬಸವಯ್ಯ ಹಿರೇಮಠ, ವಿ.ವಿ.ಉತ್ತರಕರ್, ಡಿ.ಗರೂಡ, ಎನ್.ಜಿ. ಮಜುಮ್‌ದಾರ್, ಆರ್.ಎಸ್.ದೇಸಾಯಿ, ಅರ್ಜುನ್‌ಸಾ ನಾಕೋಡ್, ಶೇಷಗಿರಿ ಹಾನಗಲ್, ಲಕ್ಷ್ಮೀ ಜಿ.ಭಾವೆ, ಮಾಣಿಕ್‌ರಾವ್ ರಾಯಚೂರ್‌ಕರ್, ಸಂಗಮೇಶ್ವರ್ ಗುರವ ಮತ್ತು ಶ್ಯಾಮಲಾ ಜಿ. ಭಾವೆ ಪ್ರಖ್ಯಾತರಾಗಿದ್ದಾರೆ. ಕರ್ನಾಟಕ ಸಂಗೀತ ಪರಂಪರೆಯನ್ನು ಅನೇಕ ಗಾಯಕರು ಮತ್ತು ವಾದ್ಯ ಸಂಗೀತಗಾರರು ತಮ್ಮ ಪ್ರತಿಭಾ ಶಕ್ತಿಯಿಂದ ಶ್ರೀಮಂತಗೊಳಿಸಿದ್ದು, ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನೂ ಗಳಿಸಿದ್ದಾರೆ. ಹಾಡುಗಾರಿಕೆಯಲ್ಲಿ ಚಿಂತನಪಲ್ಲಿ ರಾಮಚಂದ್ರರಾವ್, ಚನ್ನಕೇಶವಯ್ಯ, ಪದ್ಮನಾಭರಾವ್, ಟಿ.ಎನ್.ಪುಟ್ಟಸ್ವಾಮಯ್ಯ, ಆರ್.ಎಸ್.ನಾರಾಯಣಸ್ವಾಮಿ, ಆರ್.ಕೆ.ರಾಮನಾಥನ್, ಆರ್. ಕೆ.ಶ್ರೀಕಂಠನ್, ಕುರೂಡಿ ವೆಂಕಣ್ಣಾಚಾರ್ಯ, ತಿಟ್ಟೆ ಕೃಷ್ಣಯ್ಯಂಗಾರ್, ಎಲ್.ಎಸ್.ನಾರಾಯಣಸ್ವಾಮಿ ಭಾಗವತರ್, ಬಿ.ಎಸ್.ಆರ್. ಐಯ್ಯಂಗಾರ್, ಎ.ಸುಬ್ಬರಾವ್, ಆರ್.ಚಂದ್ರಶೇಖರಯ್ಯ, ಪಲ್ಲವಿ ಚಂದ್ರಪ್ಪ ಎಂ.ಎ. ನರಸಿಂಹಾಚಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ಸಂಧ್ಯಾವಂದನಮ್ ಶ್ರೀನಿವಾಸರಾವ್, ಶ್ರೀನಿವಾಸಯ್ಯಂಗಾರ್, ವಸದಂ ಅಯ್ಯಂಗಾರ್, ಚೊಕ್ಕಮ್ಮ, ನೀಲಮ್ಮ ಕಡಾಂಬಿ, ಚನ್ನಮ್ಮ, ಪಾಪ ಚೂಡಾಮಣಿ ಮುಂತಾದವರು ಬಹಳ ಪ್ರಸಿದ್ಧರು.

ವಾದ್ಯ ಸಂಗೀತಗಾರರ ಪೈಕಿ ವೀಣಾವಾದಕರಾದ ಶ್ರೀಕಂಠ ಅಯ್ಯರ್, ವಿ.ದೊರೆಸ್ವಾಮಿ ಅಯ್ಯಂಗಾರ್, ಬಾಲಕೃಷ್ಣ, ಆರ್.ಎನ್.ದೊರೆಸ್ವಾಮಿ, ಎಂ.ಜೆ.ಶ್ರೀನಿವಾಸ ಐಯ್ಯಂಗಾರ್, ಆರ್.ಕೆ.ಶ್ರೀನಿವಾಸಮೂರ್ತಿ, ಆರ್.ಕೆ.ಸೂರ್ಯನಾರಾಯಣ, ಆರ್.ಎ.ವಿಶ್ವೇಶ್ವರ, ಚೊಕ್ಕಮ್ಮ, ಆರ್.ಅಲಮೇಲು, ಸುಮಾ ಸುಧೀಂದ್ರ, ಹಾಗೂ ರಾಜಲಕ್ಷ್ಮಿ ತಿರುನಾರಾಯಣ ಪ್ರಸಿದ್ಧರು. ಕೊಳಲುವಾದಕರಲ್ಲಿ ಎಂ.ಆರ್.ದೊರೆಸ್ವಾಮಿ, ಬಿ.ಶಂಕರರಾವ್, ವಿ.ದೇಶಿಕಾಚಾರ್, ಎಂ.ಪಿ.ಉಪಾಧ್ಯಾಯ, ರಾಜನಾರಾಯಣ, ಶಶಿಧರ್ ಮತ್ತು ಶಶಾಂಕ (ಬಾಲ ಪ್ರತಿಭೆ), ಹೆಸರುವಾಸಿಯಾಗಿದ್ದಾರೆ. ಪ್ರಸಿದ್ಧ ಪಿಟೀಲು ವಾದಕರಾಗಿ, ಆರ್.ಆರ್.ಕೇಶವಮೂರ್ತಿ, ಅನೂರ್ ರಾಮಕೃಷ್ಣ, ಎಚ್.ವಿ.ಕೃಷ್ಣಮೂರ್ತಿ, ಎ.ವೀರಭದ್ರಯ್ಯ, ಮಹದೇವಪ್ಪ, ಎಂ.ನಾಗರಾಜ್, ಎಂ.ಮಂಜುನಾಥ್, ಶೇಷಗಿರಿರಾವ್, ಎ.ವಿ.ಕೃಷ್ಣಮಾಚಾರ್, ಹೆಚ್.ಕೆ.ವೆಂಕಟರಾಮ್, ತಾತಾಚಾರ್, ಕಾಂಚನ ಸುಬ್ಬರತ್ನಂ, ಎಂ.ಎಸ್.ಸುಬ್ರಹ್ಮಣ್ಯಂ, ಎಂ.ಎಸ್.ಗೋವಿಂದಸ್ವಾಮಿ, ಎಚ್.ಕೆ.ನರಸಿಂಹಮೂರ್ತಿ, ಟಿ.ಜಿ.ತ್ಯಾಗರಾಜನ್, ಎ.ವಿ.ವೆಂಕಟರಾಮಯ್ಯ, ಬಿ.ವಿಶ್ವನಾಥ್ ಮುಂತಾದವರು ಕಂಡುಬರುತ್ತಾರೆ.

ತಾಳವಾದ್ಯಗಾರರಾದ ಎಂ.ಎಸ್.ರಾಮಯ್ಯ, ವಿ.ವಿ.ರಂಗನಾಥನ್, ರಾಮಾಚಾರ್, ಎಂ.ಎಸ್.ಶೇಷಪ್ಪ ಬೆಂಗಳೂರು, ಕೆ.ವೆಂಕಟರಾಮ್, ಎ.ವಿ.ಆನಂದ್, ಟಿ.ಎ.ಎಸ್ ಮಣಿ, ಕೆ.ಎನ್.ಕೃಷ್ಣಮೂರ್ತಿ, ವಿ.ಎಸ್.ರಾಜಗೋಪಾಲ್, ರಾಜಾಚಾರ್, ರಾಜಕೇಸರಿ, ಚಂದ್ರಮೌಳಿ, ಭದ್ರಾಚಾರ್, ಪ್ರವೀಣ್, ಸೋಸಲೆ ಶೇಷಗಿರಿದಾಸ್, ಬಿ.ಜಿ.ಲಕ್ಷ್ಮೀನಾರಾಯಣ, ಸುಕನ್ಯಾ ರಾಮಗೋಪಾಲ್, ದತ್ತಾತ್ರೇಯ ಶರ್ಮ, ಅನಂತಕೃಷ್ಣಶರ್ಮ ಮತ್ತು ಕೆ.ಮುನಿರತ್ನಂ, ರವೀಂದ್ರ ಯಾವಗಲ್ (ತಬಲಾ), ನಾರಣಪ್ಪ (ಮುಖವೀಣೆ), ರಾಮದಾಸಪ್ಪ, ರವಿಕಿರಣ್ (ಗೋಟುವಾದ್ಯ) ಮತ್ತು ಕದ್ರಿಗೋಪಾಲನಾಥ್ (ಸಾಕ್ಸೋಫೋನ್), ನರಸಿಂಹಲು ವಡವಾಟಿ (ಕ್ಲಾರಿಯೋನೆಟ್), ಬಿಂದು ಮಾಧವ್ ಪಾಠಕ್ (ರುದ್ರವೀಣೆ) ಮತ್ತು ರಾಜೀವ್ ತಾರಾನಾಥ್ (ಸರೋದ್) ಮುಂತಾದ ವಾದ್ಯ ಸಂಗೀತಗಾರರು ಜನಪ್ರಿಯರಾಗಿದ್ದಾರೆ.

ಗಮಕ ಕಲೆಯೂ ಒಂದು ಪ್ರಾಚೀನ ಕಲೆ. ಈ ಕಲೆಯಲ್ಲಿ ಹೆಸರು ಮಾಡಿರುವವರೆಂದರೆ, ಜೋಳದರಾಶಿ ದೊಡ್ಡನಗೌಡ, ಎಸ್. ನಾಗೇಶರಾವ್, ಬಿ.ಎಸ್.ಎಸ್.ಕೌಶಿಕ್, ಹೆಚ್. ಕೆ. ರಾಮಸ್ವಾಮಿ, ಗುಂಡುರಾಮಯ್ಯ, ಎಸ್. ವಾಸುದೇವರಾವ್, ಆರ್.ಶಂಕರನಾರಾಯಣ, ಹೊಸಬೆಲೆ ಸೀತಾರಾಮರಾವ್, ಜಿ.ಬಿ.ಗೋಪಿನಾಥರಾವ್, ತಲಕಾಡು ಮಾಯಿಗೌಡ, ಎಂ.ರಾಘವೇಂದ್ರರಾವ್ ಮುಂತಾದವರು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಗಮಕ ಕಲಾ ಪರಿಷತ್ ಸ್ಥಾಪಿತವಾಗಿದ್ದು, ಗಮಕ ಕಲೆಯನ್ನು ಪ್ರೋತ್ಸಾಹಿಸುತ್ತಿದೆ.

ಆಧುನಿಕ ಯುಗದಲ್ಲಿ ನವೋದಯ ಕಾವ್ಯವು ಹೊಸಶೈಲಿ, ಸ್ವರ ಮಾಧುರ್ಯ ಹಾಗೂ ಹೊಸ ಸಂಗೀತ ರೂಪವನ್ನು ರೂಪಿಸಿಕೊಂಡು, ಸುಗಮ ಸಂಗೀತ ಎಂಬ ಪ್ರಕಾರಕ್ಕೆ ಎಡೆಕೊಟ್ಟಿದೆ. ಈ ಪ್ರಕಾರದ ಸಂಗೀತವು ಕರ್ನಾಟಕ ಶಾಸ್ತ್ರೀಯ  ಸಂಗೀತ , ಹಿಂದೂಸ್ಥಾನಿ ಸಂಗೀತ ಮತ್ತು ಪಾಶ್ಚಿಮಾತ್ಯ ಸಂಗೀತದಿಂದ ಪ್ರಭಾವಿತಗೊಂಡಿದೆ. ಪಿ. ಕಾಳಿಂಗರಾವ್ ಅವರು ಈ ಕ್ಷೇತ್ರದ ಮುಂಚೂಣಿ ಸಂಗೀತಗಾರರಾಗಿದ್ದಾರೆ. ಅವರನ್ನನುಸರಿಸಿ ಬೆಳಕಿಗೆ ಬಂದ ಮೈಸೂರು ಅನಂತಸ್ವಾಮಿ ಅವರು ಈ ಸುಗಮ ಸಂಗೀತ ಪ್ರಕಾರವನ್ನು ಬಹು ಜನಪ್ರಿಯ ಗೊಳಿಸಿದರು. ಸಿ. ಅಶ್ವಥ್, ಎಚ್. ಆರ್.ಲೀಲಾವತಿ ಜಯಂತಿದೇವಿ ಹಿರೇಬೆಟ್, ಅನುರಾಧಾ ಧಾರೇಶ್ವರ್, ಶಿವಮೊಗ್ಗ ಸುಬ್ಬಣ್ಣ, ಟಿ.ವಿ. ರಾಜು, ರತ್ನಮಾಲಾ ಪ್ರಕಾಶ್, ಮಾಲತಿಶರ್ಮ, ಕಸ್ತೂರಿ ಶಂಕರ್, ಶ್ಯಾಮಲಾ ಜಿ. ಭಾವೆ, ಬಿ.ಆರ್.ಛಾಯಾ, ಬಿ.ಕೆ.ಸುಮಿತ್ರ, ಶ್ಯಾಮಲಾ ಜಾಗೀರ್‌ದಾರ್, ಯಶವಂತ ಹಳಬಂಡಿ, ಉಷಾ ಗಣೇಶ್, ಪುತ್ತೂರು ನರಸಿಂಹನಾಯಕ್, ಇಂದುವಿಶ್ವನಾಥ್, ಎಚ್.ಕೆ.ನಾರಾಯಣ, ಇ.ಜಿ.ರಾಮನಾಥ್, ವೈ.ಕೆ.ಮುದ್ದುಕೃಷ್ಣ, ದಿ.ರಾಜು ಅನಂತಸ್ವಾಮಿ, ಎಂ.ಡಿ.ಪಲ್ಲವಿ, ಅರ್ಚನ ಉಡುಪ, ಸಂಗೀತ ಕಟ್ಟಿ ಮತ್ತಿತರರು ಸುಗಮ ಸಂಗೀತವನ್ನು ಬಹಳ ಜನಪ್ರಿಯಗೊಳಿಸಿದ್ದಾರೆ.

ವಿದೇಶದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಅಲ್ಲಿ ಸುಗಮ ಸಂಗೀತಕ್ಕೆ ಸೇವೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಟಿ. ನರಸೀಪುರದಲ್ಲಿ ಜನಿಸಿ, ಹಾಲಿ ನ್ಯೂಜೆರ್ಸಿಯಲ್ಲಿರುವ ವಸಂತಾ ಶಶಿ ಅವರು ಕಂಪ್ಯೂಟರ್ ತಾಂತ್ರಿಕ ಶಿಕ್ಷಣ ಪಡೆದಿದ್ದರೂ ಕೂಡಾ, ಸಂಗೀತದತ್ತ ಆಕರ್ಷಣೆ ಹೊಂದಿ, ವಿವಿಧ ಭಾಷೆಗಳಲ್ಲಿ ನೂರಕ್ಕೂ  ಹೆಚ್ಚು ಕಾರ್ಯಕ್ರಮ ನೀಡಿರುತ್ತಾರೆ. ೨೦ಕ್ಕೂ ಹೆಚ್ಚು ಸಿ.ಡಿ. ಗಳನ್ನು ಹೊರತಂದಿರುವುದಲ್ಲದೆ ಸ್ವತಃ ಗೀತರಚನಕಾರರೂ ಕೂಡ. ಅನೇಕ ಸುಗಮ ಸಂಗೀತ ದಿಗ್ಗಜರೊಂದಿಗೆ ಹಾಡಿ, ಗಾನಕೋಗಿಲೆ ಎಂಬ ಬಿರುದು ಸಂಪಾದಿಸಿದ್ದಾರೆ.

ಕರ್ನಾಟಕ ಸರ್ಕಾರವು, ಕರ್ನಾಟಕದಲ್ಲಿ ಸಂಗೀತದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆದಿದೆ. ಸೆಕೆಂಡರಿ ಎಜುಕೇಷನ್ ಬೋರ್ಡ್ (ಮಾಧ್ಯಮಿಕ ಶಿಕ್ಷಣ ಮಂಡಳಿ), ಸಂಗೀತ ಪರೀಕ್ಷೆಗಳನ್ನು ನಡೆಸಿ, ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡುತ್ತಿದೆ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಪದವಿ ಮಟ್ಟದಲ್ಲಿ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ, ಸಂಗೀತ ಶಿಕ್ಷಣ ತರಗತಿಗಳನ್ನು ಹೊಂದಿವೆ. ಸಂಗೀತ ಕಲಿಯಲು ಆಸಕ್ತಿ ಇರುವ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ರಾಜ್ಯ ಸರ್ಕಾರವು ನೀಡುತ್ತದೆ. ಕ್ಯಾಸೆಟ್ ಸಂಗೀತ ಕ್ರಾಂತಿಯು ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ರಾಜ್ಯದ ಮನೆಮನೆಗೆ ತಲುಪಿಸಿ ಜನಪ್ರಿಯಗೊಳಿಸುವಲ್ಲಿ ಮಹತ್ತರ ಕೊಡುಗೆಯನ್ನು ಕೊಟ್ಟಿದೆ. ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಕನ್ನಡ ರಂಗಭೂಮಿಯ ಪಾತ್ರವು ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲ. ವರದಾಚಾರ್, ಮಳವಳ್ಳಿ ಸುಂದರಮ್ಮ, ಅಶ್ವತ್ಥಮ್ಮ, ನಾಗೇಶ್ ರಾವ್, ಸುಬ್ಬಯ್ಯ  ನಾಯ್ಡು, ಗಂಗೂಬಾಯಿ ಗುಳೇದಗುಡ್ಡ, ಸೋನೂಬಾಯಿ, ಸುಭದ್ರಮ್ಮ ಮನ್ಸೂರ್, ವಜ್ರಪ್ಪ, ಬಿ.ಎನ್.ಚಿನ್ನಪ್ಪ, ಸರೋಜಮ್ಮ  ಧುತ್ತರಗಿ, ಹೆಚ್.ಕೆ.ಯೋಗಾನರಸಿಂಹ ಮುಂತಾದ ಕೆಲವು ಕಲಾವಿದರು ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಇವುಗಳ ಜೊತೆಗೆ ರಾಮನವಮಿ, ಗಣೇಶ ಚತುರ್ಥಿ ಮುಂತಾದ ವಾರ್ಷಿಕ ಹಬ್ಬಗಳಲ್ಲದೇ ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಡ ಹಬ್ಬಗಳ ಸಂದರ್ಭದಲ್ಲಿ ಸಂಗೀತೋತ್ಸವಗಳು ನಡೆಯುತ್ತವೆ. ಹುಬ್ಬಳ್ಳಿಯಲ್ಲಿ ಕಲಾ ಉತ್ಸವ, ಕುಂದಗೋಳದಲ್ಲಿ ಸವಾಯಿ ಗಂಧರ್ವ ಉತ್ಸವ ಹಾಗೂ ವಿವಿಧ ಸಂಘಸಂಸ್ಥೆಗಳು ನಡೆಸುವ ವಾರ್ಷಿಕ ಸಂಗೀತೋತ್ಸವಗಳಿಗೆ ಆತಿಥ್ಯ ನೀಡುವುದೇ ಮುಂತಾದ ಕ್ರಮಗಳು ರಾಜ್ಯದಲ್ಲಿ ಸಂಗೀತವು ಜನಪ್ರಿಯಗೊಳ್ಳಲು ಉತ್ತೇಜನಕಾರಿಯಾಗಿವೆ. ಸಂಗೀತ ಕಲಿಯಲು ಆಸಕ್ತಿ ಇರುವ ಯುವಕ-ಯುವತಿಯರಿಗೆ ಅನೇಕ ಸಂಘ-ಸಂಸ್ಥೆಗಳು ನಡೆಸುವ ಸಂಗೀತ ತರಬೇತಿ ಪ್ರಯೋಜನಕಾರಿಯಾಗಿವೆ.

ಶ್ರೀ ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್, (ಅಯ್ಯನಾರ್ ಸಂಗೀತ ಮಹಾವಿದ್ಯಾಲಯ), ವಿಜಯ ಕಾಲೇಜ್ ಆಫ್ ಮ್ಯೂಸಿಕ್, ಗಾನ ಕಲಾಮಂದಿರ, ವಿಜಯ ಕಲಾಮಂದಿರ, ಶ್ರೀ ವೆಂಕಟೇಶ್ವರ ಗಾನನಿಲಯ, ಶ್ರೀ ವಿಜಯ ಸಂಗೀತ ವಿದ್ಯಾಲಯ, ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ , ವಿಜಯ ಫಿಲಂ ಇನ್ಸ್ಟಿಟ್ಯೂಟ್, (ಎಲ್ಲವೂ ಬೆಂಗಳೂರಿನಲ್ಲಿವೆ), ಶ್ರೀ ಪಂಚಾಕ್ಷರಿ ಕೃಪಾಪೋಷಿತ ಸಂಗೀತ ಶಾಲಾ (ಗೂಡೂರು, ವಿಜಯಪುರ), ಶ್ರೀ ರಾಘವೇಂದ್ರ ಸಂಗೀತ ವಿದ್ಯಾಲಯ (ರಾಯಚೂರು), ತ್ಯಾಗರಾಜ ಸಂಗೀತ ವಿದ್ಯಾಲಯ(ರಾಮನಗರ), ಶ್ರೀ ವಾಣಿ ವಿದ್ಯಾ ಸೊಸೈಟಿ (ಶಿವಮೊಗ್ಗ), ಶ್ರೀ ಪಂಚಾಕ್ಷರಿ ಲಲಿತ ಕಲಾ ಮತ್ತು ಸಂಗೀತ ಕಲಾ ಸಂಘ(ವಿಜಯಪುರ) ಲಲಿತ ಕಲಾವೃಂದ ಕಾರ್ಕಳ, ಏಕನಾಥೇಶ್ವರಿ ಸಂಗೀತ ಕಲಾಮಂದಿರ (ಚಿತ್ರದುರ್ಗ) ಇತ್ಯಾದಿ ಸಂಗೀತ ಸಂಸ್ಥೆಗಳು, ಬೆಂಗಳೂರಿನ ಕರ್ನಾಟಕ ಸಂಗೀತ ನಾಟಕ ಅಕಾಡೆಮಿಗೆ ಸಂಯೋಜನೆಗೊಂಡ ಸಂಸ್ಥೆಗಳಾಗಿವೆ. ಇವಲ್ಲದೆ ಬಹಳಷ್ಟು  ಖಾಸಗಿ ಸಂಗೀತ ಸಂಸ್ಥೆಗಳು ರಾಜ್ಯದ ಪಟ್ಟಣಗಳಲ್ಲಿ ಸಂಗೀತ ತರಗತಿಗಳನ್ನು ನಡೆಸುತ್ತಿವೆ.

ಶ್ರೀ ನಿಜಗುಣ-ಪುರಂದರ ಪ್ರಶಸ್ತಿ: ಕನ್ನಡ ನಾಡಿನ ದಾಸಶ್ರೇಷ್ಠರು, ಕೀರ್ತನೆ ಉಗಾಭೋಗಾದಿಗಳ ರಚನಕಾರರೂ ಕರ್ನಾಟಕ ಸಂಗೀತದ ದಿಗ್ಗಜರೂ ಆದ ಪುರಂದರದಾಸ ಹಾಗೂ ಕನಕದಾಸರ ಹೆಸರಿನಲ್ಲಿ, ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆ ೧೯೯೧ರಿಂದ ಕನಕ-ಪುರಂದರ ಪ್ರಶಸ್ತಿ ನೀಡಲಾಗುತ್ತಿತ್ತು. ೨೦೧೦ರಿಂದ ಈ ಪ್ರಶಸ್ತಿಯನ್ನು ನಿಜಗುಣ- ಪುರಂದರ ಪ್ರಶಸ್ತಿಎಂಬುದಾಗಿ ಮರುನಾಮಕರಣ ಮಾಡಲಾಗಿದೆ. ಕರ್ನಾಟಕ, ಹಿಂದೂಸ್ಥಾನಿ ಗಾಯನ ಮತ್ತು ವಾದ್ಯ ಪರಿಕರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು,  ಇದುವರೆಗೂ ಈ ಪ್ರಶಸ್ತಿ ಪಡೆದ ಸಾಧಕರೆಂದರೆ; ವಿದ್ವಾನ್ ತಿಟ್ಟೆ ಕೃಷ್ಣಯ್ಯಂಗಾರ್ (೧೯೯೧), ಡಾ.ಗಂಗೂಬಾಯಿ ಹಾನಗಲ್ (೧೯೯೨), ಆರ್.ಆರ್. ಕೇಶವಮೂರ್ತಿ (೧೯೯೩), ಡಾ.ಬಿಂದು ಮಾಧವ ಪಾಠಕ್ (೧೯೯೪), ಗಮಕಿ ರಾಘವೇಂದ್ರರಾವ್ (೧೯೯೫), ವಿದ್ವಾನ್ ಆರ್.ಕೆ.ಶ್ರೀಕಂಠನ್ (೧೯೯೬), ಡಾ. ಪುಟ್ಟರಾಜ ಗವಾಯಿ (೧೯೯೭), ಎಂ.ಎಸ್.ರಾಮಯ್ಯ (೧೯೯೮), ಶೇಷಗಿರಿ ಹಾನಗಲ್ (೧೯೯೯), ಭದ್ರಗಿರಿ ಅಚ್ಯುತದಾಸ್ (೨೦೦೦), ಎ.ಸುಬ್ಬರಾವ್ (೨೦೦೧), ಪಂಡಿತ್ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ (೨೦೦೨), ಎಂ.ಜೆ.ಶ್ರೀನಿವಾಸ ಅಯ್ಯಂಗಾರ್(೨೦೦೩), ಪಂಡಿತ್ ವಸಂತ ಕನಕಾಪುರ(೨೦೦೪), ಬಿ.ಎಸ್.ಎಸ್.ಕೌಶಿಕ್(೨೦೦೫), ಪ್ರೊ.ವಿ.ರಾಮರತ್ನಂ (೨೦೦೬), ಚಂದ್ರಶೇಖರ್ ಪುರಾಣಿಕ ಮಠ್(೨೦೦೭) ಎನ್. ಚೊಕ್ಕಮ್ಮ (೨೦೦೮). ಲಕ್ಷ್ಮಣದಾಸ್ (೨೦೧೦), ಕುರುಡಿ ವೆಂಕಣ್ಣಾಚಾರ್  (೨೦೧೧), ಸಂಗಮೇಶ್ವರ ಗುರವ (೨೦೧೨), ರಾಜಲಕ್ಷ್ಮಿ ತಿರುನಾರಾಯಣನ್ (೨೦೧೩) , ರಘುನಾಥ ನಾಕೋಡ್ (೨೦೧೪), ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್ (೨೦೧೫)

ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ: ಪ್ರತವರ್ಷವೂ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ೧೯೯೩ರಿಂದ ಈ ಪುರಸ್ಕಾರ ನೀಡಲಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಅಗ್ರಗಣ್ಯ ವಿದ್ವಾಂಸರಿಗೆ ನೀಡಲಾಗುವ ಈ ಪ್ರಶಸ್ತಿಯು ಸರಸ್ವತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಕೆಳಕಂಡವರು ಈ ಪ್ರಶಸ್ತಿ ಪಡೆದ ಮಹನೀಯರಾಗಿದ್ದಾರೆ.  ಡಾ.ಪುಟ್ಟರಾಜ ಗವಾಯಿ (೧೯೯೩), ವಿದ್ವಾನ್ ಆರ್. ಕೆ.ಶ್ರೀಕಂಠನ್ (೧೯೯೪), ಪಂಡಿತ್ ರಾಮರಾವ್ ವಿ.ನಾಯಕ್ (೧೯೯೫), ಎ.ಸುಬ್ಬರಾವ್ (೧೯೯೬), ಸಂಗಮೇಶ್ವರ ಗುರವ(೧೯೯೭), ಎನ್.ಚೊಕ್ಕಮ್ಮ(೧೯೯೮), ಎಂ.ಎ.ನರಸಿಂಹಾಚಾರ್ (೧೯೯೯), ಟಿ.ಎಸ್.ತಾತಾಚಾರ್ (೨೦೦೦), ಆರ್.ಕೆ.ಬಿಜಾಪುರೆ (೨೦೦೧), ಆರ್.ವಿಶ್ವೇಶ್ವರನ್ (೨೦೦೨), ವಿದ್ವಾನ್ ಆರ್.ಆರ್.ಕೇಶವಮೂರ್ತಿ (೨೦೦೩), ಪಂಡಿತ್ ಚಂದ್ರಶೇಖರ ಪುರಾಣಿಕಮಠ (೨೦೦೪), ವಿದ್ವಾನ್ ಎಸ್.ಮಹದೇವಪ್ಪ (೨೦೦೫), ಪಂಡಿತ್ ಮಾಣಿಕ್‌ರಾವ್ ರಾಯಚೂರ್‌ಕರ್ (೨೦೦೬), ಪಂಡಿತ್ ಕೆ.ಸಿದ್ಧರಾಮಸ್ವಾಮಿ ಕೋರವಾರ್ (೨೦೦೭), ಡಾ.ಎಂ.ಆರ್. ಗೌತಮ್, ಸಿಕಂದರಾಬಾದ್ (೨೦೦೮). ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್ (೨೦೦೯) ಪಂಡಿತ್ ಶೇಷಗಿರಿ ಹಾನಗಲ್ (೨೦೧೦) ರಾ.ಸತ್ಯನಾರಾಯಣ(೨೦೧೧). ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ (೨೦೧೨),  .ಎಸ್.ಸಂಪತ್ಕುಮಾರಾಚಾರ್ಯ (೨೦೧೩), ಇಂದೂಧರ ನಿಕೋಡಿ (೨೦೧೪), ವಿ.ಎಸ್.ರಾಜಗೋಪಾಲ್ (೨೦೧೫), ಸೋಮನಾಥ ಮರಡೂರ (೨೦೧೬).

ಟಿ.ಚೌಡಯ್ಯ ಪ್ರಶಸ್ತಿ: ಕರ್ನಾಟಕದ ಮಹೋನ್ನತ ಸಂಗೀತ ವಿದ್ವಾಂಸರಾದ ಪಿಟೀಲು ಟಿ.ಚೌಡಯ್ಯನವರ ನೆನಪಿನಲ್ಲಿ ೧೯೯೫ ರಿಂದ ಶಾಸ್ತ್ರೀಯ ವಾದ್ಯ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿ ಮೊತ್ತ ೧.೫೦ ಲಕ್ಷಗಳು. ಇದುವರೆಗೂ ಈ ಪ್ರಶಸ್ತಿ ಪಡೆದುಕೊಂಡವರು: ಉಸ್ತಾದ್ ಬಿಸ್ಮಿಲ್ಲಾ ಖಾನ್ (೧೯೯೫), ವೀಣಾ ದೊರೆಸ್ವಾಮಿ ಅಯ್ಯಂಗಾರ್ (೧೯೯೬), ರಾಜೀವ ತಾರಾನಾಥ್ (೧೯೯೭), ಕುನ್ನೈಕುಡಿ ಆರ್.ವೈದ್ಯನಾಥನ್ (೧೯೯೮), ಪಂಡಿತ್ ಉಸ್ತಾದ್ ಅಲ್ಲಾರಖಾ(೧೯೯೯), ಟಿ.ಕೆ.ಮೂರ್ತಿ(೨೦೦೦), ಆರ್. ಕೆ.ಬಿಜಾಪುರೆ (೨೦೦೧), ಲಾಲ್ಗುಡಿ ಜಯರಾಮನ್ (೨೦೦೨), ಪಂಡಿತ್ ಬಿ.ಆರ್.ನಿಂಬರಗಿ (೨೦೦೩), ಎನ್.ರಮಣಿ(೨೦೦೪), ದತ್ತಾತ್ರೇಯ ಸದಾಶಿವಗರೂಡ (೨೦೦೫), ವೆಲ್ಲೂರ್ ಜಿ.ರಾಮಭದ್ರನ್ (೨೦೦೬), ಪುಟ್ಟರಾಜ ಗವಾಯಿ (೨೦೦೭), ಎ.ಕೆ.ಸಿ.ನಟರಾಜನ್, ತಿರುಚಿನಾಪಳ್ಳಿ (೨೦೦೮), ಎನ್.ರಾಜಮ್  (೨೦೦೯), ಎಸ್.ಮಹದೇವಪ್ಪ (೨೦೧೦), ಶೇಷಗಿರಿ ಹಾನಗಲ್ (೨೦೧೧), ಆರ್.ವಿಶ್ವೇಶ್ವರನ್ (೨೦೧೨), ರಾಮನಾರಾಯಣ್ (೨೦೧೩), ಎಲ್.ಭೀಮಾಚಾರ್ (೨೦೧೪), ಹಾಗೂ ಸುರೇಶ್ ತಲ್ವಾಲ್ಕರ್ (೨೦೧೫).

ಸಂತ ಶಿಶುನಾಳ ಷರೀಫ ಪ್ರಶಸ್ತಿ: ತತ್ವಪದ, ದಾಸರಪದ, ವಚನ ಸಂಗೀತ, ಸುಗಮ ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ೧೯೯೫ರಿಂದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ಒಂದು ಲಕ್ಷ ನಗದು ಬಹುಮಾನವನ್ನೊಳಗೊಂಡಿದ್ದು, ಇದುವರೆಗೂ ಪ್ರಶಸ್ತಿ ಪಡೆದ ಕಲಾವಿದರು; ಜಯವಂತಿದೇವಿ ಹಿರೇಬೆಟ್ (೧೯೯೫), ಸಿ. ಅಶ್ವತ್ಥ್ (೧೯೯೬), ಎಚ್. ಆರ್. ಲೀಲಾವತಿ (೧೯೯೭), ಅನುರಾಧಾ ಧಾರೇಶ್ವರ್ (೧೯೯೮), ಶಿವಮೊಗ್ಗ ಸುಬ್ಬಣ್ಣ (೧೯೯೯), ಎಚ್.ಕೆ. ನಾರಾಯಣ (೨೦೦೦), ಎಂ. ಪ್ರಭಾಕರ್ (೨೦೦೧), ಗರ್ತಿಕೆರೆ ರಾಘಣ್ಣ (೨೦೦೨), ಶ್ಯಾಮಲಾ  ಜಾಗಿರ್‌ದಾರ್(೨೦೦೩), ಮುರುಗೋಡು ಕೃಷ್ಣದಾಸ(೨೦೦೪), ಈಶ್ವರಪ್ಪ ಜಿ. ಮಿಣಚಿ (೨೦೦೫), ಸಿ.ಕೆ. ತಾರಾ (೨೦೦೬), ಕೇಶವ ಗುರಂ(೨೦೦೭), ಗುಡಿಬಂಡೆ ರಾಮಾಚಾರ್ (೨೦೦೮), ಟಿ.ವಿ.ರಾಜು(೨೦೦೯), ಬಿ.ಕೆ.ಸುಮಿತ್ರ(೨೦೧೦), ನಾರಾಯಣ ರಾವ್ ಮಾನೆ (೨೦೧೧), ಎಸ್.ಸೋಮಸುಂದರಂ (೨೦೧೨), ಎಸ್.ಕೆ.ವಸುಮತಿ (೨೦೧೩), ರಾಜಗುರು ಗುರುಸ್ವಾಮಿ ಕಲಿಗೇರಿ (೨೦೧೪), ರತ್ನಮಾಲಾ ಪ್ರಕಾಶ್ (೨೦೧೫).

ಕುಮಾರವ್ಯಾಸ ಪ್ರಶಸ್ತಿ: ಕುಮಾರ ವ್ಯಾಸನ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ೨೦೦೯ರಲ್ಲಿ ಸ್ಥಾಪಿಸಿದ್ದು, ಗಮಕ ಕಲೆಯಲ್ಲಿ ವಿಶೇಷ ಸಾಧನೆ ತೋರಿದ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ‘ಒಂದು ಲಕ್ಷ ನಗದು ಬಹುಮಾನವನ್ನೊಳಗೊಂಡಿದ್ದು, ಇದುವರೆಗೂ ಪುರಸ್ಕೃತರು; ರಘುಪತಿ ಶಾಸ್ತ್ರಿ (೨೦೧೦), ಹೆಚ್.ಕೆ. ರಾಮಸ್ವಾಮಿ (೨೦೧೧), ಮಾರ್ಕಂಡೇಯ ಅವಧಾನಿ (೨೦೧೨), ಬಾಲಚಂದ್ರ ಶಾಸ್ತ್ರಿ ಹಿರೇಮಠ (೨೦೧೩), ಕಮಲಾ ರಾಮಕೃಷ್ಣ, (೨೦೧೪), ಕಮಲಮ್ಮ ವಿಠಲರಾವ್ (೨೦೧೫).

ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯಿಂದ ಗೌರವಿಸಿಸಲ್ಪಟ್ಟ, ಸನ್ಮಾನಿತರಾದ ಕರ್ನಾಟಕದ ಕಲಾವಿದರು; ಕೆ.ವಾಸುದೇವಾಚಾರ್ಯ (೧೯೫೪), ಟಿ.ಚೌಡಯ್ಯ (೧೯೫೭), ಬಿ.ದೇವೇಂದ್ರಪ್ಪ (೧೯೬೩), ವಿ.ದೊರೆಸ್ವಾಮಿ ಅಯ್ಯಂಗಾರ್ (೧೯೭೦), ಶಾಂತಾರಾವ್ (೧೯೭೦), ಎನ್.ಚನ್ನಕೇಶವಯ್ಯ (೧೯೭೧), ಟಿ.ಚಂದ್ರಕಾಂತಮ್ಮ (೧೯೭೧), ಮಲ್ಲಿಕಾರ್ಜುನ ಮನ್ಸೂರ್(೧೯೭೧), ಗಂಗೂಬಾಯಿ ಹಾನಗಲ್ (೧೯೭೩), ಭೀಮಸೇನ ಜೋಶಿ (೧೯೭೫), ಆರ್.ಕೆ.ಶ್ರೀಕಂಠನ್(೧೯೭೯), ಬಸವರಾಜ ರಾಜಗುರು(೧೯೮೧), ದೇವೇಂದ್ರ ಮುರುಡೇಶ್ವರ (೧೯೮೬), ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ (೧೯೮೭), ತಿಟ್ಟೆ ಕೃಷ್ಣಯ್ಯಂಗಾರ್(೧೯೮೯), ಮಾಯಾರಾವ್ (೧೯೮೯), ಹೊನ್ನಪ್ಪ ಭಾಗವತರ್(೧೯೯೦), ಬಿ.ವಿ.ಕೆ.ಶಾಸ್ತ್ರಿ (೧೯೯೯), ಆರ್.ಆರ್.ಕೇಶವಮೂರ್ತಿ (೧೯೯೯), ಹೆಚ್.ಆರ್. ಕೇಶವಮೂರ್ತಿ (೧೯೯೯), ಪ್ರತಿಭಾ ಪ್ರಹ್ಲಾದ್ (೨೦೦೧), ಸಂಗಮೇಶ್ವರ ಗುರವ್ (೨೦೦೧), ಆರ್.ಎನ್.ದೊರೆಸ್ವಾಮಿ (೨೦೦೧), ಎಂ.ಎ.ನರಸಿಂಹಾಚಾರ್(೨೦೦೨), ಕದ್ರಿ ಗೋಪಾಲನಾಥ್ (೨೦೦೨), ನಾಗಮಣಿ ಶ್ರೀನಾಥ್ (೨೦೧೦), ಎಂ.ವೆಂಕಟೇಶ ಕುಮಾರ್ (೨೦೧೧), ಬೆಳಗಲ್ ವೀರಣ್ಣ(೨೦೧೧).

ಕರ್ನಾಟಕದಲ್ಲಿ ನೃತ್ಯ

ನೃತ್ಯವು ಒಂದು ದೃಶ್ಯ ಕಲೆ. ಈ ಚೈತನ್ಯಶೀಲ ಕಲೆಯ ದೃಶ್ಯ ಪ್ರಭಾವವು ಕಾಲಾಂತರದಲ್ಲಿ ಇಲ್ಲವಾಗುತ್ತಿದೆ. ಕರ್ನಾಟಕದಲ್ಲಿ ಸದ್ಯ ಪ್ರಚಲಿತವಿರುವ ನೃತ್ಯ ಪರಂಪರೆಯನ್ನು ಸ್ಥೂಲವಾಗಿ ಜನಪದ ಮತ್ತು ಶಿಷ್ಟ ಎಂದು ವಿಂಗಡಿಸಬಹುದು. ದೇಸಿ ಅಥವಾ ಸ್ಥಳೀಯ/ ಜನಪದ ಪರಂಪರೆ ಆಯಾಪ್ರದೇಶಗಳಿಗೆ ಸೀಮಿತಗೊಂಡಿರುತ್ತದೆ. ಶಿಷ್ಟ ಪರಂಪರೆಯ ನೃತ್ಯ ಸಂಪ್ರದಾಯವು ರಾಜ್ಯದಾಚೆಗೂ ವ್ಯಾಪಿಸಿರುವಂಥದ್ದು.

ಪ್ರಾಚೀನ ಕಾಲದ ನೃತ್ಯಗಳ ಕುರಿತ ಲಿಖಿತ ಸಾಹಿತ್ಯವನ್ನು ಕೆಲವೇ ಕಲಾಪ್ರಿಯರು ಬಿಟ್ಟು ಹೋಗಿದ್ದಾರೆ. ತಮಿಳು ಗ್ರಂಥವಾದ ಶಿಲಪ್ಪದಿಕಾರಂನಲ್ಲಿ ಚೇರ ದೊರೆ ಸೆಂಗುಟ್ಟವನ್ ಕನ್ನಡಿಗರ ನೃತ್ಯ ವೀಕ್ಷಿಸಿದ ಕುರಿತು ಉಲ್ಲೇಖವಿದೆ. ಪಟ್ಟದಕಲ್ಲಿನ ಶಾಸನವೊಂದು ದೇವದಾಸಿಯರು ದೇಗುಲಗಳಲ್ಲಿ ನೃತ್ಯ ಸೇವೆಯನ್ನು ಸಲ್ಲಿಸುತ್ತಿದ್ದ ಬಗ್ಗೆ ತಿಳಿಸುತ್ತದೆ. ಗಂಗರ ದೊರೆಗಳಾದ ದುರ್ವಿನೀತ ಮತ್ತು ನರಸಿಂಹದೇವ ಸತ್ಯವಾಕ್ಯರು ಸಂಗೀತ ಮತ್ತು ನೃತ್ಯಗಳ ಬಗ್ಗೆ ಪಾರಂಗತರಾಗಿದ್ದರೆನ್ನಲಾಗಿದೆ. ರಾಷ್ಟ್ರಕೂಟ ಮತ್ತು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಆಸ್ಥಾನ ನರ್ತಕಿಯರಿಗೆ ದೇಗುಲದಲ್ಲಿ ನೃತ್ಯಸೇವೆ ಸಲ್ಲಿಸುವುದು ಕರ್ತವ್ಯವಾಗಿದ್ದು, ಅವರು ಪ್ರವೀಣ ನರ್ತಕಿಯರೂ ಆಗಿರುತ್ತಿದ್ದರು. ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯನ್ನು ನೃತ್ಯ ಕಲಾಪ್ರವೀಣೆ ಎಂದು ಅನೇಕ ಶಾಸನಗಳು ಹೊಗಳಿವೆ.

ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ನಾಟ್ಯಾಚಾರ್ಯ ಭಂಡಾರು ಲಕ್ಷ್ಮೀನಾರಾಯಣನನ್ನು ಅಭಿನವ ಭರತ ಎಂದು ಕರೆಯಲಾಗುತ್ತಿತ್ತು. ವಿಜಯನಗರದರಸರ ಕಾಲದಲ್ಲಿ ವಾರ್ಷಿಕ ದಸರಾ ಮಹೋತ್ಸವದಲ್ಲಿ ನರ್ತಕರು ಮತ್ತು ಕಲಾವಿದರುಗಳಿಗೆ ತಮ್ಮ ನೃತ್ಯ ಮತ್ತು ಕಲಾಪ್ರದರ್ಶನಗಳನ್ನು ನೀಡಲು ಪ್ರೋತ್ಸಾಹ ನೀಡಲಾಗುತ್ತಿತ್ತು. ಮೈಸೂರು ಆಸ್ಥಾನವೂ ಕೂಡ ವಿಜಯನಗರ ಮಾದರಿಯನ್ನನುಸರಿಸಿ, ಪಾರಂಪರಿಕ ನೃತ್ಯ ಸಂಪ್ರದಾಯಕ್ಕೆ ಉತ್ತೇಜನ ನೀಡಿತು. ಮೂರನೇ ಸೋಮೇಶ್ವರನ ಮಾನಸೋಲ್ಲಾಸ, ಪುಂಡರೀಕ ವಿಠಲನ ನರ್ತನ ನಿರ್ಣಯ, ಸಿಂಹಭೂಪಾಲನ ಲಾಸ್ಯರಂಜನ, ಮತ್ತು ವೆಂಕಟಮುದ್ರಸಾನಿ  ಬರೆದ ರಸಿಕಜನ ಮನೋಲ್ಲಾಸಿನಿ; ಸಾರಸಂಗ್ರಹ ಮತ್ತು ಭರತ ನಾಟ್ಯ ಶಾಸ್ತ್ರ ಕೃತಿಗಳು ಸಂಗೀತ ಮತ್ತು ನೃತ್ಯ ಕಲೆಗಳನ್ನು ಕುರಿತು ಬರೆದವುಗಳಾಗಿವೆ. ರಾಜ್ಯದಲ್ಲಿ ನೃತ್ಯ ಕಲೆಯ ಜೀವಂತಿಕೆ ಮತ್ತು ಏಳ್ಗೆಗೆ ಒತ್ತಾಸೆ ಕೊಟ್ಟ ಮಹತ್ವದ ಸಂಗತಿ ಎಂದರೆ ದೇವಾಲಯಗಳಲ್ಲಿ ದೇವದಾಸಿಯರು ನೃತ್ಯಸೇವೆ ಸಲ್ಲಿಸುವ ಪದ್ಧತಿ.

೧೯ನೆಯ ಶತಮಾನದ ಅಂತ್ಯದ ವೇಳೆಗೆ ಮುಳಬಾಗಿಲು, ಮೂಗೂರು, ಟಿ.ನರಸೀಪುರ ಮತ್ತು ಚಿಂತಾಮಣಿ ಬಳಿಯ ಪೂವಲವಾಡಿ ಸ್ಥಳಗಳಲ್ಲಿ ಸುಮಾರು ೨೦೦ ಮಂದಿ ವೃತ್ತಿಪರ ನೃತ್ಯಗಾರ್ತಿಯರಿದ್ದು, ನಟುವರರೊಂದಿಗೆ (ನೃತ್ಯ ಶಿಕ್ಷಕರೊಡನೆ) ವಾಸಿಸುತ್ತಿದ್ದರು. ಸಂಸ್ಕೃತಭಾಷ್ಯ, ಭರತನಾಟ್ಯ ಮತ್ತು ಅಭಿನಯ ವಿಶಾರದರಾಗಿದ್ದ ಅನೇಕ ಬ್ರಾಹ್ಮಣ ವಿದ್ವಾಂಸರಿದ್ದರು. ಅವರು ಅಭಿನಯದ ಜಟಿಲವಾದ ಕಲಾಸೂಕ್ಷ್ಮಗಳನ್ನು ದೇವದಾಸಿಯರಿಗೆ ಕಲಿಸುತ್ತಿದ್ದರು. ಇವರುಗಳ ಪರಿಶ್ರಮದಿಂದಾಗಿ ಭರತನಾಟ್ಯವು ಹಳೆಮೈಸೂರು ಸಂಸ್ಥಾನದಲ್ಲಿ ತನ್ನದೇ ಆದ ಶೈಲಿಯೊಂದನ್ನು ರೂಪಿಸಿಕೊಂಡದ್ದು ಹೆಮ್ಮೆಯ ವಿಷಯ. ಮಂಗಲಮ್, ಸ್ತುತಿ, ಅಲರಿಪು, ಜತಿಸ್ವರ, ವೆಮಮ್, ಪದ ಮತ್ತು ತಿಲ್ಲಾನಗಳಿಂದ ಕೂಡಿದ ಭರತ ನಾಟ್ಯ ವಿನ್ಯಾಸವೊಂದು ರೂಢಿಗೆ ಬಂತು. ಈ ಅವಧಿಯಲ್ಲಿ ಕವೀಶ್ವರ ಗಿರಿಯಪ್ಪ, ಕಾಶಿ ಗುರು, ಅಮೃತಪ್ಪ, ಅಪ್ಪಯ್ಯ, ದಾಸಪ್ಪ, ಕಿಟ್ಟಪ್ಪ ಮತ್ತು ಜೆಟ್ಟಿ ತಾಯಮ್ಮ ಅವರು ಪ್ರಸಿದ್ಧ ನೃತ್ಯ ಗುರುಗಳಾಗಿದ್ದರು; ವೆಂಕಟಲಕ್ಷ್ಮಮ್ಮ, ಪುಟ್ಟದೇವಮ್ಮ,  ರಮಾಮಣಿ ಮತ್ತು ಮೂಗೂರು ತ್ರಿಪುರಸುಂದರಮ್ಮ ಅವರೂ ಪ್ರಸಿದ್ಧ ನರ್ತಕಿಯರಾಗಿದ್ದರು.

ಭರತನಾಟ್ಯದ ಬಹುಪ್ರಮುಖ ಶಿಕ್ಷಣ ಕೇಂದ್ರವೆಂದು ಬೆಂಗಳೂರು ಗುರುತಿಸಲ್ಪಟ್ಟಿತ್ತು. ೧೯೧೦-೩೦ರ ಅವಧಿಯಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಹಾಗೂ ಸಾಮಾಜಿಕ ಮೌಲ್ಯಗಳ ಕುಸಿತದ ಫಲವಾಗಿ, ಕಲೆ ಮತ್ತು ಕಲಾವಿದರಿಗೆ ಕ್ಷೀಣದೆಸೆ ಒದಗಿತು. ತತ್ಫಲವಾಗಿ ಪಾರಂಪರಿಕ ಹಾಗೂ ದೇಸೀ ಕಲೆಗಳಿಗೆ ಗ್ರಹಣ ಹಿಡಿದಂತಾಗಿತ್ತು. ೧೯೩೦ರ ತರುವಾಯ ಇ.ಕೃಷ್ಟ ಅಯ್ಯರ್, ರುಕ್ಮಿಣಿ ಅರುಂಡೇಲ್, ರಾಮಗೋಪಾಲ್, ಯು.ಎಸ್.ಕೃಷ್ಣರಾವ್ ಮತ್ತು ಅವರ ಪತ್ನಿ ಚಂದ್ರಭಾಗಾದೇವಿ ಅವರು ಭರತನಾಟ್ಯ ಕಲೆಯನ್ನು ೧೯೪೦ರ ದಶಕದಲ್ಲಿ ಜನಪ್ರಿಯಗೊಳಿಸಿದರು. ಈ ನಲವತ್ತರ ದಶಕದಲ್ಲಿ ನಾಟ್ಯ ಪುನರುಜ್ಜೀವನಗೊಂಡು ಅನೇಕ ನೃತ್ಯ ಶಿಕ್ಷಕರು ಕರ್ನಾಟಕದಲ್ಲಿ ನೆಲೆಯನ್ನು ಬಲಪಡಿಸಿಕೊಂಡರು.

೫೦ರ ದಶಕದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ನೃತ್ಯ- ನಾಟಕ-ಸಂಗೀತ ಅಕಾಡೆಮಿಗಳು ಸ್ಥಾಪನೆಗೊಂಡು, ಹಿಂದಿನ ಪರಿಸ್ಥಿತಿಯು ಬದಲಾಯಿಸಿತು. ಈ ಅಕಾಡೆಮಿಗಳು ಉತ್ತಮ ನೃತ್ಯ ಶಿಕ್ಷಕರಿಗೆ ಮತ್ತು ನಾಟ್ಯ ಸಂಸ್ಥೆಗಳಿಗೆ ಅನುದಾನ ಮತ್ತು ನೆರವನ್ನು ನೀಡಿದವು. ಕಾಲಕ್ರಮೇಣ ಹಳೆ ಮೈಸೂರು ಸಂಸ್ಥಾನ ಕರ್ನಾಟಕ ರಾಜ್ಯದಲ್ಲಿ ನಾಟ್ಯ ಕಲಾವಿದ್ಯಾ ಪ್ರಸಾರವು ಅಭಿವೃದ್ಧಿ ಹೊಂದಿತು. ಆ ನಂತರ ಸರ್ಕಾರವು ಭರತನಾಟ್ಯ ಕಲೆಯಲ್ಲಿ, ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್(ಪ್ರೊಫಿಶಿಯನ್ಸಿ) ಪರೀಕ್ಷೆಗಳನ್ನು ನಡೆಸಲಾರಂಭಿಸಿತು. ರಾಜ್ಯ ಪುನರ್ವಿಂಗಡನೆಯ ನಂತರ ಭರತನಾಟ್ಯ ಕಲೆಯ ಇಡೀ ಕ್ಷಿತಿಜವೇ ಮಾರ್ಪಾಟುಗೊಂಡಿತು. ೧೯೭೦ರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ ವಿಶೇಷತಃ  ಬೆಂಗಳೂರು ಮತ್ತು ಮೈಸೂರು ನಗರಗಳು ಅನೇಕ ನೃತ್ಯ ಶಿಕ್ಷಕರನ್ನು ಮತ್ತು ನೃತ್ಯ ಪಟುಗಳನ್ನು ತಯಾರುಮಾಡುವ ಅನೇಕ ಸಮರ್ಥ ನೃತ್ಯ ಶಿಕ್ಷಣ ಸಂಸ್ಥೆಗಳನ್ನು ಹೊಂದಲಾದ ಬಗ್ಗೆ ಹೆಮ್ಮೆ ಪಡುವಂತಾಯಿತು. ಬೆಂಗಳೂರು ವಿಶ್ವವಿದ್ಯಾಲಯವು, ನೃತ್ಯ-ನಾಟಕ-ಸಂಗೀತ ವಿಭಾಗವನ್ನು, ಆರಂಭಿಸಿತು. ಹೀಗಾಗಿ ಭರತನಾಟ್ಯದ ಭವಿಷ್ಯಕ್ಕೆ ಕರ್ನಾಟಕದಲ್ಲಿ ಉಜ್ವಲ ಭವಿಷ್ಯದ ಭರವಸೆ ಕಂಡುಬಂದಿತು.

ಕಲಾಪ್ರವೀಣರಿಂದ ನಡೆಸಲ್ಪಡುತ್ತಿರುವ ಅನೇಕ ಸಂಸ್ಥೆಗಳು ಭರತನಾಟ್ಯ ಮತ್ತು ವಿವಿಧ ನಾಟ್ಯ ಶೈಲಿಗಳ ಬಗ್ಗೆ ತರಬೇತಿ ನೀಡುತ್ತಿವೆ. ಬೆಂಗಳೂರು ನಗರದಲ್ಲಿ ಡಾ.ಯು.ಎಸ್.ಕೃಷ್ಣರಾವ್ ಅವರ ಮಹಾಮಾಯ ನೃತ್ಯ ಪೀಠವಲ್ಲದೆ ಎಚ್.ಆರ್. ಕೇಶವಮೂರ್ತಿ ಅವರ ಕೇಶವ ನೃತ್ಯಶಾಲಾ, ಟಿ.ಎಸ್.ಭಟ್ ಅವರ ಮೇನಕ ನೃತ್ಯಶಾಲಾ, ಮಾಣಿಕ್ಯಮ್ ಅವರ ಭರತನಾಟ್ಯ ಕಲಾಶಾಲೆ, ಭಾರತೀಯ ವಿದ್ಯಾಭವನದ ನೃತ್ಯ ಕೇಂದ್ರ, ಲಲಿತ ದೊರೈ ಅವರ ಗಣೇಶ ನೃತ್ಯಶಾಲೆ, ಶೇಖರ್ ಅವರ ಸರಸ್ವತಿ ನೃತ್ಯಶಾಲೆ, ರಾಧಾ ಶ್ರೀಧರ್ ಅವರ ವೆಂಕಟೇಶ್ವರ ನಾಟ್ಯ ಮಂದಿರ, ಲೀಲಾ ರಾಮನಾಥನ್ ಅವರ ಮೀನಾಕ್ಷಿ ಸುಂದರಂ ಪಿಳ್ಳ್ಯೆ ಶಾಲೆ, ಸಿ.ರಾಧಾಕೃಷ್ಣ ಅವರ ಚಿತ್ತರಂಜನ್ ಕಲಾಕ್ಷೇತ್ರ, ಎಂ.ವಿ.ಸ್ಕೂಲ್ ಆಫ್ ಭರತನಾಟ್ಯಮ್, ಮತ್ತು ವಿ.ಎಸ್.ಲೋಕಯ್ಯ ಅವರ ಗಣನೃತ್ಯ ಕಲಾಶಾಲೆ, ರಾಜರಾಜೇಶ್ವರಿ ನೃತ್ಯ ಕಲಾಮಂದಿರ ಹಾಗೂ ಮಾಯಾರಾವ್, ನರ್ಮದಾ, ಪ್ರತಿಭಾ ಪ್ರಹ್ಲಾದ್, ಮತ್ತು ವಾಣಿ ಗಣಪತಿ ಅವರು ನಡೆಸುತ್ತಿರುವ ನೃತ್ಯಶಾಲೆಗಳು ಪ್ರಮುಖವಾದವು. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಅನೇಕ ನಾಟ್ಯಶಾಲೆಗಳು ಖ್ಯಾತಿ ಗಳಿಸಿವೆ.

ದಿವಂಗತ ಪ್ರತಿಮಾ ಗೌರಿ ಅವರಿಂದ ಬೆಂಗಳೂರು ನಗರದ ಹೊರವಲಯದ ಹೆಸರುಘಟ್ಟದಲ್ಲಿ ನೃತ್ಯ ಗ್ರಾಮ ಸ್ಥಾಪಿಸಿದ್ದಾರೆ. ಅವರು ನೃತ್ಯ ಗ್ರಾಮದಲ್ಲಿ ಒಂದೇ ಸೂರಿನಡಿ ಭಾರತೀಯ ಸಾಂಪ್ರದಾಯಿಕ ನೃತ್ಯದ ಎಲ್ಲ ಪ್ರಕಾರಗಳಲ್ಲೂ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ವ್ಯವಸ್ಥೆಯನ್ನು ಮಾಡಿದ್ದರು. ಆಕೆಯು ತೀರಿಹೋದ ಮೇಲೆ ನೃತ್ಯ ಬೋಧನೆಯನ್ನು ಸದರಿ ಸಂಸ್ಥೆಯು ಮುಂದುವರಿಸಿದೆ. ನೃತ್ಯ ಕಲಾವಿದೆಯರಿಂದ ಬಹಳವಾಗಿ ತುಂಬಿಕೊಂಡಿದ್ದ ಭರತನಾಟ್ಯಕಲೆಗೆ ಅನೇಕ ಪುರುಷರೂ ಮನಸೋತು ಈ ಭದ್ರಕೋಟೆಗೆ ಲಗ್ಗೆ ಹಾಕಿ, ಸಮರ್ಥವಾಗಿ ನೈಪುಣ್ಯತೆ ಪಡೆದು ಯಶಸ್ಸನ್ನು ಗಳಿಸಿದ್ದಾರೆ. ಅವರಲ್ಲಿ ಕೆ.ಆರ್.ಎಸ್.ಪ್ರಸನ್ನ, ಎ.ಆರ್.ಶ್ರೀಧರ್, ರಾಮು, ಅರುಣ್, ಬಿ.ಕೆ.ಶ್ಯಾಮ್‌ಪ್ರಕಾಶ್ ಮತ್ತು ರಾಜೇಂದ್ರ ಹೆಸರುವಾಸಿಯಾಗಿದ್ದಾರೆ. ಈ ಭರತನಾಟ್ಯ ಕಲೆಯನ್ನು ಜನಪ್ರಿಯಗೊಳಿಸಲು ಪರಿಶ್ರಮಿಸಿದವರಲ್ಲಿ ಅನೇಕ ಪ್ರಖ್ಯಾತ ಕಲಾವಿದರಲ್ಲಿ ಎನ್.ಗುಂಡಪ್ಪ, ಕೆ.ವೆಂಕಟಲಕ್ಷಮ್ಮ, ಎಸ್.ಸುಂದರಮ್ಮ, ಎಂ.ಜೇಜಮ್ಮ, ಸುಬ್ಬಮ್ಮ, ಚಂದ್ರಕಾಂತಮ್ಮ, ಮಾಯಾರಾವ್, ಶಾಂತಾರಾವ್, ಚಿನ್ನಮ್ಮ, ಯು.ಎಸ್. ಕೃಷ್ಣರಾವ್, ಹೆಚ್.ಆರ್.ಕೇಶವಮೂರ್ತಿ ಮತ್ತು ವಿ.ಎಸ್. ಕೌಶಿಕ್ ಕೆ.ಎಂ.ರಾಮನ್ ಅವರು ಉಲ್ಲೇಖಾರ್ಹರು. ಇವರಲ್ಲದೆ ಲೀಲಾರಾಮನಾಥನ್, ಬಿ.ಕೆ.ವಸಂತಲಕ್ಷ್ಮಿ, ಸಿ.ರಾಧಾಕೃಷ್ಣ, ರಾಧಾಶ್ರೀಧರ್ ಲಲಿತಾ ಶ್ರೀನಿವಾಸ, ಸತ್ಯವತಿ ಸುರೇಶ್, ಪದ್ಮಿನಿ ರಾಮಚಂದ್ರನ್, ಪದ್ಮಿನಿ ರವಿ, ಉಷಾದಾತಾರ್, ಗಿರೀಶ್ ರಾಮನ್ ಮುಂತಾದವರು ಪ್ರಸಿದ್ದರಾಗಿದ್ದು, ಅಂತರರಾಷ್ಟ್ರೀಯವಾಗಿಯೂ ಗುರುತಿಸಲ್ಪಟ್ಟು ಖ್ಯಾತಿ ಗಳಿಸಿದ್ದಾರೆ.

ಶಾಂತಲಾ ನಾಟ್ಯ ಪ್ರಶಸ್ತಿ:

ಕನ್ನಡ ಮತ್ತು ಸಂಸ್ಥೃತಿ ಇಲಾಖೆಯಿಂದ ೧೯೯೫ರಲ್ಲಿ ಈ ಪ್ರಶಸ್ತಿಯು ಸಂಸ್ಥಾಪಿತಗೊಂಡಿದೆ. ನೃತ್ಯರಂಗಕ್ಕೆ ಸಂಬಂಧಿಸಿದಂತೆ ಅಪೂರ್ವ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯ ಮೊತ್ತ ‘ ಒಂದು ಲಕ್ಷ. ಇದುವರೆಗೂ ಈ ಪ್ರಶಸ್ತಿ ಪಡೆದ ಕಲಾವಿದರು; ಕೆ.ವೆಂಕಟಲಕ್ಷ್ಮಮ್ಮ (೧೯೯೫), ಡಾ.ಯು.ಎಸ್.ಕೃಷ್ಣರಾವ್ (೧೯೯೬), ಯು.ಎಸ್. ಕೃಷ್ಣರಾವ್ (ಮಂಗಳೂರು ೧೯೯೭), ಎಚ್.ಆರ್. ಕೇಶವಮೂರ್ತಿ(೧೯೯೮), ಮಾಯಾರಾವ್(೧೯೯೯), ಕೆ.ಮುರಳೀಧರ ರಾವ್ (೨೦೦೦), ನರ್ಮದಾ(೨೦೦೧), ಪದ್ಮಶ್ರೀ ಶಾಂತಾರಾವ್(೨೦೦೨), ಸಿ.ರಾಧಾಕೃಷ್ಣ (೨೦೦೩), ಜಯಲಕ್ಷ್ಮಿಆಳ್ವ (೨೦೦೪), ಲೀಲಾರಾಮನಾಥನ್ (೨೦೦೫), ಕೆ.ಬಿ.ಮಾಧವರಾವ್(೨೦೦೬), ಟಿ.ಎಸ್.ಭಟ್ (೨೦೦೭), ಕೆ.ಎಂ.ರಾಮನ್ (೨೦೦೮), ಉಲ್ಲಾಳ ಮೋಹನ್ ಕುಮಾರ್ (೨೦೦೯), ರಾಧಾ ಶ್ರೀಧರ್ (೨೦೧೦) ಲಲಿತಾ ಶ್ರೀನಿವಾಸನ್ (೨೦೧೧), ವಸುಂಧರಾ ದೊರೆಸ್ವಾಮಿ (೨೦೧೨), ಪದ್ಮಿನಿ ರಾಮಚಂದ್ರನ್ (೨೦೧೩), ವಿಠ್ಠಲ ಶೆಟ್ಟಿ (೨೦೧೪), ಎಂ.ಶಕುಂತಲಾ (೨೦೧೫).

 

ಸಂಗೀತ ಮತ್ತು ನೃತ್ಯ ಅಕಾಡೆಮಿ

ಮೈಸೂರು ರಾಜ್ಯ ಸಂಗೀತ ಮತ್ತು ನಾಟಕ ಅಕಾಡೆಮಿ ಎಂಬುದಾಗಿ ೧೮-೦೨-೧೯೫೫ರಂದು ಉದ್ಘಾಟನೆಯಾಯಿತು. ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅಧ್ಯಕ್ಷತೆಯಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಮದರಾಸು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಗೌ. ರಾಜಮನ್ನಾರ್ ಅವರು ಉದ್ಘಾಟಿಸಿದ್ದರು. ೧೯೭೮ರಲ್ಲಿ ಕನ್ನಡ ಸಂಸ್ಕೃತಿ ಮತ್ತು ನೃತ್ಯ ಅಕಾಡೆಮಿ ಎಂಬುದಾಗಿ ನಾಮಕರಣವಾಯಿತು. ಸಂಗೀತ, ನಾಟಕ ನೃತ್ಯ ಸಮ್ಮೆಳನ ಏರ್ಪಡಿಸುವುದು, ಪ್ರಶಸ್ತಿ ನೀಡಿ  ಗೌರವಿಸುವುದು, ಕಲಾವಿದರ ಮಾಸಾಶನ, ಶಿಷ್ಯ ವೇತನ, ವಿಚಾರ ಸಂಕಿರಣ, ಸಂಸ್ಕೃತಿ ವಿನಿಮಯ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಲಾ ಪ್ರದರ್ಶನ, ಮಹತ್ವದ ಪುಸ್ತಕ ಪ್ರಕಟಣೆ ಮುಂತಾದವುಗಳನ್ನು ಏರ್ಪಡಿಸುವುದು ಇವೇ ಮೊದಲಾದ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಂಗೀತ ಕ್ಷೇತ್ರದಲ್ಲಿ ನಾಲ್ಕು ಬಗೆಯ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯು ೧೯೫೯ರಿಂದ ೨೦೧೦ರವರೆಗೆ ವಿವಿಧ ಪ್ರಕಾರಗಳಲ್ಲಿ ನಿರತರಾದ ೬೦೩ ಕಲಾವಿದರನ್ನು ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ೨೦೦೮ರಿಂದ ಈ ಪ್ರಶಸ್ತಿಗೆ ಕರ್ನಾಟಕ ಕಲಾಶ್ರೀ ಎಂದು ಹೆಸರಿಸಲಾಗಿದೆ.

ಚಿತ್ರಕಲೆ

ಕರ್ನಾಟಕದ ಅತ್ಯಂತ ಪ್ರಾಚೀನ ವರ್ಣಚಿತ್ರಗಳು ಕ್ರಿ.ಪೂ. ೨೦೦೦-೧೦೦೦ದ ಪ್ರಾಗಿತಿಹಾಸ ಕಾಲದವಾಗಿವೆ. ಪ್ರಾಗೈತಿಹಾಸಿಕ ಮಾನವ ಸಮುದಾಯವು ವಾಸಿಸುತ್ತಿದ್ದ ಚಾಚು ಬಂಡೆಗಳ ಕೆಳಮುಖದಲ್ಲಿ ಚಿತ್ರಿತವಾದ ಪ್ರಾಣಿಗಳ, ಮಾನವಾಕೃತಿಗಳ ಕಲಾವಶೇಷಗಳನ್ನು ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಮುಂತಾದ ಜಿಲ್ಲಾ ಪ್ರದೇಶಗಳಲ್ಲಿ ಕಾಣಬಹುದು. ಹಿರೇಬೆನಕಲ್, ಪಿಕ್ಲಿಹಾಳ ಮುಂತಾದ ಪ್ರಾಗೈತಿಹಾಸಿಕ ನಿವೇಶನಗಳಲ್ಲಿ ಆಯುಧ ಸಹಿತವಾದ ಬೇಟೆಗಾರರ, ಕುದುರೆ ಸವಾರರ, ಗೂಳಿ ಮುಂತಾದ ಚಿತ್ರಗಳು ಬಂಡೆಗಳ ಮೇಲೆ ಕಾಣಬರುತ್ತವೆ. ಮಣ್ಣಿನ ಮಡಕೆಗಳ ಮೇಲೆ ಬಣ್ಣದಲ್ಲಿ ಚಿತ್ರಿತವಾದ ಅನೇಕ ಆಕೃತಿಗಳು ಬ್ರಹ್ಮಗಿರಿ, ಚಂದ್ರವಳ್ಳಿ, ಹೆಮ್ಮಿಗೆ, ಹಿರೇಬೆನಕಲ್, ಮಸ್ಕಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಹೇರಳವಾಗಿ ದೊರಕಿವೆ.

ಇತಿಹಾಸ ಕಾಲದಲ್ಲಿನ, ಚಿತ್ರಕಲೆ ಹಾಗೂ ಅದರ ಅಸ್ತಿತ್ವದ ಕುರಿತು ಸಮಕಾಲೀನ ಸಾಹಿತ್ಯ ಮತ್ತು ಶಾಸನಗಳಲ್ಲಿ ಉಲ್ಲೇಖಗಳಿವೆ. ಚಿತ್ರಕಲೆಗೆ (ವರ್ಣಚಿತ್ರ) ಕರ್ನಾಟಕದಲ್ಲಿ ಇದ್ದ ಪ್ರೋತ್ಸಾಹದ ಬಗೆಗಿನ ಮೂಲವನ್ನು ಬಾದಾಮಿ ಚಾಲುಕ್ಯರ ಮಂಗಲೇಶನ ಕಾಲದಲ್ಲಿಯೇ ಕಾಣಬಹುದು. ಬಾದಾಮಿಯ ಮೂರನೇ ಗುಹೆಯಲ್ಲಿ ಅವನ ಕಾಲದ ವರ್ಣಚಿತ್ರಗಳ ಕುರುಹುಗಳನ್ನು  ಕಾಣಬಹುದಾಗಿದೆ. ಐತಿಹಾಸಿಕ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಈ ಪರಂಪರೆಯ ನಿರಂತರತೆಯಲ್ಲಿ ಅಂತರವಿರುವುದು ಕಂಡು ಬರುತ್ತದೆ. ಮೂಡಬಿದರೆಯಲ್ಲಿ ದೊರಕಿರುವ ಹೊಯ್ಸಳರ ಕಾಲದಲ್ಲಿ ನಕಲಿಸಿರುವ ರಾಷ್ಟ್ರಕೂಟ ಕಾಲದ ಚಿತ್ತಾಕರ್ಷಕವಾದ ವರ್ಣಚಿತ್ರಗಳನ್ನು ಧವಳ ಗ್ರಂಥದಲ್ಲಿ ಕಾಣಬಹುದು. ಈ ಚಿತ್ರಗಳು ದೃಶ್ಯ ಜೋಡಣೆ, ಭಂಗಿ ವಿನ್ಯಾಸ, ಸಮಾನ ಕಥಾವಸ್ತುಗಳನ್ನು ಆಧರಿಸಿ ಚಿತ್ರಿತವಾಗಿದ್ದರೂ, ಗುಜರಾತಿನ ಕಲ್ಪಸೂತ್ರ ವರ್ಣಚಿತ್ರಗಳಿಗಿಂತ ವಿಭಿನ್ನವಾಗಿವೆ. ಕಲಾಶೈಲಿಯು ವಿಶೇಷವಾಗಿ ದೇಶಿಯವಾಗಿದ್ದು ಹೊಯ್ಸಳ ಶಿಲ್ಪಗಳಲ್ಲಿ  ಕಾಣಬರುವ ಅಲಂಕಾರಿಕ ಶೈಲಿಯಂತೆ ಭಾವವನ್ನು ಮೂಡಿಸುತ್ತದೆ. ರುದ್ರಭಟ್ಟನಂಥ ಕನ್ನಡ ಕವಿಗಳು ಭಾವಚಿತ್ರ ಮತ್ತು ಇತರೆ ಚಿತ್ರಗಳ ಬಗ್ಗೆ ಉಲ್ಲೇಖಿಸಿರುವರು. ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಕೃತಿಯಲ್ಲಿ ಕಲೆಯ ಕುರಿತೇ ಒಂದು ಭಾಗವಿದೆ.

ವಿಜಯನಗರ ಕಾಲದ ವರ್ಣಚಿತ್ರಗಳನ್ನು ಅಧ್ಯಯನ ಮಾಡಿದರೆ ಭಿತ್ತಿಚಿತ್ರಗಳು ಬಹಳ ಪ್ರಮಾಣದಲ್ಲಿ ಬಳಕೆಯಲ್ಲಿದ್ದುವು ಎಂದು ತಿಳಿಯುತ್ತದೆ. ಹಂಪಿಯ ವಿರೂಪಾಕ್ಷ ದೇಗುಲದ ಛತ್ತಿನಲ್ಲಿ ಆ ಬಗೆಯ ಅತ್ಯಂತ ಪ್ರಾಚೀನ ಮಾದರಿಗಳು ಕಾಣಬರುತ್ತವೆ. ಕರ್ನಾಟಕದ ವರ್ಣಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ, ಅಂದಿನ ಜೀವನ ಸಂಗತಿಗಳನ್ನು ಪ್ರತಿಬಿಂಬಿಸುವ ಬದಲು ಚಿತ್ರಕಾರರು ಆಗಮಾದಿಗಳ ಸಿದ್ದ ಸೂತ್ರಗಳ ಪ್ರಕಾರವಾಗಿ ಸಾಂಪ್ರದಾಯಿಕ ದೃಶ್ಯ ಜೋಡಣೆಗಳನ್ನು, ಅತಿ ಬೆಡಗಿನ ಭಂಗಿಗಳನ್ನು ಆರಿಸಿಕೊಂಡು ಅನುಸರಿಸಿರುವುದು ಕಾಣಬರುತ್ತದೆ. ಈ ವರ್ಣಚಿತ್ರಗಳು ವಿಪುಲವಾಗಿ ಇಂದಿಗೂ ಕಾಣಬರುವ ಶಿಲ್ಪಗಳ, ಚಿತ್ರಕಲಾ ರೂಪದಂತೆ ಕಾಣುತ್ತವೆ. ಜಾತ್ಯಾತೀತ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳು ಕೂಡ ಇಂಥದೇ ಶೈಲಿಯನ್ನು ಅನುಸರಿಸಿವೆ. ಕರ್ನಾಟಕದ ಮುಖ್ಯ ದೇಗುಲಗಳನ್ನು ಬಹುತೇಕ ಇದೇ ಬಗೆಯ ಭಿತ್ತಿಚಿತ್ರಗಳಿಂದ ಅಲಂಕರಿಸುತ್ತಿದ್ದಿರ ಬೇಕು. ಸಿ.ಹಯವದನರಾಯರು ಸಂಪಾದಿಸಿರುವ ಮೈಸೂರು ಗ್ಯಾಸೆಟಿಯರ್‌ನಲ್ಲಿ ಈ ಬಗೆಯ ಭಿತ್ತಿಚಿತ್ರಗಳಿರುವ ಅಥವಾ ಚಿತ್ರಗಳಿದ್ದ ಹಳೆಯ ಮೈಸೂರು ಭಾಗದಲ್ಲಿನ ಅನೇಕ ದೇಗುಲಗಳನ್ನು ಹೆಸರಿಸಲಾಗಿದೆ; ಹಿರಿಯೂರಿನ ತೇರು ಮಲ್ಲೇಶ್ವರ ದೇಗುಲ, ಸೀಬಿಯ ನರಸಿಂಹ ದೇಗುಲ, ಶ್ರವಣಬೆಳಗೊಳದ ಜೈನಮಠ, ಮುಡುಕುತೊರೆ ಮಲ್ಲಿಕಾರ್ಜುನ ದೇಗುಲ, ಹಂಪಿ ವಿರೂಪಾಕ್ಷ ದೇಗುಲ, ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿ, ಕೃಷ್ಣ ಮತ್ತು ವರಾಹ ದೇಗುಲಗಳು, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲ, ಸಾಲಿಗ್ರಾಮದ ಜಿನಾಲಯ ಮುಂತಾದವು ಪ್ರಮುಖವಾಗಿವೆ. ಶ್ರೀರಂಗಪಟ್ಟಣದ ದರಿಯಾದೌಲತ್, ಮೈಸೂರಿನ ಜಗನ್ಮೋಹನ ಅರಮನೆ, ನರಗುಂದದ ಮಹಲುಗಳು, ವಿಜಯಪುರದ ಬಳಿಯ ಕಮತಗಿ ಮತ್ತು ನಿಪ್ಪಾಣಿ, ಧಾರವಾಡದ ಬಳಿಯ ಅಮ್ಮಿನಭಾವಿ, ಹಳಿಯಾಳದ ಬಳಿಯ ಬಿ.ಕೆ. ಹಳ್ಳಿಯ ರಾಮದೇಗುಲ, ರಾಯಚೂರು ಮತ್ತು ಗುಳೇದ ಗುಡ್ಡದ ಖಾಸಗಿ ಮನೆಗಳಲ್ಲಿ ಚಿತ್ರಗಳು (ಭಿತ್ತಿ) ಕಾಣಬರುತ್ತವೆ. ವಿಜಯನಗರೋತ್ತರ ಕಾಲದಲ್ಲಿ, ಚಿತ್ರಕಲೆಯು ಎರಡು ವಿಭಾಗಗಳಾಗಿ ಬೇರ್ಪಟ್ಟಂತೆ ಕಾಣುತ್ತದೆ. ವಿಜಯನಗರದರಸರು ಮತ್ತು ಅವರ ಸಾಮಂತರು (ಪಾಳೆಪಟ್ಟುಗಳು) ಆಗಮಾನುಸಾರಿ ಯಾದ ಪ್ರಾಚೀನ ಸಂಪ್ರದಾಯವನ್ನು ಅನುಸರಿಸಿದರು; ವಿಜಯ ಪುರ, ಕಲಬುರಗಿ ಮತ್ತು ಬೀದರ್ ಪ್ರದೇಶದ ದೊರೆಗಳು, ವಿಶಿಷ್ಟ ಶೈಲಿ ಎನಿಸಿದ ದಖ್ಖನಿ ಶೈಲಿಯ ಅಭಿವೃದ್ಧಿಗೆ ಕಾರಣರಾದರು.

ಈ ಸಂಪ್ರದಾಯದ ಅತ್ಯುತ್ತಮ ಮಾದರಿಗಳು ವಿಜಯಪುರ (ಬಿಜಾಪುರ)ದಲ್ಲಿ ಮೂಡಿಬಂದುವು. ಈ ಸಂಪ್ರದಾಯವು ಮೊಗಲ್ ಮಾದರಿಯಿಂದ ಪ್ರಭಾವಿತವಾದರೂ, ಪ್ರಬಲ ದೇಶೀಯ ಲಕ್ಷಣಗಳ ಎಳೆಗಳೂ ಅದರಲ್ಲಿವೆ. ಕರ್ನಾಟಕದ ದಕ್ಷಿಣ ಪ್ರದೇಶಗಳು, ವಿಜಯನಗರ ಕಾಲದಲ್ಲಿ ಅಭಿವೃದ್ಧಿಗೊಂಡ ಪ್ರಾಚೀನ ಶೈಲಿಯನ್ನೇ ಮುಂದುವರೆಸಿದವು. ವಿಜಯನಗರ ಪತನಾನಂತರ, ಆಸ್ಥಾನದ ಕಲಾವಿದರು ದಕ್ಷಿಣ ಭಾರತದ ವಿವಿಧ ಕಡೆಗೆ ವಲಸೆ ಹೋದರು. ಮೈಸೂರು ಅರಸರು ಕಲೆಗೆ ಆಶ್ರಯವನ್ನು ಮುಂದುವರೆಸಿದರು. ಬಹಳಷ್ಟ ಕಲಾವಿದರ ತಂಡವು ಶ್ರೀರಂಗಪಟ್ಟಣದಲ್ಲಿ ರಾಜಒಡೆಯರ ಆಶ್ರಯದಲ್ಲಿ ನೆಲೆಗೊಂಡಿತು. ಶ್ರೀರಂಗಪಟ್ಟಣದ ದರಿಯಾದೌಲತ್ನಲ್ಲಿ ಸ್ತಂಭ, ಭಿತ್ತಿ, ಛತ್ತು (ಛಾವಣಿ) ಮುಂತಾದವುಗಳ ಮೇಲೆ ವಿವಿಧ ವಸ್ತು-ವಿಷಯಗಳನ್ನು ಹೊಂದಿದ ವರ್ಣರಂಜಿತ ಚಿತ್ರಗಳಿವೆ. ಹೀಗೆಯೇ ಬೆಂಗಳೂರಿನ ಟಿಪ್ಪೂ ಅರಮನೆಯಲ್ಲಿ, ವರ್ಣಚಿತ್ರಗಳ ಕುರುಹುಗಳಿವೆ. ಭಿತ್ತಿ ಚಿತ್ರಗಳಲ್ಲಷ್ಟೆ ಅಲ್ಲದೆ, ಹಸ್ತಪ್ರತಿಗಳಲ್ಲಿಯೂ ಸಾಂದರ್ಭಿಕ ಚಿತ್ರಗಳನ್ನು ಬರೆಯಲು ವರ್ಣಚಿತ್ರಗಾರರಿಗೆ ವಹಿಸಲಾಯಿತು. ಅಂಥ ಚಿತ್ರಗಳಿರುವ ಹಸ್ತಪ್ರತಿಗಳಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ರೇಖಾಕೃತಿಗಳಿದ್ದು, ಅವು ಹಳೆಯ ತಲೆಮಾರಿನ ಅನೇಕ ಮನೆತನಗಳಲ್ಲಿ ಕಾಣಸಿಗುತ್ತವೆ. ಅಂಥ ಹಸ್ತಪ್ರತಿಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಶ್ರೀತತ್ತ್ವ ನಿಧಿ ಎಂಬ ಬೃಹತ್ ಕೃತಿ. ಮುಮ್ಮಡಿ ಕೃಷ್ಣರಾಜ ಒಡೆಯರ ಕೃಪಾ ಪೋಷಣೆಯಿಂದಾಗಿ ರಚಿತವಾದ ಈ ಹಸ್ತಪ್ರತಿಯು ಒಂಬತ್ತು ವಿಭಾಗಗಳನ್ನು ಹೊಂದಿದೆ. ಅದರಲ್ಲಿ ಶಕ್ತಿನಿಧಿ, ವಿಷ್ಣುನಿಧಿ, ಬ್ರಹ್ಮನಿಧಿ, ಶಿವನಿಧಿ ಇತ್ಯಾದಿ ವಿವಿಧ ವಿಷಯಗಳ ವಿವರಣೆ ಇದೆ.

ವರ್ಣಚಿತ್ರಗಳು ಆಗಮದ ವಿವಿಧ ಶಾಖೆಗಳಲ್ಲಿರುವ ಶಿಲ್ಪ, ಜ್ಯೋತಿಷ್ಯ, ತಂತ್ರ ಮುಂತಾದ ಪ್ರಾಚೀನ ಜ್ಞಾನವನ್ನು ಬಿಂಬಿಸುತ್ತವೆ. ಜಗನ್ಮೋಹನ ಅರಮನೆಯಲ್ಲಿ ದೊರೆಗಳೂ ಸೇರಿದಂತೆ ಉನ್ನತಾಧಿಕಾರಿಗಳ ವರ್ಣಚಿತ್ರಗಳಿವೆ. ಪೌರಾಣಿಕ ವಸ್ತುವನ್ನೊಳಗೊಂಡ ಜಲವರ್ಣ ಅಥವಾ ತೈಲವರ್ಣ ಚಿತ್ರಗಳು ಬಟ್ಟೆ ಹಾಗೂ ಗಾಜಿನ ಮೇಲೆ ಚಿತ್ರಿತವಾಗಿವೆ. ಸುಂದರಯ್ಯ, ಕೊಂಡಪ್ಪ, ಎಲ್ಲಪ್ಪ, ದುರ್ಗದ ವೆಂಕಟಪ್ಪ, ನರಸಿಂಹಯ್ಯ, ತಿಪ್ಪಾಜಪ್ಪ ಮತ್ತಿತರರು ಈ ಶೈಲಿಯನ್ನು ಅನುಸರಿಸಿ ಅಭಿವೃದ್ಧಿಗೊಳಿಸಿದರು. ಆ ಕಾಲಕ್ಕೆ ವರ್ಣಚಿತ್ರಕಾರರು ಬಣ್ಣಗಳನ್ನು ಇತರೆ ಸಾಮಗ್ರಿಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಆ ಬಣ್ಣಗಳನ್ನು ನಿಸರ್ಗಮೂಲದಿಂದ ಅಂದರೆ, ಸಸ್ಯಮೂಲ, ಖನಿಜಮೂಲ ಹಾಗೂ ಜೈವಿಕ ಮೂಲಗಳಿಂದ ತಯಾರಿಸುತ್ತಿದ್ದರು. ಸ್ವರ್ಣರೇಕುಗಳನ್ನು ಲೇಪಿಸಿದ ಜೆಸ್ಸೊ ಎಂಬ ಕುಸುರಿ ಕೆಲಸದ ಶೈಲಿಯು ಕರ್ನಾಟಕದ ಸಾಂಪ್ರದಾಯಿಕ ವರ್ಣಚಿತ್ರಗಳ ಶ್ರೇಷ್ಠತೆಯ ಗುರುತಾಗಿರುತ್ತಿತ್ತು. ಕಾಗದಗಳ ಮೇಲಲ್ಲದೆ ವರ್ಣಚಿತ್ರಕಾರರು ಗಾಜಿನ ಮೇಲೂ ಚಿತ್ರಗಳನ್ನು ಬಿಡಿಸುತ್ತಿದ್ದರು. ರಾಜಾ ರವಿವರ್ಮನು ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ಮೈಸೂರಿನಲ್ಲಿ ಚಿತ್ರಕಲೆಯಲ್ಲಿ ಸಮಕಾಲೀನ ವರ್ಣಚಿತ್ರಕಾರರ ಮೇಲೆ ಪ್ರಭಾವ ಬೀರಿದ್ದನು. ಮೈಸೂರಿನ ಶ್ರೀ ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ವ್ಯಾಸಂಗ ಕ್ರಮದ ಭಾಗವಾಗಿ ಯೂರೋಪಿಯನ್ ವರ್ಣಚಿತ್ರ ಶೈಲಿಯನ್ನು ಆರಂಭಿಸಿದಾಗ ಹಳೆಯ ಸಾಂಪ್ರದಾಯಕ ವರ್ಣಚಿತ್ರ ಶೈಲಿ ಕಣ್ಮರೆಯಾಗಿ ಪಾಶ್ಚಿಮಾತ್ಯ ಪದ್ಧತಿ ಮತ್ತು ಶೈಲಿಗಳಲ್ಲಿ ತರಬೇತಿ ಪಡೆದ ಹೊಸ ಪೀಳಿಗೆಯ ಚಿತ್ರಕಾರರ ಸೃಷ್ಟಿಯಾಯಿತು.

ಭಾರತದ ವಿವಿಧ ಕೇಂದ್ರಗಳಲ್ಲಿ ಹಾಗೂ ವಿದೇಶಗಳಲ್ಲಿ ಅನೇಕ ವರ್ಣಚಿತ್ರಕಾರರು ತರಬೇತಿ ಪಡೆದರು. ಕೆ. ವೆಂಕಟಪ್ಪ, ಪಾವಂಜೆ, ಕೆ.ಕೆ. ಹೆಬ್ಬಾರ್, ಕೆ. ಎಸ್.ಕುಲಕರ್ಣಿ, ಅಲಮೇಲಕರ್, ಎಸ್,ಜಿ.ವಾಸುದೇವ, ಎನ್.ಎಸ್.ಸ್ವಾಮಿ, ಸುಬ್ಬುಕೃಷ್ಣ, ಕೆ.ಕೇಶವಯ್ಯ, ಎಸ್.ನರಸಿಂಹಸ್ವಾಮಿ, ಎಸ್.ನಂಜುಂಡಸ್ವಾಮಿ, ವೈ.ಸುಬ್ರಮಣ್ಯರಾಜು, ದಂಡಾವತಿಮಠ ಮತ್ತು ಎನ್. ಹನುಮಯ್ಯ ಮುಂತಾದವರು ಖ್ಯಾತಿವೆತ್ತ ಕಲಾವಿದರಾಗಿದ್ದಾರೆ. ರಾಜ್ಯದ ಕಲಾವಿದರ ಪೈಕಿ, ಮೈಸೂರಿನ ಎಸ್. ನಂಜುಂಡಸ್ವಾಮಿ ಅವರು ವರ್ಣಚಿತ್ರಕಲೆಯ ಎಲ್ಲ ಆಯಾಮಗಳಲ್ಲೂ ತಮ್ಮ ಪ್ರತಿಭೆ ತೋರಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಂ. ವೀರಪ್ಪ, ಎಸ್.ಆರ್.ಸ್ವಾಮಿ ಮತ್ತು ಎಚ್.ಎಸ್. ಇನಾಮತಿ ಅವರು ತಮ್ಮ ಭಾರತೀಯ ಸಂಪ್ರದಾಯದ ಸಂಯೋಜನಾ ಮತ್ತು ವರ್ಣಚಿತ್ರಗಳಿಗೆ ಖ್ಯಾತರಾಗಿದ್ದಾರೆ.

ಕಲಬುರಗಿಯ ಶಂಕರ್‌ರಾವ್ ಅಳಂದ್ಕರ್ ಭಾವ ಪ್ರಧಾನ ವರ್ಣಚಿತ್ರಗಳ ರಚನೆಯಲ್ಲಿ ಪ್ರಸಿದ್ಧರು. ವಿ.ಆರ್. ರಾವ್, ಎಸ್. ಎಸ್. ಕುಕ್ಕೆ ಮತ್ತು ಆರ್.ಸೀತಾರಾಮ್ ಭಾವಚಿತ್ರಗಳ ರಚನೆಯಲ್ಲಿ ನಿಷ್ನಾತರು. ಜನಾಬ್ ಸೂಫಿ ಅವರ ವರ್ಣಚಿತ್ರಗಳ ಸಂಯೋಜನೆ ಹಾಗೂ ವರ್ಣಚಿತ್ರಕಲೆಯನ್ನು ಮನೋಹರವಾಗಿ ಕಲಾಕೃತಿಗಳಲ್ಲಿ ಅಳವಡಿಸುವ ಮೈಸೂರಿನ ಮೀರ್ ಶೌಕತ್ ಅಲಿ ಅವರ ಕಲಾತ್ಮಕತೆ ಚಿರಸ್ಮರಣೀಯ. ವೈ. ಸುಬ್ರಮಣ್ಯ ರಾಜು ಅವರ ಇತಿಹಾಸದ ಪ್ರಾಸಂಗಿಕ ಘಟನೆಗಳ ವರ್ಣಚಿತ್ರಗಳು, ಭಾರತೀಯ ಮತ್ತು ಪಾಶ್ಚಿಮಾತ್ಯ ಕಲಾಶೈಲಿಗಳ ಸಂಮಿಶ್ರಣವಾಗಿದೆ. ಎಂ.ಪಿ.ಮಿಣಜಗಿ ಅವರ ರಾಗಮಾಲ ವರ್ಣಚಿತ್ರಗಳು ಮತ್ತು ಎಂ.ಎ.ಚೆಟ್ಟಿ ಅವರು ತಮ್ಮ ವರ್ಣಚಿತ್ರಗಳಲ್ಲಿ ಜಲವರ್ಣಗಳನ್ನು ಸಂಮಿಶ್ರ ಮಾಡುವ ತಂತ್ರಕೌಶಲವು ಉತ್ಕೃಷ್ಟವಾದುದಾಗಿದೆ. ಎಂ.ಟಿ.ವಿ. ಆಚಾರ್ಯರ ವರ್ಣಚಿತ್ರಗಳು ಪೌರಾಣಿಕ ವಸ್ತು ಆಧಾರಿತವೆಂದು ಪ್ರಸಿದ್ಧವಾಗಿವೆ. ಎಸ್.ಎನ್.ಸ್ವಾಮಿ ಅವರ ತೈಲವರ್ಣದ ಭಾವಚಿತ್ರಗಳು ಹಾಗೂ ಪೆನ್ಸಿಲಿನ ರೇಖಾಚಿತ್ರಗಳು, ಟಂಕಸಾಲೆ ಅವರ ನಿಸರ್ಗ ದೃಶ್ಯದ ವರ್ಣಚಿತ್ರಗಳು, ಎನ್.ಹನುಮಯ್ಯ ಮತ್ತು ಎಫ್.ಜಿ.ಯಲವತ್ತಿ ಅವರ ಚೆಲುವಾದ ಜಲವರ್ಣದ ಚಿತ್ರಗಳು ಎಂತಹವರಿಗೂ ಖುಷಿ ಕೊಡುತ್ತವೆ. ವೈ. ನಾಗರಾಜು, ಬಿ. ಎಚ್. ರಾಮಚಂದ್ರ, ಎನ್. ಆರ್. ಐಯ್ಯಂಗಾರ್, ಡಿ.ವಿ. ಹಾಲಭಾವಿ, ಎಸ್.ಎಮ್.ಪಂಡಿತ್, ಎಸ್. ಎನ್. ಸುಬ್ಬುಕೃಷ್ಣ, ಮತ್ತು ಎಂ.ಎಚ್. ರಾಮು ಅವರು ವರ್ಣಭಾವಚಿತ್ರ ರಚನೆಯಲ್ಲಿ ಪರಿಣಿತರಾಗಿದ್ದರು. ರುಮಾಲೆ ಚನ್ನಬಸವಯ್ಯ, ಶುದ್ಧೋದನ, ಸುಬ್ಬುಕೃಷ್ಣ, ಎಂ.ಎಸ್. ಚಂದ್ರಶೇಖರ್ ಮತ್ತು ಪಿ.ಆರ್. ತಿಪ್ಪೇಸ್ವಾಮಿ ಅವರು ಗ್ರಾಮೀಣ ಜೀವನವನ್ನು ವಿವಿಧ ವರ್ಣಚಿತ್ರಗಳಲ್ಲಿ ಬಿಡಿಸುವ ವಿಶಿಷ್ಟ ಶೈಲಿಯನ್ನು ಹೊಂದಿದ್ದರು. ಪಿ.ಆರ್. ತಿಪ್ಪೇಸ್ವಾಮಿಯವರು ದೇಗುಲ ಮತ್ತು ತೀರ್ಥ ಕ್ಷೇತ್ರಗಳ ವರ್ಣಚಿತ್ರಗಳನ್ನು ಬಿಡಿಸುವುದರಲ್ಲಿ ನಿಷ್ನಾತರಾಗಿದ್ದರು. ದೇವನಹಳ್ಳಿಯ ಅಶ್ವತ್ಥಮ್ಮ ಅವರು ಪ್ರಾರಂಭದಲ್ಲಿ ಮಣ್ಣಿನಿಂದ, ನಂತರ ಕಲ್ಲಿನಲ್ಲಿ ಪ್ರತಿಮೆ ಮಾಡುತ್ತಿದ್ದು, ಶಿಲ್ಪಕಲಾ ಶಾಲೆಯಲ್ಲಿ ಡ್ರಾಯಿಂಗ್ ಮತ್ತು ಮಾಡೆಲಿಂಗ್ ಶಿಕ್ಷಕಿಯಾಗಿದ್ದರು.

ಪರಿಣಾಮಕಾರಿ ರೇಖಾಚಿತ್ರ ಹಾಗೂ ವ್ಯಂಗ್ಯಚಿತ್ರಗಳನ್ನು ಬಿಡಿಸುವುದು ತಾಂತ್ರಿಕ ಕಲಾಶಿಕ್ಷಣದ ಇನ್ನೊಂದು ಆಯಾಮವೇ ಆಗಿದೆ. ಅನೇಕ ಖಾಸಗಿ ಕಲಾ ಸಂಸ್ಥೆಗಳು, ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ಬಗೆಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿವೆ. ಸರ್ಕಾರವು ನಮೂನೆ/ಪ್ರತಿಮೆ ತಯಾರಿಕೆ (ಮಾಡೆಲಿಂಗ್) ಕುರಿತು ಪರೀಕ್ಷೆಗಳನ್ನು ನಡೆಸುತ್ತದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯು ೧೯೭೭ರಲ್ಲಿ ಈಗಿರುವ ಸ್ವರೂಪ ರೂಪಿಸಿಕೊಂಡಿದ್ದು ವಾರ್ಷಿಕ ಕಲಾಮೇಳ ಹಾಗೂ ಕಲಾ ಪ್ರದರ್ಶನಗಳನ್ನು ವ್ಯವಸ್ಥೆ ಮಾಡುತ್ತಿದೆ. ವಾರ್ಷಿಕವಾಗಿ ಬಹು ಉತ್ಕೃಷ್ಟ ಕಲಾಕೃತಿಗಳಿಗೆ ಪ್ರಶಸ್ತಿಯನ್ನು ನೀಡುತ್ತದೆ. ಅಕಾಡೆಮಿಯು ಕಲಾಪ್ರದರ್ಶನ/ ಕಲಾಮೇಳಗಳನ್ನು ಏರ್ಪಡಿಸಲು ಪ್ರೋತ್ಸಾಹಿಸುತ್ತದೆ ಹಾಗೂ ಕಲೆಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಳ್ಳಲು ಉದಾರ ಅನುದಾನವನ್ನು ನೀಡುತ್ತದೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕಲಾ ಶಿಬಿರಗಳನ್ನು ವ್ಯವಸ್ಥೆ ಮಾಡುತ್ತದೆ. ಕೇಂದ್ರ ಲಲಿತಕಲಾ ಅಕಾಡೆಮಿಯು ದೆಹಲಿಯಲ್ಲಿದ್ದು ಅದರ ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರವು ಚೆನ್ನೈನಲ್ಲಿದೆ. ದಕ್ಷಿಣ ಮಧ್ಯವಲಯದ ಸಾಂಸ್ಕೃತಿಕ ಕೇಂದ್ರವು ನಾಗಪುರದಲ್ಲಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್ (ಎನ್‌ಜಿಎಂಎ) ದಕ್ಷಿಣವಲಯ ಕೇಂದ್ರವು  ೨೦೦೮ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾಯಿತು. ಬೆಂಗಳೂರು ನಗರವು ಅನೇಕ ಪ್ರತಿಷ್ಠಿತ ಕಲಾಪ್ರದರ್ಶನಗಳನ್ನು ಏರ್ಪಡಿಸಿದ ಗೌರವಕ್ಕೆ ಪಾತ್ರವಾಗಿದೆ. ವಲಯ ಕೇಂದ್ರಗಳು ಅನೇಕ ಕಲಾಶಿಬಿರಗಳನ್ನು ಸಂಘಟಿಸಿದ್ದು, ರಾಜ್ಯದಿಂದ ಆಯ್ಕೆಯಾದ ಅನೇಕ ಕಲಾವಿದರು ಭಾಗವಹಿಸಿದ್ದಾರೆ. ಅಕಾಡೆಮಿಗಳೂ ಕೂಡ ಕಲೆಯ ಕುರಿತಾಗಿ ಆಗಾಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಅಲ್ಲಿ ಮಂಡಿತವಾದ ವಿಷಯಗಳ ಮೇಲಿನ ಪ್ರಬಂಧಗಳನ್ನು ಪ್ರಕಟಿಸುತ್ತಿವೆ. ಲಲಿತಕಲಾ ಅಕಾಡೆಮಿಯಿಂದ ಈ ದಿಸೆಯಲ್ಲಿ ಕಲಾವಾರ್ತೆ ಸಂಚಿಕೆಯನ್ನು ಪ್ರಕಟಿಸುತ್ತಿದೆ. ಕರ್ನಾಟಕ ಸರ್ಕಾರವು ಒಂದು ಬಸ್ಸನ್ನು ಕೂಡ ಮಾಡಿದ್ದು, ಇದರಿಂದ ಅಕಾಡೆಮಿಯು ಸಂಚಾರಿ ಕಲಾ ಪ್ರದರ್ಶನಗಳನ್ನು ಏರ್ಪಡಿಸಲು ಅನುಕೂಲವಾಗಿದೆ. ಈ ಕಲಾ ಕೃತಿಗಳನ್ನೊಳಗೊಂಡ ವಾಹನವು ವಿವಿಧ ಸ್ಥಳಗಳಿಗೆ ಸಂಚರಿಸುತ್ತದೆ. ಅಕಾಡೆಮಿಯು ವ್ಯವಸ್ಥೆಗೊಳಿಸುವ ಕಲಾ ಪ್ರದರ್ಶನ, ಕಲಾ ಶಿಬಿರ, ವಿಚಾರಗೋಷ್ಠಿ ವಿಚಾರ ಸಂಕಿರಣ ನಡೆಯುವ ಸ್ಥಳಗಳಲ್ಲಿ ಸಂಚಾರಿ ಕಲಾ ಪ್ರದರ್ಶನದ ವ್ಯವಸ್ಥೆ ಮಾಡುತ್ತದೆ. ದಸರ ಮತ್ತು ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳಗಳಲ್ಲಿಯೂ ಸಂಚಾರಿ ವಾಹನ ಕಲಾ ಪ್ರದರ್ಶನವನ್ನು ಏರ್ಪಡಿಸುತ್ತದೆ.

ಬಳ್ಳಾರಿಯ ಕೊಂಡಾಚಾರಿ, ಪುರುಷೋತ್ತಮ, ಅಗರಂ ಕೃಷ್ಣಮೂರ್ತಿ, ಶೇರಿಗಾರ್, ಬಾಯಿರಿ, ಟಿ.ಕೆ.ರಾಮರಾವ್ ಮತ್ತು ಹುಬ್ಬಳ್ಳಿಯ ಕೆ.ಬಿ.ಕುಲಕರ್ಣಿ ಮತ್ತಿತರರು ರೇಖಾಚಿತ್ರಗಳ ಬಿಡಿಸುವಿಕೆಗೆ ಪ್ರಸಿದ್ಧಿಯಾಗಿದ್ದಾರೆ. ಆರ್.ಕೆ.ಲಕ್ಷ್ಮಣ್, ಆರ್. ಎಸ್.ನಾಯ್ಡು, ಆರ್.ಮೂರ್ತಿ, ರಮೇಶ್, ಗೋಪಾಲ್, ಜಿ.ವೈ ಹುಬ್ಲೀಕರ್ ರಂಗನಾಥ್ ಎನ್.ಸಿ.ರಘು, ಗುಜ್ಜಾರ, ಪ.ಸ.ಕುಮಾರ್, ಎಸ್.ಕೆ.ನಾಡಿಗ್, ಗೋವಿಂದು ಮತ್ತಿತರರು ವ್ಯಂಗ್ಯ ಚಿತ್ರಗಳಿಗೆ ಹೆಸರುವಾಸಿಯಾದವರು. ಪಿ.ಸುಬ್ಬರಾವ್, ಆರ್.ಎಂ.ಹಡಪದ್, ಜಿ.ಎಸ್.ಶೆಣೈ, ಎಸ್.ಜಿ.ವಾಸುದೇವ್, ದಂಡಾವತಿಮಠ್, ಹಾಲಭಾವಿ, ಎಂ.ಸಿ.ಚಟ್ಟಿ, ವಿಜಯಸಿಂಧೂರ್, ಯು.ಭಾಸ್ಕರರಾವ್, ಎಂ.ಬಿ.ಪಾಟೀಲ್, ವಿ.ಎಮ್.ಸೋಲಾಪುರ್‌ಕರ್, ವಿ.ಟಿ.ಕಾಳೆ, ಎಂ.ಎಸ್.ಚಂದ್ರಶೇಖರ್, ರವಿಕುಮಾರ್‌ಕಾಶಿ, ಸಿ.ಚಂದ್ರಶೇಖರ, ಬಾಬು ಈಶ್ವರಪ್ರಸಾದ್, ವಿ.ಜಿ.ಅಂದಾನಿ, ಪೀಟರ್ ಲೂಯಿಸ್, ವಿ.ಬಿ.ಹಿರೇಗೌಡರ್, ಯೂಸುಫ್ ಅರಕಲ್, ಎಂ.ಎಸ್. ಮೂರ್ತಿ, ಪಿ.ಎಸ್.ಕಡೆಮನಿ, ಮಧುದೇಸಾಯಿ, ರಾಮದಾಸ್ ಅಡ್ಯಂತಾಯ, ಜಾನ್ ದೇವರಾಜ್, ಶಂಕರ್ ಪಾಟೀಲ್, ಚಂದ್ರನಾಥ್ ಆಚಾರ್ಯ, ಜೆ.ಎಮ್.ಎಸ್.ಮಣಿ, ಇ.ಜಿ.ಬಡಿಗೇರ, ಟಿ.ಪಿ.ಅಕ್ಕಿ, ಎಸ್.ಎಂ.ಪಂಡಿತ್, ರಾಮನರಸಯ್ಯ, ರಘೋತ್ತಮ್‌ಪುತ್ತಿ, ಗೂಳಣ್ಣನವರ್, ಎಂ.ಇ.ಗುರು, ಎಸ್.ಕಾಳಪ್ಪ, ಎಂ.ಎಸ್.ನಂಜುಂಡರಾವ್, ಎಂ.ಬಿ.ಬಸವರಾಜ್, ವಿಷ್ಣುದಾಸ್ ರಾಮದಾಸ್, ಸುಂಕದ್, ಮನೋಳಿ ಮತ್ತಿತರು ರಾಜ್ಯದಲ್ಲಿ  ಚಿತ್ರ ಕಲಾಕ್ಷೇತ್ರವನ್ನು ನಳನಳಿಸುವಂತೆ ಮಾಡಿದ್ದಾರೆ. ಪಿ.ಆರ್. ಕಮಲಮ್ಮ, ಸುಭಾಷಿಣಿ ದೇವಿ, ಎಸ್.ಧನಲಕ್ಷ್ಮಿ, ಎಂ.ಜೆ.ಕಮಲಾಕ್ಷಿ, ಶೀಲಾಗೌಡ, ಪುಷ್ಪಾ ದ್ರಾವಿಡ್, ಪುಷ್ಪಾಮಾಲ, ಶಾಂತಾಮಣಿ, ಸುರೇಖ, ರೇಣುಕ ಮಾರ್ಕಂಡೆ, ಗಾಯಿತ್ರಿ ದೇಸಾಯಿ, ರೇಣುಕಾ ಕೆಸರಮಡು ಮುಂತಾದವರು ಮುಖ್ಯ ಚಿತ್ರಕಲಾವಿದೆಯರಾಗಿದ್ದಾರೆ, ಸಿದ್ದಲಿಂಗಸ್ವಾಮಿ, ನಾಗೇಂದ್ರ ಸ್ಥಪತಿ, ಮತ್ತು ಮಹದೇವಸ್ವಾಮಿ ಶಾಸ್ತ್ರೀಯ ವರ್ಣ ಚಿತ್ರಕಲೆಯಲ್ಲಿ ಸಾಂಪ್ರದಾಯಿಕ ವಸ್ತು ಆಧಾರಿತ ರೇಖಾಚಿತ್ರಗಳನ್ನು ಬಿಡಿಸುವಲ್ಲಿ ಪರಿಣಿತರಾಗಿದ್ದಾರೆ. ರಚನಾತ್ಮಕ ಕಲಾವಿಮರ್ಶಕರಾಗಿ, ಪಾಂಡವಪುರದ ಜಿ.ವೆಂಕಟಾಚಲಮ್, ಶಿವರಾಮ ಕಾರಂತ, ಅ.ನ.ಕೃಷ್ಣರಾವ್, ಎಸ್.ಕೆ.ರಾಮಚಂದ್ರರಾವ್, ಬಿ.ವಿ.ಕೆ.ಶಾಸ್ತ್ರಿ, ಪಿ.ಆರ್,ತಿಪ್ಪೆಸ್ವಾಮಿ,  ಸಿ.ಎಸ್.ಕೃಷ್ಣಶೆಟ್ಟಿ ಕೆವಿಸುಬ್ರಮ್ಯ, ಅ.ಲನಸಿಹನ್ ಅನಿಲ್‌ಕುವ ಮೊಲಾವಹೆಸಗಳಿಸಿವಲ್ಲಿ  ಗಮನಾರ್ಹವಾಗಿದ್ದಾರೆ. ಅ.ನ. ಸುಬ್ಬರಾವ್, ಆರ್.ಎಂ.ಹಡಪದ್, ಎಂ.ಎಸ್.ನಂಜುಂಡರಾವ್ ಬೆಂಗಳೂರಿನಲ್ಲಿ ಕಲಾ ಶಾಲೆಯನ್ನು  ಪ್ರಾರಂಭಿಸಿದರು. ಧಾರವಾಡದಲ್ಲಿ ಹಾಲಭಾವಿ, ಹುಬ್ಬಳ್ಳಿಯಲ್ಲಿ ಮಿಣಜಗಿ, ಗದಗ್‌ನಲ್ಲಿ ಅಕ್ಕಿ, ಗುಲಬರ್ಗಾದಲ್ಲಿ ಅಂದಾನಿ, ತುಮಕೂರು, ಮೈಸೂರು, ಮತ್ತು ಮಂಗಳೂರಿನಲ್ಲಿ ಬಾಬುರಾವ್ ಕಂದಗೋಳ ಅವರು ಆರಂಭಿಸಿದ ಕಲಾ ಶಾಲೆಗಳು ಪ್ರಸಿದ್ಧಿಯನ್ನು ಪಡೆದಿವೆ. ಸರ್ಕಾರವೂ ಈ ಕ್ಷೇತ್ರದಲ್ಲಿ ತರಬೇತಿ ಶಾಲೆಗಳನ್ನು ಸ್ಥಾಪಿಸಿದೆ. ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಕಲಾಶಾಲೆಯನ್ನು ೧೯೧೩ರಲ್ಲಿ ಆರಂಭಿಸಲಾಯಿತು. ಚಿತ್ರಕಲೆ ಮತ್ತು ಕುಶಲಕಲಾ ಶಾಲೆಯನ್ನು (ಈಗ ಲಲಿತ ಕಲಾ ಕಾಲೇಜು), ದಾವಣಗೆರೆಯಲ್ಲಿ ೧೯೬೪ರಲ್ಲಿ ಆರಂಭಿಸಲಾಯಿತು. ರಾಜ್ಯ ಸರ್ಕಾರವು ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಗೆ ಲಲಿತಕಲಾ ಅಕಾಡೆಮಿಯು ಯೋಜನೆಗೊಳಿಸಿರುವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸುತ್ತಿದೆ. ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಅಲ್ಲಲ್ಲಿ ವಿಶ್ವವಿದ್ಯಾಲಯಗಳಿಂದ ಮಾನ್ಯತೆ  ಪಡೆದು ಖಾಸಗಿ ಕಲಾಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ೧೯೮೨ರಲ್ಲಿ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯನ್ನು (ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುಯಲ್ ಆರ್ಟ್) ಮೈಸೂರಿನಲ್ಲಿ ಆರಂಭಿಸಲಾಗಿದೆ. ಹಂಪಿ ವಿಶ್ವವಿದ್ಯಾಲಯವೂ ಕಲಾ ಪರೀಕ್ಷೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತಿದೆ.

ದಿ. ಎಂ. ಎಸ್. ನಂಜುಂಡರಾವ್ ಅವರಿಂದ ಆರಂಭಗೊಂಡ ಚಿತ್ರಕಲಾಪರಿಷತ್ತು ಮುಂದೆ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ ಗೌಡ ಅವರ ನೇತೃತ್ವದಲ್ಲಿ ಕಲಾ ಕಾಲೇಜಾಗಿ ಮುಂದುವರಿಯಿತು. ಆ ಸಂಸ್ಥೆಯು ಕಲಾ ಶಿಬಿರ, ಕಲಾ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸುತ್ತಿದೆ. ವಿಶಿಷ್ಟ ಪರಿಕಲ್ಪನೆಯಾದ ‘ಚಿತ್ರ ಸಂತೆಯ ಮೂಲಕ ಕಲಾಕೃತಿಗಳನ್ನು ಕೊಳ್ಳಲು ಪ್ರೋತ್ಸಾಹಿಸುತ್ತಿದೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಚಿತ್ರಕಲಾ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಕರ್ನಾಟಕದ ಚಿತ್ರ ಕಲಾವಿದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ೧೯೯೪ರಲ್ಲಿ ಸ್ಥಾಪಿಸಲಾಗಿದ್ದು, ‘ ಒಂದು ಲಕ್ಷ ನಗದು ಒಳಗೊಂಡಿರುತ್ತದೆ. ಈ ಪ್ರಶಸ್ತಿ ಪಡೆದ ಕಲಾವಿದರು; ಕೆ.ಕೆ. ಹೆಬ್ಬಾರ್ (೧೯೯೪). ಡಿ.ವಿ. ಹಾಲಭಾವಿ (೧೯೯೫), ಎಂ.ಸಿ. ಚೆಟ್ಟಿ (೧೯೯೬), ಪಿ.ಆರ್.ತಿಪ್ಪೇಸ್ವಾಮಿ (೧೯೯೭), ಆರ್.ಎಂ.ಹಡಪದ್ (೧೯೯೮), ಎಂ.ಜೆ. ಶುದ್ಧೋದನ (೧೯೯೯), ಎಂ.ಎಸ್. ಚಂದ್ರಶೇಖರ್ (೨೦೦೦), ಎಸ್.ಎಸ್.ಮನೋಳಿ (೨೦೦೧), ಜೆ.ಎಸ್.ಖಂಡೇರಾವ್ (೨೦೦೨), ಎಸ್.ಜಿ.ವಾಸುದೇವ್ (೨೦೦೩), ಯೂಸುಫ್ ಅರಕಲ್ (೨೦೦೪), ವಿಜಯ ಸಿಂಧೂರ್ (೨೦೦೫), ಬಿ.ಕೆ.ಹುಬ್ಲಿಕರ್ (೨೦೦೬), ಶಂಕರ ಗೌಡ ಬೆಟ್ಟದೂರು (೨೦೦೭), ಎಂ.ಬಿ.ಪಾಟೀಲ್ (೨೦೦೮), ವಿ.ಜಿ.ಅಂದಾನಿ (೨೦೦೯), ಚಂದ್ರನಾಥ ಆಚಾರ್ಯ (೨೦೧೦).ವಿ.ಬಿ.ಹಿರೇಗೌಡರ್ (೨೦೧೧), ಯು.ಭಾಸ್ಕರರಾವ್ (೨೦೧೨), ಕೆ.ಟಿ.ಶಿವಪ್ರಸಾದ್ (೨೦೧೩), ವಿ.ಟಿ.ಕಾಳೆ (೨೦೧೪), ಪೀಟರ್ ಲೂಯಿಸ್ (೨೦೧೫).

ಈ ಮುಂದೆ ಸೂಚಿತ ರಾಜ್ಯದ ಕಲಾವಿದರು ೧೯೫೮ರಿಂದ ೨೦೦೦ದವರೆಗೆ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ. ಕೆ.ಕೆ.ಹೆಬ್ಬಾರ್ ಎಸ್.ಜಿ.ವಾಸುದೇವ್, ಬಾಲನ್ ನಂಬಿಯಾರ್, ಯೂಸುಫ್ ಅರಕ್ಕಲ್, ವಿಜಯ ಸಿಂಧೂರ್, ಎಲ್.ಪಿ.ಆಂಚನ್, ಕೆ.ಆರ್.ಸುಬ್ಬಣ್ಣ, ಎನ್.ಪುಷ್ಪಮಾಲ, ಕೆ.ಎಸ್. ರಾವ್, ಆರ್.ಉಮೇಶ್, ವಿ.ಜಿ.ಅಂದಾನಿ, ಎಂ.ಬಿ.ಲೋಹರ್, ಶೇಷರಾವ್ ಬಿರಾದಾರ್, ಜಿ.ಆರ್.ಈರಣ್ಣ, ವೀರೇಂದ್ರ ಷಾ, ರವಿ ಕುಮಾರ್ ಕಾಶಿ, ರಾಮದಾಸ್ ಆಡ್ಯಂತಾಯ, ಸುನೀಲ್  ಮುದ್ದಾಪುರ್, ರಾಜೇಶ್ ಆಚಾರ್, ಗುರುಸಿದ್ದಪ್ಪ, ಅವರುಗಳು. ಕೆ.ಕೆ.ಹೆಬ್ಬಾರ್ ಮತ್ತು ಎಸ್.ರೋರಿಚ್ ಅವರುಗಳಿಗೆ ಫೆಲೋಶಿಪ್ ನೀಡಿ ಅಕಾಡೆಮಿಯು ಗೌರವಿಸಿದೆ.

 

ಕರ್ನಾಟಕ ಲಲಿತಕಲಾ ಅಕಾಡೆಮಿ

೧೯೬೪ರಲ್ಲಿ ಸ್ಥಾಪನೆಗೊಂಡಿದ್ದು, ೨೦೦೮ರಲ್ಲಿ ಪುನರ್ರಚನೆಗೊಂಡಿತು. ಜನಸಾಮಾನ್ಯರಲ್ಲಿ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಕಲಾವಿದರಿಗೆ ರಾಜ್ಯ –ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯಲು ಸಾಧ್ಯವಾಗುವಂತೆ ಕಾರ್ಯಕ್ರಮ ರೂಪಿಸುವುದು, ಶಿಷ್ಯವೇತನ ನೀಡಿ, ರಾಜ್ಯದ ಹೊರಗೆ, ಏಕವ್ಯಕ್ತಿ ಪ್ರದರ್ಶನ ನೀಡಲು, ಭಿತ್ತಿಚಿತ್ರ ನಕಲು ಮಾಡಲು ಸಹಾಯಧನ ನೀಡುತ್ತದೆ. ಕಲಾವಾರ್ತೆ ನಿಯತಕಾಲಿಕೆ ಪ್ರಕಟಣೆ, ಪುಸ್ತಕ ಪ್ರಕಟಣೆ, ಪ್ರಶಸ್ತಿ, ಬಹುಮಾನ ನೀಡಿಕೆ. ಆಯ್ದ ಕಲಾಕೃತಿಗಳ ಪ್ರದರ್ಶನ, ಚಿತ್ರಕಲಾ ಶಿಬಿರ, ಕಾರ್ಯಾಗಾರ, ವಾರ್ಷಿಕ ಪ್ರಶಸ್ತಿ ನೀಡುವುದು, ಫೋಟೋಗ್ರಾಫಿಕ್ ಕಲೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಯನ್ನು ೧೯೬೬ರಲ್ಲಿ ಆರಂಭಿಸಲಾಯಿತು. ೨೦೧೦ರವರೆಗೆ ೧೯೭೪- ೮೦ರ ಅವಧಿಯನ್ನು ಹೊರತುಪಡಿಸಿ ೧೭೩ ಕಲಾವಿದರನ್ನು ಅಕಾಡೆಮಿಯು ಸನ್ಮಾನಿಸಿದೆ. ೨೦೦೧ರಿಂದ ಲಲಿತ ಕಲಾ ಅಕಾಡೆಮಿಯು, ಲಲಿತ ಕಲೆಗಳ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿದವರಿಗೆ ವಿಶೇಷ ಪ್ರಶಸ್ತಿಯನ್ನು ನೀಡುವ ರೂಢಿಯನ್ನು ಆರಂಭಿಸಿತು.

ಕರ್ನಾಟಕ ರಂಗಭೂಮಿ

ಕನ್ನಡದಲ್ಲಿ ಮೊಟ್ಟಮೊದಲ ನಾಟಕ ರಚನೆಯಾದದ್ದು ೧೭ನೇ ಶತಮಾನದಲ್ಲಿ. ಮೈಸೂರು ಆಸ್ಥಾನ ಕವಿ ಸಿಂಗರಾರ್ಯನು ಬರೆದ ‘ಮಿತ್ರಾವಿಂದ ಗೋವಿಂದ ಎಂಬ ನಾಟಕ. ಶ್ರೀಹರ್ಷ ಸಂಸ್ಕೃತ ಭಾಷೆಯ ‘ರತ್ನಾವಳಿ ನಾಟಕದ ಕನ್ನಡದ ಅವತರಣಿಕೆ ಇದಾಗಿದೆ. ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರವು ಬಹಳವಾಗಿ ಸಂಸ್ಕೃತದಿಂದ ಪ್ರಭಾವಿತವಾಗಿದ್ದ ಕಾರಣ, ಸಂಸ್ಕೃತ ನಾಟಕಗಳನ್ನು ಸಾಮಾನ್ಯವಾಗಿ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಅಂದಿನ ಎಲ್ಲ ಕನ್ನಡ ಕವಿಗಳೂ, ಸಂಸ್ಕೃತ ಮಹಾಕಾವ್ಯದ ಮಾದರಿಯಲ್ಲಿಯೇ ತಮ್ಮ ಕಾವ್ಯಗಳನ್ನು ರಚಿಸುತ್ತಿದ್ದರು. ಅವರು ನಾಟಕ ರಚನೆಗಿಂತ ಕಾವ್ಯ ರಚನೆಯಿಂದ ಹೆಮ್ಮೆ ಪಡುತ್ತಿದ್ದರು. ಹೀಗಾಗಿ ೧೭ ನೆಯ ಶತಮಾನದವರೆಗೆ ಮಾತ್ರ ಸಂಸ್ಕೃತ ನಾಟಕಗಳು ಲಭಿಸುತ್ತವೆ. ಕಾಲಕ್ರಮೇಣ ಪ್ರಸಿದ್ಧ ಕನ್ನಡ ಲೇಖಕರು ಕನ್ನಡದಲ್ಲಿ ನಾಟಕಗಳನ್ನು ಬರೆಯಲು ಉಪಕ್ರಮಿಸಿದರು. ಐತಿಹಾಸಿಕ ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಗಮನಿಸಿದರೆ, ಆ ಕಾಲಕ್ಕೆ ನಾಟಕಗಳನ್ನು ಬರೆಯುವುದು ಅಸಭ್ಯ ಹಾಗೂ ಕೀಳು ಅಭಿರುಚಿಯೆಂದು ಪರಿಗಣಿಸಲಾಗುತ್ತಿತ್ತೆಂದು ಕಂಡುಬರುತ್ತದೆ.

ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು  ಮಹಾಭಾರತದ ಕಥೆಗಳು ಮೌಖಿಕ ಸಂಪ್ರದಾಯದ ಮೂಲಕ ಕನ್ನಡ ಜನತಾ ರಂಗಭೂಮಿಗೆ ಲಭ್ಯವಾದಾಗ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು. ಈ ಮಹಾಕಾವ್ಯಗಳ ಕಥೆಗಳೇ ಇಂದಿಗೂ ಕನ್ನಡದ ಬಹುತೇಕ ನಾಟಕಗಳ ಕಥಾವಸ್ತುಗಳಿಗೆ ಮೂಲವಾಗಿವೆ ಎಂಬ ಅಂಶ, ಅಶಿಕ್ಷಿತ ಸಾಮಾನ್ಯ ಜನರ ಮನಸ್ಸಿನ ಮೇಲೆ ಈ ಮಹಾಕಾವ್ಯಗಳು ಬೀರಿರುವ ಪ್ರಭಾವ ಎಷ್ಟೆಂಬುದನ್ನು ಸೂಚಿಸುತ್ತದೆ. ನೃತ್ಯ ಮತ್ತು ಸಂಗೀತಗಳು ನಾಟಕಗಳಲ್ಲಿ ಪ್ರಧಾನವಾಗಿದ್ದವು. ಕ್ರಮೇಣ ನಾಟಕಗಳಲ್ಲಿ ದೇವತೆಗಳು ಜನರನ್ನು ಹರಸಲಿ (ದೇವತೆಗಳನ್ನು ಕೊಂಡಾಡುವಂತೆ) ಎಂಬ ಭಾವ ಇರುವ ರೀತಿಯಲ್ಲಿ ನಾಟಕಗಳ ರಚನೆಯಾಯಿತು. ಇದು ಯಕ್ಷಗಾನ, ಬಯಲಾಟ, ಕೃಷ್ಣ ಪಾರಿಜಾತ ಹಾಗೂ ಜನಪದ ರಂಗಭೂಮಿಯ ವಿವಿಧ ಪ್ರಕಾರಗಳು ಉಗಮವಾಗಲು ಕಾರಣವಾಯಿತು. ಬ್ರಿಟಿಷ್‌ ವಸಾಹತು ಶಾಹಿಯೂ ರಂಗಭೂಮಿಯ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿತು. ಅವರು ತಮ್ಮೊಡನೆ ರಂಗನಾಟಕ ತಂಡಗಳನ್ನು ಕರೆತಂದರು. ಅವು ಷೇಕ್ಸ್‌ಪಿಯರನ ನಾಟಕ ಮತ್ತು ಇತರೆ ಜನಪ್ರಿಯ ಆಂಗ್ಲ ಭಾಷೆ ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಇವುಗಳಿಂದ ಉತ್ತೇಜನಗೊಂಡು, ಆಂಗ್ಲನಾಟಕಗಳು ಕನ್ನಡಕ್ಕೆ ಅನುವಾದಗೊಂಡು ಯಶಸ್ವಿ ರಂಗಪ್ರದರ್ಶನಗಳಾದವು. ಕಾಲಕ್ರಮೇಣ ಜನರ ಅಭಿರುಚಿಗನುಗುಣವಾಗಿ ನೃತ್ಯ ಮತ್ತು ಸಂಗೀತಗಳನ್ನೊಳಗೊಂಡ ನಾಟಕಗಳನ್ನು ರಚಿಸಲಾಯಿತು. ಪ್ರಾರಂಭದ ದಿನಗಳಲ್ಲಿ ಕೆಳಜಾತಿಯ, ಕೂಲಿ ಕೆಲಸ ಮಾಡುತ್ತಿದ್ದ ಅನಕ್ಷರಸ್ಥರು ರಂಗಭೂಮಿಯ ಮೇಲೆ ನಟಿಸುತ್ತಿದ್ದು. ಇದು ಕ್ರಮೇಣ ಬದಲಾಗಿ, ಎಲ್ಲ ಬಗೆಯ ಜನರು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅನೇಕ ವಿದ್ಯಾವಂತರು ಕೂಡ ಈ ನಾಟಕಗಳಲ್ಲಿ ಅಭಿನಯಿಸ ತೊಡಗಿದರು. ಕೇವಲ ಪುರುಷರು ಮಾತ್ರ ರಂಗದ ಮೇಲೆ ಬಂದು ನಟಿಸುತ್ತಿದ್ದರು. ಸಮಾಜದಲ್ಲಾದ ಬದಲಾವಣೆಗಳ ಫಲವಾಗಿ ಸ್ತ್ರೀಯರೂ ರಂಗಭೂಮಿಯ ಮೇಲೆ ಬಂದು ಅಭಿನಯಿಸಲು ಪ್ರೋತ್ಸಾಹಿಸಲಾಯಿತು. ವೃತ್ತಿಪರ ನಾಟಕ ಕಂಪನಿಗಳು, ರಾಜ್ಯಾದ್ಯಂತ ಸಂಚರಿಸಿ ಅನೇಕ ಕಡೆ ಯಶಸ್ವಿಯಾಗಿ ನಾಟಕ ಪ್ರದರ್ಶಿಸತೊಡಗಿದವು. ಗುಬ್ಬಿ ನಾಟಕ ಕಂಪನಿಯಂತಹ ಕೆಲವು ಪ್ರಸಿದ್ಧ ಹಳೆಯ ನಾಟಕ ಕಂಪನಿಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತ ಯಶಸ್ವಿಯಾಗಿ ಪ್ರದರ್ಶನಗಳನ್ನು ನೀಡುತ್ತಿದ್ದುವು. ಅವು ಸ್ವರಾಜ್ಯದಲ್ಲಷ್ಟೆ ಅಲ್ಲದೆ, ನೆರೆರಾಜ್ಯಗಳಲ್ಲೂ ಪ್ರದರ್ಶನ ನೀಡಿ ಉಚ್ಛ್ರಾಯ ಸ್ಥಿತಿಗೇರಿ ಖ್ಯಾತಿ ಪಡೆದಿದ್ದವು. ಉತ್ತರ ಕರ್ನಾಟಕದಲ್ಲಿನ, ಕೊಣ್ಣೂರು ನಾಟಕ ಕಂಪನಿ, ಶಿರಹಟ್ಟಿ ನಾಟಕ ಕಂಪನಿ, ವಿಶ್ವಗುಣಾದರ್ಶ ನಾಟಕ ಕಂಪೆನಿ ಮೊದಲಾದ ಕಂಪನಿಗಳಲ್ಲಿ, ಯಲ್ಲಮ್ಮ, ಗುರುಸಿದ್ದಪ್ಪ, ವೆಂಕೋಬರಾವ್, ಗರೂಡ ಸದಾಶಿವರಾವ್, ಮಾಸ್ಟರ್ ವಾಮನರಾವ್ ಮುಂತಾದ ಪ್ರತಿಭಾವಂತ ನಟ-ನಟಿಯರೂ, ಸಂಗೀತಗಾರರೂ ಇದ್ದು ಪ್ರಾಮುಖ್ಯತೆ ಪಡೆದಿದ್ದರು.

ದಕ್ಷಿಣ ಕರ್ನಾಟಕದಲ್ಲಿ ವರದಾಚಾರ್, ಗುಬ್ಬಿವೀರಣ್ಣ, ಮಹಮದ್ ಪೀರ್, ಮಳವಳ್ಳಿ ಸುಂದರಮ್ಮ, ಜಿ.ವಿ. ಮಾಲತಮ್ಮ, ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ ಸುಬ್ಬಯ್ಯನಾಯ್ಡು (ಸಿನಿಮಾಗಳಲ್ಲಿಯೂ ನಟಿಸಿದ್ದರು) ಆರ್.ನಾಗೇಂದ್ರರಾವ್, ಬಿ.ಜಯಮ್ಮ, ಸ್ತ್ರೀ ನಾಟಕ ಕಂಪನಿ ಕಟ್ಟಿ ಬೆಳೆಸಿದ ಆರ್.ನಾಗರತ್ನಮ್ಮ, ಹಿರಣ್ಣಯ್ಯ ಸಿ.ಬಿ. ಮಲ್ಲಪ್ಪ, ಎಂ.ಎನ್.ಗಂಗಾಧರ ರಾಯರು ಮುಂತಾದವರು ಧೀಮಂತ ನಟರಾಗಿದ್ದರು. ದುರ್ಬಲ ಕಥಾವಸ್ತುವಿದ್ದರೂ,ಚುರುಕಾದ ಸಂಭಾಷೆಣೆ ಇಲ್ಲದಿದ್ದರೂ, ರೋಮಾಂಚಕ ನಾಟಕೀಯ ತಿರುವುಗಳಿಲ್ಲದಿದ್ದರೂ, ಈ ಅಭಿನಯ ವಿಶಾರದರು ತಮ್ಮ ಸುಮಧುರ ಕಂಠದಿಂದ ಅಪ್ರಾಸಂಗಿಕ ಹಾಸ್ಯಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಹೀಗೆಲ್ಲ ಇದ್ದರೂ ಬೆಳೆಯುತ್ತಿದ್ದ ಸಾಮಾಜಿಕ ಪ್ರಜ್ಞೆಯನ್ನು ಎದುರಿಸಿ ನಿಲ್ಲಲಾಗದೆ ನಾಟಕ ಕಂಪೆನಿಗಳು ವಿಫಲವಾಗಿ, ಮನರಂಜನೆಯ ಮೂಲವಾಗಿ ಬಂದ ಸಿನಿಮಾಗಳ ಎದುರು ಯಶಸ್ವಿಯಾಗಿ ಸ್ಪರ್ಧಿಸಲಾಗದೆ, ವೃತ್ತಿ ರಂಗಭೂಮಿ ಕ್ರಮೇಣ ಕ್ಷೀಣಗೊಂಡಿತು. ಆದರೂ ೧೯ನೇ ಶತಮಾನದ ಕೊನೆಯ ಭಾಗ ಮತ್ತು ೨೦ನೆಯ ಶತಮಾನದ ಆರಂಭಕಾಲವು ವೃತ್ತಿಪರ ರಂಗಭೂಮಿಗೆ ಅತ್ಯುತ್ತಮ ಕಾಲವೆನಿಸಿತ್ತು.

ಹವ್ಯಾಸಿ ರಂಗಭೂಮಿಯು ಸುಶಿಕ್ಷಿತರ ರಂಗಭೂಮಿಯೆನಿಸಿತ್ತು. ಅದು ಸದಭಿರುಚಿಯ ಪ್ರೇಕ್ಷಕರಿಗಾಗಿ ರೂಪುಗೊಂಡಿದ್ದು ವೈವಿಧ್ಯಮಯ ವಿಷಯಗಳು ನಾಟಕದ ವಸ್ತುವಾಗಿದ್ದುವು. ಮೈಸೂರು ಸಂಸ್ಥಾನದ ಆಸ್ಥಾನ ಕವಿ ಬಸವಪ್ಪಶಾಸ್ತ್ರಿಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು. ಆದರೆ ಈ ಬಗೆಯ ನಾಟಕಗಳಲ್ಲಿ ಅಭಿನಯಿಸಲು ವಿದ್ಯಾವಂತ ಕಲಾವಿದರ ಅವಶ್ಯಕತೆ ಇತ್ತು. ಈ ರಂಗಚಳವಳಿಯು ಹೆಚ್ಚು ಹೆಚ್ಚು ವಿದ್ಯಾವಂತ ಹವ್ಯಾಸಿ ಕಲಾವಿದರನ್ನು ಬೆಳಕಿಗೆ ತರಲು ನೆರವಾಯಿತು. ೧೯೦೯ರಲ್ಲಿ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷೇನ್ (ಎ.ಡಿ.ಎ- ಹವ್ಯಾಸಿ ನಾಟಕ ಸಂಸ್ಥೆ) ಬೆಂಗಳೂರಿನಲ್ಲಿ ಆರಂಭವಾಯಿತು. ಭಾರತ ಕಲೋತ್ತೇಜಕ ಸಂಘವು ಧಾರವಾಡದಲ್ಲಿ ೧೯೦೪ರಲ್ಲಿ ಆರಂಭವಾಯಿತು.

ರಂಗಚಳವಳಿಯು ೨೦ನೇ ಶತಮಾನದ ಎರಡನೆಯ ದಶಕದಲ್ಲಿ ಬೆಂಗಳೂರಿನ ಕೈಲಾಸಂ, ಗದಗಿನ ಹುಯಿಲುಗೋಳ ನಾರಾಯಣರಾವ್, ಸಂಸ (ವೆಂಕಟಾದ್ರಿ ಐಯ್ಯರ್) ಮುಂತಾದವರು ಸ್ವಂತ ನಾಟಕಗಳನ್ನು ಮೊದಲಿಗೆ ಬರೆದಾಗ, ರಂಗಚಳವಳಿಗೆ ಉತ್ತೇಜನ ದೊರಕಿದಂತಾಯಿತು. ಆರಂಭದಲ್ಲಿ, ಇವು ಅನೂಹ್ಯ ಘಟನೆಗಳು, ರೋಮಾಂಚಕ ತಿರುವು ಕೊಡುವ ಭಾವನಾತ್ಮಕ (ಆವೇಶಾತ್ಮಕ) ವ್ಯಾಪಾರಿ ದೃಷ್ಟಿಯ ರಂಗಭೂಮಿಯ ನಾಟಕಗಳ ವಿರುದ್ಧ ಪ್ರತಿಭಟನಾತ್ಮಕವಾಗಿ ರೂಪುಗೊಂಡ ನಾಟಕಗಳಾಗಿದ್ದವು. ಎರಡನೆಯದಾಗಿ ಅವು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನೊಳಗೊಂಡ ನಾಟಕಗಳಾಗಿದ್ದುವು. ಮೂರನೆಯದಾಗಿ ಸಂಗೀತ, ನೃತ್ಯ ಮತ್ತು ಅಸಂಗತ ಹಾಸ್ಯದಿಂದ ಹೊರತಾಗಿದ್ದವು. ಕೈಲಾಸಂ ಬುದ್ಧಿ ಚಾತುರ್ಯವುಳ್ಳ ಚಮತ್ಕಾರಿಕ ಮಾತುಗಳಿಂದ ಕೂಡಿದ ಪ್ರತಿಭಾಶಾಲಿ ನಾಟಕಕಾರರಾಗಿದ್ದರು. ವಾಸುದೇವ ವಿನೋದಿನಿ ಸಭಾ, ಕನ್ನಡ ಹವ್ಯಾಸಿ ನಾಟಕ ತಂಡ ಮುಂತಾದವು ಹೊಸ ನಾಟಕ ತಂಡಗಳಾಗಿದ್ದುವು.

ಅಲ್ಲದೆ, ಕ್ಷೀರಸಾಗರ, ಅ.ನ.ಕೃಷ್ಣರಾವ್, ಪರ್ವತವಾಣಿ, ಕೈವಾರ ರಾಜಾರಾವ್, ಶ್ರೀರಂಗ ಮುಂತಾದ ಪ್ರಸಿದ್ಧ ನಾಟಕಕಾರರಿದ್ದರು. ಮುಂಚಿನ ದಿನಗಳಲ್ಲಿ ಹವ್ಯಾಸಿ ರಂಗಭೂಮಿಯು ಕೇವಲ ಶ್ರವ್ಯ ರಂಗಭೂಮಿಯಾಗಿತ್ತು. ವಾಸ್ತವವಾಗಿ ಹವ್ಯಾಸಿ ರಂಗಭೂಮಿಯು ವೃತ್ತಿರಂಗಭೂಮಿಯ ಕೃತಕತೆಯನ್ನು ಪ್ರತಿಭಟಿಸುವ ಮೂಲಕ ರೂಪುಗೊಂಡಿತ್ತು. ಅಲ್ಲಿಯ ಸಂಭಾಷಣೆಯ ಭಾಷೆ ಆಡುಭಾಷೆಯಾಗಿತ್ತು. ವೃತ್ತಿರಂಗಭೂಮಿಯ ಆಡಂಬರದ, ಅಲಂಕಾರಿಕ, ಕೃತಕ ಭಾಷೆಯಿಂದ ಅದು ದೂರವಿತ್ತು. ಈ ಅಂಶವೇ ಪ್ರೇಕ್ಷಕರು ಮತ್ತು ನಾಟಕಗಳ ನಡುವೆ ಆತ್ಮೀಯ  ಸಂಬಂಧವನ್ನು ಹೆಣೆದಿತ್ತು.

ಸ್ವಾತಂತ್ರ್ಯೋತ್ತರದಲ್ಲಿ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳ ವ್ಯಾಪಕತೆ ಹೆಚ್ಚಿತು. ಅಕಾಡೆಮಿಗಳು ಸ್ಥಾಪನೆಗೊಂಡವು, ಸಹಾಯಧನ (ಸಬ್ಸಿಡಿ)ವು ಮಂಜೂರಾಯಿತು. ನಾಟಕೋತ್ಸವಗಳು, ನಾಟಕ ಸ್ಪರ್ಧೆಗಳು ವ್ಯವಸ್ಥೆಗೊಂಡವು. ದೆಹಲಿಯಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ (ರಾಷ್ಟ್ರೀಯ ನಾಟಕ ತರಬೇತಿ ಶಾಲೆ) ಸ್ಥಾಪನೆಗೊಂಡಿತು. ಕರ್ನಾಟಕದ ಕೆಲವಾರು ರಂಗಾಸಕ್ತರು ಅಲ್ಲಿ ತರಬೇತಿ ಪಡೆದು ಬಂದವರನ್ನು, ಪ್ರಸಿದ್ಧ ನಾಟಕಕಾರ ಶ್ರೀರಂಗರು ಕನ್ನಡ ಹವ್ಯಾಸಿ ರಂಗಭೂಮಿಗೆ ಪರಿಚಯ ಮಾಡಿದರು. ವೃತ್ತಿರಂಗಭೂಮಿಯ ನಾಟಕಗಳ ಪ್ರೇಕ್ಷಕರು, ಆ ಕಂಪನಿಯ ಪ್ರಸಿದ್ಧ ನಟರನ್ನು ನೋಡಲಿಚ್ಛಿಸುತ್ತಿದ್ದರು ಇಲ್ಲವೇ, ಅಲ್ಲಿಯ ಪ್ರಸಿದ್ಧ ರಂಗಗೀತೆ ಗಾಯಕರ ಹಾಡುಗಳನ್ನು  ಕೇಳುವಲ್ಲಿ ಆಸಕ್ತರಾಗಿರುತ್ತಿದ್ದರು. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ಪ್ರೇಕ್ಷಕರು ನಾಟಕವನ್ನೇ ನೋಡಲು ಹೋಗುತ್ತಿದ್ದರು. ಹೀಗಾಗಿ ನಾಟಕಗಳಿಗೆ ದಕ್ಷ ನಿರ್ದೇಶಕನ ಅಗತ್ಯ ಕಂಡುಬಂದಿತು. ಬಿ.ವಿ.ಕಾರಂತರಂಥ ಪ್ರತಿಭಾವಂತರು ನಾಟಕ ನಿರ್ದೇಶಕರಾಗಿ ಬೆಳಕಿಗೆ ಬಂದರು.

೨೦ನೇ ಶತಮಾನದ ಉತ್ತರ ಭಾಗವು ಪಾಶ್ಚಿಮಾತ್ಯ ರಂಗಭೂಮಿಯ ಪರಿಕಲ್ಪನೆಗಳನ್ನು ನಮ್ಮ ರಂಗಭೂಮಿಯಲ್ಲಿ ಅನ್ವಯ ಮಾಡಿಕೊಳ್ಳುವ ಕಾಲವಾಗಿತ್ತು. ರಂಗಚಟುವಟಿಕೆಗಳಲ್ಲಿ ಪಾಶ್ಚಿಮಾತ್ಯ ಪ್ರಯೋಗಗಳನ್ನು ಅನುಸರಿಸುವುದಾಗಿತ್ತು. ಈ ರೀತಿಯ ಅಂತರನ್ವಯಗಳಿಂದಾಗಿ ಸಮಕಾಲೀನ ರಂಗ ಚಳವಳಿಗೆ ತೀವ್ರ ಚಾಲನೆ ದೊರಕಿತು. ೧೯೪೫ರಲ್ಲಿ ಪರ್ವತವಾಣಿ ಅವರ ಬಹದ್ದೂರ್ ಗಂಡು (ರೂಪಾಂತರ ಸೃಷ್ಟಿ) ನಾಟಕವು ನಿರಂತರ ೧೫೦ ರಂಗಪ್ರದರ್ಶನ ಕಂಡಿತು.

ಅದರಲ್ಲಿ ಯಮುನಾ ಮೂರ್ತಿ ಮೊಟ್ಟಮೊದಲ ಹವ್ಯಾಸಿ ರಂಗಭೂಮಿಯ ಸ್ತ್ರೀ ಕಲಾವಿದೆಯಾಗಿ ಪ್ರವೇಶಿಸಿ ಮುಖ್ಯ ಪಾತ್ರವನ್ನು ವಹಿಸಿದ್ದರು. ೧೯೫೪ರಲ್ಲಿ ವಿಮಲಾ ರಂಗಾಚಾರ್ ಅವರು ಕಲಾಜ್ಯೋತಿ ಸಂಸ್ಥೆಯಲ್ಲಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಕನ್ನಡ, ಇಂಗ್ಲಿಷ್‌ ಸಂಸ್ಕೃತ ಭಾಷೆಗಳನ್ಮುನ್ನು ಕಲಿತಿದ್ದ ಇವರು ಮೂರೂ ಭಾಷೆಗಳಲ್ಲಿ ಒಟ್ಟು ೫೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನವೋದಯ ಕಾಲದ ನಾಟಕಕಾರರಲ್ಲಿ ಶ್ರೀರಂಗ ಮತ್ತು ಜಿ.ಬಿ.ಜೋಶಿ ಅವರು ರಂಗಭೂಮಿಯ ಹೊಸ ಅಲೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಅನುಗುಣವಾಗಿ ನಾಟಕಗಳನ್ನು ಬರೆದರು. ಇದು ೧೯೫೫ರ ನಂತರದ ಕಾಲದಲ್ಲಿ ಘಟಿಸಿತು. ಸ್ವಾತಂತ್ರ್ಯಾನಂತರದಲ್ಲಿ ದೇಶದ ಜನರಲ್ಲಿ ಮೂಡಿದ ಹೊಸ ದೃಷ್ಟಿಕೋನವೇ ಇದಕ್ಕೆ ಕಾರಣವಾಗಿತ್ತು.

ನಾಟಕಕಾರರಲ್ಲಿ ಗಿರೀಶ್ ಕಾರ್ನಾಡ್, ಲಂಕೇಶ್, ಚಂದ್ರಶೇಖರ ಪಾಟೀಲ್, ಚಂದ್ರಶೇಖರ ಕಂಬಾರ, ಬಿ.ಸಿ.ರಾಮಚಂದ್ರ ಶರ್ಮ, ಎ.ಕೆ.ರಾಮಾನುಜನ್, ಕೀರ್ತಿನಾಥ ಕುರ್ತುಕೋಟಿ, ಎನ್.ರತ್ನ, ಪೂರ್ಣಚಂದ್ರ ತೇಜಸ್ವಿ ಮುಂತಾದವರು ರಂಗಭೂಮಿ ಚಳವಳಿಗೆ ಒತ್ತಾಸೆಯಾದವರಲ್ಲಿ ಮುಖ್ಯರು. ಬಿ.ಚಂದ್ರಶೇಖರ್, ಬಿ.ವಿ.ಕಾರಂತ್, ಎಂ.ಎಸ್.ನಾಗರಾಜ್, ಕೆ.ವಿ.ಸುಬ್ಬಣ್ಣ, ಮತ್ತು ಎನ್.ರತ್ನ ರಂಥ ಹೊಸ ನಾಟಕ ನಿರ್ದೇಶಕರು ಸಂದರ್ಭಕ್ಕೆ ತಕ್ಕಂತೆ ಸೂಕ್ತತೆಯನ್ನರಿತು (ರಂಗಭೂಮಿ ಚಳವಳಿ) ನಾಟಕ ರಚಿಸಿದರು. ಈ ಅವಧಿಯಲ್ಲಿ ‘ಯಯಾತಿ, ‘ತುಘಲಕ್, ಕೇಳು ಜನಮೇಜಯ, ತೆರೆಗಳು, ಜೋಕುಮಾರಸ್ವಾಮಿ, ಅಪ್ಪ, ಕುಂಟಕುಂಟ ಕುರವತ್ತಿ, ‘ನೀಲಿ ಕಾಗದ, ನೆರಳು, ಬ್ರಹ್ಮರಾಕ್ಷಸ, ಎಲ್ಲಿಗೆ, ಯಮಳ ಪ್ರಶ್ನೆ ಮುಂತಾದ ನಾಟಕಗಳು ಪ್ರಮುಖವಾಗಿ ಪ್ರದರ್ಶನಗೊಂಡು, ಇಂದಿಗೂ ಜನಪ್ರಿಯವಾಗಿಯೇ ಉಳಿದಿವೆ.

ಶ್ರೀರಂಗರನ್ನು ನಾಟಕ ಕ್ಷೇತ್ರದ ಹರಿಕಾರರೆನ್ನಬಹುದು. ಸುಮಾರು ೪೫ ನಾಟಕಗಳನ್ನು ರಚಿಸಿದ ಕೀರ್ತಿ ಅವರದು. ಅವರ ಎಲ್ಲ ನಾಟಕಗಳು ರಾಜ್ಯದಲ್ಲಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಹವು. ‘ಹರಿಜನ್ವಾರ, ಪ್ರಪಂಚ ಪಾನಿಪತ್ತು, ಸಂಧ್ಯಾಕಾಲ, ಶೋಕಚಕ್ರ, ಕೇಳು ಜನಮೇಜಯ, ನೀ ಕೊಡೆ ನಾ ಬಿಡೆ, ಸ್ವರ್ಗಕ್ಕೆ ಮೂರೇ ಬಾಗಿಲು, ಅಗ್ನಿ ಸಾಕ್ಷಿ ಮುಂತಾದವು ಶ್ರೀರಂಗರ ಪ್ರಖ್ಯಾತ ನಾಟಕಗಳಾಗಿವೆ. ಹೀಗೆಯೇ ಉಳಿದ ನಾಟಕಕಾರರ ಕೊಡುಗೆಯೂ ಅಷ್ಟೆ ಮಹತ್ವಪೂರ್ಣವಾಗಿವೆ. ಅವರಲ್ಲಿ ಜಿ.ಬಿ.ಜೋಷಿ, ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಚಂದ್ರಶೇಖರ ಕಂಬಾರರು ಅತ್ಯಂತ ಪ್ರಮುಖರು. ಸತ್ತವರ ನೆರಳು, ಮಾನಿಷಾದ, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಕ್ರಾಂತಿ ಬಂತು ಕ್ರಾಂತಿ, ಸಂಗ್ಯಾ ಬಾಳ್ಯಾ, ಬಕ, ನೆರಳು, ನೀಲಿ ಕಾಗದ, ಜೋಕುಮಾರ ಸ್ವಾಮಿ, ಸಿರಿಸಂಪಿಗೆ, ಋಷ್ಯಶೃಂಗ, ಮಹಾಮಾಯಿ ಮುಂತಾದುವುಗಳು ಇವರ ಗಮನಾರ್ಹ ನಾಟಕಗಳು.

ಈಚಿನ ರಂಗಭೂಮಿ ವಲಯದ ಉತ್ಸಾಹಿಗಳಾದ ಬಿ.ಎಸ್. ವೆಂಕಟರಾಮ್, ಪ್ರಸನ್ನ, ಹೆಚ್.ಕೆ.ರಾಮಚಂದ್ರಮೂರ್ತಿ, ಜಿ.ವಿ.ಶಿವಾನಂದ, ಸಿ.ಆರ್.ಸಿಂಹ, ಮತ್ತು ಕ.ವೆಂ. ರಾಜಗೋಪಾಲ್ ಬ್ರೆಕ್ಟನ ಆಂಗ್ಲ ಭಾಷೆ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ರಂಗಪ್ರಯೋಗ ಮಾಡಿದ್ದಾರೆ. ಸಿದ್ದಗಂಗಯ್ಯ ಕಂಬಾಳು ಅವರು ಬೆನಕನ ಕೆರೆ, ಶುನಶ್ಯೇಫ, ತಿರುಕರಾಜ, ಚೋರಪುರಾಣ ಇತ್ಯಾದಿ ನಾಟಕಗಳನ್ನು ರಚಿಸಿದ್ದಾರೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಲ್. ಎನ್. ಮುಕಂದರಾಜ್ ಅವರು ಶುವಾಲಿ ಮಿತ್ರ ಅವರ ಬಂಗಾಳ ನಾಟಕವನ್ನು ನಾಥರಿದ್ದೂ ಅನಾಥ ಎಂದು ಕನ್ನಡಕ್ಕೆ ತಂದಿದ್ದಾರೆ; ವೈಶಂಪಾಯನ ತೀರ ಎಂಬ ನಾಟಕವನ್ನು ಸಹ ರಚಿಸಿದ್ದಾರೆ. ೧೯೮೦ರ ದಶಕದ ನಾಟಕರಂಗದಲ್ಲಿ ಉತ್ಸಾಹಿಗಳೆನಿಸಿದ್ದ ಬಿ.ವಿ.ವೈಕುಂಠರಾಜು, ಶ್ರೀನಿವಾಸ ರಾಜು, ಟಿ.ಎನ್. ಸೀತಾರಾಮ್, ವಿಷು(ವಿಶು) ಕುಮಾರ್, ಶೂದ್ರ ಶ್ರೀನಿವಾಸ್, ಮತ್ತು ಡಿ.ಆರ್. ನಾಗರಾಜ್ ರಂಗಭೂಮಿ ಪರಂಪರೆಯನ್ನು ಮುಂಚೂಣಿಗೊಯ್ಯುವಲ್ಲಿ ಯಶಸ್ವಿಯಾದರು. ಬಿ.ವಿ. ವೈಕುಂಠರಾಜು ಅವರ ಸಂದರ್ಭ, ಟಿ.ಎನ್.ಸೀತಾರಾಮ್ ಅವರ ‘ಆಸ್ಫೋಟ, ಶ್ರೀನಿವಾಸರಾಜು ಅವರ ನಾಳೆ ಯಾರಿಗೂ ಇಲ್ಲ, ಯಾರಿಲ್ಲಿಗೆ ಬಂದವರು ಮತ್ತು ವಿಷುಕುಮಾರ್ ಅವರ ‘ಡೊಂಕುಬಾಲದ ನಾಯಕರು, ಕೃತಿಗಳು ಈ ನಾಟಕಕಾರರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ರಂಗಚಳವಳಿಯು ಮೈಸೂರು, ಧಾರವಾಡ ಮತ್ತು ಬೆಂಗಳೂರಿಗೆ ಮೊದಲಿಗೆ ಸೀಮಿತಗೊಂಡಿದ್ದುದು, ನಂತರ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಿಗೂ ಹರಡಿದೆ. ತರುಣ ನಿರ್ದೇಶಕರಾದ ಎಂ.ಎಸ್.ಪ್ರಭು, ಆರ್.ನಾಗೇಶ್, ಟಿ.ಎನ್.ನರಸಿಂಹನ್, ಸಿ.ಜಿ.ಕೃಷ್ಣಸ್ವಾಮಿ ಹಾಗೂ ಅನುಭವಿ ನಿರ್ದೇಶಕರಾದ ಪ್ರಸನ್ನ, ಬಿ.ಜಯಶ್ರೀ ಯಂಥವರಿಗೆ ಬಹಳ ಬೇಡಿಕೆಯಿದೆ. ಸಾಗರದ ಬಳಿಯ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಅವರು ರಂಗ ಸಂಸ್ಕೃತಿಯನ್ನು ಬೆಳೆಸಿ ಪೋಷಿಸಿದ ಕಾರಣ ಅಂತಾರಾಷ್ಟ್ರೀಯ ಪ್ರತಿಷ್ಠಿತ ರ್ಯಾಮನ್ ಮ್ಯಾಗ್ಸಸೆ ಪ್ರಶಸ್ತಿಯನ್ನು ಪಡೆದರು. ಕರ್ನಾಟಕದ ಮುಡಿಗೆ ಇದೊಂದು ಹೆಮ್ಮೆಯ ಗರಿ. 

ಕಳೆದ ದಶಕದಲ್ಲಿ ರಂಗಚಳವಳಿಯು ಸಾಗರದಷ್ಟು ವಿಶಾಲವಾದ ಮಾರ್ಪಾಟು ಹೊಂದಿತು. ಆದರೆ ಅದು ‘ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಡುವಲ್ಲಿ ವಿಫಲಗೊಂಡು ಕೆಲವಾರು ನಾಟಕಗಳು ಮುಂದೆ ಹೇಳ ಹೆಸರಿಲ್ಲವಾದುವು. ರಂಗಭೂಮಿಯ ಅನೇಕ ಪ್ರಸಿದ್ಧ ನಟರು, ಸಿನಿಮಾದತ್ತ ಮುಖಮಾಡಿದರು. ಇನ್ನೂ ಕೆಲವರು ಕರ್ನಾಟಕದಾಚೆ ಅವಕಾಶಗಳನ್ನರಸಿ ಹೋದರು. ಹೀಗೆ ಮಂಕಾದ ರಂಗಪರಿಸ್ಥಿತಿಯನ್ನು ಹೋಗಲಾಡಿಸಲು ಈ ದಶಕದಲ್ಲಿ ಕೆಲವು ಹೊಸ ಒಲವುಗಳು ಚಿಗುರಿದವು. ಜನಪ್ರಿಯ ಕಾದಂಬರಿಗಳ, ಸಣ್ಣಕಥೆಗಳ ಹಾಗೂ ಕವನಗಳ ರಂಗರೂಪಾಂತರಗಳು ರಂಗಭೂಮಿಯ ಮೇಲೆ ಕಾಣಿಸಿಕೊಂಡವು. ಚೋಮನದುಡಿ, ಕರಿಮಾಯಿ, ತಬರನ ಕಥೆ, ಒಡಲಾಳ, ಸಂಸ್ಕಾರ, ಚಿದಂಬರ ರಹಸ್ಯ, ಚಿಕ್ಕವೀರರಾಜೇಂದ್ರ, ಕಾಕನ ಕೋಟೆ, ಕಲ್ಕಿ, ಹೇಳತೇನ ಕೇಳ, ಸಾವಿರಾರು ನದಿಗಳು, ವೈಶಾಖ, ಕುಸುಮಬಾಲೆ, ಭೂಮಿಗೀತ, ಕಿಂದರಿಜೋಗಿ, ಮೂಕಜ್ಜಿಯ ಕನಸುಗಳು ಇತ್ಯಾದಿ ನಾಟಕಗಳು ರಂಗದ ಮೇಲೆ ಪ್ರದರ್ಶಿತಗೊಂಡವು. ಹೀಗೆಯೇ ಜಂಗಮ ಬದುಕು, ಹೆಚ್.ಎಸ್. ಶಿವಪ್ರಕಾಶ್ ಅವರ ಸಿಂಗಿರಾಜ, ಮಹಾಚೈತ್ರ, ಕುವೆಂಪು ಅವರ ‘ಜಲಗಾರ, ನಾಟಕಗಳು ಕೆ.ವಿ.ನಾಗರಾಜ ಮೂರ್ತಿ ನಿರ್ದೇಶನದಲ್ಲಿ ಪ್ರದರ್ಶನಗೊಂಡವು.

೧೯೮೩ ರಲ್ಲಿ ಸಿ.ಆರ್.ಸಿಂಹ ಅವರಿಂದ ಏಕವ್ಯಕ್ತಿ ರಂಗಪ್ರದರ್ಶನವಾದ, ಟಿಪಿಕಲ್ ಟಿ.ಪಿ.ಕೈಲಾಸಂ ಎಂಬ ನಾಟಕ ಹೊಸ ಪ್ರವೃತ್ತಿಗೆ ಉದಾಹರಣೆಯಾಯಿತು. ಅದರ ಯಶಸ್ವೀ ಪ್ರದರ್ಶನದಿಂದಾಗಿ ‘ನೀಗಿಕೊಂಡ ಸಂಸ, ‘ಷೇಕ್ಸ್‌ಪಿಯರನ ಸ್ವಪ್ನ ನೌಕೆ, ರಸಋಷಿ ಕುವೆಂಪು ದರ್ಶನ ಮುಂತಾದ ಅನೇಕ ಸಾದೃಶ ನಾಟಕಗಳು ಬೆಳಕು ಕಂಡವು. ಈ ಅವಧಿಯಲ್ಲಿ ಅನೇಕ ನಾಟಕಗಳು ಶತದಿನೋತ್ಸವ ಆಚರಿಸುವ ಮೂಲಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದವು. ‘ಬೆನಕ ತಂಡದ ಸತ್ತವರ ನೆರಳು, ಕಲಾಗಂಗೋತ್ರಿಯ ಮುಖ್ಯಮಂತ್ರಿ, ರಂಗಸಂಪದದ ಸಂಗ್ಯಾಬಾಳ್ಯಾ, ಯಶಸ್ವೀ ಕಲಾವಿದರು ತಂಡದ ಸಂಸಾರದಲ್ಲಿ ಸರಿಗಮ ಸಂಕೇತ ತಂಡದ ನೋಡಿ ಸ್ವಾಮಿ ನಾವಿರೋದೇ ಹೀಗೆ ಮತ್ತು ನಾಗಮಂಡಲ, ನಟರಂಗದ ತುಘಲಕ್, ವೇದಿಕೆ ತಂಡದ ಟಿಪಿಕಲ್ ಟಿ.ಪಿ. ಕೈಲಾಸಂ ಮುಂತಾದವುಗಳನ್ನು ಹೆಸರಿಸಬಹುದು. ಪ್ರಯೋಗರಂಗ ತಂಡದ ಬಿ.ನಾಗರಾಜ ಮೂರ್ತಿ ನಿರ್ಮಿಸಿದ, ಸುರೇಶ್ ಆನಗಳ್ಳಿ ನಿರ್ದೇಶನದ ಮಂಟೇಸ್ವಾಮಿ ಕಥಾ ಪ್ರಸಂಗವು ೨೩೬ ಪ್ರದರ್ಶನಗಳನ್ನು ಕಂಡಿದೆ.

‘ನಮ್ಮ ನಿಮ್ಮೊಳಗೊಬ್ಬ ನಾಟಕವು ೧೧೬ ಪ್ರದರ್ಶಗಳನ್ನು ನೀಡಿದೆ. ಒಂದು ಸೈನಿಕನ ವೃತ್ತಾಂತದ ನಿರ್ದೇಶನಕ್ಕೆ ರಾಷ್ಟ್ರೀಯ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ ರಂಗಭೂಮಿಗೆ ಸಮರ್ಪಿಸಿಕೊಂಡ ರಂಗಾಸಕ್ತರು ಹಾಗೂ ವಿವಿಧ ಸಂಸ್ಥೆಗಳು ರಂಗಚಳವಳಿಗೆ ವಿಶಿಷ್ಟ ಉಪಯುಕ್ತ ಸೇವೆಯನ್ನು ಸಲ್ಲಿಸುತ್ತಿವೆ. ರಂಗಶಂಕರ, ಅಮರ ಕಲಾ ಸಂಘ, ಸಮುದಾಯ, ಸಮತೆಂತೊ (ಮೈಸೂರು), ಭೂಮಿಕಾ, ಅಭಿವ್ಯಕ್ತಿ, ಯವನಿಕಾ, ಅಭಿನಯ, ರಂಗಭೂಮಿ, ಕಲಾಮಂದಿರ, ನಟರಂಗ, ಪ್ರಯೋಗರಂಗ, ರಥಬೀದಿ ಗೆಳೆಯರು (ಉಡುಪಿ), ರಂಗನಿರಂತರ ಮುಂತಾದ ನಾಟಕ ತಂಡಗಳು ರಂಗಭೂಮಿಯನ್ನು ಜೀವಂತವಿರಿಸಿ ತಮ್ಮ ಸೇವೆಯನ್ನು ಸಲ್ಲಿಸಿವೆ.

ನಾ. ದಾಮೋದರ ಶೆಟ್ಟಿ, ಆನಂದ ಗಾಣಿಗ, ದೇವಿ ಪ್ರಸಾದ್, ಐ.ಕೆ.ಬೋಳುವಾರು (ದ.ಕನ್ನಡ); ಶ್ರೀನಿವಾಸ ತಾವರಗೇರಿ, ಅಶೋಕ ಬಾದರದಿನ್ನಿ, ಧ್ರುವರಾಜ್ ದೇಶಪಾಂಡೆ, (ವಿಜಯಪುರ), ಶ್ರೀಪತಿ ಮಂಜನಬೈಲು (ಬೆಳಗಾವಿ), ಎಂ.ಬಿ.ಪಾಟೀಲ್ ಮತ್ತು ಗಿರೀಶ್ ಹಿರೇಮಠ (ರಾಯಚೂರು); ಮುದೇನೂರು ಸಂಗಣ್ಣ (ಚಿಗಟೇರಿ), ಡಾ.ಬಸವರಾಜ ಮಲಸೆಟ್ಟಿ (ಹೊಸಪೇಟೆ), ವಿಶ್ವನಾಥ ವಂಶೀಕೃತಮಠ (ಇಳಕಲ್ಲು), ಕಾರಿಯಪ್ಪ (ಕೊಡಗು) ಸುರೇಶ್ ಆನಗಳ್ಳಿ. ಆರ್.ನಾಗೇಶ್, ಪ್ರಸನ್ನ, ಬಸವಲಿಂಗಯ್ಯ ಮತ್ತಿತರರು ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಹೊರಗಡೆಯಲ್ಲೂ ಅನೇಕ ರಂಗಾಸಕ್ತರು, ಸಂಸ್ಥೆಗಳು, ಕನ್ನಡ ನಾಟಕಗಳ ಸತ್ವವನ್ನು ಪ್ರಸರಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿವೆ. ಅಂತವರಲ್ಲಿ ವೇಣುಗೋಪಾಲ್ (ಕಾಸರಗೋಡು) ಮುಂಬಯಿಯ ಬಲ್ಲಾಳರು, ಮಂಜುನಾಥ್, ಕರ್ನಾಟಕ ಸಂಘ, ಮತ್ತು ಮೈಸೂರು ಅಸೋಸಿಯೇಷೆನ್; ಕನ್ನಡ ಭಾರತಿ ನಾರಾಯಣ ರಾವ್, ಪ್ರಭಾಕರ ರಾವ್ ಮತ್ತು ನಾಗರಾಜ್ (ಹಳೆ ದಿಲ್ಲಿ) ಮುಂತಾದವರನ್ನು ಪ್ರಮುಖವಾಗಿ ಈ ದಿಸೆಯಲ್ಲಿ ಹೆಸರಿಸಬಹುದು.

ಈ ದಶಕದ ಉತ್ತರಾರ್ಧದಲ್ಲಿ ಮಹತ್ವದ ನಾಟಕಗಳು ಮೂಡಿಬಂದುವು. ಎಚ್. ಎಸ್. ಶಿವಪ್ರಕಾಶ್ ಮಂಟೇಸ್ವಾಮಿ ಕಥಾಪ್ರಸಂಗ ಮತ್ತು ಮಾದಾರಿ ಮಾದಯ್ಯ ನಾಟಕಗಳನ್ನು ಬರೆದರು. ಟಿ. ಎನ್. ಸೀತಾರಾಮ್ ಅವರ ‘ನಮ್ಮೊಳಗೊಬ್ಬ ನಾಜೂಕಯ್ಯ, ಗೋಪಾಲ ವಾಜಪೇಯಿ ಅವರ ‘ದೊಡ್ಡಪ್ಪ, ಸಿ. ಆರ್. ಸಿಂಹ ಅವರ ‘ಭೈರವಿ, ಚಂದ್ರಶೇಖರ ಕಂಬಾರರ ‘ಸಿರಿ ಸಂಪಿಗೆ, ಗಿರೀಶ್ ಕಾರ್ನಾಡರ ‘ತಲೆದಂಡ ಮತ್ತು ‘ನಾಗಮಂಡಲ ನಾಟಕಗಳೂ ಪ್ರಕಟವಾದವು. ‘ಸೂತ್ರಧಾರ ವಾರ್ತಾ ಪತ್ರಿಕೆಯು ಈಗ ತನ್ನ ಹೆಸರನ್ನು ಈ ಮಾಸ ನಾಟಕ ಎಂದು ಬದಲಾಯಿಸಿಕೊಂಡು ಎಲ್.ಕೃಷ್ಣಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದೆ. ರಂಗ ತರಂಗ, ರಂಗತೋರಣ ಮುಂತಾದ ರಂಗ ವಾರ್ತಾಪತ್ರಿಕೆಗಳು ಹಾಗೂ ಅನೇಕ ಸಾಂಸ್ಕೃತಿಕ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿದೆ. ಇವುಗಳು ರಂಗಭೂಮಿಯ ಚಟುವಟಿಕೆಗಳನ್ನು ದಾಖಲಿಸಿಕೊಂಡು ಬರುತ್ತಿದೆ.

೧೯೯೦ರಲ್ಲಿ ಪ್ರತಿಭಾವಂತ ತರುಣ, ನಟ-ನಿರ್ದೇಶಕ ಶಂಕರನಾಗ್ ಅವರ ಅನಿರೀಕ್ಷಿತ ನಿಧನದಿಂದಾಗಿ ಹವ್ಯಾಸಿ ರಂಗ ಭೂಮಿಗೆ ತುಂಬಲಾರದ ನಷ್ಟ ಉಂಟಾಯಿತೆನ್ನಬಹುದು. ಮುಂದೆ ೨೦೦೨ರಲ್ಲಿ ಬಿ.ವಿ.ಕಾರಂತರ ಮರಣ: ಜೊತೆಗೆ ಅಶೋಕ ಬಾದರದಿನ್ನಿ ಧ್ರುವರಾಜ ದೇಶಪಾಂಡೆ, ಸಿ.ಜಿ.ಕೃಷ್ಣಸ್ವಾಮಿ ಪ್ರೇಮಾಕಾರಂತರೂ ಕೂಡ ಇಂದಿಲ್ಲ. ಈ ದಶಕದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯು ವಿದೇಶಕ್ಕೂ ಹೋಗಿ ಹೆಸರು ಮಾಡಿತು. ಸಿ.ಆರ್.ಸಿಂಹ ಅವರ ‘ಟಿಪಿಕಲ್ ಟಿ.ಪಿ.ಕೈಲಾಸಂ ೧೯೮೬ರಲ್ಲಿ, ಅಮೇರಿಕ ಮತ್ತು ಕೆನಡಾಗಳಿಗೆ ಹೋಗಿ ೧೬ ಪ್ರದರ್ಶನಗಳನ್ನು ನೀಡಿ, ವಿದೇಶಕ್ಕೆ ಹೋದ ಕನ್ನಡದ ಮೊಟ್ಟ ಮೊದಲ ನಾಟಕ ಎಂದು ದಾಖಲೆ ನಿರ್ಮಿಸಿತು. ಬಿ.ಜಯಶ್ರೀ ಅವರು ಲಕ್ಷಾಪತಿ ರಾಜನ ಕಥೆ ನಾಟಕವನ್ನು ಈಜಿಪ್ಟ್ ಮತ್ತು ಬಲ್ಗೇರಿಯ ದೇಶಗಳಲ್ಲಿ ಪ್ರದರ್ಶಿಸಿದರು. ಪ್ರಭಾತ್ ಕಲಾವಿದರು ಪೂರ್ವಾಂತ್ಯ ದೇಶ ಮತ್ತು ಸಂಯುಕ್ತ ಸಂಸ್ಥಾನಗಳಿಗೆ ಹೋಗಿ ಪ್ರದರ್ಶನ ನೀಡಿದರು. ಮೈಸೂರಿನ ರಂಗಾಯಣವು ನ್ಯೂಯಾರ್ಕ್‌ನಲ್ಲಿ ‘ಹಿಪ್ಪೊಲೈಟಸ್ ನಾಟಕದ ಪ್ರದರ್ಶನವನ್ನು ನೀಡಿತು.

ಕೆ.ವಿ.ಸುಬ್ಬಣ್ಣ ಅವರ ನೀನಾಸಂ, ತಿರುಗಾಟ ಮತ್ತು ರಾಜ್ಯ ಸರ್ಕಾರದ ಮೈಸೂರಿನ ‘ರಂಗಾಯಣ ನಾಟಕ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಚಿದಂಬರರಾವ್ ಜಂಬೆ, ಕೆ.ವಿ.ಅಕ್ಷರ, ಕೆ.ಜಿ.ಕೃಷ್ಣಮೂರ್ತಿ ಮತ್ತು ಅತಿಥಿ ನಿರ್ದೇಶಕ ಪ್ರಸನ್ನರಂತಹ ಪ್ರತಿಭಾನ್ವಿತ ರಂಗಭೂಮಿ ನಿರ್ದೇಶಕರ ಸಹಕಾರದಿಂದ ತಿರುಗಾಟವು ಪ್ರತಿವರ್ಷ ಮೂರು ಅಥವಾ ನಾಲ್ಕು ನಾಟಕಗಳನ್ನು ಪ್ರದರ್ಶಿಸುತ್ತಿದೆ. ರಂಗಾಯಣವು ಬಿ.ವಿ. ಕಾರಂತರ ನೇತೃತ್ವದಲ್ಲಿ ರಂಗ ಪ್ರಶಿಕ್ಷಣ ಸಂಸ್ಥೆಯಾಗಿ ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆದು ಬಂದಿತು. ಜಯತೀರ್ಥ ಜೋಶಿ, ಬಸವಲಿಂಗಯ್ಯ, ರಘುನಂದನ, ಗಂಗಾಧರಸ್ವಾಮಿ ಮೊದಲಾದ ತರಬೇತಿಗೊಂಡ ನುರಿತ, ಪ್ರತಿಭಾನ್ವಿತರ ಸಹಕಾರದಿಂದ ರಂಗಾಯಣವು ಕಿಂದರಿಜೋಗಿ, ಷೇಕ್ಸ್ ಪ್ರಿಯರಿಗೆ ನಮಸ್ಕಾರ, ಕುಸುಮಬಾಲೆ, ಭೂಮಿಗೀತ ಮತ್ತು ಹಿಪ್ಪೊಲೈಟಸ್ ಮುಂತಾದ ಮಹತ್ವದ ನಾಟಕ ನಿರ್ಮಾಣಗಳಿಂದ ಹೆಸರು ಗಳಿಸಿವೆ. ಕಾರಂತರ ನಂತರ ಸಿ.ಆರ್.ಜಂಬೆಯವರ ನೇತೃತ್ವವು ರಂಗಾಯಣಕ್ಕಿತ್ತು. ಆ ನಂತರದಲ್ಲಿ ಬಸವಲಿಂಗಯ್ಯ ಅವರು ರಂಗಾಯಣದ ನಿರ್ದೇಶಕರಾದರು. ಇವರು ನಿರ್ದೇಶಿಸಿದ ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿನ ದಟ್ಟ ಮಲೆನಾಡಿನ ಅನುಭವವನ್ನು ತಂದುಕೊಡುವ ರೀತಿಯಲ್ಲಿ ರಂಗರೂಪವನ್ನು ಪ್ರದರ್ಶಿಸಿ ಅಪಾರ ಜನಮನ್ನಣೆಗಳಿಸಿ ದಾಖಲೆಯ ನಾಟಕವಾಗಿದೆ. ಇಂದು ಪ್ರಯೋಗರಂಗ ಮತ್ತು ಯುವರಂಗಗಳು ತಮ್ಮ ಸ್ವಂತ ನಿರ್ಮಾಣಗಳಲ್ಲದೆ ಬೆಂಗಳೂರಿನಲ್ಲಿ ಕಾಲೇಜು ಮತ್ತು ಕೈಗಾರಿಕಾ ಸಂಸ್ಥೆಗಳ ನಾಟಕ ತಂಡಗಳನ್ನು ಪ್ರೋತ್ಸಾಹಿಸಲು ನಾಟಕ ಸ್ಪರ್ಧೆಗಳನ್ನು ಸತತವಾಗಿ ಏರ್ಪಡಿಸುತ್ತಿದೆ. ಸಿ.ಜಿ.ಕೆ. ಅವರ ರಂಗ ನಿರಂತರವು, ತರುಣ ಬರಹಗಾರರ ತಂಡದ ಮೂಲಕ ನಾಟಕರಚನಾ ಶಿಬಿರವನ್ನು ಏರ್ಪಡಿಸುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ರಾಜ್ಯಾದ್ಯಂತ ನಾಟಕ ಕಾರ್ಯಾಗಾರ ಹಾಗೂ ನಾಟಕೋತ್ಸವಗಳನ್ನು ಏರ್ಪಡಿಸಿ ಅರ್ಹ ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ ನೀಡಿ, ರಂಗಾಸಕ್ತರಿಗೆ ಉತ್ತೇಜನವನ್ನು ನೀಡುತ್ತಿದೆ. ರಂಗಭೂಮಿಯ ನಟರಿಗೆ ಮಾಸಾಶನದ ನೆರವನ್ನೂ ನೀಡುತ್ತಿದೆ. ಪ್ರಸಿದ್ದ ಚಲನಚಿತ್ರ ನಟರಾದ ಡಾ.ರಾಜಕುಮಾರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು ‘ಕಲಾ ಕೌಸ್ತುಭ ಎಂಬ ಬಿರುದನ್ನೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಕರ್ನಾಟಕ ರತ್ನ ಎಂಬ ಪ್ರಶಸ್ತಿಯನ್ನೂ ನೀಡಿ ಗೌರವಿಸಿವೆ.

ಗುಬ್ಬಿ ವೀರಣ್ಣ ಪ್ರಶಸ್ತಿ

ವೃತ್ತಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಂದಾಯ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ೧೯೯೪ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ‘ಒಂದು ಲಕ್ಷಗಳನ್ನೊಳಗೊಂಡಿದ್ದು, ಈ ಪ್ರಶಸ್ತಿ ಪಡೆದ ಕಲಾವಿದರು; ಏಣಗಿ ಬಾಳಪ್ಪ (೧೯೯೪), ಬಿ.ವಿ.ಕಾರಂತ್ (೧೯೯೫), ಗಿರೀಶ್ ಕಾರ್ನಾಡ್ (೧೯೯೬), ಮಾಸ್ಟರ್ ಹಿರಣ್ಣಯ್ಯ (೧೯೯೭), ಹೆಚ್. ಕೆ.ಯೋಗಾನರಸಿಂಹ (೧೯೯೮), ಪಿ.ಬಿ.ಧುತ್ತರಗಿ (೧೯೯೯), ಎಚ್.ಎನ್.ಹೂಗಾರ (೨೦೦೦), ಆರ್.ನಾಗರತ್ನಮ್ಮ (೨೦೦೧), ಚಿಂದೋಡಿ ಲೀಲ (೨೦೦೨), ಬಿ.ಆರ್.ಅರಿಶಿನಗೋಡಿ (೨೦೦೩), ಬಸವರಾಜು ಗುಡಿಗೇರಿ (೨೦೦೪), ರೇಣುಕಮ್ಮ ಮುರುಗೋಡು (೨೦೦೫), ಜಿ.ವಿ.ಮಾಲತಮ್ಮ (೨೦೦೬) ಸುಭದ್ರಮ್ಮ ಮನ್ಸೂರ್ (೨೦೦೭). ಹೆಚ್.ಟಿ. ಅರಸು (೨೦೦೮) ಪಿ.ವಜ್ರಪ್ಪ(೨೦೦೯), ಪ್ರಮೀಳಮ್ಮ ಗುಡೂರು(೨೦೧೦).ಎಲ್.ಬಿ.ಕೆ. ಅಲ್ದಾಳ (೨೦೧೧), ಲಕ್ಷ್ಮೀಬಾಯಿ ಏಣಗಿ (೨೦೧೨), ಫಕೀರಪ್ಪ ವರವಿ (೨೦೧೩), ರಂಗನಾಯಕಮ್ಮ (೨೦೧೪), ಆರ್.ಪರಮಶಿವನ್ (೨೦೧೫).

 

ಕರ್ನಾಟಕ ನಾಟಕ ಅಕಾಡೆಮಿ

ನಾಟಕ ಅಕಾಡೆಮಿಯು ೧೯೫೯ ರಲ್ಲಿ ಆರಂಭವಾಯಿತು. ಜಾನಪದ ಶಿಬಿರಗಳು, ಜಿಲ್ಲಾ ನಾಟಕೋತ್ಸವಗಳು, ಕೈಲಾಸಂ ಶತಮಾನೋತ್ಸವ, ಪರ್ವತವಾಣಿ, ಶ್ರೀರಂಗರು ಮುಂತಾದ ಖ್ಯಾತ ನಾಟಕಕಾರರ ಬಗ್ಗೆ ವಿಚಾರಸಂಕಿರಣ, ಹೊರನಾಡಿನಲ್ಲಿ ನಾಟಕೋತ್ಸವ, ಕಲಾವಿದರಿಗೆ ಗೌರವಧನ, ಮಾಸಾಶನ ನೀಡುವಿಕೆ, ಶಿಷ್ಯವೇತನ, ಮಕ್ಕಳ ನಾಟಕ ಶಿಬಿರ, ಪ್ರಶಸ್ತಿ ನೀಡುವುದು, ಬೀದಿನಾಟಕ, ನಾಟಕ ಅಕಾಡೆಮಿಯ ಪ್ರಕಟಣೆ, ಸುವರ್ಣಸಂಭ್ರಮ, ಮಹಿಳಾ ರಂಗ ಸಮಾವೇಶ, ವಿಶೇಷ ಘಟಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ರಂಗಶಿಬಿರ ನಡೆಸುವುದು, ನಾಟಕ, ಸೀನರಿ ಉಡುಪು ಒದಗಿಸುವ ಸಂಸ್ಥೆಗಳಿಗೆ ಧನ ಸಹಾಯ ನೀಡಿಕೆ, ನಾಟಕ ರಚನಾ ಶಿಬಿರ ಮುಂತಾದ ಕಾರ್ಯಕ್ರಮ ನಡೆಸಿದೆ.

 

ಯಕ್ಷಗಾನ

ಕರ್ನಾಟಕದ ಜನಪದ ರಂಗಭೂಮಿಯ ಅನೇಕ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನವನ್ನು ಇತ್ತೀಚೆಗೆ ಆ ಹೆಸರಿನಿಂದಲೇ ಕರೆಯಲಾಗುತ್ತಿದೆ. ಮೊದಲು ಇದನ್ನು ಬಯಲಾಟ, ಭಾಗವತರಾಟ ಅಥವಾ ದಶಾವತಾರ ಆಟ ಎಂಬುದಾಗಿ ಕರೆಯಲಾಗುತ್ತಿತ್ತು. ‘ಯಕ್ಷಗಾನ ಎಂಬ ಸದ್ಯದ ಹೆಸರನ್ನು ಪಡೆಯಲು ಕಾರಣ, ಈ ನಾಟಕಗಳನ್ನು ಗೀತನಾಟಕ ಸ್ವರೂಪದಲ್ಲಿ ಬರೆದು, ಒಂದು ನಿರ್ದಿಷ್ಟ ಸಂಗೀತ ಶೈಲಿಯನ್ನು ಅಳವಡಿಸಿಕೊಂಡಿರುವುದೇ ಆಗಿದೆ. ಈ ಶಬ್ದವು ಈಗ ರಂಗನಾಟಕ ರೂಪಕ್ಕೂ ಪ್ರಕಾರಕ್ಕೂ ಸಮಾನಾರ್ಥಕ ಪದವಾಗಿ ಬಳಕೆಗೊಳ್ಳುತ್ತಿದೆ. ಸುಮಾರು ೧೬-೧೮ನೇ ಶತಮಾನದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಯಕ್ಷಗಾನ ನಾಟಕಗಳ ಸಮೃದ್ಧ ಸುಗ್ಗಿಯನ್ನು ಕಾಣಬಹುದಾಗಿದೆ. ೧೬-೧೭ನೇ ಶತಮಾನದ ನಡುವೆ ಕೂಚುಪುಡಿ ನೃತ್ಯ ಶೈಲಿಯ ಸಂಸ್ಥಾಪಕ ಸಿದ್ಧೇಂದ್ರಯೋಗಿಯು ಯಕ್ಷಗಾನ ಶೈಲಿಯಲ್ಲಿ ನಾಟಕಗಳನ್ನು ರಚಿಸಿದ. ಸಿದ್ಧೇಂದ್ರಯೋಗಿಯ ಶಿಷ್ಯ ತೀರ್ಥನಾರಾಯಣಯತಿಯು ಈ ನಾಟಕಗಳನ್ನು ತಂಜಾವೂರಿಗೆ ಒಯ್ದನು. ಕಾಲಾಂತರದಲ್ಲಿ ಕರ್ನಾಟಕದ ಕರಾವಳಿ ಪ್ರಾಂತದಿಂದ ಪ್ರಮುಖವಾಗಿ ಅವಿಭಜಿತ ದಕ್ಷಿಣ ಕನ್ನಡ ಪ್ರದೇಶದಿಂದ ಸುಮಾರು ೩೦೦ಕ್ಕೂ ಮೀರಿದ ಸಂಖ್ಯೆಯಲ್ಲಿ (ಯಕ್ಷಗಾನ) ನಾಟಕಕಾರರು ಬಂದರು. ಹಿಂದಿನ ನಾಟಕಕಾರರು ಯಕ್ಷಗಾನ ಶೈಲಿಯ ಸಂಗೀತವನ್ನು ತಮ್ಮ ಹಾಡು ಹಾಗೂ ನಾಟಕಗಳಲ್ಲಿ ಎಲ್ಲ ಬಗೆಯ ಭಾವ ಪ್ರಕಟನೆಗಳಿಗೆ ಮತ್ತು ಸನ್ನಿವೇಶಗಳಿಗೆ, ಬಳಸಿಕೊಂಡರು. ತಮ್ಮ ರಚನೆಯಲ್ಲಿ ಇಂದಿನ ಭಾಗವತರಿಗೆ ೩೦ ರಾಗಗಳ ಪ್ರಾವೀಣ್ಯವಿರುವುದಾದರೂ ಅಂದು ಸುಮಾರು ೧೬೦ಕ್ಕೂ ಹೆಚ್ಚಿನ ರಾಗಗಳನ್ನು ಪ್ರಯೋಗಿಸುತ್ತಿದ್ದರು. ಅವುಗಳಲ್ಲಿ ಶಾಸ್ತ್ರೀಯ ಸಂಗೀತದಲ್ಲಿರದ ನೇಪಾಳಿ, ಗುಜರಾತಿ, ಮಾಧವಿ, ಪಂಚಗತಿ, ಗೋಪಗೀತೆ, ಹೂವು, ದೀವಾಲಿ, ಚರಿತೆ, ಹರದಿ, ಮೇಚಲೆ ಮುಂತಾದ ಹಲವು ರಾಗಗಳಿವೆ.

ಯಕ್ಷಗಾನ ನಾಟಕದ ವಸ್ತುವನ್ನು ರಾಮಾಯಣ, ಮಹಾಭಾರತ, ಭಾಗವತ ಮತ್ತು ಇತರ ಪುರಾಣಗಳಿಂದ ಆಯ್ದುಕೊಳ್ಳಲಾಗುತ್ತದೆ. ಕೆಲವು ಕಥನ ಪ್ರಸಂಗದ ಸಾಲುಗಳನ್ನು ಬಿಟ್ಟರೆ ಉಳಿದುದೆಲ್ಲ ರಾಗ ಮತ್ತು ತಾಳದ ಲಯಕ್ಕೆ ಬದ್ಧವಾದಂತಾಗಿರುತ್ತದೆ. ನಾಟಕ ಚಿತ್ರಣದಲ್ಲಿ ಅಗತ್ಯವಾಗಿರಲೇಬೇಕಾದಂಥ ಅಂಶವೆಂದರೆ ಒಂದು ಸಂಗೀತ, ಇನ್ನೊಂದು ಕುಣಿತ. ಇವೆರಡಕ್ಕೂ ಮೂಲಪಾಠವಾಗಿ ಒಂದು ಸರಳ ಸಾಹಿತ್ಯಕ ವಿಷಯವಿರುತ್ತದೆ. ನೃತ್ಯಾಂಶಗಳಿಗೆ ಚಂಡೆ, ಮದ್ದಳೆ, ತಾಳಗಳಂಥ ತಾಡನ ವಾದ್ಯಗಳ ಸಮರ್ಥ ಬೆಂಬಲ ಇರುತ್ತದೆ. ನಾಟಕದ ಪಾತ್ರಧಾರಿಗಳು ಕಾಲಿಗೆ ಗೆಜ್ಜೆಯನ್ನು ಧರಿಸಿರುತ್ತಾರೆ. ನಾಟಕದ ಸಾರಾಂಶವನ್ನು ಹಾಡುಗಳಲ್ಲಿನ ವಿಷಯವನ್ನು ಅವಲಂಬಿಸಿ ಪ್ರೇಕ್ಷಕರಿಗೆ ಗದ್ಯರೂಪದಲ್ಲಿ ಹೇಳಲಾಗುತ್ತದೆ. ಕನ್ನಡ ಭಾಷೆಯ ಪರಿಚಯವಿಲ್ಲದ ಪ್ರೇಕ್ಷಕರನ್ನೂ, ವೇಷಭೂಷಣಗಳಿಂದ ವರ್ಣಾಲಂಕಾರಗಳಿಂದ, ಅಮೋಘ ಸಂಗೀತ ಘೋಷದ ಹಿನ್ನೆಲೆಯಲ್ಲಿ, ವಿಸ್ಮಯಕಾರಕ ವೈಭವದ ಭ್ರಮಾಲೋಕ ಸೃಷ್ಟಿಸಿ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ಒಟ್ಟಿನಲ್ಲಿ ಯಕ್ಷಗಾನ ರಂಗಭೂಮಿಯು ಇಂದಿಗೂ ಚಾಲ್ತಿಯಲ್ಲಿರುವ ಕೆಲವೇ ಶ್ರೀಮಂತ ರಂಗಕಲಾ ಪ್ರಕಾರಗಳಲ್ಲಿ ಒಂದಾಗಿದೆ. ದೇವಾಲಯಗಳಿಂದ ಒದಗಿರುವ ನೈತಿಕ ಮತ್ತು ಧಾರ್ಮಿಕ ಹಿನ್ನೆಲೆ ಇದ್ದರೂ ಇಂದು ಈ ಕಲಾಪ್ರಕಾರವು ವ್ಯಾಪಾರೀಕರಣಕ್ಕೆ ಸಿಲುಕಿ, ಕುದೃಷ್ಟಿಯನ್ನೊಳಗೊಂಡು ಜನಪ್ರಿಯ ರೀತಿಯ ಮನರಂಜನೆಯೊದಗಿಸುತ್ತಿದೆ.

ಈ ಶತಮಾನದ ಆರಂಭಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ದೇಗುಲ ಆಶ್ರಯಿತ ಯಕ್ಷಗಾನ ನಾಟಕ ಮಂಡಳಿಗಳು ಅನೇಕವಿದ್ದುವು. ಉತ್ತರ ಭಾಗದಲ್ಲಿ ಸೌಕೂರ್, ಮಾರನಕಟ್ಟೆ, ಮಂದಾರ್ತಿ; ದಕ್ಷಿಣ ಭಾಗದಲ್ಲಿ ಮೂಲ್ಕಿ, ಧರ್ಮಸ್ಥಳ ಮತ್ತು ಕೂಡ್ಲುವಿನ ಯಕ್ಷಗಾನ ನಾಟಕ ಮಂಡಲಿಗಳು ಪ್ರಮುಖವೆನಿಸಿದ್ದುವು. ತತ್ಸಂಬಂಧೀ ದೇವಸ್ಥಾನಗಳು ದೇಗುಲ ನಿಧಿಯ ನೆರವಿನಿಂದ ಆ ನಾಟಕ ಮಂಡಲಿಗಳನ್ನು ಪೋಷಿಸುತ್ತಿದ್ದು, ಆಯಾ ದೇಗುಲದ ಭಕ್ತರು ಪ್ರತಿ ನಾಟಕ ಪ್ರದರ್ಶನದ ಖರ್ಚನ್ನು ಭರಿಸಿ, ಪ್ರೇಕ್ಷಕರಿಗೆ ಉಚಿತವಾಗಿ ಪ್ರದರ್ಶನ ನೋಡಲವಕಾಶ ಕಲ್ಪಿಸುತ್ತಿದ್ದರು. ಈ ರೀತಿ ಸ್ಥಳೀಯ ಯಕ್ಷಗಾನ ಪೋಷಕರೂ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ವಿಶೇಷ ಕೋರಿಕೆಗನುಸಾರವಾಗಿ ಪ್ರತಿ ರಾತ್ರಿ ಯಕ್ಷಗಾನಗಳು ಪ್ರದರ್ಶಿತವಾಗುತ್ತಿದ್ದುವು. ಪಾತ್ರಧಾರಿಗಳು ಮತ್ತು ನೃತ್ಯಗಾರರು ಮೂಲತಃ ಕೃಷಿಕರಾಗಿರುತ್ತಿದ್ದರು. ಈ ನಾಟಕಗಳಲ್ಲಿ, ವೃತ್ತಿಪರ ಎನ್ನುವುದಕ್ಕಿಂತ, ದೇವರ ಸೇವೆ ಎಂದುಕೊಂಡು ಅಭಿನಯಿಸುತ್ತಿದ್ದರು.

೧೯೪೦ರ ನಂತರದ ಕಾಲದಲ್ಲಿ ಯಕ್ಷಗಾನ ತಂಡಗಳ ಸಾಂಸ್ಥಿಕ ಸ್ವರೂಪದಲ್ಲಿ ತೀವ್ರ ಮಾರ್ಪಾಟು ಕಾಣಲಾರಂಭಿಸಿತು. ದೇಗುಲಗಳು ಪ್ರದರ್ಶನ ನಿರ್ವಹಣೆಯ ಹಕ್ಕನ್ನು ಹರಾಜಿಗಿಡಲೆತ್ನಿಸಿದುವು. ಆ ವೇಳೆಗಾಗಲೇ ವೃತ್ತಿಪರ ನಾಟಕ ತಂಡಗಳು ಜನರನ್ನು ಬಹಳವಾಗಿ ಆಕರ್ಷಿಸತೊಡಗಿದ್ದವು. ಯಕ್ಷಗಾನ ಕಲಾವಿದರು ರಂಗಭೂಮಿಯ ವೇಷ ಭೂಷಣಗಳನ್ನು ಅನುಕರಣೆ ಮಾಡುತ್ತಾ, ಪಾರಂಪರಿಕ ನೃತ್ಯ ಪ್ರಕಾರವನ್ನು ದೂರಮಾಡುತ್ತ ಬಂದರು. ಇನ್ನೊಂದು ಲಕ್ಷಣವಾಗಿ, ವೃತ್ತಿಪರ ತಂಡಗಳು ಡೇರೆಗಳನ್ನು ಹಾಕಿ ಟಿಕೆಟ್‌ಗಳ ಮೂಲಕ ಪ್ರೇಕ್ಷಕರಿಗೆ ಪ್ರವೇಶಕೊಟ್ಟು ಅವರ ಮುಂದೆ ಪ್ರದರ್ಶನಗಳನ್ನು ಏರ್ಪಡಿಸುವ ವಿಶಿಷ್ಟ ಪದ್ದತಿ ರೂಢಿಗೆ ಬಂದಿತು. ಇದರೊಡನೆ ಯಕ್ಷಗಾನ ರಂಗಭೂಮಿಯ ಇಡೀ ಮನೋವೃತ್ತಿಯೇ ಸಂಪೂರ್ಣ ಬದಲಾವಣೆಗೊಂಡಿತು.

ಈಗಿನ ದಿನಗಳಲ್ಲಿ ಸುಮಾರು ೧೨ ವೃತ್ತಿಪರ ತಂಡಗಳು ಇವೆ. ಅಲ್ಲದೆ ದೇಗುಲದ ಭಕ್ತರಿಂದ ನಿರ್ವಹಣೆಗೊಂಡು, ಉಚಿತ ಪ್ರದರ್ಶನ ನೀಡುತ್ತಿರುವ ಕೆಲವೇ ಕೆಲವು ತಂಡಗಳೂ ಇವೆ. ಯಕ್ಷಗಾನವಂತೂ ಜನಸಾಮಾನ್ಯರ ಅಭಿರುಚಿಗಳಿಗನುಗುಣವಾಗಿ ಸ್ಪಂದಿಸುವುದರಿಂದ ಆರ್ಥಿಕವಾಗಿ ಯಶಸ್ಸುಗಳಿಸಿ ಜನಪ್ರಿಯವಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಅನೇಕ ಸಾಂಪ್ರದಾಯಿಕ ಅಂಶಗಳು ಕೈಬಿಟ್ಟು ಹೋಗಿವೆ. ಅಲ್ಲಿನ ನೃತ್ಯ ಪರಂಪರೆಯನ್ನು ಗದ್ಯೋಕ್ತಿಗಳು ಮರೆಮಾಡಿವೆ. ಚಲನಚಿತ್ರ ರಂಗದಲ್ಲಿ ಹೊಸತಿಗಾಗಿ ಕಾತರಿಸುವಂತೆ, ಹೊಸ ನಾಟಕ ವಸ್ತುವಿಷಯಗಳು ಕ್ರಮೇಣ ಹಳೆಯ ಜನಪ್ರಿಯ ಪೌರಾಣಿಕ ಮತ್ತು ಮಹಾಕಾವ್ಯಗಳ ವಸ್ತುವಿಷಯಗಳ ಸ್ಥಾನವನ್ನು ಆಕ್ರಮಿಸಿವೆ. ಜನಸಾಮಾನ್ಯರನ್ನು ಮೆಚ್ಚಿಸಲು ಅಸಭ್ಯ ಸಂಭಾಷಣೆಗಳು ಮುಖ್ಯ  ಪಾತ್ರ ವಹಿಸಿವೆ.

ಕೆಲವು ಪ್ರಸಿದ್ಧ ಯಕ್ಷಗಾನ ಮಂಡಲಿಗಳು ಇರಾ, ಸೂರತ್ಕಲ್, ಸಾಲಿಗ್ರಾಮ, ಅಮೃತೇಶ್ವರ, ಪೆರ್ದೂರು ಮತ್ತು ಇಡುಗುಂಜಿಗೆ ಸೇರಿದವುಗಳಾಗಿವೆ. ಹಳೆಯ ದೇಗುಲ ಯಕ್ಷಗಾನ ಮೇಳಗಳ ಪೈಕಿ, ಮಂದರ್ತಿ, ಧರ್ಮಸ್ಥಳ, ಕಟೀಲು ಮತ್ತು ಮಾರನಕಟ್ಟೆ ಯಕ್ಷಗಾನ ಮೇಳಗಳು ಇಂದಿಗೂ ಜೀವಂತವಾಗಿವೆ. ಆದರೆ ಅಲ್ಲಿಯೂ ಹಳೆ ಬಗೆಯ ಯಕ್ಷಗಾನ ನಾಟಕಗಳನ್ನು ಕೈಬಿಡುವ ಪ್ರವೃತ್ತಿಯು ಕಾಣಬರುತ್ತಿದೆ. ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ಯಕ್ಷಗಾನ ಕೇಂದ್ರವಿದೆ. ಅಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪಾರಂಪರಿಕ ನೃತ್ಯ ಮತ್ತು ಯಕ್ಷಗಾನ ವಿಧಾನಗಳನ್ನು ಕಲಿಸಲಾಗುತ್ತಿದೆ. ೧೯೭೨ರಲ್ಲಿ ಕೋಟ ಮತ್ತು ಧರ್ಮಸ್ಥಳದಲ್ಲಿ ಎರಡು ಯಕ್ಷಗಾನ ತರಬೇತಿ ಕೇಂದ್ರಗಳನ್ನು ಆರಂಭಿಸಲಾಯಿತು. ಯಕ್ಷಗಾನದ ಸೃಜನಶೀಲ ಕಲಾವಂತಿಕೆಯು ವೇಷಭೂಷಣ, ನೃತ್ಯ ಮತ್ತು ಸಂಗೀತಗಳನ್ನು ಮೇಳೈಸಿಕೊಂಡ ಸಮರ್ಥ ಕಲೆಯಾಗಿದ್ದು ಅಂತಸ್ಸತ್ವವುಳ್ಳದ್ದಾಗಿದೆ. ಜನತೆ ಈ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಅನೇಕ ಯಕ್ಷಗಾನ ಕಲಾವಿದರು, ಯಕ್ಷಗಾನ ಕಲೆಯನ್ನು ಸ್ವಂತ ಪ್ರಯತ್ನದಿಂದ ಶ್ರೀಮಂತಗೊಳಿಸಿದ್ದಾರೆ. ವೀರಭದ್ರ ನಾಯಕ್, ಉಪ್ಪೂರು ನಾರಾಯಣ ಭಾಗವತ, ಇರೋಡಿ ಸದಾನಂದ ಹೆಬ್ಬಾರ್, ಪೊಳಲಿಶಾಸ್ತ್ರಿ, ಮಲ್ಪೆ ಶಂಕರನಾರಾಯಣ ಸಾಮಗ, ಮೋವಾರು ಕಿಟ್ಟಣ್ಣ ಭಾಗವತ, ಅಳಿಕೆ ರಾಮಯ್ಯ ರೈ, ಹಾರಾಡಿ ಕೃಷ್ಣ ಗಾಣಿಗ, ಹಾರಾಡಿ ನಾರಾಯಣ ಗಾಣಿಗ, ಹಾರಾಡಿ ರಾಮ ಗಾಣಿಗ, ದಾಮೋದರ ಮಂಡೆಚ್ಚ, ಬಸವನಾಯಕ, ಬಲಿಪ ಸುಬ್ಬರಾಯ, ಹಿರಿಯಡ್ಕ ಗೋಪಾಲರಾವ್, ಅಗರಿ ಶ್ರೀನಿವಾಸ ಭಾಗವತ, ಕುರಿಯ ವಿಠಲಶಾಸ್ತ್ರಿ, ಉದ್ಯಾವರ ಮಾಧವ ಆಚಾರ್ಯ ಮುಂತಾದವರು ದಕ್ಷಿಣ ಕನ್ನಡದ ಪ್ರಸಿದ್ಧ ಯಕ್ಷಗಾನ ಪ್ರತಿಪಾದಕರಾಗಿದ್ದಾರೆ. ಕೆರೆಮನೆ ಶಿವರಾಮ ಹೆಗ್ಗಡೆ (೧೯೭೧ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು), ಕೆ.ಸದಾನಂದ ಹೆಗ್ಗಡೆ, ಗಣಪತಿ ಭಟ್ಟ, ಮೂಡಕಣಿ ನಾರಾಯಣ ಹೆಗ್ಗಡೆ (ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಬಾಬು ಭಟ್ಟ ಮುಂತಾದವರು ಉತ್ತರ ಕನ್ನಡ  ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದಾರೆ. ಕರ್ನಾಟಕದ ಇತರ ಭಾಗಗಳಲ್ಲೂ ಯಕ್ಷಗಾನವು ಬಹಳ ಜನಪ್ರಿಯವಾಗಿದ್ದು ಅದನ್ನು ಮೂಡಲಪಾಯ ಎಂದು ಗುರುತಿಸಲಾಗಿದೆ. ಶ್ರೀ ಕೃಷ್ಣ ಪಾರಿಜಾತದ ಗ್ರಂಥಕರ್ತೃ, ಅಪರಾಲ ತಮ್ಮಣ್ಣ, ಬೆಳಗಾವಿ ಜಿಲ್ಲೆಯ ಕುಳಗೋಡು ತಮ್ಮಣ್ಣ, ಮೈಸೂರು ಅರಸು ವಂಶದ ಅಳಿಯ ಲಿಂಗರಾಜ ಮುಂತಾದವರು ಪ್ರಸಿದ್ಧ ಯಕ್ಷಗಾನ ಕವಿಗಳಾಗಿದ್ದಾರೆ.

ಕರಾವಳಿ ಪ್ರದೇಶದಲ್ಲಿ ನಂಜಯ್ಯ, ಪಾರ್ತಿಸುಬ್ಬ, ಹಳೆಮಕ್ಕಿ ರಾಮ, ಹಟ್ಟಿಯಂಗಡಿ ರಾಮ ಭಟ್ಟ, ವೆಂಕಟ ಅಜ್ಜಾಪುರ, ನಿತ್ಯಾನಂದ ಅವಧೂತ, ಪಾಂಡೇಶ್ವರ ವೆಂಕಟ, ಗೇರುಸೊಪ್ಪೆ ಶಾಂತಪ್ಪಯ್ಯ, ನಗಿರೆ ಸುಬ್ರಮಣ್ಯ, ಧ್ವಜಪುರದ ನಾಗಪ್ಪಯ್ಯ, ಖ್ಯಾತ ಕನ್ನಡ ಕವಿ ಮುದ್ದಣ್ಣ ಮತ್ತು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಮುಂತಾದವರು ಪ್ರಸಿದ್ದ ಯಕ್ಷಗಾನ ಬರಹಗಾರರಲ್ಲಿ ಕೆಲವರು. ಯಕ್ಷಗಾನದಲ್ಲಿ ಎರಡು ಸಂಪ್ರದಾಯ ಮಾದರಿ ಇವೆ. ಅವುಗಳನ್ನು ದಕ್ಷಿಣ ಸಂಪ್ರದಾಯದ ತೆಂಕುತಿಟ್ಟು, ಉತ್ತರ ಸಂಪ್ರದಾಯದ ಬಡಗುತಿಟ್ಟು ಎಂದು ಕರೆಯುತ್ತಾರೆ. ಅವು ವೇಷಭೂಷಣದಲ್ಲಿ, ನೃತ್ಯದಲ್ಲಿ ಹಾಗೂ ಇತರ ಲಕ್ಷಣಗಳಲ್ಲಿ ಪರಸ್ಪರ ವ್ಯತ್ಯಾಸಗಳನ್ನು ಹೊಂದಿವೆ. ಅನೇಕ ತೆಲುಗು ಯಕ್ಷಗಾನಗಳನ್ನು ಕನ್ನಡನಾಡಿನಲ್ಲಿ ಬರೆಯಲಾಗಿದೆ. ಅವುಗಳಲ್ಲಿ ಬೆಂಗಳೂರಿನ ಸಾಮಂತ ದೊರೆ ಕೆಂಪೇಗೌಡನು ‘ಗಂಗಾ ಗೌರಿ ವಿಲಾಸಂ ಎಂಬ ಕೃತಿಯನ್ನು ರಚಿಸಿದ್ದಾನೆ. ಮೈಸೂರು ಆಸ್ಥಾನದಲ್ಲಿ ಅಂತಹ ಅನೇಕ ಕೃತಿಗಳು ರಚಿತವಾಗಿವೆ. ಸೂತ್ರದ ಬೊಂಬೆಯಾಟದಲ್ಲಿಯೂ ಸಹ, ಪಾಠ ಮತ್ತು ವಸ್ತು ಯಕ್ಷಗಾನದ್ದೇ ಆಗಿದೆ. ದಕ್ಷಿಣ ಕನ್ನಡದ ಉಪ್ಪಿನಕುದುರಿನ ಕೊಗ್ಗ ಕಾಮತ್ ಈ ಕಲೆಯಲ್ಲಿ ಸಿದ್ಧಹಸ್ತರಾಗಿದ್ದಾರೆ. ಯಕ್ಷಗಾನದ ಒಂದು ಮಾದರಿಯಾದ ಮೂಡಲಪಾಯವು ಬಯಲು ಸೀಮೆಯಲ್ಲಿ ರೂಢಿಯಲ್ಲಿದೆ. ಪ್ರಸಿದ್ಧ ಜಾನಪದ ವಿದ್ವಾಂಸರಾದ ಜೀ.ಶಂ.ಪರಮಶಿವಯ್ಯನವರ ಪರಿಶ್ರಮ, ಪ್ರಯತ್ನದ ಫಲವಾಗಿ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿ ಮೂಡಲಪಾಯ ಸಂಸ್ಥೆಯೊಂದು ಪ್ರಾರಂಭವಾಗಿತ್ತು. ಮೈಸೂರು ವಿಶ್ವವಿದ್ಯಾಲಯದ ಜಾನಪದ ಕಲಾ ವಿಭಾಗವೂ ಕೂಡ ಈ ಕಲೆಯನ್ನು ಬೋಧಿಸಿ ತರಬೇತಿ ಕೊಡುತ್ತಿದೆ. ಕಲಬುರಗಿ ಮತ್ತು ಧಾರವಾಡ ಪ್ರದೇಶಗಳಲ್ಲಿ ಯಕ್ಷಗಾನ ಮಾದರಿಯನ್ನು ದೊಡ್ಡಾಟ ವೆಂದು ಕರೆಯುತ್ತಾರೆ. ಕರಿಭಂಟನ ಕಾಳಗ, ಸಾರಂಗಧರ, ಕುಮಾರರಾಮನಕಥೆ ಮುಂತಾದ ಕಥಾವಸ್ತುಗಳು ಜನಪ್ರಿಯವಾಗಿವೆ. ಬಸವರಾಜ ಮಲಶೆಟ್ಟಿ ಹೊಸಪೇಟೆ, ಬಸವಲಿಂಗಯ್ಯ ಹಿರೇಮಠ ಕಿತ್ತೂರು, ಈ ಕ್ಷೇತ್ರದಲ್ಲಿ ಪ್ರಸಿದ್ಧ ನಿರ್ದೇಶಕರೆನಿಸಿದ್ದಾರೆ. ತುಮಕೂರು ಜಿಲ್ಲೆಯ ಕೊನೆಹಳ್ಳಿಯ ನರಸಪ್ಪ ಭಾಗವತ, ತುರುವೇಕೆರೆ ತಾಲೂಕು ಮುನಿಯೂರಿನ ದಾಸಾಚಾರ್, ಮಂಡ್ಯ ಜಿಲ್ಲೆ ಬೆಳ್ಳೂರಿನ ಪುಟ್ಟಶಾಮಾಚಾರ್, ಗೊಂಡೇದಹಳ್ಳಿಯ ಯತಿರಾಜಯ್ಯ, ಬೆಂಗಳೂರು ಜಿಲ್ಲೆಯ ಭಾಗವತ್ ಮುನಿಯಪ್ಪ ಮುಂತಾದ ಕಲಾವಿದರು ದಕ್ಷಿಣ ಕರ್ನಾಟಕವರಾಗಿದ್ದಾರೆ. ಅಫಜಲ್ಪುರದ ಮೋನಪ್ಪ ಸುತರ್, ಬ್ಯಾಹಟ್ಟಿಯ ಬುಡೆಪ್ಪ, ಸಂಡೂರು ತಾಲೂಕು ತಾಳೂರಿನ ನಂಜುಂಡಯ್ಯ ಹಿರೇಮಠ್, ಗೋಗಿಯ ಗಣಾಚಾರಿ, ಶಹಾಪುರ ತಾಲೂಕು ಹೂಗಾರದ ಚಂದಣ್ಣ ಗೋಗಿ ಈ ಸಂಪ್ರದಾಯದ ಪ್ರಸಿದ್ಧ ಕಲಾವಿದರಾಗಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ೨೦೦೮-೦೯ ರಲ್ಲಿ ಪ್ರತ್ಯೇಕಿಸಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಎಂಬುದಾಗಿ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು ಇದರ ವ್ಯಾಪ್ತಿ ಹಿರಿದಾದುದು. ಸಮಗ್ರ ಕನ್ನಡ ಜನಪದ ರಂಗಭೂಮಿಯ ಎಲ್ಲಾ ರೂಪಗಳು ಈ ಅಕಾಡೆಮಿಯ ಪರಿಧಿಯಲ್ಲಿ ಬರುತ್ತವೆ. ಇಲ್ಲಿ ಕರಾವಳಿ ಯಕ್ಷಗಾನವಿದೆ, ತಾಳಮದ್ದಳೆ ಇದೆ. ಬಯಲುಸೀಮೆಯ ಮೂಡಲಪಾಯವಿದೆ. ಉತ್ತರಭಾಗದ ದೊಡ್ಡಾಟ, ಸಣ್ಣಾಟ, ರಾಧಾನಾಟ, ಕೃಷ್ಣಪಾರಿಜಾತವಿದೆ. ರಾಜಾನಾಟ, ದಾಸರಾಟಗಳೂ ಇವೆ. ಅಲ್ಲದೆ, ಗೊಂಬೆ ರಂಗಭೂಮಿಗೆ ಸೇರಿದ ಸೂತ್ರದಗೊಂಬೆಯಾಟ. ಸರಳುಗೊಂಬೆಯಾಟ, ಕೀಲುಗೊಂಬೆಯಾಟ, ತೊಗಲು ಗೊಂಬೆಯಾಟಗಳಿವೆ. ಈ ಎಲ್ಲಾ ರಂಗರೂಪಗಳು ಸೇರಿ ಯಕ್ಷಗಾನ ಬಯಲಾಟ ಅಕಾಡೆಮಿ ರೂಪುಗೊಂಡಿದೆ. ಕುಂಬಳೆ ಸುಂದರ ರಾವ್ ಹಾಗೂ ಎಂ.ಎಲ್. ಸಾಮಗರು ಕ್ರಮವಾಗಿ ಇದರ ಮೊದಲ ಮತ್ತು ಎರಡನೆಯ ಅಧ್ಯಕ್ಷರು.

ಯಕ್ಷಗಾನ ಬಯಲಾಟದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಶೋಧನೆ, ತರಬೇತಿ ಶಿಬಿರ, ಅಧ್ಯಯನಾತ್ಮಕ ಕಮ್ಮಟ, ಕಲಾ ಶಿಕ್ಷಣ, ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು, ಪ್ರಾತ್ಯಕ್ಷಿಕೆಗಳು ಮುಂತಾದ ಚಟುವಟಿಕೆಗಳನ್ನು ಅಕಾಡೆಮಿ ಹಮ್ಮಿಕೊಳ್ಳುತ್ತದೆ. ಯಕ್ಷಗಾನದ ಸೀಮಾ ಪುರುಷರಾದ ಮಹಾಕವಿ ‘ಪಾರ್ತಿ ಸುಬ್ಬರ ಹೆಸರಿನಲ್ಲಿ ಒಂದು ಲಕ್ಷ ರೂ ಮೌಲ್ಯದ ರಾಜ್ಯಮಟ್ಟದ ಪ್ರಶಸ್ತಿಯನ್ನು ಅಕಾಡೆಮಿಯು ನೀಡುತ್ತಿದೆ.  ಪ್ರತಿ ವರ್ಷ ಹತ್ತು ಮಂದಿ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

 

ಜಾನಪದ ರಂಗಭೂಮಿ

ಕರ್ನಾಟಕದಲ್ಲಿ ಜಾನಪದ ರಂಗಭೂಮಿಗೂ ಶ್ರೀಮಂತ ಪರಂಪರೆ ಇದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೇಗೆ ಯಕ್ಷಗಾನದ ಹೆಸರನ್ನು ಕೇಳದವರಿಲ್ಲವೋ, ಹಾಗೇ ಕರ್ನಾಟಕದ ವಿವಿಧ ಭಾಗಗಳಲ್ಲಿ ದೊಡ್ಡಾಟ, ಬಯಲಾಟಗಳನ್ನು  ಕೇಳದವರಿಲ್ಲ. ಬೊಂಬೆಯಾಟವು ಜನಪದದ ಇನ್ನೊಂದು ರೂಪವಾಗಿದ್ದು, ಅದನ್ನು ತೊಗಲು ಬೊಂಬೆಯಾಟ, ಕೀಲು ಬೊಂಬೆಯಾಟ ಎಂದು ವರ್ಗೀಕರಿಸಿದೆ. ತೊಗಲು ಗೊಂಬೆಯಾಟವು ಮನುಷ್ಯ ಅಥವಾ ಪ್ರಾಣಿ ಅಥವಾ ಅತಿಮಾನುಷ್ಯ ರೂಪಗಳನ್ನು ತೊಗಲು ಬಳಸಿ ಮಾಡಿದ್ದು, ಛಾಯಾನಾಟಕವಾಗಿ ಪ್ರದರ್ಶಿತವಾಗುತ್ತದೆ. ಕೀಲುಗೊಂಬೆಯಾಟವು, ಬೊಂಬೆಗಳನ್ನು ಸೂತ್ರಗಳಿಗೆ(ದಾರ) ಹೊಂದಿಸಿ ಬೆರಳಿನಿಂದ ಅಭಿನಯವನ್ನು ನಿಯಂತ್ರಿಸಿ ಚಲಿಸುವಂತೆ ಮಾಡುವ ಆಟವಾಗಿದೆ. ಕಥಾಪ್ರಸಂಗಕ್ಕೆ ಸಾಹಿತ್ಯ ರೂಪವನ್ನು ಕೊಟ್ಟು ಆಟಗಳಲ್ಲಿ ತನ್ಮಯವಾಗಿಸುವಂತಹ ನಿರೂಪಣಾ ವಿಧಾನವಿರುತ್ತದೆ.

ಜನಪದ ಸಾಹಿತ್ಯದೊಡನೆ ನಿಕಟ ಸಂಬಂಧ ಹೊಂದಿರುವ ಇತರ ಜನಪದ ಕಲೆಗಳೆಂದರೆ, ಕಂಸಾಳೆ, ಚೌಡಿಕೆ, ಏಕತಾರಿ ಇತ್ಯಾದಿ. ಕುಣಿತಗಳ ಪೈಕಿ ಲಂಬಾಣಿ ನೃತ್ಯ, ಪಟ್ಟದ ಕುಣಿತ, ನಂದಿಕೋಲು ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಡಾಲ ಇತ್ಯಾದಿಗಳೂ ಸೇರಿವೆ. ಇವೆಲ್ಲವು ಧಾರ್ಮಿಕ ಆಚರಣೆಗಳು ಗ್ರಾಮ ದೇವತೆಯೊಡನೆ ತಳಕುಹಾಕಿಕೊಂಡಿವೆ. ಯಕ್ಷಗಾನ ಹಾಗೂ ಬೊಂಬೆಯಾಟಗಳೂ ಇದೇ ಬಗೆಯ ಮೂಲಗಳಿಂದ ಹುಟ್ಟಿಕೊಂಡಿವೆ. ಉಡುಪಿ (ಎಂ.ಜಿ.ಎಂ ಕಾಲೇಜು) ಯ ಗೋವಿಂದ ಪೈ ಸಂಶೋಧನಾ ಕೇಂದ್ರವು ವಿಶಿಷ್ಟವಾಗಿ ದಾಖಲೀಕರಣ ಕಾರ್ಯವನ್ನು ಮಾಡುತ್ತಾ ಸ್ಪ್ಯಾನಿಷ್‌ ವಿಶ್ವವಿದ್ಯಾಲಯದೊಂದಿಗೆ ಸಹಯೋಗವನ್ನು ಹೊಂದಿದೆ.

ಕರ್ನಾಟಕ ಜಾನಪದ ಅಕಾಡೆಮಿ

ಮೌಖಿಕ ಪರಂಪರೆಯ ಸಾಂಸ್ಕೃತಿಕ ಸಿರಿ ಜಾನಪದ ಹಾಗೂ ಯಕ್ಷಗಾನ ಕಲೆ, ಸಮೃದ್ದತೆಯಿಂದ ಕೂಡಿದ ಈ ಕಲಾ ಪ್ರಾಕಾರವನ್ನು ಉಳಿಸಿ ಬೆಳೆಸಲು, ಆಧುನಿಕತೆಯ ಸ್ಪರ್ಶಕ್ಕೆ ಕಾಲಗತಿಯಲ್ಲಿ ಅಳಿಸಿಹೋಗದಂತೆ ಕಾಪಾಡುವ ದಿಸೆಯಲ್ಲಿ ೦೩- ೧೧-೧೯೮೦ರಲ್ಲಿ ಈ ಅಕಾಡೆಮಿ ಸ್ಥಾಪನೆಯಾಯಿತು. ಜನಪದ ಸಾಹಿತ್ಯ ಸಂಗ್ರಹ, ಮಾಸಾಶನ, ಪ್ರಶಸ್ತಿ ನೀಡಿಕೆ, ಧ್ವನಿಮುದ್ರಣ, ಗ್ರಂಥ ಪ್ರಕಟಣೆ, ಪ್ರದರ್ಶಕ ಕಲೆಗಳಿಗೆ ಪ್ರದರ್ಶನ ನೀಡಲು ಅವಕಾಶ, ಆಡಿಯೋ ವೀಡಿಯೋ ಸಂಶೋಧನೆ, ವಿಚಾರ ಸಂಕಿರಣ, ಕಮ್ಮಟಗಳು, ಕಲಾಮೇಳ, ಜಾನಪದ ರಂಗೋತ್ಸವ, ಜಾನಪದ ಉತ್ಸವ, ಪಾರಂಪರಿಕ ಕಲೆ ಜನಪದದಲ್ಲಿ ವಿಜ್ಞಾನ, ತಂತ್ರಜ್ಞಾನ, ಜನಪದ ಕಾವ್ಯ ಮೀಮಾಂಸೆಯ ಪರಿಕಲ್ಪನೆ ಮುಂತಾದ ಚಟುವಟಿಕೆಗಳನ್ನು ಅಕಾಡೆಮಿ ಹಮ್ಮಿಕೊಳ್ಳುತ್ತದೆ.

 

ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಕರ್ನಾಟಕದಲ್ಲಿ ವಾಸ್ತುಕಲೆ ವೈವಿಧ್ಯಮಯವಾಗಿರುವಂತೆ, ಶಿಲ್ಪಕಲೆಯೂ ವ್ಯಾಪಕವಾದುದಾಗಿದೆ. ನವಶಿಲಾಯುಗದಿಂದ ಹಿಡಿದು ಆಧುನಿಕ ಯುಗದವರೆಗೂ ನಿರಂತರವಾಗಿ ಬೆಳೆದು ಬಂದ ಹಿನ್ನೆಲೆ ಮತ್ತು ಪರಂಪರೆ ಇದೆ. ಇದನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ೧೦-೦೮-೧೯೬೪ರಲ್ಲಿ ಈ ಅಕಾಡೆಮಿ ಸ್ಥಾಪಿಸಲ್ಪಟ್ಟಿತು. ಶಿಲ್ಪಕಲೆಯು ಮೊದಲಿಗೆ ಲಲಿತಕಲಾ ಅಕಾಡೆಮಿಯ ಭಾಗವಾಗಿದ್ದಿತು. ೧೯೯೬ ರಿಂದ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ಕಾರ್ಯಾರಂಭ ಮಾಡಿತು. ಶಿಲ್ಪ ಕಲಾವಿದರನ್ನು ಗೌರವಿಸುವುದಲ್ಲದೆ, ಶಿಲ್ಪ ಕಲಾ ಕಮ್ಮಟಗಳನ್ನು, ಪ್ರದರ್ಶನಗಳನ್ನು  ಏರ್ಪಡಿಸುತ್ತಿದೆ. ಪಾರಂಪರಿಕ ಶಿಲ್ಪಗಳ ಕುರಿತಾದ ಪುಸ್ತಕಗಳು ಹಾಗೂ ಆಧುನಿಕ ಶಿಲ್ಪ ಕಲೆಯ ಕುರಿತಾದ ಗ್ರಂಥಗಳನ್ನು ಅಕಾಡೆಮಿಯು ಪ್ರಕಟಿಸುತ್ತಾ ಬಂದಿದೆ.

೧೯೬೫ರಿಂದ ೨೦೦೯ರ ವರೆಗೆ ಒಟ್ಟು ೭೮ ಶಿಲ್ಪಿಗಳನ್ನು ಗುರುತಿಸಿ ಸನ್ಮಾನಿಸಿದೆ. ಸೆಂಟ್ರಲ್ ಟೆಕ್ಸ್‌ಟೈಲ್ ಕಮೀಷನ್ ಫಾರ್ ಹ್ಯಾಂಡಿಕ್ರಾಪ್ಟ್ಸ್ (ಕರಕುಶಲ ವಸ್ತುಗಳ ಕೇಂದ್ರ ಜವಳಿ ಆಯೋಗ) ಸಂಸ್ಥೆಯು ೨೦೦೩ರಲ್ಲಿ ಪರಮೇಶ್ವರಾಚಾರ್ ಅವರಿಗೆ ರೂ. ೭.೫ ಲಕ್ಷಗಳ ನಗದು ಬಹುಮಾನ ನೀಡಿ ಅವರ ವಿಶಿಷ್ಟ ಸಾಧನೆಗಾಗಿ ಸನ್ಮಾನಿಸಿತು. ೨೦೦೪ರಲ್ಲಿ ನೀಲಕಂಠಾಚಾರ್ ಅವರಿಗೆ ‘ಶಿಲ್ಪಗುರು ಎಂಬ ಬಿರುದನ್ನು ನೀಡಿ ಗೌರವಿಸಿತು. ಪಾರಂಪರಿಕವಾಗಿ ಬೆಳೆದು ಬಂದಿರುವ ದೇವಾಲಯ ಶಿಲ್ಪಕ್ಕೆ ಸಂಬಂಧಿಸಿದಂತೆ, ಶಿಲೆ,ತಾಮ್ರ, ಪಂಚಲೋಹ, ಉಬ್ಬಚ್ಚುಗಳು, ಮರ, ಸುದ್ದೆಮಣ್ಣು ಮತ್ತು ಗಾರೆಗಳಲ್ಲಿನ ಶಾಸ್ತ್ರೀಯ ಶಿಲ್ಪ ಪ್ರಕಾರಗಳನ್ನು ಉಳಿಸಿ-ಬೆಳೆಸಲು, ಶಿಲ್ಪಶಾಸ್ತ್ರ ವಿದ್ವಾಂಸರ ಕೊರತೆ ನೀಗಿಸುವುದು., ಶಿಲ್ಪಶಿಬಿರ , ಕಾಷ್ಟಶಿಲ್ಪ ಶಿಬಿರ, ಟೆರ್ರಾಕೋಟಾ ಕಾರ್ಯಾಗಾರ, ಶಿಲ್ಪ ಕಲಾವಿದರ  ಸಮ್ಮೇಳನ, ಕರ್ನಾಟಕ ಶಿಲ್ಪೋತ್ಸವ, ಶಿಲ್ಪ, ಚಿತ್ರ, ಗ್ರಾಫಿಕ್ ಕಲಾಶಿಬಿರಗಳು ಸಾಹಿತಿ ಕಲಾವಿದರಭಾವಶಿಲ್ಪ ರಚನೆ, ಶಿಲ್ಪ ಕಲಾ ಪ್ರದರ್ಶನ, ಪ್ರವಾಸಾನುದಾನ, ಪುಸ್ತಕ ಪ್ರಕಟಣೆ, ಸಿಮೆಂಟ್ ಶಿಲ್ಪ ಕಾರ್ಯಾಗಾರ, ರೇಖಾ ವರ್ಣ ಮತ್ತು ಭಿತ್ತಿಚಿತ್ರ ರಚನಾಶಿಬಿರ ಮುಂತಾದವುಗಳು.

ಜಾನಪದಶ್ರೀ ಪ್ರಶಸ್ತಿ

ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಕಲಾವಿದರಿಗೆ ಈ ಉನ್ನತ ಪ್ರಶಸ್ತಿಯನ್ನು ೧೯೯೪ರಿಂದ ನೀಡಿ ಗೌರವಿಸಲಾಗುತ್ತಿದೆ. ಒಂದು ಲಕ್ಷ ರೂಪಾಯಿಗಳುಳ್ಳ ಈ ಪ್ರಶಸ್ತಿಯನ್ನು ಇದುವರೆಗೂ ಪಡೆದ ಕಲಾವಿದರು ಪಡೆದಿದ್ದಾರೆ. ಎಸ್.ಕೆ.ಕರೀಂಖಾನ್ (೧೯೯೪), ಕಂಸಾಳೆ ಮಹದೇವಯ್ಯ (೧೯೯೫), ಯಡ್ರಾಮನಹಳ್ಳಿ ದೊಡ್ಡ ಭರಮಪ್ಪ (೧೯೯೬), ಫಕೀರವ್ವ ಗುಡಿಸಾಗರ (೧೯೯೭) , ಹಿರಿಯಡ್ಕ ಗೋಪಾಲರಾವ್ (೧೯೯೮), ಸುಕ್ರಿ ಬೊಮ್ಮಗೌಡ (೧೯೯೯), ತಕ್ಕಳಿಕೆ ವಿಠಲರಾವ್ (೨೦೦೦), ಹಮ್ಗಿ ಮುದಿಮಲ್ಲಪ್ಪ (೨೦೦೧). ಎಂ.ಆರ್. ಬಸಪ್ಪ (೨೦೦೨), ಚಿಟ್ಟಾಣಿ ರಾಮಚಂದ್ರ ಹೆಗ್ಡೆ (೨೦೦೩). ಚನ್ನಪ್ಪ ವೀರಭದ್ರಪ್ಪ ಕರಡಿ (೨೦೦೪), ಸಿರಿಯಜ್ಜಿ (೨೦೦೫) ಈಶ್ವರಪ್ಪ ಗುರಪ್ಪ ಅಂಗಡಿ (೨೦೦೬), ಬೆಳಗಲ್ಲು ವೀರಣ್ಣ (೨೦೦೭), ಸಿದ್ದಪ್ಪ ಮೇಟಿ(೨೦೦೮). ಪುಟ್ಟಮಲ್ಲೇಗೌಡ (೨೦೦೯), ದರೋಜಿ ಈರಮ್ಮ (೨೦೧೦), ಕಾಶಿಬಾಯಿ ದಾದನಟ್ಟಿ (೨೦೧೧), ಸೋಮಲಿಂಗಪ್ಪ ಫಕೀರಪ್ಪ ದೊಡವಾಡ (೨೦೧೨), ಮುಖವೀಣೆ ಆಂಜನಪ್ಪ (೨೦೧೩), ಕಲ್ಮನೆ ಎಸ್. ನಂಜಪ್ಪ (೨೦೧೪), ಸತ್ತೂರ ಇಮಾಂ ಸಾಬ್ (೨೦೧೫).

 

ಚಲನಚಿತ್ರ

ಚಲನಚಿತ್ರೋದ್ಯಮಕ್ಕೆ ಕರ್ನಾಟಕದಲ್ಲಿ ಆರು ದಶಕಗಳ ಇತಿಹಾಸವಿದೆ. ಆರಂಭದ ಹಂತದಲ್ಲಿ ಕರ್ನಾಟಕದಲ್ಲಿ ನಿರ್ಮಿತವಾದ ಚಲನಚಿತ್ರಗಳು ಕನ್ನಡ ರಂಗಭೂಮಿಯ ನಾಟಕದ ಕಥಾವಸ್ತುಗಳನ್ನು ಆಧರಿಸಿರುತ್ತಿದ್ದುವು. ಮೊದಲ ಮೂಕಿ(ಸೈಲೆಂಟ್) ಚಿತ್ರ ಮೃಚ್ಛಕಟಿಕ ಚಿತ್ರವನ್ನು ನಿರ್ಮಾಪಕ ಹಾಗೂ ನಿರ್ದೇಶಕರಾದ ಮೋಹನ್ ಭವನಾನಿ ಅವರು ನಿರ್ಮಿಸಿದರು. ಏಣಾಕ್ಷಿ ರಾಮರಾವ್ ಜೊತೆ ಕಮಲಾದೇವಿ ಚಟ್ಟೋಪಾಧ್ಯಾಯ, ಟಿ.ಪಿ., ಕೈಲಾಸಂ, ಓ.ಕೆ.ನಂದ ಮತ್ತಿತರರು ಈ ಚಿತ್ರದಲ್ಲಿ ಪಾತ್ರಧಾರಿಗಳಾಗಿದ್ದರು. ೧೯೩೦ರ ದಶಕದಲ್ಲಿ ಹರಿಬಾಯ್ ಆರ್.ದೇಸಾಯ್ ಮತ್ತು ಭೋಗಿಯಲ್ ದವೆ ಎಂಬ ಇಬ್ಬರು ಬಾಂಬೆ ಉದ್ಯಮಿಗಳು, ಮೊದಲ ದಕ್ಷಿಣ ಭಾರತೀಯ ಸ್ಟುಡಿಯೋ (ಸ್ಟುಡಿಯೋ ಆಫ್ ಸದರನ್ ಇಂಡಿಯ) ವನ್ನು ಬೆಂಗಳೂರಿನಲ್ಲಿ ಸೂರ್ಯ ಫಿಲಂ ಕಂಪೆನಿ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಸುಮಾರು ನಾಲ್ಕು ವರ್ಷಗಳಲ್ಲಿ ನಲವತ್ತು ಮೂಕಿ ಚಲನಚಿತ್ರಗಳನ್ನು ಪ್ರದರ್ಶಿಸಿದರು. ೧೯೨೯ರಲ್ಲಿ ದೇವುಡು ನರಸಿಂಹಶಾಸ್ತ್ರಿ, ಗುಬ್ಬಿ ವೀರಣ್ಣ ಮತ್ತು ಬೆಳಗಾವಿಯ ಆಲ್ಗೋಡ ಅವರ ಸಹಕಾರದಿಂದ ಕರ್ನಾಟಕ ಪಿಕ್ಚರ್ಸ್‌ ಕಾರ್ಪೋರೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರ ಮೂಲಕ ಮೂಕ ಚಿತ್ರಗಳಾದ ಹರಿಮಾಯ, ಸಾಂಗ್ ಆಫ್ ಲೈಫ್ ಮತ್ತು ಹಿಸ್ ಲವ್ ಅಫೇರೆಂಬ ಚಿತ್ರಗಳನ್ನು ನಿರ್ಮಿಸಲಾಯಿತು. ಸದಾರಮೆ (೧೯೩೫), ಹೇಮರೆಡ್ಡಿ ಮಲ್ಲಮ್ಮ (೧೯೪೫), ಗುಣಸಾಗರಿ, ಬೇಡರ ಕಣ್ಣಪ್ಪ(೧೯೫೪), ಭೂತರಾಜ್ಯ ಮತ್ತು ಡೊಮಿಂಗೋ ಎಂಬ ಪ್ರಮುಖ ಚಲನಚಿತ್ರಗಳು ಆ ಕಾಲದಲ್ಲಿ ನಿರ್ಮಾಣಗೊಂಡವು. ಡಾ.ಶಿವರಾಮ ಕಾರಂತರು ಭೂತರಾಜ್ಯ ಮತ್ತು ಡೊಮಿಂಗೋ ಚಿತ್ರಗಳ ನಿರ್ಮಾಪಕರಾಗಿದ್ದರು. ಇತರ ಗಮನಾರ್ಹ ಚಿತ್ರಗಳೆಂದರೆ ಸತಿಸುಲೋಚನ, ಸಂಸಾರನೌಕೆ, ವಸಂತಸೇನ, ಪುರಂದರದಾಸ, ಭಕ್ತ ಕುಂಬಾರ, ಮಹಾತ್ಮ ಕಬೀರ್, ಕೃಷ್ಣಲೀಲಾ, ಚಂದ್ರಹಾಸ, ಭಾರತಿ, ನಾಗಕನ್ನಿಕಾ ಮತ್ತು ಜಗನ್ಮೋಹಿನಿ.

ಆರಂಭಕಾಲದಲ್ಲಿ ರಜತಪರದೆಯ ಚಿತ್ರಗಳ ಮೇಲೆ ಪರಿಣಾಮ ಬೀರಿದ ಪ್ರಸಿದ್ಧ ವ್ಯಕ್ತಿಗಳೆಂದರೆ ಟಿ.ಪಿ.ಕೈಲಾಸಂ, ಎಂ.ಜಿ.ಮರಿರಾವ್, ಗುಬ್ಬಿವೀರಣ್ಣ, ಆರ್. ನಾಗೇಂದ್ರರಾವ್, ಎಂ.ವಿ. ಸುಬ್ಬಯ್ಯನಾಯ್ಡು, ತ್ರಿಪುರಾಂಬ, ಸಿ.ಟಿ. ಶೇಷಾಚಲಮ್, ಎಂ.ವಿ. ರಾಜಮ್ಮ, ಬಿ.ಆರ್. ಪಂತುಲು, ಕೆಂಪರಾಜ್ ಅರಸ್, ಶಂಕರ್ ಸಿಂಗ್, ಬಿ.ವಿ.ವಿಠಲಾಚಾರ್ಯ, ಎಚ್.ಎಲ್,ಎನ್. ಸಿಂಹ ಮತ್ತು ಬಿ.ಎಸ್. ರಂಗಾ. ಅದರಲ್ಲೂ ಕೊನೆಯ ಇಬ್ಬರು ಕನ್ನಡ ಚಿತ್ರಂಗವನ್ನು ಮದರಾಸಿನಿಂದ ಬೆಂಗಳೂರಿಗೆ ತರಲು ಕಾರಣಕರ್ತರಾದರು. ಕನ್ನಡ ಚಲನಚಿತ್ರರಂಗದಲ್ಲಿ ದಂತಕತೆಯಾಗುವಷ್ಟರ ಮಟ್ಟಿಗೆ ಬೆಳೆದು ೧೯೯೭ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತರಾಗಿ ಕನ್ನಡ ಚಲನಚಿತ್ರರಂಗಕ್ಕೆ ಹೆಮ್ಮೆ ತಂದುಕೊಟ್ಟ ಕನ್ನಡ ಚಿತ್ರರಂಗದ ಏಕಮೇವಾ  ದ್ವಿತೀಯರೆನಿಸಿದ ರಾಜಕುಮಾರ್‌ರವರನ್ನು  ಪರಿಚಯಿಸಿದ ಚಿತ್ರ ಬೇಡರ ಕಣ್ಣಪ್ಪ, (೧೯೫೪). ೧೯೫೦ರ ದಶಕದಲ್ಲಿ ಸಾಮಾಜಿಕ ಚಿತ್ರಗಳ ಪ್ರದರ್ಶನ ಪ್ರವೃತ್ತಿ ಬೆಳೆಯಿತು. ಅವುಗಳಲ್ಲಿ ಪ್ರಮುಖವಾಗಿ ಪ್ರೇಮದ ಪುತ್ರಿ, ಮೊದಲ ತೇದಿ, ಸ್ಕೂಲ್ ಮಾಸ್ಟರ್, ಕನ್ಯಾದಾನ, ಆದರ್ಶಸತಿ, ಭಕ್ತ ಮಾರ್ಕಂಡೇಯ, ರತ್ನಗಿರಿ ರಹಸ್ಯ, ನಳದಮಯಂತಿ, ಭೂಕೈಲಾಸ, ಜಗಜ್ಯೋತಿ ಬಸವೇಶ್ವರ, ದಶಾವತಾರ, ರಣಧೀರ ಕಂಠೀರವ, ಭಕ್ತ ಕನಕದಾಸ ಮುಂತಾದ ಚಿತ್ರಗಳು ಗಮನಾರ್ಹವಾದವು.

ಕ್ರಿ.ಶ.೧೯೬೪ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಏಕೆಂದರೆ ಅಮರಶಿಲ್ಪಿ ಜಕಣಾಚಾರಿ ಸಂಪೂರ್ಣವಾಗಿ ವರ್ಣಚಲನಚಿತ್ರವಾಗಿ ನಿರ್ಮಾಣವಾಯಿತು. ಅದೇ ವರ್ಷ ಎನ್.ಲಕ್ಷ್ಮೀನಾರಾಯಣ್ ಅವರ ಹೊಸ ಅಲೆಯ ಚಿತ್ರ ನಾಂದಿ ಬಿಡುಗಡೆಯಾಗಿತ್ತು. ೧೯೬೦ರ ದಶಕದಲ್ಲಿ ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಸರ್ವರಿಂದಲೂ ಅತಿ ಶ್ರೇಷ್ಠ ನಿರ್ದೇಶಕರೆಂಬ ಪ್ರಶಂಸೆಗೆ ಪಾತ್ರರಾದ ಪುಟ್ಟಣ್ಣ ಕಣಗಾಲ್ ಅವರು ಬೆಳ್ಳಿಮೋಡ(೧೯೬೭), ಗೆಜ್ಜೆಪೂಜೆ(೧೯೬೮), ಶರಪಂಜರಗಳಂತಹ ಅವಿಸ್ಮರಣೀಯ ಚಿತ್ರಗಳನ್ನು ಮತ್ತು ೧೯೭೦ರ ದಶಕದಲ್ಲಿ ಸಾಕ್ಷಾತ್ಕಾರ, ನಾಗರಹಾವು ಮುಂತಾದ ಚಲನಚಿತ್ರಗಳನ್ನೂ ಮಾಡಿದರು. ಇದೇ ದಶಕದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಥಾವಸ್ತುವನ್ನೊಳಗೊಂಡ ಮೊದಲ ಮಕ್ಕಳ ಚಲನಚಿತ್ರ ಮಕ್ಕಳ ರಾಜ್ಯ ಕೂಡ ಬಿಡುಗಡೆ ಆಯಿತು.

೧೯೭೦ರ ದಶಕದಲ್ಲಿ ಚಲನಚಿತ್ರ ನಿರ್ಮಾಪಕರು ಪ್ರಸಿದ್ಧ ಕಾದಂಬರಿಕಾರರ ಕನ್ನಡ ಕಾದಂಬರಿಗಳನ್ನು ಚಲನಚಿತ್ರಗಳಿಗೆ ಅಳವಡಿಸಿಕೊಳ್ಳಲಾರಂಭಿಸಿದರು. ಈ ಪ್ರವೃತ್ತಿಯು ಅತ್ಯಂತ ಜನಪ್ರಿಯವಾಯಿತು. ಅನಕೃ, ತ.ರಾ. ಸು, ಕೃಷ್ಣಮೂರ್ತಿ ಪುರಾಣಿಕ್, ತ್ರಿವೇಣಿ, ನೀಳಾದೇವಿ, ಎಂ.ಕೆ.ಇಂದಿರಾ, ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್. ಭೈರಪ್ಪ, ಸಾಯಿಸುತೆ, ಟಿ.ಕೆ. ರಾಮರಾವ್ ಮುಂತಾದ ಪ್ರಸಿದ್ಧ ಕಾದಂಬರಿಕಾರರ ಕಾದಂಬರಿಗಳು ಚಲನಚಿತ್ರಗಳಾದವು.

ಶ್ರೇಷ್ಠ ಕವಿಗಳಾದ ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ ಮುಂತಾದವರ ಕವನಗಳನ್ನು ಚಲನಚಿತ್ರ ಗೀತೆಗಳನ್ನಾಗಿ ಮಾರ್ಪಡಿಸಿದ್ದು ಅಪಾರ ಮೆಚ್ಚುಗೆ ಪಡೆದಿವೆ. ೧೯೭೦ರ ದಶಕವು ಹೊಸಅಲೆಯ ಚಿತ್ರಗಳ ಯುಗವೆಂದು ಪರಿಗಣಿತವಾಯಿತು. ಪ್ರಯೋಗಾತ್ಮಕ ಚಿತ್ರಗಳೆಂಬ ಪ್ರಸಿದ್ಧಿಗೂ ಕಾರಣವಾಯಿತು. ಸಂಸ್ಕಾರ (೧೯೭೦), ವಂಶವೃಕ್ಷ (೧೯೭೨), ಅಬಚೂರಿನ ಪೋಸ್ಟಾಫೀಸು (೧೯೭೩), ಕಾಡು(೧೯೭೪), ಹಂಸಗೀತೆ (೧೯೭೫), ಚೋಮನದುಡಿ (೧೯೭೫), ಪಲ್ಲವಿ (೧೯೭೬), ಕರಾವಳಿ(೧೯೭೭), ಕನ್ನೇಶ್ವರರಾಮ (೧೯೭೭), ಘಟಶ್ರಾದ್ಧ (೧೯೭೭), ಚಿತೆಗೂ ಚಿಂತೆ (೧೯೭೮), ಒಂದು ಊರಿನ ಕಥೆ, ಒಂದಾನೊಂದು ಕಾಲದಲ್ಲಿ, ಮಲೆಯ ಮಕ್ಕಳು, ಸ್ಪಂದನ (ಎಲ್ಲವೂ ೧೯೭೮), ಕಾಡುಕುದುರೆ ಮತ್ತು ಅರಿವು (೧೯೭೯), ಎಲ್ಲಿಂದಲೋ ಬಂದವರು (೧೯೮೦), ಗ್ರಹಣ ಮತ್ತು ಮೂರುದಾರಿಗಳು(೧೯೮೧), ಬರ (೧೯೮೨).

ಈಚಿನ ವರ್ಷಗಳಲ್ಲಿ ಅವಸ್ಥೆ, ಪುಷ್ಪಕ ವಿಮಾನ, ಸೂರ್ಯ, ತಬರನ ಕಥೆ, ಕಾಡಿನ ಬೆಂಕಿ, ತರ್ಕ, ಇದು ಸಾಧ್ಯ, ಸಂತ ಶಿಶುನಾಳ ಶರೀಫ್, ಬಣ್ಣದ ಗೆಜ್ಜೆ, ಹಗಲುವೇಷ, ನಾಗಮಂಡಲ, ದೇವೀರಿ, ವಿಮುಕ್ತಿ, ಹಸೀನಾ, ಶಬರಿ, ಮೌನಿ, ಅತಿಥಿ, ಬೆಟ್ಟದ ಜೀವ, ಪುಟ್ಟಕ್ಕನ ಹೈವೆ, ಭಗವತಿ ಕಾಡು, ಹೆಜ್ಜೆಗಳು ಇತ್ಯಾದಿ ಚಿತ್ರಗಳು ಕಂಡು ಬರುತ್ತವೆ.

ಹಣಗಳಿಕೆಯ ದೃಷ್ಟಿಯಿಂದ ಯಶಸ್ವೀ ಚಲನಚಿತ್ರಗಳಾಗಿ ನಾಗರಹಾವು ಮತ್ತು ಬಂಗಾರದ ಮನುಷ್ಯ(೧೯೭೨), ಎಡಕಲ್ಲು ಗುಡ್ಡದ ಮೇಲೆ ಮತ್ತು ಪ್ರೊಫೆಸರ್ ಹುಚ್ಚೂರಾಯ(೧೯೭೩), ಉಪಾಸನೆ ಮತ್ತು ಭೂತಯ್ಯನ ಮಗ ಅಯ್ಯು(೧೯೭೪), ಅಪರಿಚಿತ ಮತ್ತು ಪರಸಂಗದ ಗೆಂಡೆತಿಮ್ಮ(೧೯೭೮), ಮದರ್, ಮಿಥುನ (೧೯೮೦), ಗಾಳಿಮಾತು (೧೯೮೧), ಮಾನಸ ಸರೋವರ(೧೯೮೨), ಫಣಿಯಮ್ಮ(೧೯೮೩), ಅನುಭವ (೧೯೮೪), ಬೆಟ್ಟದಹೂವು, ಮಸಣದ ಹೂವು(೧೯೮೫), ಮಲಯ ಮಾರುತ(೧೯೮೬), ಒಂದುಮುತ್ತಿನ ಕಥೆ(೧೯೮೭), ಸುಪ್ರಭಾತ(೧೯೮೮), ಸಂಕ್ರಾಂತಿ(೧೯೮೯), ಉದ್ಭವ, ಶಬರಿಮಲೆ ಸ್ವಾಮಿ ಅಯ್ಯಪ್ಪ(೧೯೯೦), ರಾಮಾಚಾರಿ(೧೯೯೧), ಕ್ರೌರ್ಯ, ಪಲ್ಲವಿ, ಅನುರೂಪ, ಖಂಡವಿದೆಕೋ ಮಾಂಸವಿದೆಕೊ, ಸಂಕಲ್ಪ, ಬ್ಯಾಂಕರ್ ಮಾರ್ಗಯ್ಯ, ಗೀಜಗನ ಗೂಡು, ಸಾವಿತ್ರಿ, ಗಿಡ್ಡ, ಘಟಶ್ರಾದ್ಧ (ರಾಷ್ಟ್ರಪತಿ ಸ್ವರ್ಣಪದಕ ವಿಜೇತ), ಆಕ್ರಮಣ, ಮನೆ, ತಾಯಿಸಾಹೇಬ (ರಾಷ್ಟ್ರಪತಿ ಸ್ವರ್ಣಪದಕ ವಿಜೇತ), ಬೆಳದಿಂಗಳ ಬಾಲೆ, ಚೈತ್ರದ ಚಿಗುರು, ಹೂಮಾಲೆ, ದೋಣಿಸಾಗಲಿ(೧೯೯೮), ಕಾನೂರು ಹೆಗ್ಗಡತಿ, ಚಂದ್ರಮುಖಿ ಪ್ರಾಣಸಖಿ (೧೯೯೯), ಮುಸ್ಸಂಜೆ, ಶಾಪ, ಕುರಿಗಳು ಸಾರ್ ಕುರಿಗಳು(೨೦೦೦), ದ್ವೀಪ, ಏಕಾಂಗಿ, ಶಾಂತಿ, ನೀಲ (೨೦೦೧), ಅರ್ಥ, ಕ್ಷಾಮ, ಲಾಲಿಹಾಡು(೨೦೦೨), ಚಿಗುರಿದ ಕನಸು(೨೦೦೩), ಮೊನಾಲಿಸ, ಬೇರು, ಗೌಡ್ರು, ಮುನ್ನುಡಿ (ರಾಷ್ಟ್ರೀಯ ಪ್ರಶಸ್ತಿ, ತಾರಾ ಅತ್ಯತ್ತಮ ನಟಿ), ಮಿಠಾಯಿ ಮನೆ(೨೦೦೪), ತುತ್ತೂರಿ (೨೦೦೫), ನಾಯಿನೆರಳು, ನೆನೆಪಿರಲಿ, ಅಮೃತಧಾರೆ (೨೦೦೬), ಕಲ್ಲರಳಿ ಹೂವಾಗಿ, ಕಾಡಬೆಳದಿಂಗಳು, ಕೇರಾಫ್ ಫುಟ್‌ಪಾತ್ (೨೦೦೭), ಗುಲಾಬಿ ಟಾಕೀಸ್, ಮೊಗ್ಗಿನ ಜಡೆ, ಪ್ರೀತಿ ಪ್ರೇಮ ಪ್ರಣಯ, ಮಾತಾಡ್ ಮಾತಾಡ್ ಮಲ್ಲಿಗೆ, ಬನದ ನೆರಳು (೨೦೦೮) ಇತ್ಯಾದಿ ಚಿತ್ರಗಳು ಪ್ರದರ್ಶಿತವಾಗಿವೆ.

೧೯೮೦ರ ದಶಕಗಳಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿಯೇ ಪೂರ್ಣವಾಗಿ ತಯಾರಿಸಿದ ಕನ್ನಡ ಚಲನಚಿತ್ರಗಳಿಗೆ ಶೇ.೫೦ರಷ್ಟು ತೆರಿಗೆ ವಿನಾಯಿತಿಯನ್ನು ಮಂಜೂರು ಮಾಡಿತು ಅಲ್ಲದೇ ಆ ಚಿತ್ರಗಳಿಗೆ ಸಹಾಯಧನ(ಸಬ್ಸಿಡಿ) ಮೊತ್ತವನ್ನೂ ಹೆಚ್ಚಿಸಿತು. ಇಂದು ಯಾವುದೇ ಕನ್ನಡ ಚಲನಚಿತ್ರವು ರಾಜ್ಯದಲ್ಲಿಯೇ ನಿರ್ಮಿಸಲ್ಪಟ್ಟದ್ದಾದರೆ ಅದು ಕಪ್ಪು ಬಿಳುಪಿನ ಚಿತ್ರವಾಗಿದ್ದರೆ ರೂ.೨.೫೦ ಲಕ್ಷ, ವರ್ಣಚಿತ್ರವಾದರೆ ರೂ. ೩.೫೦ ಲಕ್ಷಗಳನ್ನು ಸರ್ಕಾರದಿಂದ ಪಡೆಯಲು ಅರ್ಹವಾಗಿರುತ್ತದೆ.

ಎಲ್.ವಿ.ಪ್ರಸಾದ್ ಅವರು ಬೆಂಗಳೂರಿನಲ್ಲಿ ವರ್ಣ ಸಂಸ್ಕರಣ ಪ್ರಯೋಗಶಾಲೆಯನ್ನು (ಕಲರ್ ಪ್ರಾಸೆಸಿಂಗ್ ಲ್ಯಾಬೊರೇಟರಿ) ಸ್ಥಾಪಿಸಿದ್ದಾರೆ. ಜೊತೆಗೆ ನಾಗ್ ಸಹೋದರರಿಂದ ರೆಕಾರ್ಡಿಂಗ್ ಸ್ಟುಡಿಯೋ ಸಂಕೇತ್ ಮತ್ತು ಚಾಮುಂಡೇಶ್ವರಿ ಸ್ಟುಡಿಯೋಗಳೂ ಸ್ಥಾಪಿಸಲ್ಪಟ್ಟಿವೆ.

ಉತ್ತಮ ಮೂಲಭೂತ ಸೌಕರ್ಯಗಳು, ಸರ್ಕಾರದಿಂದ ದೊರೆತ ಪ್ರೋತ್ಸಾಹ ಮತ್ತು ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಇವೆಲ್ಲವುಗಳಿಂದ ಪ್ರತಿ ವರ್ಷವೂ ಚಲನಚಿತ್ರ ನಿರ್ಮಾಣದ ಸಂಖ್ಯೆಯು ಹೆಚ್ಚುತ್ತ ಬಂದಿದೆ. ರಾಜಕೀಯ ಮತ್ತು ಸಾಮಾಜಿಕ ವಸ್ತುಗಳನ್ನುಳ್ಳ ಚಲನಚಿತ್ರಗಳಾದ ಆಕ್ಸಿಡೆಂಟ್, ಅಂತ, ಬರ, ಚಕ್ರವ್ಯೂಹ, ಆಸ್ಫೋಟ ಮುಂತಾದವು ನಿರ್ಮಾಣವಾಗಿವೆ. ಹೆಚ್ಚು ಹಣ ಹೂಡದೆಯೂ ಗಟ್ಟಿಯಾದ ಚಿತ್ರಕಥೆ, ಉತ್ತಮ ಛಾಯಾಗ್ರಹಣ, ಪರಿಣಾಮಕಾರಿಯಾದ ಸಂಗೀತ ಮುಂತಾದ ಅಂಶಗಳಿಂದ ಪ್ರೇಕ್ಷಕರಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದ ಚಿತ್ರಗಳು ಕನ್ನಡದಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿವೆ. ರಂಗಿತರಂಗ, ಯುಟರ್ನ್, ಇದೊಳ್ಳೆ ರಾಮಾಯಣ, ತಿಥಿ, ಲೂಸಿಯಾ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ರಾಮಾ ರಾಮಾ ರೇ ಮುಂತಾದವು ಈ ಮಾತಿಗೆ ನಿದರ್ಶನ.

ಮೂಕಿ ಚಿತ್ರಗಳಲ್ಲಿ ಹಿನ್ನೆಲೆ ವಾದ್ಯಸಂಗೀತ ರೂಢಿಯಲ್ಲಿತ್ತು. ಆದರೆ ಮೊದಲ ಮಾತಿನ (ಟಾಕೀ) ಚಿತ್ರ ೧೯೩೪ರಲ್ಲಿ ಬಂದಾಗ ಹಾಡುಗಳನ್ನು ಹಾಡಲಾಯಿತು. ಆಧುನಿಕ ವಾದ್ಯ ಮೇಳ (ವೃಂದಗಾನ) ಚಲನಚಿತ್ರಗಳಲ್ಲಿ ಹೆಚ್ಚು ಬಳಕೆಗೊಳ್ಳಲು ೧೯೪೧ರಲ್ಲಿ ಪಿ.ಕಾಳಿಂಗರಾಯರು ನಡೆಸಿದ ಪ್ರಯತ್ನ, ಪರಿಶ್ರಮವೇ ಕಾರಣವೆನ್ನಬಹುದು. ಆನಂತರ ಹಿನ್ನೆಲೆ ಗಾಯನ (ಹಿನ್ನೆಲೆ ಗಾಯಕರ ಹಾಡು) ಜನಪ್ರಿಯವಾಯಿತು. ಸಂಗೀತ ನಿರ್ದೆಶಕರಾದ ಪಿ.ಶಾಮಣ್ಣ, ಆರ್.ಸುದರ್ಶನ್, ಜಿ.ಕೆ.ವೆಂಕಟೇಶ್, ಟಿ.ಜಿ.ಲಿಂಗಪ್ಪ, ವಿಜಯಭಾಸ್ಕರ್, ರಾಜನ್ ನಾಗೇಂದ್ರ ಮತ್ತು ಹಂಸಲೇಖ ಜನಪ್ರಿಯ ಚಲನಚಿತ್ರ ಸಂಗೀತ ನಿರ್ದೇಶಕರೆನಿಸಿದರು. ಪರಭಾಷಿಕರಾದರೂ ಎಸ್.ಪಿ.ಬಾಲಸುಬ್ರಮಣ್ಯಂ ಜೇಸುದಾಸ್ ಮೊದಲಾದವರು ಕನ್ನಡ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಬಿ.ವಿ.ಕಾರಂತ್, ಪ್ರೇಮಾ ಕಾರಂತ್, ಗಿರೀಶ್ ಕಾಸರವಳ್ಳಿ, ಎಂ.ಎಸ್.ಸತ್ಯು, ಸಿದ್ದಲಿಂಗಯ್ಯ, ಗಿರೀಶ್ ಕಾರ್ನಾಡ್, ಸುವರ್ಣ, ಜಿ.ವಿ.ಅಯ್ಯರ್, ನಾಗಾಭರಣ, ಬರಗೂರು ರಾಮಚಂದ್ರಪ್ಪ, ಪಿ.ಶೇಷಾದ್ರಿ, ಮೊದಲಾದವರು ಚಲನಚಿತ್ರಗಳನ್ನು ನಿರ್ದೇಶಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೇವೀರಿ ಚಲನಚಿತ್ರದ ಮೂಲಕ ಕವಿತಾ ಲಂಕೇಶ್ ಅವರು ಯುವ ಜನಾಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕನೆಂದು ಖ್ಯಾತಿಗಳಿಸಿದ ಕೇರಾಫ್ ಫುಟ್‌ಪಾತ್ ಚಿತ್ರ ಮಾಡಿದ ಮಾಸ್ಟರ್ ಕಿಷನ್ ಗಿನ್ನಿಸ್ ದಾಖಲೆಗೆ ಸೇರಿದ್ದಾನೆ. ಅನೇಕ ಕನ್ನಡ ಚಲನಚಿತ್ರಗಳು, ಬಹಳ ಸಂಖ್ಯೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಕರ್ನಾಟಕ ಸರ್ಕಾರವು ೧೯೬೬ರಿಂದ ಚಲನಚಿತ್ರಗಳಿಗೆ ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ) ೧೯೪೪ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ಕೆಲವು ಹವ್ಯಾಸಿ ಚಲನಚಿತ್ರ ಸಂಸ್ಥೆಗಳು ೧೭ ಎಂ.ಎಂ.ಅಥವಾ ೮ ಎಂ.ಎಂ ಕ್ಯಾಮರಾ ಬಳಸಿ ಚಿತ್ರಗಳನ್ನು ನಿರ್ಮಿಸುತ್ತಿವೆ. ಅವೆಂದರೆ, ಅಸೀಮ, ಸೃಷ್ಟಿ, ಸೃಜನ್ ಮತ್ತು ಸುಚಿತ್ರ ಮುಂತಾದ ಸಂಸ್ಥೆಗಳು. ಪುಣೆ ರಾಷ್ಟ್ರೀಯ ಚಲನಚಿತ್ರ ಚಿತ್ರಾಗಾರದ ಮೊದಲ ಪ್ರಾದೇಶಿಕ ಕಛೇರಿಯು (ನ್ಯಾಷನಲ್ ಫಿಲ್ಮ್ ಆರ್ಕೀವ್ಸ್ ಆಫ್ ಇಂಡಿಯಾ) ಬೆಂಗಳೂರಿನಲ್ಲಿ ೧೯೮೨ರಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ಆರಂಭಗೊಂಡಿತು. ದಕ್ಷಿಣ ಭಾರತದ ಪ್ರಾಂತೀಯ ಭಾಷೆಗಳಲ್ಲಿ ನಿರ್ಮಿಸಿರುವ ಹಳೆಯ ಮತ್ತು ಸ್ಮರಣೀಯ ಚಿತ್ರಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. ಕರ್ನಾಟಕದ ಜನಪ್ರಿಯ ಚಿತ್ರ ಸ್ಟುಡಿಯೋಗಳಾಗಿ ಮೈಸೂರಿನಲ್ಲಿ ಪ್ರೀಮಿಯರ್ ಮತ್ತು ಚಾಮುಂಡೇಶ್ವರಿ ಸ್ಟುಡಿಯೋಗಳೂ, ಶ್ರೀ ಕಂಠೀರವ ಮತ್ತು ಅಭಿಮಾನ್ ಸ್ಟುಡಿಯೋಗಳೂ  ಬೆಂಗಳೂರಿನಲ್ಲಿವೆ. ಅನೇಕ ವರ್ಣ ಲ್ಯಾಬೋರೇಟರಿಗಳಲ್ಲದೆ, ಸಂಸ್ಕರಣ ಮತ್ತು ಧ್ವನಿಮುದ್ರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಬೆಂಗಳೂರು ಕರ್ನಾಟಕದ ಚಿತ್ರನಗರಿ(ಫಿಲಂ ಸಿಟಿ) ಎನಿಸಿದೆ.

ಕರ್ನಾಟಕ ಚಲನಚಿತ್ರರಂಗವು ಪ್ರತಿಭಾವಂತ ಚಲನಚಿತ್ರ ಕಲಾವಿದರ ದಂಡನ್ನೇ ಸೃಷ್ಟಿಸಿದೆ. ಡಾ.ರಾಜಕುಮಾರ್ ಅಲ್ಲದೇ ಅಶ್ವತ್ಥ್, ಬಾಲಕೃಷ್ಣ, ನರಸಿಂಹರಾಜು, ಕಲ್ಯಾಣ ಕುಮಾರ್, ಉದಯಕುಮಾರ್, ಗಂಗಾಧರ್, ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಶ್ರೀಧರ್, ರವಿಚಂದ್ರನ್, ಕಾಶಿನಾಥ್, ಶಂಕರನಾಗ್, ಅನಂತನಾಗ್, ಲೋಕೇಶ್, ರಾಜೇಶ್, ಸುದರ್ಶನ್, ಶ್ರೀನಾಥ್, ಸಿ.ಆರ್.ಸಿಂಹ, ದ್ವಾರಕೀಶ್, ವಜ್ರಮುನಿ, ಮುಸರಿ ಕೃಷ್ಣಮೂರ್ತಿ, ಹೆಚ್.ಜಿ. ದತ್ತಾತ್ರೇಯ, ರಮೇಶ್ ಅರವಿಂದ್, ಧೀರೇಂದ್ರ ಗೋಪಾಲ್, ಮುಂತಾದ ನಟರು, ಎಂ.ವಿ.ರಾಜಮ್ಮ, ಲೀಲಾವತಿ, ಬಿ.ವಿ.ರಾಧಾ,  ಜಯಮ್ಮ, ಫಂಡರಿಬಾಯಿ, ಬಿ.ಸರೋಜಾದೇವಿ, ಭಾರತಿ, ಜಯಂತಿ, ಕಲ್ಪನಾ, ಆರತಿ, ಮಂಜುಳ, ಹರಿಣಿ, ಜಯಮಾಲ, ಮಾಲಾಶ್ರೀ, ಸುಧಾರಾಣಿ, ವೈಶಾಲಿ ಕಾಸರವಳ್ಳಿ, ತಾರಾ, ಶೃತಿ, ಉಮಾಶ್ರೀ ಮುಂತಾದ ನಟಿಯರಿಂದ ಕರ್ನಾಟಕವು ಸಮೃದ್ದವಾಗಿದೆ.

ಜಿ.ವಿ. ಅಯ್ಯರ್ ಅವರು ಆದಿಶಂಕರಾಚಾರ್ಯದ ಮೂಲಕ ೧೯೮೪ರಲ್ಲಿ ಮೊಟ್ಟ ಮೊದಲ ಸಂಸ್ಕೃತ ಚಲನಚಿತ್ರ ನಿರ್ಮಾಪಕ-ನಿರ್ದೇಶಕರೆನಿಸಿದರು. ಇದು ಅವರಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ೧೯೮೬ರಲ್ಲಿ ಕನ್ನಡದಲ್ಲಿ ಮಧ್ವಾಚಾರ್ಯ, ೧೯೮೮ರಲ್ಲಿ ತಮಿಳಿನಲ್ಲಿ ರಾಮಾನುಜಾಚಾರ್ಯ ಚಲನಚಿತ್ರಗಳನ್ನು ತಯಾರಿಸಿದರು; ಸಿನಿಮಾ ಮಾಧ್ಯಮದ ಮೂಲಕ ಈ ಸಂತ ತತ್ತ್ವಜ್ಞಾನಿಗಳ ಬೋಧೆಗಳನ್ನು ನಿರೂಪಿಸುವ ಪ್ರಯತ್ನ ಮಾಡಿದರು. ೧೯೯೩ರಲ್ಲಿ ಅವರು ತಯಾರಿಸಿದ ಭಗವದ್ಗೀತೆ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ದೊರಕಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ವಿವಿಧ ಪ್ರಶಸ್ತಿಗಳನ್ನು ಸ್ಥಾಪಿಸಿವೆ, ಚಲನಚಿತ್ರ ನಟ-ನಟಿಯರನ್ನು, ನಿರ್ಮಾಪಕರನ್ನು, ನಿರ್ದೇಶಕರನ್ನು, ತಾಂತ್ರಿಕ ಕುಶಲರನ್ನು ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ವಿವಿಧ ವ್ಯಕ್ತಿಗಳನ್ನು ವಾರ್ಷಿಕವಾಗಿ ಸನ್ಮಾನಿಸಿವೆ. ಡಾ. ರಾಜಕುಮಾರ್ ಅವರಿಗೆ ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ೧೯೯೭ರಲ್ಲಿ ನೀಡಿ ಸನ್ಮಾನಿಸಿದೆ. ೨೦೦೮ರಲ್ಲಿ ಸಿನಿಮಾ ಛಾಯಗ್ರಾಹಕ ವಿ.ಕೆ.ಮೂರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ್ತಿದ್ದು, ಇದು ಕನ್ನಡಿಗರಿಗೆ ದೊರೆತ ಎರಡನೆ ಪ್ರಶಸ್ತಿ. ಅತ್ಯುತ್ತಮ ಕನ್ನಡ ಚಲನಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿಯನ್ನು ಅತ್ಯುತ್ತಮ ತಾರಾ ಪ್ರಶಸ್ತಿಯನ್ನೂ ಕನ್ನಡ ಚಲನಚಿತ್ರ ಕಲಾವಿದರಿಗೆ ಸತತವಾಗಿ ಕೇಂದ್ರ ಸರ್ಕಾರವು ನೀಡುತ್ತಾ ಬಂದಿದೆ. ಅನೇಕ ಕನ್ನಡ ಸಿನಿಮಾಗಳು ಹಾಗೂ ನಟ-ನಟಿಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಲನ ಚಿತ್ರ ಕುರಿತಾಗಿ ಕೆ.ಪುಟ್ಟಸ್ವಾಮಿಯವರು ರಚಿಸಿದ ಸಿನಿಮಾ ಯಾನ ಕೃತಿಗೆ ಕನ್ನಡದಲ್ಲಿ ಮೊದಲ ಬಾರಿಗೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗಳಲ್ಲದೇ ಚಲನಚಿತ್ರರಂಗದ ವಿವಿಧ ಕ್ಷೇತ್ರಗಳ ಸಾಧನೆಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಭಾರತ ಸರ್ಕಾರವು ಅತ್ಯತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಪರಿಪಾಠವನ್ನು ಆರಂಭಿಸಿತು. ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಚಲನಚಿತ್ರಗಳು ಮತ್ತು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಅಂಥ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಡಾ. ರಾಜಕುಮಾರ್ ಅವರ ಹೆಸರಿನಲ್ಲಿ ಅಂಚೆ ಇಲಾಖೆಯು ೨೦೦೯ರಲ್ಲಿ ಸ್ಟಾಂಪನ್ನು ಹೊರಡಿಸಿರುವುದು ಕನ್ನಡ ಚಲನಚಿತ್ರರಂಗಕ್ಕೆ ಒಂದು ಪ್ರತಿಷ್ಠಿತ ಐತಿಹಾಸಿಕ ಗೌರವ ದೊರೆತಂತಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ

ಕರ್ನಾಟಕ ಸರ್ಕಾರವು ೨೦೦೮ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಿತು. ಸರ್ಕಾರದ ಒಬ್ಬ ಅಧಿಕಾರಿಯನ್ನೊಳಗೊಂಡಂತೆ ಒಂಭತ್ತು ಮಂದಿ ಸದಸ್ಯರಿರುತ್ತಾರೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಬೆಳ್ಳಿ ಹೆಜ್ಜೆ ಕಾರ್ಯಕ್ರಮ, ಚಿತ್ರರಂಗದ ಗಣ್ಯರೊಂದಿಗೆ ಸಂವಾದ, ಛಾಯಾಚಿತ್ರ, ಸಾಕ್ಷ್ಯ ಚಿತ್ರ ಪ್ರದರ್ಶನ, ಚಿತ್ರಕಥಾ ರಚನಾ ಕಾರ್ಯಾಗಾರ, ರಸಗ್ರಹಣ ಶಿಬಿರ, ಚಿತ್ರೋತ್ಸವ, ಬೆಳ್ಳಿ ಮಂಡಲ, ಬೆಳ್ಳಿಸಾಕ್ಷಿ ಘಟಕಗಳ ಪ್ರಾರಂಭ, ಗ್ರಂಥ ಪ್ರಕಟಣೆ ಮುಂತಾದವುಗಳನ್ನು ನಡೆಸಿಕೊಂಡು ಬರುತ್ತಿದೆ.

(*ಮಾಹಿತಿ ಮೂಲ: ಕರ್ನಾಟಕ ಕೈಪಿಡಿ 2017, ಕರ್ನಾಟಕ ಗೆಜೆಟೀಯರ್‌ ಇಲಾಖೆ)

ಇತ್ತೀಚಿನ ನವೀಕರಣ​ : 13-09-2021 12:04 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
 • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

 • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
 • Meity_logo
 • digital
 • data
 • India
 • pm
 • gigw
 • wcag
 • ssl
 • w3c
 • kp_kn